Monday, April 6, 2015

'ರೊಟ್ಟಿರಾಹು' ಬಿಡಿಸಿದ ಅಮ್ಮಂದಿರು!

ನಾನು ’ರೊಟ್ಟಿ’ ಎಂದರೆ ತುಂಬಾ ಬೇಗುತ್ತಿದ್ದೆ. ಊಟಕ್ಕೆ ಕುಳಿತಿದ್ದಾಗ, ಇತರ ಮಕ್ಕಳಿಗಿಂತಲೂ ಹೆಚ್ಚು ರೊಟ್ಟಿ ಬೇಕು ಎಂದು ರಂಪ ಮಾಡುತ್ತಿದ್ದೆ. (’ರೊಟ್ಟಿ’ ಎಂದರೆ ಮಲೆನಾಡಿನ ರೊಟ್ಟಿ. ಅನ್ನ ಮತ್ತು ಅಕ್ಕಿಹಿಟ್ಟು ಕಲಸಿ ನುರಿದು, ಎರಡು ಕೈಗಳಿಂದಲೂ ಚಪ್ಪಾಳೆ ಹೊಡೆದಂತೆ ತಟ್ಟಿ ಹೆಂಚಿನ ಮೇಲೆ ಬೇಯಿಸಿ, ಕಡೆಗೆ ಒಲೆಯ ಕೆಂಡದ ಮೇಲೆ ಸುಡುತ್ತಿದ್ದ ಪದಾರ್ಥ!)

ಮನೆಯ ಅಮ್ಮಂದಿರೆಲ್ಲ ಸೇರಿ ನನಗೆ ’ರೊಟ್ಟಿರಾಹು’ ಮಸಲತ್ತು ಮಾಡಿದರು! ಆ ವಿನೋದದಲ್ಲಿ ನನ್ನ ಅವ್ವನೂ ಭಾಗಿಯಾದರು. ಒಂದು ದಿನ ಕಾಫಿ ಕುಡಿಯುತ್ತಿದ್ದಾಗ ಒಬ್ಬ ಅಮ್ಮ ಕೇಳಿದರು “ಪುಟದಟೂ, ಎಷ್ಟು ಬೇಕಾದರೂ ರೊಟ್ಟಿಕೊಡುತ್ತೇನೆ, ನೀನು ಅಷ್ಟನ್ನೂ ತಿನ್ನುವುದಾಗಿ ಮಾತು ಕೊಟ್ಟರೆ” ಎಂದು. ನನಗೆ ಬಹಳ ಖಷಿ, ’ಓಹೋ!’ ಎಂದು ಸಮ್ಮತಿಸಿ ಸವಾಲು ಹಾಖಿದೆ. “ಎಷ್ಟು ತಿನ್ನುತ್ತೀಯಾ?” ”ಎಷ್ಟು ಬೇಕಾದರೂ!” “ಹತ್ತು?” “ಅಯ್ಯೊ ಹತ್ತು ಯಾವ ಮೂಲೆಗೆ? ಹನ್ನೆರಡು!” ಎಂದೆ. “ಸುಳ್ಳೋ ಬದ್ದೋ?” ಎಂದು ಮೂದಲಿಕೆಯ ಧ್ವನಿಯಲ್ಲಿ ನನ್ನ ಮಾತಿನ ಸತ್ಯತೆಯನ್ನು ಪ್ರಶ್ನಿಸಿದರು. “ದೇವರಾಣೆಗೂ” ಎಂದೇ ಬಿಟ್ಟೆ! ಆಗ ನಮಗೆ ದೇವರು, ಆಣೆ ಈ ವಿಚಾರಗಳಲ್ಲಿ ಇದ್ದದ್ದು ಅತ್ಯಂತ ಲಘು ಭಾವನೆಯಷ್ಟೆ!!
“ಹಾಗದರೆ, ನಾಳೆ ಮಧ್ಯಾಹ್ನದ ಕಾಫಿಗೆ?”
“ಓಹೋ! ಅದಕ್ಕೇನಂತೆ?” ಎಂದು ಸಮ್ಮತಿಸಿದೆ.
ನನಗೆ ಆ ದಿನವೆಲ್ಲ ಎಂದಿಗೆ ನಾಳೆ ಬರುತ್ತದೆಯೆ? ಎಂದಿಗೆ ಬೇಗ ಆ ದಿನ ಮಧ್ಯಾಹ್ನವಾಘುತ್ತದೆಯೆ? ಎಂದು ಅವಸರವೇ ಅವಸರ ಮನಸ್ಸಿನಲ್ಲಿ.
ಈ ಸುದ್ದಿ ನನ್ನ ಜೊತೆಯ ಹುಡುಗರಿಗೆಲ್ಲ ಮುಟ್ಟಿತು! ಕೆಲವರಿಗೆ ಖುಷಿ! ಕೆಲವರಿಗೆ ಆಶ್ಚರ್ಯ! ಕೆಲವರಿಗೆ ಕರುಬು! ಕೆಲವರು ನನಗೆ ಸೂಚನೆ ಇತ್ತರು “ಬರಿಯ ರೊಟ್ಟಿಗೆ ಏಕೆ ಒಪ್ಪಿದೆಯೋ ಜೊತೆಗೆ ತುಪ್ಪ, ಚಟ್ನಿ ಕೇಳಬೇಕೊ ಬೇಡವೋ ಬರೀಬೆಪ್ಪು!” ಎಂದುಬಿಟ್ಟರು.
“ಬರೀ ರೊಟ್ಟಿ ಯಾರಾದರೂ ತಿನ್ನುತ್ತಾರೆಯೆ? ತುಪ್ಪ ಚಟ್ನಿ ಹಾಕದೆ ಇದ್ದರೆ ಪಂತದಲ್ಲಿ ಅವರೇ ಸೋತ ಹಾಗೆ! ನಾನು ತಿಂದರೆ ತಾನೆ? ಅಷ್ಟೇ ಅಲ್ಲ. ಒಂದೊಂದು ರೊಟ್ಟಿಗೆ ಎಷ್ಟು ತುಪ್ಪ ಚಟ್ನಿ ಹಾಖುತ್ತಾರೋ ಹನ್ನೆರಡು ರೊಟ್ಟಿಗೂ ಹನ್ನೆರಡರಷ್ಟು ಚಟ್ನಿ ತುಪ್ಪ ಹಾಕಲೇಬೇಕು” ಎಂದು ವಾದಿಸಿದೆ.
ಅಷ್ಟು ರೊಟ್ಟಿ ತುಪ್ಪ ಚಟ್ನಿಗಳನ್ನು ತಿನ್ನುವುದರಲ್ಲಿ ನನಗೆ ಶಂಕೆ ಇರಲಿಲ್ಲ. ನನ್ನ ಗಣಿತ ಮತ್ತು ತರ್ಕಗಳು ಅತ್ಯಾಶೆಯ ಬಕಾಸುರಕ್ಷೇತ್ರಕ್ಕೆ ಸೇರಿದವಾಗಿದ್ದುವು. ನನ್ನ ಧೈರ್ಯ ಎಂತಹ ಮೂರ್ಖವಾದದ ಮೇಲೆ ನಿಂತಿತ್ತು ಎಂದರೆ: ನಾನು ದಿನವೂ ಉಣ್ಣುವ ಅನ್ನ -ಸಾರನ್ನ, ಮಜ್ಜಿಗೆಯನ್ನ -ಗಾಥ್ರದಲ್ಲಿ ಇಷ್ಟಿರುತ್ತದೆ. ಅದರ ಪಕ್ಕದಲ್ಲಿ ಹನ್ನೆರಡು ರೊಟ್ಟಿ ರಾಶಿಯಾಗಿಟ್ಟರೆ ಅದಕ್ಕಿಂತಲೇನು ದೊಡ್ಡದಾಗಿರುವುದಲ್ಲ. ಆದ್ದರಿಂದ ಸುಲಭವಾಗಿ ಗೆಲ್ಲುತ್ತೇನೆ! ರೊಟ್ಟಿಯ ಸಾಂದ್ರತೆಯ ವಿಚಾರದ ಭೌತಶಾಸ್ತ್ರ ನನ್ನ ಬಳಿಗಿನ್ನೂ ಸುಳಿದಿರಲಿಲ್ಲ. ಆಸೆಯ ತರ್ಕದಲ್ಲಿ ಸಾಮರ್ಥ್ಯ ವಿಧೇಯನಾದ ಅನುಯಾಯಿಯಾಗಿಬಿಟ್ಟಿತ್ತು?
ಮರುದಿನ ಬಂದಿತು. ಬುದ್ಧಿಗೆ ಏನಾದರೂ ವಿವೇಕವಿದ್ದಿದ್ದರೆ ಸ್ಪರ್ಧೆಗೆ ತಕ್ಕಮಟ್ಟಿನ ಸಿದ್ಧತೆಯ ಪ್ರಯತ್ನವನ್ನಾದರೂ ಮಾಡುತ್ತಿತ್ತು. ಬೆಳಗಿನ ಕಾಫಿ ತಿಂಡಿ ತಿನ್ನುವುದನ್ನಾದರೂ ತಿಂದು ಕುಡಿಯಬಹುದಾಗಿತ್ತು. ಉಹ್ಞು! ಅಪರಾಹ್ನ ಒದಗುವ ರೊಟ್ಟಿ ರಾಶಿಯ ಭೋಗದ ಉತ್ಸಾಹದಲ್ಲಿ ಪುಷ್ಕಳವಾಗಿಯೆ ಕಬಳಿಸಿದ್ದೆ!
ಅಪರಾಹ್ನ ನಮ್ಮನ್ನೆಲ್ಲ ಕಾಫಿಗೆ ಕರೆದಾಗ ಇತರ ಮಕ್ಕಳಿಗೆ ದಿನವೂ ಕೊಡುವಂತೆ ರೊಟ್ಟಿ ತುಪ್ಪ ಚಟ್ನಿ ಕೊಟ್ಟು ಕಳಿಸಿದರು. ನನಗೊಬ್ಬನಿಗೇ ಮಣೆ ಹಾಕಿ ಕೂರಿಸಿ ಅಗಲವಾದ ಬಾಳೆಯ ಎಲೆಯನ್ನು -ಬಾಡಿಸಿದ ದೊಡ್ಡ ಕುಡಿಬಾಳೆಯೆಲೆ! ಊಟಕ್ಕೂ ಸಾಕಾಗುವಷ್ಟು! -ಹಾಸಿ, ರೊಟ್ಟಿ ಕುತ್ತುರೆ ಹಾಕಿದರು! ಪಕ್ಕದಲ್ಲಿಯೆ ಗಟ್ಟಿತುಪ್ಪದ ದೊಡ್ಡ ಉಂಡೆ! ಅದಕ್ಕೆ ಬಳಿಯೆ ಚಟ್ನಿಯ ಸಣ್ಣದೊಂದು ಗುಡ್ಡೆ! ನನಗೆ ಆನಂದವೊ ಆನಂದ! ಎಂದಾದರೂ, ಹುಡುಗರು ಯಾರಾದತರೂ, ಸ್ವಲ್ಪ ಜಾಸ್ತಿ ಬೇಕು ಎಂದು ಕೇಳಿದರೆ, ಬೈದೊ ಗುದ್ದಿಯೊ ತಲೆ ಮೇಲೆ ಕುಟ್ಟಿಯೊ ನಿರಾಕರಿಸುತ್ತಿದ್ದವರು ಈವೊತ್ತು ನನಗೆ ಎಷ್ಟು ಧಾರಾಳವಾಗಿ ನೀಡುತ್ತಿದ್ದಾರೆ! ಆ ದೃಶ್ಯವನ್ನು ಕೆಲವು ಅಮ್ಮಂದಿರು ದೂರದೀರದ ಮೂಲೆಗಳಲ್ಲಿ ನಿಂತು ನೋಡುತ್ತಾ ಬಾಯಿಮುಚ್ಚಿಕೋಂಡು ನಗುತ್ತಿದ್ದರೆಂದು ತೋರುತ್ತದೆ.
ನನ್ನ ಗೆಲುವಿನ ವಿಚಾರದಲ್ಲಿ ನನಗೆ ಇನಿತೂ ಸಂಶಯವಿರಲಿಲ್ಲ. ಅಂತಃಪುರದ ಹೆಂಗಳೆಯರ ಎದುರಿನ ಉತ್ತರಕುಮಾರನಂತೆ ನಾನು “ಅರ್ಜುನ ಧೈರ್ಯ”ದಿಂದಲೆ ಕಾಳಗಕ್ಕೆ ಇಳಿದೆ. ರೊಟ್ಟಿಯ ತುಂಡು ಮುರಿದು ತುಪ್ಪದ ಮತ್ತು ಚಟ್ನಿಯ ಗುಡ್ಡೆಗಳಿಗೆ ಠೀವಿಯಿಂದ ಅದ್ದಿ, ಆದಷ್ಟು ತುಪ್ಪ ಚಟ್ನಿಗಳು ರೊಟ್ಟಿ ತುಂಡಿನ ವಶವಾಗುವಂತೆ ಮಾಡಿ, ಅಗಲವಾಗಿ ಬಾಯಿ ಕಳೆದು ತೂರಿಸಿ, ಕೆನ್ನೆಯುಬ್ಬಿಸಿ ಅಗಿದು ತಿನ್ನಲಾರಂಭಿಸಿದೆ. ಕಾಲುಭಾಗ ರೊಟ್ಟಿ ಮುಗಿಯುವುದರೊಳಗೆ ಕಾಫಿ ಕೇಳಿದೆ. “ರೊಟ್ಟಿ ತಿನ್ನು ಆಮೇಲೆ ಕಾಫಿ ಕುಡಿಯಬಹುದಂತೆ” ಎಂದಾಗ ಅದಕ್ಕೊಪ್ಪಲಿಲ್ಲ. ನಾನು ಕೇಳಿದಷ್ಟು ತುಪ್ಪ ಚಟ್ನಿ ಕೊಟ್ಟಂತೆ ಕಾಪಿಯನ್ನೂ ಕೊಡಲೇಬೇಕೆಂದು ವಾದಿಸಿದೆ. ನನ್ನ ಪರಾಭವಕ್ಕೆ ನಾನೆ ಕಂದಕ ಅಗೆದುಕೊಳ್ಳುತ್ತಿದ್ದೇನೆಂದು ಚೆನ್ನಾಗಿ ತಿಳಿದ ಆ ಅಮ್ಮ ಮುಗುಳುನಗುತ್ತಾ ಕಾಫಿ ಪಾತ್ರೆಯನ್ನೇ ತಂದಿಟ್ಟು ಬೇಕಾದಷ್ಟನ್ನು ಲೋಟಕ್ಕೆ ಬೊಗಗಿಸಿಕೊಳ್ಳಲು ಹೇಳಿ ಮತ್ತೆ ಒಲೆಸರಕ್ಕೆ ರೊಟ್ಟಿ ತಟ್ಟಿ ಬೇಯಿಸಲು ಹೋಗಿ ಕುಳಿತರು. ಒಂದು ರೊಟ್ಟಿ ಅರ್ಧ ಮುಗಿಯುವ ವೇಳೆಗೆ ತುಪ್ಪ ಚಟ್ನಿ ಅರ್ಧಕ್ಕಿಂತಲೂ ಹೆಚ್ಚು ಖರ್ಚಾಗಿತ್ತು. ದೂರದಿಂದ ನೋಡುತ್ತಿದ್ದ ಯಾರೋ ಒಬ್ಬರು ಅಮ್ಮ ಸಲಹೆಕೊಟ್ಟರು, ಹುಡುಗನ ಮೇಲೆ ‘ಪಾಪ!’ ಎಂಬ ಕರುಣೆಯಿಂದ: “ಅಷ್ಟು ಚಟ್ನೀ ತಿನ್ನಬ್ಯಾಡೋ, ಮುಖಾಮುರೀತದೆ!”. ಆದರೆ ನಾನು ಆ ಸಕಹೆಗೆ ತಪ್ಪು ಅರ್ಥ ಮಾಡಿ, ನನ್ನನು ವಂಚಿಸುವುದಕ್ಕಾಗಿಯೆ ಹಾಗೆ ಹೇಳುತ್ತಿದ್ದಾರೆ ಎಂಬ ಲೋಭಬುದ್ಧಿಯಿಂದ ಅವರ ಹಿತವಾದವನ್ನು ತಿರಸ್ಕರಿಸಿ, ಹಟಮಾಡಿ, ಮತ್ತಷ್ಟು ತುಪ್ಪ ಚಟ್ನಿ ಹಾಕಿಸಿಕೊಂಡೇಬಿಟ್ಟೆ!
ಒಂದು ರೊಟ್ಟಿ ಪೂರೈಸಿತು. ಇನ್ನೂ ಹತ್ತೊಹನ್ನೊಂದೊ ರೊಟ್ಟಿ ರಾಶಿಯಾಗಿ ಎದುರಿಗೆ ನಿಂತಿವೆ, ದಂಡಿನಂತೆ! ನನ್ನ ಮುಖ ಸ್ವಲ್ಪ ಪೆಚ್ಚಾಯಿತು. ಆಗಲೇ ಹೊಟ್ಟೆ ತುಂಬಿಹೋದಂತಿತ್ತು! ಕುರುಸೇನೆಯನ್ನು ಎದುರುಗೊಂಡ ಉತ್ತರಕುಮಾರನಂತಾಗಿ ನನ್ನ ದೃಷ್ಟಿ ಬೆಬ್ಬಳಿಸಿತು, ಇದಿರೆ ನಿಂತು ಮೂದಲಿಸುತ್ತಿದ್ದ ರೊಟ್ಟಿಸಂಕುಲವನ್ನು ನೋಡಿ! “ಬಿಟ್ಟುಗಿಟ್ಟು ಹೋಗೀಯಾ ಮತ್ತೆ!” ಎಂದು ರೊಟ್ಟಿ ಸುಡುತ್ತಿದ್ದ ಅಮ್ಮ ತಮ್ಮ ಪಕ್ಕದಲ್ಲಿಟ್ಟುಕೊಂಡಿದ್ದ ನೆಕ್ಕಿಕೋಲನ್ನು ನೆಲಕ್ಕೆ ಬಡಿದು ಎಚ್ಚರಿಕೆ ಕೊಟ್ಟರು.
“ಅಷ್ಟೊಂದು ತುಪ್ಪ ಚಟ್ನಿ ಕಾಫಿ ಎಲ್ಲ ಕೊಟ್ಟಿದ್ದು ಯಾಕೆ? ನಾನು ಅವನ್ನೆಲ್ಲ ತಿಂತೀನಿ ಅಂತಾ ಪಂತ ಕಟ್ಟಿದ್ನೇನು? ಅವೇ ಹೊಟ್ಟೆ ತುಂಬಿಬಿಟ್ಟಿವೆ!” ಎಂದು ದೂರಿದೆ.
“ನೀನೆ ಹಾಕಿ ಹಾಕಿ ಅಂತಾ ಇಕ್ಕಿಸಿಕೊಂಡದ್ದು! ನಾನೆ ಹೇಳಲಿಲ್ಲೇನು ಬ್ಯಾಡಾ ಸಾಕೂ ಅಂತಾ” ಎಂದು ಅಣುಕುದನಿಯಲ್ಲಾಡಿದರು ಆ ಅಮ್ಮ.
ಮತ್ತೆ, ಸೋಲೊಪ್ಪಿಕೊಳ್ಳದ ಛಲಮನಸ್ಸು ’ಮರಳಿ ಯತ್ನವ ಮಾಡು’ವ ದೃಢ ಸಂಕಲ್ಪದಿಂದ ರೊಟ್ಟಿಗೆ ಕೈಹಾಕಿತು. ತುಪ್ಪ ಚಟ್ನಿಗಳಿಗೆ ಅದ್ದಿ ಬಾಯಿಗೆ ಹಾಕಿಕೊಂಡು ಮುಕಕಿಮುಕ್ಕಿ ಅಗಿದು ನುಂಗಿದೆ. ಈಗಾಗಲೆ ರುಚಿಯ ಅಂಶ ಹಿಂದಾಗಿ ಹಟದ ಅಂಶದ ಮೇಲೆಯೆ ನಾಲಗೆ ಹಲ್ಲುಗಳು ಕೆಲಸ ಮಾಡುತ್ತಿದ್ದುವು!
ಹೇಗೋ ಏನೊ ಅಂತೂ ಭಗೀರಥ ಪ್ರಯತ್ನ ಸದೃಶ ಬಕಾಸುರ ಪ್ರಯತ್ನ ಮಾಡಿ ಒಂದೂವರೆ ರೊಟ್ಟಿಯನ್ನು ಮುಗಿಸುವ ಹೊತ್ತಿಗೆ ಹಲ್ಲು ನಾಲಿಗೆ ಹೊಟ್ಟೆ ಮನಸ್ಸು ಎಲ್ಲ ಸುಸ್ತಾಗುವಂತೆ ಭಾಸವಾಗಿ ವಿಮೋಚನೋಪಾಯಕ್ಕಾಗಿ ಮುಂದೇನು ಮಾಡನೇಕೆಂದು ಯೋಚಿಸತೊಡಗಿದೆ.
ಮಾಣಿಗೆಯತ್ತ ತೆರೆದಿದ್ದ ಬಾಗಿಲ ಕಡೆ ಅಭೀಷ್ಟಕ ದೃಷ್ಟಿ ಬೀರಿದೆ. ಮಾಣಿಗೆ ದಾಟಿದರೆ ಜಗಲಿಗೆ ತೆರೆಬಿದ್ದ ಬಾಗಿಲು, ಅಲ್ಲಿಂದ ಮುಂದೆ ಅಂಗಳ, ಹೆಬ್ಬಾಗಿಲು!
ಪಕ್ಕದಲ್ಲಿದ್ದ ಕಾಫಿಯನ್ನು ಗೊಟಗೊಟನೆ ಕುಡಿದೆ. ರೊಟ್ಟಿ ಸುಡುತ್ತಿದ್ದ ಅಮ್ಮ ಒಲೆಯ ಕೆಂಡದ ಮೇಲೆ ರೊಟ್ಟಿ ತಿರುಗಿಸುತ್ತಿದ್ದರು; ಮತ್ತೊಂದು ರೊಟ್ಟಿ ಹೆಂಚಿನ ಮೇಲೆ ಬೇಯುತ್ತಿತ್ತು. ಇನ್ನೊಂದು ರೊಟ್ಟಿ ಎಡಗೈ ಅಂಗೈಮೇಲೆ ಅರ್ದಸೃಷ್ಟಿಯಾಗಿ ಅಗಲಕ್ಕೆ ತಟ್ಟಿಸಿಕೊಳ್ಳಲು ವರ್ತುಕವಾಗಿ ಕಾಯ್ದಿತ್ತು. ಕೈ ಮನಸ್ಸು ಕಣ್ಣು ಎಲ್ಲವೂ ಕಾರ್ಯಮಗ್ನವಾಗಿದ್ದುವು. ಇದೇ ಸುಸಮಯ ಎಂದು ನಿರ್ಣಯಿಸಿದೆ. ಕೈ ಎಂಜಲಾಗಿದೆ, ಬಾಯಿ ತೊಳೆಯಬೇಕು ಎಂಬೆಲ್ಲ ಸಂಪ್ರದಾಯದ ದಾಕ್ಷಿಣ್ಯದಗಳನ್ನೂ ಆಚೆಗೆ ದಬ್ಬಿ, ಚಂಗನೆ ನೆಗೆದೆದ್ದು, ಮಾಣಿಗೆಯಿಂದ ಜಗಲಿಗೆ ನುಗ್ಗಿ, ಅಂಗಳಕ್ಕೆ ಹಾರಿ, ಹೆಬ್ಬಾಗಲಿನಿಂದ ಜೊತೆಯ ಗೆಳೆಯರು ಆಡುತ್ತಿದ್ದ ಕಣಕ್ಕೆ ಓಡಿದೆ! ಅಮ್ಮ ತಲೆಯೆತ್ತಿ ನೋಡಿದಾಗ ಖಾಲಿ ಮಣೆ, ಬಾಳೆಯೆಲೆಯ ಮೇಲೆ ಸ್ವಲ್ಪ ಅಸ್ತವ್ಯಸ್ತಾವಸ್ಥೆಯಲ್ಲಿದ್ದ ಹತ್ತೂವರೆ ರೊಟ್ಟಿಗಳು ಅವರ ನೋಟಕ್ಕೆ ಮೂದಲಿಕೆಯಾಗಿ ಬಿದ್ದಿದ್ದುವು.
“ಹಿಡುಕೊಳ್ರೋ! ಹಿಡುಕೊಳ್ರೋ! ಪುಟ್ಟು ಓಡಿದ!” ಎಂಬ ಅವರ ಕರೆಗೆ ಇತರ ಅಮ್ಮಂದಿರ ನಗೆಯೆ ಮಾರುತ್ತರವಾಗಿತ್ತು!!

Tuesday, March 24, 2015

ಶಂಕರಾಚಾರ್ಯರು ಹಸ್ತಾಮಲಕರಿಗೆ ಬೋಧಿಸಿದ್ದ ನರಕದ ಶಿಕ್ಷೆಯ ಪರಿಣಾಮ!

ಒಮ್ಮೆ ಬೇಸಗೆಯ ರಜದಲ್ಲಿ ನಾವೆಲ್ಲ ಮನೆಗೆ ಹೋಗಿದ್ದಾಗ ಉಪ್ಪರಿಗೆಯ ಮೇಳಣ ನಾಗಂದಿಗೆಯಲ್ಲಿ ಕೆಲವು ಪುಸ್ತಕಗಳಿದ್ದುದು ಕಣ್ಣಿಗೆ ಬಿತ್ತು. ಅವೆಲ್ಲ ಹರಿದು ಮುರಿದು ಒರಲೆ ಹತ್ತಿಹೋಗಿದ್ದುವು. ಬಹುಶಃ ಅವುಗಳನ್ನು ತೇರಿಗೆ ಹೋದವರು ಯಾರೋ ಮಾರಾಟಗಾರನ ಪುಸಲಾಯಿಕೆಗೆ ದಾಕ್ಷಿಣ್ಯವಶರಾಗಿ ಕೊಂಡುಕೊಂಡು ಬಂದಿದ್ದರೆಂದು ತೋರುತ್ತದೆ. ಅವನ್ನು ಯಾರಾದರೂ ಓದಿದ್ದರೆಂದು ಹೇಳುವಂತಿರಲಿಲ್ಲ. ಅವುಗಳನ್ನೆಲ್ಲ ತೆಗೆದು ಧೂಳು ಕಸ ಝಾಡಿಸಿ ನೋಡಿದಾಗ ಒಂದೆರಡೇ ತೆಳ್ಳೆನಯ ಪುಸ್ತಕಗಳು ಓದುವ ಮಟ್ಟಿಗೆ ಅಕ್ಷತವಾಘಿದ್ದುದು ಕಂಡುಬಂತು. ಮಬ್ಬುಮಬ್ಬಾದ ಭಂಗುರ ಕಾಗದದ ಮೇಲೆ ಅಚ್ಚು ಮಾಡಿದ್ದ ಮಾರ್ಕೆಟ್ಟಿನ ಪುಸ್ತಕಗಳವು. ಅವುಗಳಲ್ಲಿ ಒಂದರ ಮೇಲೆ ’ಶಂಕರಾಚಾರ್ಯರು ಹಸ್ತಾಮಲಕರಿಗೆ ಬೋಧಿಸಿದ್ದು’ ಎಂದಿತ್ತು. ಅದು ಪದ್ಯದಲ್ಲಿತ್ತು. ನನಗೆ ಕುತೂಹಲವಾಗಿ ಅದನ್ನು ಓದಲು ತೊಡಗಿದೆ. ನನಗೆ ಆ ನೀತಿಬೋಧೆಯ ಭಾಷೆ ಎಷ್ಟರಮಟ್ಟಿಗೆ ಕರಾರುವಕ್ಕಾಗಿ ಅರ್ಥವಾಯಿತೋ ಏನೋ ತಿಳಿಯದು. ಆದರೆ ಅದರಲ್ಲಿದ್ದ ನರಕವರ್ಣನೆ ತನ್ನ ಭಯಾನಕತೆಯಿಂದಲೆ ನನ್ನ್ನನು ಆಕರ್ಷಿಸಿತು!

ಶಂಖರಾಚಾರ್ಯರು ಶಿಷ್ಯನಿಗೆ ಮನುಷ್ಯರು ಮಾಡುವ ಯಾವ ಯಾವ ಪಾಪಗಳಿಗೆ ಎಂತೆಂತಹ ಶಿಕ್ಷೆಗಳನ್ನು ಯಮ ವಿಧಿಸುತ್ತಾನೆ ಎಂಬುದನ್ನು ಘೋರವಾಗಿ ವರ್ಣೀಸಿದ್ದರು. ಹಾದರ ಮಾಡುವವರಿಗೆ ಏನು ಶಿಕ್ಷೆ? ಅದರಲ್ಲಿಯೂ ಗಂಡಸರಿಗೆ ಯಾವ ವಿಧ? ಹೆಂಗಸರಿಗೆ ಯಾವ ವಿಧ? ಪ್ರಾಣೀಗಳನ್ನು ಕೊಲ್ಲುವವರಿಗೆ ಯಾವ ತರಹದ ಯಾತನೆ? ಮಾಂಸಾಹಾರಿಗಳಿಗೆ ಯಾವಯಾವ ಕುದಿಸಿದೆಣ್ಣೆಯ ಕಡಾಯಿಗಳಲ್ಲಿ ಎಷ್ಟೆಷ್ಟು ಸಾರಿ ಅದ್ದಿ ಅಭ್ಯಂಜನ ಮಾಡಿಸುತ್ತಾರೆ? ಕೆಂಪಗೆ ಕಾದ ಉಕ್ಕಿನ ಪಕ್ಷಿಗಳು ಹೇಗೆ ಕಣ್ಣು ತಲೆ ಕುಟುಕಿ ತಿನ್ನುತ್ತವೆ? ಶೂಲಕ್ಕೆ ಹೇಗೆ ಏರಿಸುತ್ತಾರೆ? ಇತ್ಯಾದಿ ಇತ್ಯಾದಿ.
ಓದುತ್ತಾ ಓದುತ್ತಾ ನನಗೆ ಹೆದರಿಕೆಯಾಗಿ ಬೆವರು ಕಿತ್ತುಕೊಂಡಿತು. ಅದರಲ್ಲಿಯೂ ಆಚಾರ್ಯರು ನಮೂದಿಸಿದ ಕೆಲವು ಪಾಪಗಳನ್ನು ನಾನೇ ದಿನವೂ ಯಾವ ಮುಲಾಜು ಇಲ್ಲದೆ ಎಷ್ಟೋ ಸಲ ಮಾಡಿದ್ದೇನಲ್ಲಾ! ಸತ್ತಮೇಲೆ ನನ್ನ ಗತಿ ಏನು? ಅದರಲ್ಲಿಯೂ ಹಾದರಗೀದರದಂತಹ ಪಾಪಕ್ಕೆ ಒದಗುವ ಶಿಕ್ಷೆಯ ವಿಚಾರವಾಗಿ ನನಗೇನೂ ಭಯವಾಗಲಿಲ್ಲ. ಏಕಂದರೆ ಆ ಪಾಪದ ಅರ್ಥವೂ ಗೊತ್ತಿರಲಿಲ್ಲ.; ಅದಕ್ಕೂ ನನಗೂ ಏನೂ ಸಂಬಂಧವಿರಲೂ ಇಲ್ಲ. ಆದರೆ ಮಾಂಸಾಹಾರ! ಊಟ ಮಾಡುವಾಗಲೆಲ್ಲ ಸಾಧಾರಣವಾಗಿ ಆ ಪಾಪ ಮಾಡಿಯೆ ಮಾಡಿದ್ದೇನೆ! ಒಂದಲ್ಲ ಎರಡಲ್ಲ ನೂರಾರು ಪ್ರಾಣಿಗಳ ಮಾಂಸ ಭಕ್ಷಿಸಿದ್ದೇನಲ್ಲಾ! ಊರುಕೋಳಿ, ಕಾಡುಕೋಳಿ, ಚಿಟ್ಟುಗೋಳಿ, ಹುಂಡುಕೋಳಿ, ಊರುಹಂದಿ, ಕಾಡುಹಂದಿ, ಕಣೆಹಂದಿ, ಬರ್ಕ, ಕಬ್ಬೆಕ್ಕು, ಮೊಲ, ಊರುಕುರಿ, ಕಾಡುಕುರಿ, ಮಿಗ, ಕಡ, ಚಿಪ್ಪಿನಹಂದಿ, ಇನ್ನೂ ಎಷ್ಟೋ ಭೂಚರ ಜಂತುಗಳು! ಇನ್ನು ವಾಯುಚರ ಪಕ್ಷಿಗಳಲ್ಲಿ? ಹೊರಸಲು ಹಕ್ಕಿ, ಹಾಡ್ಲು ಹಕ್ಕಿ, ಮಣೆಹಾಡ್ಲು ಹಕ್ಕಿ, - ಕಡೆಗೆ ರಬ್ಬರು ಬಿಲ್ಲಿನಲ್ಲಿ ನಾನೇ ಷಿಕಾರಿ ಮಾಡಿದ ಪಿಕಳಾರ, ಕುಟುರ, ಗಿಳಿ, ಅರಸಿನ ಬುರುಡೆ ಇಂತಹ ನೂರಾರು ಹೆಸರಿಲ್ಲದ ಹಕ್ಕಿಗಳು! ಇನ್ನು ಜಲಚರಗಳು? ಲೆಕ್ಕವಿಲ್ಲ! ಅಯ್ಯೊ ದೇವರೆ, ಚಿತ್ರಗುಪ್ತನ ದಫ್ತರ ಪುಸ್ತಕವೆಲ್ಲ ಸಾಲುವುದಿಲ್ಲವಲ್ಲಾ ನನ್ನೊಬ್ಬನ ಪಾಪಗಳ ಪಟ್ಟಿಯನ್ನೆ ಬರೆಯುವುದಕ್ಕೆ? ನನ್ನ ಗತಿಯೇನು?
ಕುದಿಯುವ ಎಣ್ಣೆಯ ಕಡಾಯಿಯಲ್ಲಿ ಅದ್ದುತ್ತಾರೆ, ಕೆಂಪಗೆ ಕಾದ ಶೂಲಕ್ಕೆ ಚುಚ್ಚುತ್ತಾರೆ ಎಂದೆಲ್ಲ ಓದಿದಾಗ ಹೆದರಕೆಯಾಯ್ತು. ಆದರೆ “ಕಂದ, ಕೇಳ್” ಎಂದು ಶುರುಮಾಡಿ ಆಚಾರ್ಯರು “ಕೊಳೆತ ಪುರೀಷ ಮೂತ್ರದ ರಾಶಿಯಲ್ಲಿ” ಹಾಕುತ್ತಾರೆ ಯಮದೂತರು ಎಂದು ಘೊಷಿಸಿದಾಗ ಹೆದರಿಕೆಯ ಜೊತೆಗೆ ಹೆದರಿಕೆಯನ್ನು ಸಾಔಇರ ಪಾಲು ಮೀರಿ ‘ಅಸಹ್ಯ’ ‘ಜುಗುಪ್ಸೆ’ ‘ಹೇಸಿಗೆ’ ‘ವಾಕರಿಕೆ’ ಎಲ್ಲ ಒಟ್ಟಿಗೆ ಆಗಿ ‘ಕೆಟ್ಟೆ!’ ಎಂದುಕೊಂಡು ಪುಸ್ತಕ ಮುಚ್ಚಿಟ್ಟುಬಿಟ್ಟೆ!
ಬಾಲಕನ ಅದ್ಭುತ ಕಲ್ಪನೆ ಕೆರಳಿತು: ಅತ್ಯಂತ ಬೀಭತ್ಸಕರವಾದ ಚಿಂತೆಯಲ್ಲಿ ಮಗ್ನನಾಗಿ ಕುಳಿತುಬಿಟ್ಟೆ!
ಬಹಳ ಹೊತ್ತಿನ ಚಿಂತನೆಯ ಪರಿಣಾಮವಾಗಿ ಒಂದು ನಿಧಾರಕ್ಕೆ ಬಂದೆ. ಮೋಸಸ್ ಮೇಷ್ಟರು ಕೊಟ್ಟಿದ್ದ ಸುವಾರ್ತೆಯಲ್ಲಿ ಯೇಸುಸ್ವಾಮಿ ಬೋಧಿಸಿದ್ದು ನೆನಪಿಗೆ ಬಂತು: ಪಾಪಕ್ಕೆ ಪಶ್ಚಾತ್ತಾಪವೆ ಪ್ರಾಯಶ್ಚಿತ್ತ ಎಂಬುದು. ನರಕಶಿಕ್ಷೆಯ ಭಯದಿಂದ ಆಗಲೇ ನನ್ನಲ್ಲಿ ಪಶ್ಚಾತ್ತಾಪ ಶುರುವಾಗಿಬಿಟ್ಟಿತ್ತಷ್ಟೆ? ಆ ಪಶ್ಚಾತ್ತಾಪವನ್ನೆ ಸ್ವಲ್ಪ ಮುಂದುವರಿಸಿದರಾಯ್ತು, ಪ್ರಾಯಶ್ಚಿತ್ತದಿಂದ ಪಾಪವೆಲ್ಲ ಪರಿಹಾರವಾಗಿಯೆ ಆಘುತ್ತದೆ. ಇನ್ನು ಮೇಲೆ ಪಾಪ ಮಾಡದ ಹಾಗೆ ನೋಡಿಕೊಂಡರಾಐತು! ಅಮದರೆ ಇನ್ನು ಮೇಲೆ ಮಾಂಸಾಹಾರವನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ನಿರ್ಧರಿಸಿದೆ. ಅದೇನು ಸಾಧಾರಣ ನೀರ್ಧಾರವಾಗಿರಲಿಲ್ಲ. ಆ ನಿರ್ಧಾರ ಬುದ್ಧನ ಪತ್ನೀಪುತ್ರರಾಜ್ಯ ಪರಿತ್ಯಾಗಗಳೀಗಿಂತಲೂ ಕಡಮೆಯಾgiರಲಿಲ್ಲವೆಂಬುದು ಮಾಂಸಾಹಾರದ ರುಚಿಯರಿತ ನಾಲಗೆಗಳಿಗಲ್ಲದೆ ಉಳಿದವರಿಗೆ ಗೊತ್ತಾಗುವುದಿಲ್ಲ!
ನನ್ನ ಉದ್ಧಾರವನ್ನೇನೊ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ ಅಷ್ಟರಿಂದಲೆ ಮನಸ್ಸಿಗೆ ತೃಪ್ತಿಯಾಗಲಿಲ್ಲ. ನನ್ನ ಒಡನಾಡಿಗಳು, ಗೆಳೆಯರು, ಬಂಧುಮಿತ್ರರು, ಮನೆಯವರು ಇವರೆಲ್ಲ ನರಕಕ್ಕೆ ಹೋಗಿ, ಪಡಬಾರದ ಯಾತನೆಪಡುತ್ತಾರಲ್ಲಾ ಎಂದು ಪರುಧಃಖಕಾತರತೆ ಹೃದಯವನ್ನಾಕ್ರಮಿಸಿತು. ಅವರೆಲ್ಲ ನರಕಕ್ಕೆ ಹೋಗಿ ನಾನೊಬ್ಬನೆ ಸ್ವರ್ಗದಲ್ಲೇನು ಮಾಡುವುದು? ಆದ್ದರಿಂದ ಶಂಕರಾಚಾರ್ಯರಂತೆ ಅವರೆಲ್ಲರಿಗೂ ಬೋಧನೆ ಮಾಡಿ ಅವರನ್ನೂ ನರಕದಿಂದ ಪಾರುಮಾಡಬೇಕೆಂದು ಮನಸ್ಸು ಮಾಡಿದೆ. ಆದರೆ ದೊಡ್ಡವರೆಲ್ಲ ನನ್ನಂತಹ ಅರಿಯದವನ ಮಾತು ಕೇಳುತ್ತಾರೆಯೆ? ಆದ್ದರಿಂದ ನನ್ನ ಜೊತೆಗಾರರನ್ನಾದರೂ ನರಕದಿಂದ ಉಳಿಸಬೇಕೆಂದು ಸಂಕಲ್ಪಿಸಿ, ಅವರನ್ನೆಲ್ಲ ಉಪ್ಪರಿಗೆಯಲ್ಲಿ ಕಲೆಹಾಕಿದೆ. ಅವರೆಲ್ಲರೂ -ಸುಬ್ಬಣ್ಣ, ಧರ್ಮು, ಮಾಣಪ್ಪ, ಓಬಯ್ಯ, ತಿಮ್ಮು, ವೆಂಕಟಯ್ಯ ಇತ್ಯಾದಿ -ನಾನು ಕಥೆ ಹೇಳಬಹುದೆಂದು ಆಸಿಸಿ ನೆರೆದರು.
ಹಸ್ತಾಮಲಕರಿಗೆ ಶಂಕರಾಚಾರ್ಯರು ಹೇಳಿದ್ದ ನರಕದ ಶಿಕ್ಷೆಗಳನ್ನೆಲ್ಲ ರಾಗವಾಗಿ ಓದಿ ಮನದಟ್ಟುವಂತೆ ವಿವರಿಸಿದೆ. ಸತ್ತಮೇಲೆ ಮುಂದೆ ಒದಗಬಹುದಾದ ಕೇಡುಗಳನ್ನೆಲ್ಲ ಆಲಿಸಿದ್ದ ಎಲ್ಲರೂ ಪ್ರಭಾವಿತರಾದರೆಂದು ಭಾವಿಸಿ, ಪರಿಹಾರ ಕ್ರಮಗಳನ್ನು ಸೂಚಿಸಿದೆ. ಇದುವರೆಗೆ ಮಾಡಿದ ಪಾಪಕ್ಕೆ ಪರಿಹಾರ ರೂಪವಾಗಿ ಪಶ್ಚಾತ್ತಾಪ ರೂಪವಾದ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದೂ ಮುಂದೆ ಅಮತಹ ಪಾಪ ಸಂಭವಿಸದಂತೆ ಮಾಡಲು ಮಾಂಸಾಹಾರವನ್ನೇ ಸಂಪೂರ್ಣವಾಗಿ ಬಿಟ್ಟುಬಿಡಬೇಕೆಂದೂ ಹೃದಯಸ್ಯಂದಿಯಾಘಿ ಬೋಧಿಸಿದೆ. ಎಲ್ಲರೂ ಒಪ್ಪಿದಂತೆ ತೋರಿಸದರು. ಅದು ಎಷ್ಟರಮಟ್ಟಿಗೆ ಬುದ್ಧಿಪೂರ್ವಕವಾಗಿತ್ತು, ಮತ್ತೆಷ್ಟರಮಟ್ಟಿಗೆ ಹೃತ್ಪೂರ್ವಕವಾಘಿತ್ತು ಎಂಬುದು ಕಾಲಕ್ರಮೇಣ ತಿಳಿಯುತ್ತದಷ್ಟೆ.
ಸರಿ, ಎಲ್ಲರೂ ದೇವರ ಮೇಲೆ ಆಣೆಯಿಟ್ಟು ಶಪಥಮಾಡಿದೆವು; ಇನ್ನುಮೇಲೆ ಮಾಂಸಾಹರ ಸೇವಿಸುವುದಿಲ್ಲ ಎಂದು.
ನಾವು ಪ್ರತಿಜ್ಞೆಮಾಡಿದ ಒಂದೆರಡು ದಿನಗಳಲ್ಲಿಯೆ ಮನೆಯಲ್ಲಿ ಏನೋ ಒಂದು ತಂತಿಗೆ ಸಂಬಂಧಿಸಿದ ಕಟ್ಟಳೆ ನಡೆಯಿತು. ನಂಟರಿಷ್ಟರು ಬಹಳ ಮಂದಿ ನೆರೆದಿದ್ದರು. ರಾತ್ರಿ ಹೊರಜಗುಲಿಲ್ಲಿ ಗಂಡಸರಿಗೆಲ್ಲ ‘ಬಳ್ಳೆ’ ಹಾಕಿದ್ದರು, ಒಳಗೆ ಅಡುಗೆ ಮನೆಯಲ್ಲಿ ಜಾಗ ಸಾಲದಗುತ್ತದೆ ಎಂದು. ನಾವೆಲ್ಲ ಹುಡುಗರೂ ಒಂದೆಡೆ ಸಾಲಾಗಿ ಕುಳಿತೆವು. ಯಾರೂ ತೊಟ್ಟ ಶಪಥವನ್ನು ಮುರಿಯಬಾರದು ಎಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿತ್ತು.
ಆ ಕಟ್ಟಳೆಯ ಸ್ವರೂಪ ಎಂಥಾದ್ದಾಗಿತ್ತು ಎಂದರೆ, ಊಟದಲ್ಲಿ ತುಂಡು ಕಡುಬೇ ಪ್ರಧಾನ. ಕಡುಬನ್ನು ಎಲ್ಲರಿಗೂ ಇಕ್ಕುತ್ತಾ ಬಂದರು. ಅದರ ಹಿಂದೆ ಮಾಂಸದ ಹುಳಿಯೂ ಪದ್ಧತಿಯಂತೆ ಹಿಂಬಾಲಿಸಿತು. ಬಡಿಸುವವರು ನನ್ನ ಎಲೆಯ ಮುಂದೆ ಬಂದೊಡನೆ ನಾನು ಎರಡೂ ಕೈಗಳನ್ನು ಅಡ್ಡ ಹಾಕಿ ‘ಬೇಡ’ ಎಂದೆ. ಬಡಿಸುವವರಿಗಂತೂ ದಿಗ್‌ಭ್ರಮೆ. ಕಡುಬು ತುಂಡು ಎಂದರೆ ಪ್ರಾಣ ಬಿಡುವಷ್ಟು ಬೇಗುತ್ತಿದ್ದವನು ಈ ಹೊತ್ತೇಕೆ ಹೀಗೆ ವರ್ತಿಸುತ್ತಿದ್ದಾನೆ ಎಂದು? ಬಡಿಸುವವರು ತುಸು ತತ್ತರಿಸಿ ನಿಂತರು. ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದು ಸಮೀಪವಾಗಿದ್ದು ಗಮನಿಸಿದ ನೆಂಟರನೇಕರು ಬೆರಗಾಗಿ ನನ್ನತ್ತ ಕಡೆ ನೋಡಿದರೆ. ಹಿರಿಯರು ಯಾರೋ ಒಬ್ಬರು ಕೂಗಿದರು ‘ಬ್ಯಾಡ ಅನ್ನಬಾರದೋ, ಕಟ್ಟಳೆ ದಿನದ್ದು’ ಎಂದು. ಆದರೆ ನಾನು ಅಡ್ಡ ಹಿಡಿದಿದ್ದ ಕೈಗಳನ್ನು ತೆಗೆಯದೆ ಮುಖವನ್ನು ಅಡ್ಡಗಟ್ಟುವಂತೆ ಮುಮದಕ್ಕೆ ಚಾಚಿ ಬೇಡವೇ ಬೇಡ ಎಂದುಬಿಟ್ಟೆ. ಬಡಿಸುತ್ತಿದ್ದವರು ಪಕ್ಕದ ಎಲೆಗೆ ಹೋದರು. ಅಲ್ಲಿಯೂ ‘ಬೇಡ!’ ಅದರ ಪಕ್ಕದ ಎಲೆಯೂ ’ಬೇಡ’ ಎಂದಿತು. ಇಡೀ ಪಂಕ್ತಿಯೇ ನಮ್ಮ ಮೇಲೆ ಕಣ್ಣು ಹಾಕಿತು! ಅಂತೂ ಶಪಥ ತೊಟ್ಟ ನಾವೆಲ್ಲರೂ ಕಡುಬನ್ನು ಮಾತ್ರ ಇಕ್ಕಿಸಿಕೊಂಡು ತುಂಡನ್ನು ಬೇಡವೆಂದೇಬಿಟ್ಟೆವು. ಬಡಿಸುವವರು ಹುಡಗರ ಸಾಲನ್ನು ದಾಟಿ ಮುಂದೆ ಬಡಿಸುತ್ತಾ ಹೋದರು. ಹಿರಿಯರೊಬ್ಬರು ಹುಡುಗರಿಗೆ ಕಡುಬಿಗೆ ನಂಚಿಕೊಳ್ಳಲು ತುಪ್ಪ ಬೆಲ್ಲ ಬಡಿಸಲು ಹೇಳಿದರು. ಅದರಂತೆ ತುಪ್ಪಬೆಲ್ಲ ನಂಚಿಕೊಂಡು ತಿನ್ನತೊಡಗಿದೆವು.
ಆದರೆ ನಮ್ಮಲ್ಲಿ ಒಬ್ಬ, ಅತ್ಯಂತ ಕಿರಿಯ, ಕಡುಬಿಗಾಗಲಿ ತುಪ್ಪಬೆಲ್ಲಕ್ಕಾಗಲಿ ಕೈಹಾಕಲೆ ಇಲ್ಲ. ಕಣ್ಣಿಂದ ಬುಬುಳನೆ ನೀರು ಸುರಿಸುತ್ತಾ ನೀರವವಾಗಿ ಅಳುತ್ತಾ ಕುಳಿತಿದ್ದ. ಮೊದಮೊದಲು ಯಾರೂ ಗಮನಿಸಲಿಲ್ಲ. ಆದರೆ ಸ್ವಲ್ಪ ಹೊತ್ತಿನೊಳಗಾಗಿ ಒಬ್ಬರ ಕಣ್ಣಿಗೆ ಬಿದ್ದು, ಅವರು “ಯಾಕೋ, ತಮ್ಮ, ಅಳ್ತಾ ಕೂತಿಯಲ್ಲಾ” ಎಂದು ಎಲ್ಲರಿಗೂ ಕೇಳಿಸುವಂತೆ ಕೂಗಿದರು. ಅವನ ಳು ಮತ್ತೂ ಜೋರಾಯಿತು. ಏಕೆ ಎಂದು ಕೇಳಿದರೆ ಹೇಳದೆಯೆ ಹೋದ. ಕಡೆಗೆ ಅವನ ಅಮ್ಮನೆ ಬಂದು ಕೈಹಿಡಿದೆತ್ತಿ ಒಳಗೆ ಕರೆದು ಹೋದರು. ಅಲ್ಲಿ ಕಡುಬಿಗೆ ಮಾಂಸದ ಹುಳಿ ಹಾಕಿಸಿಕೊಂಡು ನಮ್ಮ ಯಾರ ಭಯವೂ ಇಲ್ಲದೆ ತಿಂದನಂತೆ!
***
ಆ ಕಿರಿಯನೇನೊ ಪ್ರಪ್ರಥಮ ಪ್ರಲೋಭನಕ್ಕೇ ಸೋತು ಶರಣಾಗಿ ಪ್ರತಿಜ್ಞೆ ಮುರಿದು ಶಪಥದಿಂದ ಪಾರಾಗಿಬಿಟ್ಟಿದ್ದ! ಆದರೆ ಉಳಿದವರ ಪ್ರತಿಜ್ಞೆಯೂ ಬಹಳ ಕಾಲ ಉಳಿಯಲಿಲ್ಲ. ಸ್ವರ್ಗಾರೋಹಣ ಪರ್ವದಲ್ಲಿ ಒಬ್ಬೊಬ್ಬರೆ ಪಾಂಡವರು ಉರುಳಿದಂತೆ ಸ್ವಲ್ಪ ಕಾಲದಲ್ಲಿಯೆ ಒಬ್ಬರಾದಮೇಲೊಬ್ಬರು ಮಾಂಸರುಚಿಯಿಂದ ತಪ್ಪಿಸಕೊಳ್ಳಲಾರದೆ ಶರಣುಹೊಡೆದರು. ನಾನೊಬ್ಬನೆ, ಹಟಕ್ಕಾಗಿ ಎಂದೇ ನನ್ನ ಭಾವನೆ, ಅನೇಕ ವರ್ಷಗಳವರೆಗೆ ಅದನ್ನು ಸಾಧಿಸಿದ್ದೆ.
ಹೀಗೆಯೆ ನನ್ನ ಬದುಕಿನಲ್ಲಿ ಭಂಗಗೊಂಡ ಪ್ರತಿಜ್ಞೆಗಳಿಗೆ ಲೆಖ್ಖವಿಲ್ಲ; ಆಧ್ಯಾತ್ಮಿಕ ಸಾಧನೆಗೂ ಬ್ರಹ್ಮಷರ್ಯಪಾಲನೆಗೂ ಆಹಾರ ನಿಯಂತ್ರಣ ಬಹಳ ಆವಶ್ಯಕವೆಂಬ ಭ್ರಾಂತಿಗೆ ಸಿಕ್ಕಿ ಅನೇಕ ವರ್ಷಗಳ ಕಾಲ ಒಪ್ಪತ್ತು ಊಟ ಮಾಡಿ, ರಾಥ್ರಿ ನೆನೆಸಿಟ್ಟಿದ್ದ ಕಡಲೆ ತಿಂದು, ಕಾಲ ಹಾಕಿದ್ದೆ. ಬೇಟೆಯ ಹುಚ್ಚನ್ನು ಬಿಡಲಾರದೆ, ಹುಲಿ ಹಂದಿ ಮುಂತಾದ ಕ್ರೂರಜಂತುಗಳನ್ನಲ್ಲದೆ ಮೊಲ ಜಿಂಕೆ ಮುಂತಾದ ಸಾಧುಪ್ರಾಣಿಗಳನ್ನು ಹೊಡೆಯುವುದಿಲ್ಲ ಎಂದು ಶಪಥಮಾಡಿ, ದೊಡ್ಡ ಬೇಟೆಯಲ್ಲಿ ಬಿಲ್ಲಿಗೆ ಕುಳಿತು, ಮಿಗ ಕಾಡುಕುರಿ ಬರ್ಕ ಮೊದಲಾದುವುಗಳನ್ನು ಗುಂಡಿಕ್ಕಿ ಕೊಲ್ಲದೆ ಬಿಟ್ಟು ಇತರ ಬೇಟೆಗಾರರಿಂದ ಚೆನ್ನಾಗಿ ಅನ್ನಿಸಿಕೋಂಡಿದ್ದೇನೆ. ಉಲ್ಲೇಖಾರ್ಹವಲ್ಲದ ಇನ್ನೆನಿತೆನಿತೊ ದುರಭ್ಯಾಸಗಳನ್ನು ತ್ಯಜಿಸಲು ವ್ರತಪ್ರತಿಜ್ಞೆ ಶಪಥಗಳನ್ನು ವೀರನಿಷ್ಠೆಯಿಂದ ಕೈಕೊಂಡು, ಮತ್ತೆ ಮತ್ತೆ ಸೋತು, ಉರುಳಿ, ಬಿದ್ದು, ಎದ್ದು ಪಯಣ ಸಾಗಿಸಿದ್ದೇನೆ. ಆದರೆ, ಶ್ರೀಗುರುಕೃಪೆಯಿಂದ, ಸೋತರೂ ಬಿದ್ದರೂ ಉರುಳಿದರೂ ಗಾಯಗೊಂಡರೂ ಮತ್ತೆ ಮತ್ತೆ ಎದ್ದು ದೃಢಪ್ರತಿಜ್ಞನಾಗಿ ಮುಂದುವರಿಯುವ ಛಲವನ್ನು ಮಾತ್ರ ಎಂದೂ ಕೈಬಿಟ್ಟಿಲ್ಲ.

Tuesday, March 17, 2015

ಲಾಜಿಕಲ್ ಅಲ್ಲ, ಬಯಾಲಾಜಿಕಲ್!

ಒಂದು ಸಂಜೆ ನಾನು ಕುವೆಂಪು ಅವರೊಡನೆ ಮಾತನಾಡುತ್ತಾ ಕುಳಿತಿದ್ದಾಗ ನವ್ಯಕವಿ ಗೋಪಾಲಕೃಷ್ಣ ಅಡಿಗರು ಇದ್ದಕ್ಕಿದ್ದಂತೆ ಅಲ್ಲಿಗೆ ಬಂದರು. ನನಗೆ ಪರಮಾಶ್ಚರ್ಯವಾಯಿತು. ಏಕೆಮದರೆ ಅಡಿಗರೇ ಮುಂತಾಗಿ ನವ್ಯಕವಿಗಳು ಶ್ರೀ ಕುವೆಂಪು ಅವರ ವಿಷಯದಲ್ಲೂ ಅವರ ಕಾವ್ಯದ ವಿಷಯದಲ್ಲೂ ಅಷ್ಟು ಪ್ರಸನ್ನರಾಗಿರಲಿಲ್ಲ. ಅಷ್ಟೇ ಅಲ್ಲ - “ಕುವೆಂಪು ಕವಿಯೇ ಅಲ್ಲ - ಕುವೆಂಪು ಕವಿ ಎಂದಾದರೆ ನಾನು ಕವಿಯೇ ಅಲ್ಲ” ಎಂದು ಅಡಿಗರು ಸಾರಿದ್ದರು. ಜನ ಮನೋಮಂದಿರದಲ್ಲಿ ನೆಲಸಿರುವ ಕವಿ ಯಾರು ಎಂಬುದನ್ನು ಕಾಲ ಇಷ್ಟು ಬೇಗ (೨೦೦೨) ನಿರ್ಧರಿಸುತ್ತದೆ ಎಂದು ಆಗ ನಾನು ಊಹಿಸಿಯೂ ಇರಲಿಲ್ಲ. 
ಅಡಿಗರು ಏಕಾಏಕಿ ಕುವೆಂಪು ಅವರ ಮನೆಗೆ ಬಂದದ್ದೇಕೆ ಎಂದು ತಿಳಯಲಿಲ್ಲ. ಅಡಿಗರು ಕುವೆಂಪು ಅವರಿಗೆ “ನಮಸ್ಕಾರ” ಹೇಳಿದರು. ಕುವೆಂಪು ಅಡಿಗರನ್ನು ತಮ್ಮ ಸಹಜ ಮಂದಸ್ಮಿತದಿಂದ ಸ್ವಾಗತಿಸಿದರು. ಅಡಿಗರು “ಏನೋ ಹುಡುಗ ತಿಳಿಯದೆ ಮಾಡಿಬಿಟ್ಟ, ಅವನನ್ನ ಬಿಡಿಸಿ ಬಿಡಿ” ಎಂದರು. ಕುವೆಂಪು “ಆಗಲಿ, ಈಗಲೇ ಪೋಲೀಸ್ ಸ್ಟೇಷನ್ನಿಗೆ ಫೋನ್ ಮಾಡಿ ಹೇಳುತ್ತೇನೆ, ನೀವು ನಿಶ್ಚಿಂತರಾಗಿ ಮನೆಗೆ ಹೋಗಿ” ಎಂದರು. ಅಡಿಗರು “ತುಂಬಾ ಥ್ಯಾಂಕ್ಸ್” ಎಂದತರು. ಅವರು ಹೊರಡುವ ಮುನ್ನ ಕುವೆಂಪು ಹೇಳಿದರು: “ಅದರೂ ಹುಡುಗ ನಿಮ್ಮ ನವ್ಯವನ್ನೂ ಹಳೆಯದನ್ನಿಸುವಷ್ಟರ ಮಟ್ಟಿಗೆ ನವ್ಯಾತಿನವ್ಯವಾಗಿ ಮಾಡಿದ್ದಾನೆ” ಎಂದು ಹೇಳಿ ಜೋರಾಗಿ ನಕ್ಕರು. ಅಡಿಗರೂ ನಗುತ್ತಾ ಹೊರಟು ಹೋದರು. ಇದು ಯಾವುದರ ಹಿಂದೂ ಮುಂದೂ ತಿಳಿಯದ ನಾನು ಸುಮ್ಮನೆ ಪಿಳಪಿಳನೆ ಕಣ್ಣು ಬಿಡುತ್ತಾ ಕುಳಿತಿದ್ದೆ. ಆನಂತರ ಕುವೆಂಪು ಅವರು ಅಂದು ಬೆಳಗ್ಗೆಯೋ ಮಧ್ಯಾಹ್ನವೋ ನಡೆದಿದ್ದ ಘಟನೆಯನ್ನು ತಿಳಿಸಿದರು.
 

ತರುಣರೊಬ್ಬರು ಬಂದು ತಾವು ಗೋಪಾಲಕೃಷ್ಣ ಅಡಿಗರ ಮಗನೆಂದೂ, ತಮ್ಮ ತಂದೆ ಐವತ್ತು ರೂಪಾಯಿ ಬೇಕೆಂದು ಹೇಳಿಕಳುಹಿಸಿದ್ದಾರೆಂದೂ ಹೇಳಿದ. ಕುವೆಂಪು ಅವರಿಗೆ ಎರಡು ಕಾರಣಗಳಿಗಾಗಿ ಅನುಮಾನ ಮೂಡಿತಂತೆ. ಒಂದು ಅಡಿಗರಿಗೆ ಅಷ್ಟು ದೊಡ್ಡ ಮಗ ಇರುವುದು ಸಾಧ್ಯವಿಲ್ಲ ಎಂಬುದು. ಎರಡನೆಯದು ಅಡಿಗರು ತಮ್ಮ ಮನೆಗೆ ಹಣಕ್ಕಾಗಿ ಹೇಳಿ ಕಳುಹಿಸುತ್ತಾರೆಯೇ ಎಂದು. ಆದ್ದರಿಂದ ಅವರು ಒಂಟಿಕೊಪ್ಪಲು ಪೋಲೀಸ್ ಸ್ಟೇಷನ್ನಿಗೆ ಫೋನ್ ಮಾಡಿದರು. ಪೋಲೀಸಿನವರು ಬಂದು ತರುಣನನ್ನು ಕರೆದುಕೊಂಡು ಹೋಗಿ ವಿಚಾರಿಸಿದ್ದರಲ್ಲಿ ಆತ ಅಡಿಗರ ಮಗನಲ್ಲ, ದೂರದ ಬಂಧು ಎಂದು ತಿಳಿಯಿತು. ಅಡಿಗರು ಬಂದು ಹೇಳಿಹೋದ ಮೇಲೆ ಕುವೆಂಪು ಪೋಲೀಸ್ ಸ್ಟೇಷನ್ನಿಗೆ ಫೋನ್ ಮಾಡಿದರು. ತರುಣನ ಬಿಡುಗಡೆಯಾಯಿತು.
* * *
ನಮ್ಮ ವಿಶ್ವವಿದ್ಯಾನಿಲಯದ ಪ್ರಸಾರಂಗದಿಂದ ಪ್ರಕಟವಾಗುವ ಪ್ರತಿಯೊಂದು ಪುಸ್ತಕವೂ ಪ್ರಕಟಣ ಸಮಿತಿಯ ಒಪ್ಪಿಗೆ ಪಡೆದೇತೀರಬೇಕಾಗಿತ್ತು. ಅದಕ್ಕೆ ಕುವೆಂಪು ಅವರೇ, ಈಗಾಗಲೇ ಹೇಳಿದಂತೆ ಅಧ್ಯಕ್ಷರು. ಡಾ. ಹಾ.ಮಾ.ನಾಯಕರೂ ಒಬ್ಬ ಸದಸ್ಯರು. ಒಮ್ಮೆ ಅವರ ತಮ್ಮ ಡಾ. ಈಶ್ವರ ಅವರ ಒಂದು ಹಸ್ತಪ್ರತಿ ಸಮಿತಿಯ ಮುಂದೆ ಪ್ರಸ್ತಾಪಕ್ಕೆ ಬಂತು. ಅದನ್ನು ನಮ್ಮ ನಿಯಮದಂತೆ ತಜ್ಞರೊಬ್ಬರು ಪರಿಶೀಲಿಸಿ ಪ್ರಕಟಿಸಬಹುದು ಎಂದು ಶೀಫಾರ್‍ಸು ಮಾಡಿದ್ದರು. ಅವರ ಶಿಫಾರ್‍ಸನ್ನು ಸಭೆಯಲ್ಲಿ ಓದಲಾಯಿತು. ಅನಂತರ ಅಧ್ಯಕ್ಷರು “ಸರಿ, ಇನ್ನೇನು ಅದನ್ನು ಪ್ರಕಟಿಸಬಹುದು” ಎಂದರು. 

ಡಾ. ಹಾ.ಮಾ.ನಾಯಕರು “ದಯವಿಟ್ಟು ಬೇಡಿ” ಎಂದರು. ಈ ಅನಿರೀಕ್ಷಿತವಾದ ಆಕ್ಷೇಪಣೆಯಿಂದ ಸಮಿತಿಯ ಸದಸ್ಯರು ಚಕಿತರಾದರು. ಶ್ರೀ ಕುವೆಂಪು “ಏಕೆ, ನಾಯಕರೆ, ಏಕೆ ಬೇಡ” ಎಂದು ಕೇಳಿದರು. ನಾಯಕರು “ಅದರ ಲೇಖಕರಾದ ಡಾ. ಈಶ್ವರ್ ನನ್ನ ತಮ್ಮ. ನಾನು ಸದಸ್ಯನಾಗಿದ್ದು ಅದನ್ನು ಪ್ರಕಟಿಸಲು ಒಪ್ಪುವುದು ನೈತಿಕ ದೃಷ್ಟಿಯಿಂದ ಸರಿಯಲ್ಲ” ಎಂದರು. ಕುವೆಂಪು ಮಂದಸ್ಮಿತರಾಗಿ “ನಾಯಕರೇ ನೀವು ಕೊಡುತ್ತಿರುವ ಕಾರಣ ಲಾಜಿಕಲ್ ಅಲ್ಲ, ಬಯಾಲಾಜಿಕಲ್” ಎಂದರು! ಇಡೀ ಸಮಿತಿ ಘೊಳ್ಳೆಂದು ನಕ್ಕಿತು. ನಾಯಕರ ಆಕ್ಷೇಪಣೆಯನ್ನು ತಳ್ಳಿಹಾಕಿ ಕೃತಿಯನ್ನು ಪ್ರಕಟಿಸಲಾಯಿತು.
[ಕೃಪೆ: ಹೀಗಿದ್ದರು ಕುವೆಂಪು - ಡಾ. ಪ್ರಭುಶಂಕರ, ಡಿ.ವಿ.ಕೆ. ಮೂರ್ತಿ ಪ್ರಕಾಶಕರು, ಮೈಸೂರು. ೨೦೦೨]

Monday, March 16, 2015

ಅರೆಕೊಪ್ಪ ಮತ್ತು ಹೆಮ್ಮಲಗನ ಬೇಟೆ

ಅಂದು ಭಾನುವಾರ. ಬಟ್ಟೆ ಒಗೆಯಲು ಹೊಳೆಗೆ ಹೋಗುತ್ತೇವೆ ಎಂದು ಹೊರಟೆವು - ಸುಬ್ಬಣ್ಣ, ಮಾನಪ್ಪ, ತಿಮ್ಮು, ನಾನು, ಧರ್ಮು ಇತ್ಯಾದಿ. ಈ ನಾವು ಹೋಗುತ್ತಿದ್ದ ಹೊಳೆ ಕುಶಾವತಿಯಾಗಿರಲಿಲ್ಲ, ತುಂಗೆ! ಕುಶಾವತಿ ನಮ್ಮ ಭಾಗಕ್ಕೆ ಆಗೆ ’ಹಳ್ಳ’ ಅಥವಾ ಹೆಚ್ಚು ಎಂದರೆ ’ದೊಡ್ಡಹಳ್ಳ’ವಾಗಿ ಬಿಟ್ಟಿತ್ತು. ಅಷ್ಟರಮಟ್ಟಿಗೆ ಮುಂದುವರಿದಿತ್ತು ನಮ್ಮ ಈಜುವ ಪ್ರವೀಣತೆ.
ಸಾಬೂನು ಕೊಳ್ಳಲು ನಮಗೆ ಕೊಟ್ಟಿದ್ದ ಆರುಕಾಸಿನಲ್ಲಿಯೆ ಸೋಸಲು ಗಾಳಗಳನ್ನೂ ಒಮದೆರಡು ಕಾಸಿಗೆ ಕೊಂಡುಕೊಂಡು ಹೋದೆವು. ಒಂದು ಗಾಳಕ್ಕೆ ಬಗನಿ ಜವಿಯ ನೇಣು ಕಟ್ಟಿದೆವು. ಬಂಡೆಬಂಡೆಗಳು ಹಿಂಡು ಹಿಂಡು ಮಲಗಿದ್ದ ಹೊಳೆಯಂಚಿನ ನೀರಿನಲ್ಲಿ ಬಟ್ಟೆಬಿಚ್ಚಿ ಕೌಪೀನಧಾರಿಗಳಾಗಿ ನೀರಿಗಿಳಿದೆವು. ನಮ್ಮ ಸುತ್ತಮುತ್ತ, ಬಳಿಯೆ, ಹೆಂಗಸರೂ ಗಂಡಸರೂ ಬಟ್ಟೆ ಒಗೆಯುತ್ತಿದ್ದರು. ಆದರೆ ನಮಗೆ ನಾಚಿಕೆ ಮರ್ಯಾದೆ ಯಾವ ಪರಿವೆಯೂ ಇರದಿದ್ದ ಕಾಲವದು!

ಗಾಳಕ್ಕೆ ಎರಡಹಾಕಲೆಂದು ಒಂದು ಪಂಚೆಯನ್ನೆ ಬಲೆ ಮಾಡಿ ಗೋರಿ ಒಂದೆರಡು ಸಣ್ಣ ಮಿಡಿಮೀನುಗಳನ್ನು ಹಾಕಿದೆವು. ಆ ಮೀನನ್ನು ಗಾಲಕ್ಕೆ ಚುಚ್ಚಿ, ನಾವು ಬಟ್ಟೆ ಒಗೆಯುತ್ತಿದ್ದ ಹಾಸುಬಂಡೆಯ ಸಂದಿಯ ನೀರಿಗೆ ಇಳಿಬಿಟ್ಟೆವು. ಗಾಳದ ನೇಣಿನ ಈ ತುದಿಗೆ ಕಟ್ಟಿದ್ದ ಕೋಲನ್ನು ಒಂದು ಕಲ್ಲಿನ ಮೇಲಿಟ್ಟು, ಬಟ್ಟೆಗೆ ಸಾಬೂನು ಹಚ್ಚುವ ಶಾಸ್ತ್ರಕ್ಕೆ ಕೈಹಾಕಿದೆವು.
ಅಷ್ಟರಲ್ಲಿ ಅರೆಕೊಪ್ಪನೂ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಲೆಂದು ನಾವಿದ್ದಲ್ಲಿಗೆ ಬಂದನು. ನಮ್ಮೊಡನೆ ಲೋಕಾಭಿರಾಮವಾಗಿ ಏನೇನೊ ಗಳಹುತ್ತಾ ಅವನೂ ನೀರಿಗಿಳಿದು ತನ್ನ ಕೆಲಸಕ್ಕೆ ಶುರುಮಾಡಿದನು.
ಗಾಳದ ಕೋಲು ಅಲ್ಲಾಡಿತು! ಬಂಡೆಯಿಂದ ನೀರಿಗೆ ಬಿತ್ತು! ಬೇಗಬೇಗಬೆ ಕೋಲನ್ನು ಹಿಡಿದು, ನೇಣಿಗೆ ಕೈಹಾಕಿ, ಎರೆಕಚ್ಚಿದ್ದ ಮೀನನ್ನು ಎಳೆದೆವು. ನೇಣು ತುಂಡಾಯಿತು. ನೋಡಿದರೆ, ನೇಣಿನ ತುದಿಯ ಗಾಳವೆ ಗೈರು ಹಾಜರು! ಕೈಯಲ್ಲಿದ್ದ ಮತ್ತೊಂದು ಗಾಳವನ್ನು ನೇಣಿಗೆ ಕಟ್ಟಿ, ಪುಡಿ ಮೀನೊಂದನ್ನು ಎರೆಸಿಕ್ಕಿಸಿ, ಮತ್ತೆ ಅದೇ ಜಾಗಕ್ಕೆ ನೀರಿನಲ್ಲಿ ಇಳಿಬಿಟ್ಟೆವು. ಬಿಡುವುದೆ ತಡ, ಮತ್ತೆ ಮೀನು ಕಚ್ಚಿ ಎಳೆಯತೊಡಗಿತು. ಈ ಸಾರಿ ಸಿಕ್ಕಿತು ಎಂದುಕೊಂಡು ನೇಣನ್ನು ಬಲವಾಗಿ, ಹಿಡಿದೆಳೆಯಲು, ಮತ್ತೆ ಮೊದಲಿನಂತೆಯೆ ನೇಣು ತುಂಡಾಗಿ, ಗಾಳ ಮಂಗಮಾಯವಾಗಿತ್ತು! ಎರೆ ಕಚ್ಚುವ ಮೀನು ಸ್ವಲ್ಪ ದೊಡ್ಡದಿರಬೇಕು, ಇಲ್ಲವೆ ಆಮೆ ಇರಬೇಕು ಎಂದು ತೀರ್ಮಾನಿಸಿದೆವು. ಏನಾದರಾಗಲಿ ಎಂದು ಮತ್ತೊಂದು ಬಲವಾದ ದಾರಕ್ಕೆ ಕೈಲಿದ್ದ ಮತ್ತೊಂದು ಗಾಳವನ್ನು ಕಟ್ಟಿ, ಎರೆಚುಚ್ಚಿ ಹಾಕಿದರೆ! ಮತ್ತೆ ಅದೇ ಗತಿಯಾಯ್ತು!
ತಿಮ್ಮು ಓಬಯ್ಯ ಸುಬ್ಬಣ್ಣ ಮೂವರನ್ನು ಓಡಿಸಿದೆವು ಮನೆಗೆ, ಕೆರೆಕೇರಿ ಅಮ್ಮಗೆ ಹೇಳಿ ಮೂರು ಕಾಸು ಈಸಿಕೊಂಡು ಪೇಟೆಗೆ ಹೋಗಿ ದೊಡ್ಡದಾದ ಒಂದೇ ಗಾಳವನ್ನು ಅದಕ್ಕೆ ತಕ್ಕ ದಪ್ಪದ ಬಲವಾದ ದಾರವನ್ನೂ ತರಲು ಅಜ್ಞಾಪಿಸಿ. ಓಡುತ್ತಾ ಹೋಗಿ ಏದುತ್ತಾ ಹಿಂತಿರುಗಿದರು: ಭಾರಿ ದೊಡ್ಡ ಗಾಳವೂ ಬಲವಾದ ಹಗ್ಗವೂ ಅವರ ಕೈಲಿತ್ತು. ಅರೆಕೊಪ್ಪನ ಕೈಯಲ್ಲಿಯೆ ಗಾಳವನ್ನು ಭದ್ರವಾಗಿ ಆ ದಪ್ಪ ನೇಣಿಗೆ ಬಿಗಿಸಿ, ತಕ್ಕಮಟ್ಟಿನ ದೊಡ್ಡದೊಂದು ಸೋಸಲನ್ನು ಪಂಚೆಬಲೆ ಬೀಸಿ ಹಿಡಿದು, ಗಾಳಕ್ಕೆ ಸಿಕ್ಕಿಸಿ, ಮತ್ತೆ ಮೊದಲಿನ ಜಾಗಕ್ಕೇ ಇಳಿಬಿಟ್ಟೆವು, ಈ ಸರಿ ಲೌಡಿಮಗನದು ಎಲ್ಲಿಗೆ ಹೋಗುತ್ತದೆ ನೋಡಿಯೆ ಬಿಡುತ್ತೇವೆ ಎಂದು!
ನೇಣನ್ನು ನಾನೆ ಹಿಡಿದಿದ್ದೆ. ಗಾಳವನ್ನು ಇಳಿಬಿಟ್ಟೊಡನೆಯೆ ಹಿಂದಿನಂತೆಯೆ ಈ ಸಾರಿಯೂ ಸ್ವಲ್ಪವೂ ವಿಳಂಬ ಮಾಡದೆ ಆ ಜಲಜಂತು ಎರೆಯನ್ನು ಕಚ್ಚಿ ನೇಣನ್ನು ಎಳೆಯತೊಡಗಿತು. ನಾನು ನೇನನ್ನು ಬಲವಾಗಿ ಹಿಡಿದೆಳೆದರೂ ನನ್ನ ಕೈಯಿಂದಾಗಲಿಲ್ಲ, ಅದರ ಎಳೆದಟವನ್ನು ತಡೆಯಲು. ನಾನು ನೇಣನ್ನು ಬಿಡಬೇಕು, ಇಲ್ಲವೆ ನೀರಿಗೆ ಬೀಲಬೇಕು! ಪಕ್ಕದಲ್ಲಿ ಬಟ್ಟೆ ಒಗೆಯುತ್ತಿದ್ದ ಸುಬ್ಬಣ್ಣಗೆ ಕೂಗಿದೆ “ಬಾರೋ! ಬೇಗ ಬಾರೋ! ಎಂಥದೋ ಹಿಡಿದು ಎಳೀತದೆ! ನನ್ನೊಬ್ಬನ ಕೈಇಂದಾಗೋದಿಲ್ಲ!” ಅವನೂ ಬಂದು ನನ್ನ ಜೊತೆಯೆ ನೇಣನ್ನು ಹಿಡಿದು ನಿಂತ. ಇಬ್ಬರೂ ಎಳೆದರೂ ನೇಣು ನಮ್ಮ ಕಡೆ ಬರುವ ಬದಲು ನೀರಿನ ಕಡೆಯೇ ಜಗ್ಗತೊಡಗಿತು. ನಮಗಂತೂ ದಿಗ್ಭ್ರಮೆ, ಭಿತಿ! ಇದೆಂಥ ಮೀನು? ಕಡೆಗೆ ಮೊzಸಳೆಗಿಸಳೆಯೋ? ನಮ್ಮಿಬ್ಬರಿಂದಲೂ ನೇಣನ್ನು ಎಳೆಯಲಾಗದಿರಲು ಅರೆಕೊಪ್ಪನನ್ನು ಕೂಗಿಕರೆದೆವು. ಅವನು ತುಸು ಅನುಮಾನಪಟ್ಟುಕೊಂಡೆ ಓಡಿಬಂದು ನೇಣಿಗೆ ಕೈಹಾಕಿ, ತನ್ನೆರಡೂ ಕೈಗಳಿಂದ ಭದ್ರಮುಷ್ಟಿ ಹಿಡಿದು ಕಾಲನ್ನು ಕಲ್ಲಿಗೆ ಆಪುಕೊಟ್ಟುಕೊಂಡು ಜಗ್ಗಿಸಿ ಎಳೆಯತೊಡಗಿದನು.
ಮೊದಮೊದಲು ಅವನ ಬಲಕ್ಕೂ ಶರಣಾಗದ ಅದು ಒಂದೆರಡು ನಿಮಿಷಗಳಲ್ಲಿಯೆ ನಮ್ಮತ್ತ ಮೆಲ್ಲಮೆಲ್ಲನೆ ಬರತೊಡಗಿತು. ಅವನೂ ಎಳೆದ! ಎಳೆದ! ಎಳೆದ! ಬಂತು! ಬಂತು! ಬಂತು! ನಾವೆಲ್ಲ ಗುಂಪುಕಟ್ಟಿ ಅವನ ಹಿಂದೆ ಹಾಸುಬಂಡೆಯ ಮೇಲೆ ನಿಂತು ನೀರಿನ ಕಡೆ ಒಂದೇಸಮನೆ ನೋಡುತ್ತಿದ್ದೆವು. ಏನು ಬರುತ್ತದೆ ಎಂದು!
ನೋಡುತ್ತಿದ್ದಂತೆಯೆ ನೇಣಿನ ತುದಿ ನೀರಿನ ಮಟ್ಟಕ್ಕೆ ಸಮೀಪಿಸಿತು. ಏನದು? ಏನದು? ದೊಡ್ಡ ಬಾಯಿ ಕಾನಿಸಿತು! ನಮಗೆಲ್ಲ ಆನಂದವೋ ಆನಂದ! ಅರೆಕೊಪ್ಪನಿಗೂ ಬೆರಗು! ಎಳೆಯೋ ಎಳೆಯೋ ಎಳೆಯೋ ಎಂದು ಒಟ್ಟಿಗೆ ಕೂಗಿ ಹುರಿದುಂಬಿಸಿದೆವು. ಅವನೂ ಎಳೆದ ಎಳೆದಾ ಎಳೆದಾ ಎಳೆದೇ ಎಳೆದ! ನೀರಿನ ಮೇಲಕ್ಕೆ ಬಂತು ಮೀನಿನ ತಲೆ, ಮೈ, ಆದರೆ ಮುಗಿಯಲೆ ಒಲ್ಲದು! ಎಳೆದಷ್ಟೂ ಬರುತ್ತಿದೆ. ಎರಡು ಅಡಿ ಎತ್ತರಕ್ಕೆ ನೀರಿನ ಮೇಲಕ್ಕೆ ಎಳೆದ ಅರೆಕೊಪ್ಪನಿಗೆ ಅದರ ಗಾಥ್ರ ರೂಪಗಳನ್ನು ಕಂಡು ದಿಗಿಲಾಗತೊಡಗಿತು. ಅವನಾಗಲಿ ನಾವಾಗಲಿ, ಅಂತಹ ಮೀನನ್ನು ನೋಡಿರಲಿಲ್ಲ. ’ಹಾವೇನೋ’ ಎಂದು ದೂರದಲ್ಲಿ ಬಟ್ಟೆ ಒಗೆಯುತ್ತಿದ್ದು ಇದನ್ನೆಲ್ಲ ನೋಡುತ್ತಿದ್ದ ಒಬ್ಬ ಅಪರಿಚಿತ ವ್ಯಕ್ತಿ ಕೂಗಿದನು. ಅರೆಕೊಪ್ಪ ಅಯ್ಯಯ್ಯೋ ಎನ್ನುತ್ತಲೇ ತನ್ನೆರಡು ಕೈಗಳನ್ನೂ ತನ್ನ ತಲೆಯ ಮೇಲಿನಮಟ್ಟದವರೆಗೂ ಎತ್ತಿ, ತನಗಿಂತಲೂ ಉದ್ದವಾಗಿದ್ದ ಆ ಪ್ರಾಣಿಯನ್ನು, ಹೆದರಿ ಕೂಗಿಕೊಂಡೆ ನೇಣು ಸಹಿತ ದಡದ ಹಾಸುಬಂಡೆಗೆ ಬಲವಾಗಿ ಎಸೆದ. ಸುಮಾರು ಮೂರುನಾಲ್ಕು ಅಡಿಗಳುದ್ದದ, ಒಂದು ಅಡಿಯಷ್ಟಾದರೂ ಸುತ್ತಳತೆಯ ದಪ್ಪದ ಆ ವಿಚಿತ್ರ ಜಲಜಂತು ದಡದ ಬಂಡೆಯ ಮೇಲೆ ಹಾವು ಹೊರಳುವಂತೆ ಅಂಕುಡೊಂಕಾಗಿ ಹೊರಳುತ್ತಾ ನೀರಿನ ಕಡೆ ಧಾವಿಸಲು ಪ್ರಯತ್ನಿಸತೊಡಗಿತು. ನಾವೆಲ್ಲ ದಪ್ಪದಪ್ಪ ಬಂಡೆಗಲ್ಲುಗಳನ್ನು ಎತ್ತಿ ತಂದು ಅದರ ತಲೆಯ ಮೇಲೂ ಮೈಯ ಮೇಲೂ ಹಾಖಿದೆವು. ನಮ್ಮ ಕಲ್ಲುಗಳು ಅದರ ಮೈಗೆ ತಾಗಿ ರಬ್ಬರು ಚೆಂಡುಗಳಮತೆ ಪುಟನೆಗೆದು ಬಿದ್ದುವು! ಆದರೆ ಅದಕ್ಕೇನೂ ಪೆಟ್ಟಾದಂತೆ ತೋರಲಿಲ್ಲ. ಕಡೆಗೆ ಅರೆಕೊಪ್ಪನೆ ಒಂದು ದೊಡ್ಡ ಬಡಿಗೆಯನ್ನು ಆ ಬಳಿಯ ಮರದಿಂದ ಮುರಿದು ತಂದು ತಲೆಗೂ ಮೈಗೂ ಬಡಿದು ಬಡಿದು ಅದನ್ನು ನಿಶ್ಚಲಗೊಳಿಸಿದನು, ಅಷ್ಟೆ. ಆದರೆ ಅದು ಸಾಯಲೆ ಇಲ್ಲ.
ಅದು ಹಾವೂ ಅಲ್ಲ, ಮೀನೂ ಅಲ್ಲ, ನಮಗೆ ಗೊತ್ತಿರದ ಯಾವುದೊ ಜಾತಿಯ ಹಾವು ಮೀನಿರಬೇಕು ಎಂದು ನಿಶ್ಚಯಿಸಿದೆವು. ಅದನ್ನು ಮನೆಗೆ ತೆಗೆದುಕೊಂಡು ಹೋಗುವುದು ಹೇಗೆ? ನಮ್ಮಲ್ಲಿ ಇಬ್ಬರು ಮನೆಗೆ ಹೋಗಿ ದೊಡ್ಡದೊಂದು ಗೋಣಿಚೀಲ ತಂದರು. ಅದರೊಳಗೆ ಅರೆಕೊಪ್ಪನ ನೆರವಿನಿಂದ ಅದನ್ನು ಮುದುರಿಸಿ ತೂರಿಸಿದೆವು. ಹೊತ್ತು ನಡೆದೆವು ಮನೆಗೆ, ಮಹಾ ಬೇಟೆಯಾಡಿದ ಹೆಮ್ಮೆಯಿಂದುಬ್ಬಿ!
ದೊಡ್ಡ ಗಾಳ ಕೊಂಡುತರಲು ಕೆರೆಕೇರಿ ಅಮ್ಮನ ಹತ್ತಿರ ದುಡ್ಡು ಈಸಿಕೊಂಡು ಬರಲು ಸುಬ್ಬಣ್ಣ ಇತರರು ಮನೆಗೆ ಹೋದಾಗಲೆ ಗುಲ್ಲುಸುದ್ದಿ ಸುತ್ತಮುತ್ತ ಹಬ್ಬಿ ಜನ ಕುತೂಹಲಭರಿತರಾಘಿದ್ದರು. ಮೂಟೆಯಲ್ಲಿ, ಇನ್ನೂ ಸಾಯದೆಯೆ ಆಗಾಗ ನಿಗುರಿ, ಹೊತ್ತಿದ್ದರನ್ನು ತಲ್ಲಣಗೊಳಿಸುತ್ತಿದ್ದ, ಮೀನನ್ನು ಸುತ್ತಿ ಹೊತ್ತು ತಂದುದನ್ನು ನೋಡಿ, ಪಕ್ಕದ ಕಿರುಗುಡಿಸಲಿನ ಸೆಟ್ಟಿ ಮತ್ತು ಸೆಟ್ಟಿಗಿತ್ತಿ, ಮನೆಯ ಪಕ್ಕದೊಂದು ಕೊಟಡಿಯಲ್ಲಿಯೆ ಸಂಸಾರ ಮಾಡಿದ್ದ ಮೋಸಸ್ ಮೇಷ್ಟರು ಮತ್ತು ಅವರ ಹೆಂಡತಿ ಎಲ್ಲ ಬೆರಗಾಗಿ ನೆರೆದರು. ಕೆರೆಕೇರಿ ಅಮ್ಮನೂ ಮಕ್ಕಳು ಎಂಥ ಸಾಹಸ ಮಾಡಿ ಎಷ್ಟು ದೊಡ್ಡ ಮೀನನ್ನು ತಂದರಲ್ಲಾ ಎಂದು ಹೆಮ್ಮೆಯಿಂದ ಮನೆಯ ತೆಣೆಗೆ ಬಂದು ನಿಂತು ನಿರೀಕ್ಷಿಸುತ್ತಿದ್ದರು. ನಾವು ವಿಜಯಗರ್ವದಿಂದ ಮೂಟೆಯನ್ನು ಇಳಿಸಿ, ಚೀಲದ ಒಂದು ತುದಿಯನ್ನು ಹಿಡಿದು ಎತ್ತಿ ಮೀನನ್ನು ಹೊರಗೆ ಬೀಳಿಸಿದೆವು.
ಕೆರೆಕೇರಿ ಅಮ್ಮ ಚೀತ್ಕರಿಸಿ ಹೌವ್ವನೆ ಹಾರಿ ಹಿಂದಕ್ಕೋಡಿ ದೂರ ನಿಂತು ಬೆರಗು ಭಯಗಳಿಂದ ನೋಡುತ್ತಾ “ಅಯ್ಯಯ್ಯೋ! ಇದನ್ಯಾಕೆ ತಂದಿರೊ? ಇದು ‘ಹೆಮ್ಮಲಗ’ ಕಣ್ರೋ!” ಎಂದು ಕೂಗಿದರು. ಆದರೆ ಸೆಟ್ಟಿ ಮತ್ತು ಸೆಟ್ಟಿಗಿತ್ತಿ “ಇದು ಹೆಮ್ಮಲಗ ಹೌದು. ಬಹಳ ಪಸಂದಾಗಿರುತ್ತದೆ ಪಲ್ಯ ಮಾಡಿದರೆ!” ಎಂದರು. ಅಮ್ಮ ‘ಹಾಂಗಾದ್ರೆ ನೀವೆ ತಗೊಂಡು ಹೋಗಿ. ನಮ್ಮಿಂದಾಗಲ್ಲ. ಅಸಹ್ಯ!’ ಎಂದುಬಿಟ್ಟರು. ಆದರೆ ಬೇಟೆಯಾಡಿ ತಂದ ನಮಗೆ ನಿರಾಶೆಯೋ ನಿರಾಶೆ! ಸೆಟ್ಟಿಗೆ ಕೊಡಬೇಕಾಯಿತಲ್ಲಾ ಎಂದು ಹೊಟ್ಟೆಕಿಚ್ಚು! ಆದರೆ, ಏನು ಮಾಡುವುದಕ್ಕೂ ತೋರದೆ, ಆ ಮೀನು ನುಂಗಿರುವ ನಮ್ಮ ಗಾಳಗಳನ್ನೆಲ್ಲ ಅದರ ಹೊಟ್ಟೆಯಿಂದ ತೆಗೆದು ನಮಗೆ ಒಪ್ಪಿಸಬೇಕು ಎಂಬ ಕರಾರಿನ ಮೇಲೆ ಅದನ್ನು ಸೆಟ್ಟಿಗೆ ಬಿಟ್ಟುಕೊಟ್ಟೆವು.
ಎಷ್ಟೋ ದಿನಗಳ ತನಕ ಆ ಹೆಮ್ಮಲಗನ ಮೈಯನ್ನು ಮುಟ್ಟಿದ್ದ ನಮ್ಮ ಕೈಗಳನ್ನು ಬಿಸಿನೀರು, ಸೀಗೆ, ಸಆಬೂನು ಎಲ್ಲವನ್ನೂ ಉಪಯೋಗಿಸಿ ಎಷ್ಟು ಕಲ್ಲುಮಣ್ಣುಗಳಿಗೆ ತಿಕ್ಕಿದರೂ ಅದರ ಅಸಹ್ಯವಾಸನೆಯೂ ಲೋಳೆ ಲೋಳೆಯಾಗಿದ್ದ ಒಂದು ತರಹದ ಜಿಗುಟಿನ ಅಂಟೂ ಹೋಗಲೊಲ್ಲದೆ ಹೋದುವು. ಊಟಮಾಡುವಾಗಲೂ ಜುಗುಪ್ಸೆಯಿಂದ ವಾಕರಿಕೆ ಬರುವಂತಾಗುತ್ತಿತ್ತು. ಸ್ಕೂಲಿಗೆ ಹೋದಾಗಲೂ ನಮ್ಮ ಪಕ್ಕದ ಹುಡುಗರು ನಾವು ಕುಳಿತಿದ್ದ ಬೆಂಚನ್ನು ಬಿಟ್ಟು ಪಕ್ಕದ ಬೆಂಚಿನಲ್ಲಿ ಕಿಕ್ಕಿರಿಯುತ್ತಿದ್ದರು. ಮೇಷ್ಟರು “ಯಾಕ್ರೋ ಒಂದೇ ಬೆಂಚಿನ ಮೇಲೆ ಅಷ್ಟೊಂದು ಜನ ಕೂರ್ತಿರಿ? ಇಬ್ಬರು ಮೂವರಾದರೂ ಬನ್ರೋ ಪಕ್ಕದ ಬೆಂಚಿಗೆ!” ಎಂದು ಗದರಿಸಿ ಬೆತ್ತ ಆಡಿಸಿದಾಗ ಆ ಹುಡುಗರು “ಸಾರ್, ಅವರ ಹತ್ರ ಕೆಟ್ಟವಾಸ್ನೆ!” ಎಂದು ಮೂಗು ಮುಚ್ಚಿಕೊಂಡರು. ನಿಜಾಂಶವನ್ನು ಪರೀಕ್ಷಿಸಲೆಂದು ಮೇಷ್ಟರು (ಪಾಪ! ಹಾರುವರು!) ನಮ್ಮ ಬಳಿಸಾರಿ ಮೈಕೈ ಮೂಸಿ, ‘ಥೂ ತೂ ಥೂ ಶೂದ್ರ ಮುಂಡೇವು’ ಎಂದು ದೂರ ಓಡಿ, ಬೆತ್ತದಿಂದಲೆ ನಮ್ಮನ್ನು ನೂಕಿ, ‘ತೊಳೆದುಕೊಂಡು ಬನ್ನಿ’ ಎಂದು ಮನೆಗೆ ಕಳಿಸಿದರು. ನಮಗೋ ಖುಷಿಯೋ ಖುಷಿ! ಸುಲಭದಲ್ಲಿ ರಜಾ ಸಿಕ್ಕಿತಲ್ಲಾ ಎಂದು! ಆದರೆ ಜವಾನ ಅರೆಕೊಪ್ಪ ಹೊರಗೆ ಬಂದ ನಮ್ಮನ್ನು ತಡೆದು ’ಯಾಕ್ರೋ ಹೊರಗೆ ಹೋಗ್ತೀರಿ? ಮೀನಿನ ವಾಸನೆ ಆ ಹಾರುವಯ್ಯಗೆ ಅಸಹ್ಯವಾದರೆ ಅವನೇ ಮೂಗಿಗೆ ಬಟ್ಟೆ ಕಟ್ಟಿಕೊಳ್ಳಲಿ! ನೀವು ಮನೆಗೆ ಹೋಗಿ ತೊಳಕೊಂಡು ಬಂದರೆ ಆ ವಾಸನೆ ಹೋಗ್ತದೇನು? ವಾಸನೆ ಇದೆ ಅಂಥಾ ಕ್ಲಾಸಿಗೆ ನಿಮ್ಮನ್ನು ಸೇರಿಸದಿರುವುದಕ್ಕೆ ಅವನಿಗೇನು ಅಧಿಕಾರ? ನಿಮ್ಮನ್ನು ಮೂಸಿ ನೋಡುವುದಕ್ಕೋ ಪಾಠ ಹೇಳುವುದಕ್ಕೊ ಅವನನ್ನು ಸರ್ಕಾರ ಸಂಬಳಕೊಟ್ಟು ನೇಮಿಸಿರುವುದು?’ ಎಂದು ರ್ಧೈ ಹೇಳಿದನು. ನಾವು ಸ್ವಲ್ಪ ಹೊತ್ತು ಬಿಟ್ಟು ‘ತೊಳಕೊಂಡು ಬಂದೆವು’ ಎಂದು ಸುಳ್ಳು ಹೇಳಿ ಒಳಗೆ ಹೋಗಿ ಕೂತೆವು!
***
ಅರೆಕೊಪ್ಪ ಸ್ವಲ್ಪಮಟ್ಟಿಗೆ ಸ್ವತತ್ರಾಭಿಮಾನಪನ್ನನಾಗಿ ತಾನು ಜವಾನ ಎಂಬುದನ್ನು ಮರೆತು ವರ್ತಿಸುತ್ತಿದ್ದನೆಂದು ತೋರುತ್ತದೆ. ಆದ್ದರಿಂದಲೆ ಎಷ್ಟೋ ಮೇಷ್ಟರುಗಳನ್ನು ಮೈಮೇಲೆ ಹಾಕಿಕೊಂಡಿರಬೇಕು. ಅದರಿಂದಾಗಿ ತೊಂದರೆಗೂ ಒಳಗಾಗಿರಬೇಕು. ಸುಮಾರು ಮೂವತ್ತೈದು ವರ್ಷಗಳ ತರುವಾಯ ನಾನು ಮೈಸೂರು ವಿಶ್ವವಿದ್ಯಾನಿಲಯದ ವೈಸ್ ಛಾನ್ಸಲರ್ ಆಗಿ ತೀರ್ಥಹಳ್ಳಿಯ ಯಾವುದೋ ಒಂದು ಭಾಷಣ ಕಾರ್ಯಕ್ರಮಕ್ಕೆ ಅಲ್ಲಿಗೆ ಹೋಗಿದ್ದಾಗ ನನ್ನ ಮಿತ್ರರೊಬ್ಬರು ಅವನನ್ನು ಬಳಿಗೆ ಕರೆತಂದು ‘ಇವನು ಯಾರು ಗೊತ್ತಾಯ್ತೆ? ನಮ್ಮ ಸ್ಕೂಲು ಜವಾನ ಆಗಿದ್ದನಲ್ಲಾ ಆ ಅರೆಕೊಪ್ಪ! ಈಗ ಶಿವಮೊಗ್ಗದಲ್ಲಿ ಅಟೆಂಡರ್ ಆಗಿದ್ದಾನೆ. ಅವನು ಮತ್ತೆ ಇಲ್ಲಿಗೆ ಬರಬೇಕು ಅಂತಾ ಬಹಳ ಪ್ರಯತ್ನಿಸುತ್ತಿದ್ದಾನೆ. ಮೇಲಿನ ಅಧಿಕಾರಿಗಳಿಗೆ ನೀವು ಒಂದು ಮಾತು ಹೇಳಿದರೆ ನಡೆಯುತ್ತದೆ ಎಂದು ಅವನ ಆಶೆ’ ಎಂದರು.
ವ್ಯಕ್ತಿಯನ್ನು ದೃಷ್ಟಿಸಿ ನೋಡಿದೆ. ಅದೇ ‘ಅರೆಕೊಪ್ಪ!’ ಅದೇ ನಗೆ! ಅಂದಿನ ಹಾಗೆಯೆ ನಕ್ಕು ಹಲ್ಲು ಬಿಡುತ್ತಿದ್ದಾನೆ! ವಯಸ್ಸು ದೇಹದ ಮೇಲೆ ತುಸು ಪರಿಣಾಮ ಮಾಡಿದ್ದರೂ ಈಗಲೂ ಗೋಲಿ ಕಸಿದು ತಾರಸಿಯ ಮೇಲೆ ಎಸೆಯುವ ಮನೋಧರ್ಮದಿಂದ ಹೆಚ್ಚೇನೂ ಸೂರವಾಗಿಲ್ಲ ಎಂಬಂತೆ ಅಂದಿನ ಭಂಗಿಯಲ್ಲೆಯೆ ನಿಂತಿದ್ದಾನೆ!
“ಮತ್ತೆ ಇಲ್ಲಿಗೆ ಬಂದರೆ ನಿನಗೆ ಅಟೆಂಡರ್ ಕೆಲಸ ಸಿಗುತ್ತದೆಯೆ?” ಎಂದು ಕೇಳಿದೆ.
“ಇಲ್ಲ” ಎಂದು ತುಸು ತಲೆ ತಗ್ಗಿಸಿದ.
“ಮತ್ತೆ? ಕಡಿಮೆ ಸಂಬಳದ ಜವಾನಗಿರಿಗೇ ಬರ್‍ತೀಯಾ?”
“ಜವಾನಿಕೇನೇ ಸಾಕು ಈ ಊರಿನಲ್ಲಿ!”
ನನಗೆ ಆಶ್ಚರ್ಯವಾಯಿತು ಮತ್ತೆ ಮೆಚ್ಚಿಗೆಯೂ ಆಯಿತು. ನಾವೆಲ್ಲ ಹೆಚ್ಚಿಗೆ ಸಂಬಳಕ್ಕೆ ಬಡ್ತಿ ಪಡೆಯುವುದಕ್ಕಾಗಿ ಏನೆಲ್ಲ ಪಾಡು ಪಡುತ್ತಿರುವ ಈ ಕಾಲದಲ್ಲಿ ಇಲ್ಲೊಬ್ಬ ಇದಾನಲ್ಲಾ ನಮ್ಮನ್ನು ಮೂದಲಿಸುವಂತೆ! ಅಲ್ಲದೆ ಹಳ್ಳಿಯಿಂದ ಪೇಟೆಗೆ ಸಣ್ಣ ಊರಿನಿಂದ ದೊಡ್ಡ ಊರಿಗೆ ತೀರ್ಥಹಳ್ಳಿಯಿಂದ ಶಿವಮೊಗ್ಗೆಗೆ, ಶಿವಮೊಗ್ಗೆಯಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಹೊಸದೆಹಲಿಗೆ ಏರಿ ಹಾರಬೇಕೆಂದು ಅಧಿಕಾರಲಾಲಸೆಯ ಮತ್ತು ಸ್ಥಾನಮಾರ್ಗದ ಮೇಲಾಟದ ಈ ಕಾಲದಲ್ಲಿ ಶಿವಮೊಗ್ಗೆಯಿಂದ ತೀರ್ಥಹಳ್ಳಿಗೆ ಇಳಿಯಲು ಹಾತೊರೆಯುತ್ತಿದ್ದಾನಲ್ಲಾ ಈ ಅರೆಕೊಪ್ಪ?

Friday, March 13, 2015

ಅರೆಕೊಪ್ಪನೊಂದಿಗೆ ಕಲ್ಲಿನಗೋಲಿ ದರೋಡೆ!

ತೀರ್ಥಹಳ್ಳಿ ಎ.ವಿ.ಸ್ಕೂಲಿನ ವ್ಯಕ್ತಿಗಳಲ್ಲಿ ಉಪಾಧ್ಯಾಯ ವರ್ಗದವರಿಗಿಂತಲೂ ಹೆಚ್ಚಾಗಿ ನಮ್ಮನ್ನೆಲ್ಲ ವಿಶೇಷವಾಗಿ ಆಕರ್ಷಿಸಿದವರೆಂದರೆ ಇಸ್ಕೋಲ್ ಜವಾನ ’ಅರೆಕೊಪ್ಪ’, ’ಅರೆ ಕೊಪ್ಪ’ ಎಂದು ಹುಡುಗರೆಲ್ಲ ಕರೆಯುತ್ತಿದ್ದರು; ಆದರೆ ಉಪಾಧ್ಯಾಯರು ಅವನನ್ನು ’ಆರೋಕ್ಯಂ’ ಎಂದು ಕೂಗುತ್ತಿದ್ದರು. ಬಹುಶಃ ಅವನ ತಂದೆ ತಾಯಿ ತಮಿಳುನಾಡಿನ ಕಡೆಯಿಂದ ಬಂದ ಕ್ರೈಸ್ತಮತಾವಲಂಬಿಗಳಾಗಿದ್ದರೆಂದು ತೋರುತ್ತದೆ. ಆದರೆ ಆಗ ನಮಗಿನ್ನೂ ಮತಪ್ರಜ್ಞೆಯೆ ಇರಲಿಲ್ಲವಾದ್ದರಿಂದ ಅವನ ಜಾತಿ, ಮತ್ತು ಊರು, ಭಾಷೆ ಇದೊಂದೂ ನಮ್ಮ ಗಮನಕ್ಕೆ ಬರುತ್ತಿರಲಿಲ್ಲ. ಕನ್ನಡವಲ್ಲದೆ ಅವನು ಬೇರೆಯ ಭಾಷೆಯನ್ನು ಆಡುತ್ತಿದ್ದನೊ ಇಲ್ಲವೊ ನನಗೆ ತಿಳಿಯದು. ಅವನ ಚಿಕ್ಕಪ್ಪನೊಬ್ಬ ಸ್ಕೂಲಿನ ಸಮೀಪದಲ್ಲದ್ದ ’ಬಂಗಲೆ’(ಟಿ.ಬಿ.)ಯ ಮೇಟಿಯಾಗಿದ್ದ. ಅವನೊಡನೆ ’ಅರೆಕೊಪ್ಪ’ ಇರುತ್ತಿದ್ದ. ಬಹುಶಃ ತನ್ನ ಮನೆಯವರೊಡನೆ ಬೇರೆ ಭಾಷೆ ಆಡುತ್ತಿದ್ದನೋ ಏನೊ?

ಆಗ ಅವನಿಗೆ ಬಹುಶಃ ಇಪ್ಪತ್ತರ ಆಚೆ ಈಚೆಯ ವಯಸ್ಸಿದ್ದಿರಬಹುದು. ದೃಢಕಾಯನಾಗಿದ್ದು ನಮ್ಮ ತಂಟೆ, ಚೇಷ್ಟೆ ಹೋರಾಟ ಹೊಡೆದಾಟಗಳೆಲ್ಲೆಲ್ಲ ನಮ್ಮ ಪಕ್ಷವಹಿಸುತ್ತಿದ್ದ ಅವನು ನಮಗೆ ’ವೀರಪುರುಷ’ನಾಗಿದ್ದ.
ಸ್ಕೂಲಿನ ಎದುರಿಗೇ ದೇವಂಗಿಯವರು ತಮ್ಮ ಹುಡುಗರನ್ನು ಓದಿಸಲು ಮನೆ ಮಾಡಿದ್ದರು. ಬಾಡಿಗೆ ಮನೆಯಲ್ಲ, ಅವರದೇ ಸ್ವಂತ ಕಟ್ಟಿಸಿದ್ದ ಮನೆ. ನನ್ನ ಓರಗೆಯವರಾಗಿ ಅದೇ ಸ್ಕೂಲಿನಲ್ಲಿ ಓದುತ್ತಿದ್ದರು ದೇವಂಗಿಯ ಡಿ.ಆರ್. ವೆಂಕಟಯ್ಯ ಮತ್ತು ಡಿ.ಎನ್. ಹಿರಿಯಣ್ಣ. ”ಅರೆಕೊಪ್ಪ’ನಿಗೆ ಅವರಲ್ಲಿ ಭಕ್ತಿಸದೃಶ ಗೌರವ. ಬಹುಶಃ ಅವರಿಂದ ಆಗಾಗ ಉಪಕೃತನಾಗುತ್ತಿದ್ದರಲೂಬಹುದು.
ನಾವು ಬಂಧುಗಳಾಗಿಯೂ ಸ್ನೇಹಿತರಾಗಿಯೂ ಆಟಪಾಟಗಳಲ್ಲಿ ಸೇರುತ್ತಿದ್ದೆವು. ಗೋಲಿಯಾಟವೇ ಹೆಚ್ಚು ಪ್ರಿಯವಾಘಿದ್ದ ಸಮಯ. ಕೊಂಡ ಗೋಲಿಗಳಲ್ಲಿ ಕೆಲವು ಬಹುಬೇಗನೆ ಹಿಟ್ಟು ಹಿಟ್ಟಾಗಿ ಹಾಳಾಗುತ್ತಿದ್ದುವು. ಅವುಗಳನ್ನು ’ಕಲ್ಲಿನಗೋಲಿ’ಗಳೆಂದೂ ಉಳಿದವುಗಳನ್ನು ’ಹಿಟ್ಟಿನಗೋಲಿ’ಗಳೆಂದೂ ಕರೆಯುತ್ತಿದ್ದೆವು. ನಮಗೆ ;ಕಲ್ಲಿನಗೋಲಿ’ಗಳನ್ನು ಸಂಗ್ರಹಿಸುವ ಗೀಳು. ಕೊಳ್ಳುವಾಗಲೆ ’ಕಲ್ಲಿನಗೋಲಿ’ಗಳನ್ನೆ ಕೊಳ್ಳಬಹುದಾಗಿತ್ತಲ್ಲಾ ಅಂದರೆ, ಇದು ಕಲ್ಲಿನದು ಇದು ಹಿಟ್ಟಿನದು ಎಂದು ಗುರುತಿಸಲಾಗದಂತೆ ಅವುಗಳಿಗೆ ಬಣ್ಣ ಬಳಿದಿರುತ್ತಿದ್ದರು. ಅವುಗಳನ್ನು ಉಪಯೋಗಿಸುವುದಕ್ಕೆ ಶುರುಮಾಡಿದ ಮೇಲೆಯೆ ಗೊತ್ತಾಗುತ್ತಿತ್ತು, ಯಾವುದು ಹಿಟ್ಟಿನದು ಯಾವುದು ಕಲ್ಲಿನದು ಎಂದು. ಆದ್ದರಿಂದ ಯಾವ ಯಾವ ಹುಡುಗರ ಕೈಲಿ ಕಲ್ಲಿನ ಗೋಲಿಗಳಿವೆ ಎಂದು ಗೊತ್ತಾಗುತ್ತಿತ್ತೋ ಅವರನ್ನು ಗೋಲಿಯಾಟಕ್ಕೆ ಆಹ್ವಾನಿಸುತ್ತಿದ್ದೆವು. ಸಆಮಾನ್ಯವಾಗಿ ಕ್ಲಾಸು ಪ್ರಾರಂಬವಾಗುವುದಕ್ಕೆ ಮೊದಲು ಅಥವಾ ಕ್ಲಾಸು ಬಿಟ್ಟ ಮೇಲೆ ಸ್ಕೂಲಿನ ಬಳಿಯೆ ಆಟಕ್ಕೆ ತೊಡಗುತ್ತಿದ್ದೆವು. ಸರಿ, ಆಟ ಪ್ರಾರಂಭವಾಗಿ ಅರ್ಧ ಮುಂದುವರಿಯುವಷ್ಟರಲ್ಲಿ ಪೂರ್ವಸಂಕೇತದಂತೆ ಅರೆಕೊಪ್ಪ ಹಾಜರಾಗುತ್ತಿದ್ದ “ಯಾಕ್ರೊ ಸ್ಕೂಲ್ ಹತ್ರ ಗೋಲಿಯಾಡೋದು? ಹೆಡ್‌ಮಾಸ್ಟರ್ ಹೇಳಿದ್ದಾರೆ, ಕೊಡ್ರೊ ಇಲ್ಲಿ ಗೋಲೀನ!” ಎಂದು ಗದರಿಸುತ್ತಿದ್ದಂತೆ ನಾವು - ನಾನು, ವೆಂಟಯ್ಯ, ಹಿರಿಯಣ್ಣ, ರಾಮರಾವ್, ದೊರೆಸ್ವಾಮಿ ಮೊದಲಾದ ಗೆಳೆಯರ ಗುಂಪಿನವರು -ನಮ್ಮ ಗೋಲಿಗಳನ್ನೆಲ್ಲಾ ಅವನ ಕೈಗೆ ಕೊಟ್ಟುಬಿಡುತ್ತಿದ್ದೆವು. ನಾವು ಹೆದರಿ ಕೊಟ್ಟುದನ್ನು ಕಂಡು ಇತರರೂ ತಮ್ಮತಮ್ಮ ಗೋಲಿಗಳನ್ನೆಲ್ಲಾ ಮನಸ್ಸಿಲ್ಲದ ಮನಸ್ಸಿನಿಂದ ಅವನ ಕೈಗೆ ಕೊಡುತ್ತಿದ್ದರು. ಅವನು ಬಹಳ ಸಿಟ್ಟುಗೊಂಡಂತೆ ನಟಿಸಿ ಗೋಲಿಗಳನ್ನೆಲ್ಲ ತುಂಬ ಎತ್ತರವಾಗಿ ಸ್ಕೂಲಿನ ತಾಋಸಿಗೆ ಎಸೆದುಬಿಟ್ಟು “ಇನ್ನು ಮೇಲೆ ಇಲ್ಲಿ ಗೋಲಿಯಾಡೀರಿ, ಹುಷಾರ್!” ಎಂದು ಸ್ಕೂಲಿನೊಳಕ್ಕೆ ಹೋಗಿಬಿಡುತ್ತಿದ್ದ. ನಾವೆಲ್ಲರೂ ಪೆಚ್ಚುಮೋರೆ ಹಾಕಿಕೊಂಡು -(ನಮ್ಮ ಗುಂಪಿನವರದು ಬರಯ ನಟನೆ) - ಮನೆಗೆ ಹೋಗುತ್ತಿದ್ದೆವು. ಹುಡುಗರೆಲ್ಲ ಹೋದ ಮೇಲೆಅರೆಕೊಪ್ಪ ಸ್ಕೂಲಿನ ಉದ್ದ ಏಣಿಹಾಕಿಕೊಂಡು ತಾರಸಿಗೆ ಹತ್ತಿ ಆ ಗೋಲಿಗಳನ್ನೆಲ್ಲ ಒಟ್ಟುಮಾಡಿ ತೆಗೆದು ಇಳಿಯುತ್ತಿದ್ದಂತೆ ಎದುರುಮನೆಯಲ್ಲಿಯೆ ಇದ್ದು ನೋಡುತ್ತಿದ್ದ ನಾವು ಎಂದರೆ ನಮ್ಮ ಗುಂಪಿನವರು, ನಸುಗತ್ತಲೆಯ ಮರೆಯಲ್ಲಿ ಸ್ಕೂಲಿನ ಬಳಿಗೆ ಓಡುತ್ತಿದ್ದೆವು. ಆಮೇಲೆ ಅರೆಕೊಪ್ಪ ದರೋಡೆ ಹಂಚುವಂತೆ ಆ ಕಲ್ಲಿನ ಗೋಲಿಗಳನ್ನೆಲ್ಲ ನಮಗೆ ತನ್ನ ಪಕ್ಷಪಾತಕ್ಕನುಗುಣವಾಗಿ ಹಂಚಿಕೊಡುತ್ತಿದ್ದ!
ಇದಕ್ಕಿಂತಲೂ ಸ್ವಾರಸ್ಯವಾಗಿಯೂ ರೌಚಕವಾಗಿಯೂ ಇರುವ ಇನ್ನೊಂದು ಘಟನೆ ’ಅರೆಕೊಪ್ಪ’ನ ನೆನಪಿನೊಡನೆ ಸಂಗತವಾಗಿದೆ -ಹೆಮ್ಮಲಗನ ಘಟನೆ:

Monday, March 9, 2015

ಹಾಳು ಸಂಸ್ಕೃತ ಹಾಳಾಗ!

ಬೇಸಗೆಯ ರಜ ಮುಗಿದು ಸ್ಕೂಲು ಪ್ರಾರಂಭವಾದ ಮೊದಲ ದಿನಗಳಲ್ಲಿ ಒಂದು ದಿನ ನಮ್ಮ ಕ್ಲಾಸಿನ ಹುಡುಗರನ್ನೆಲ್ಲ ಒಂದೆಡೆ ಒಟ್ಟುಗೂಡಿಸಿದರು. ಬಹುಶಃ ಪ್ರಾಥಮಿಕ ಪೂರೈಸಿ ಮಾಧ್ಯಮಿಕಕ್ಕೆ ಬಂದಿದ್ದೆವೆಂದು ತೋರುತ್ತದೆ. ತೋರ್ಗಡೆ ಹೊಂದಿದ ಉತ್ಸಾಹದಲ್ಲಿ ದೀರ್ಘಕಾಲದ ರಜದಿಂದ ಹಿಂತಿರುಗಿದ್ದ ಹುಡುಗರೆಲ್ಲ ಗಟ್ಟಿಯಾಗಿ ಸಂಭಾಷಿಸುತ್ತಾ ಗುಲ್ಲೋಗುಲ್ಲು ಮಾಡುತ್ತಿದ್ದರು. ಮೇಷ್ಟರು ಪ್ರವೇಶಿಸಿ ಮೇಜಿಗೆ ಬೆತ್ತ ಬಡಿದು ’ಸದ್ದೂ!’ ಎಂದು ಕೂಗಿದೊಡನೆಯೆ ಗಲಾಟೆ ತಟಕ್ಕನೆ ನಿಂತು ಹಪಯ್ದ ಮಳೆ ಹೊಳವಾದಂತಾಯ್ತು. “ನಿಮ್ಮಲ್ಲಿ ಯಾರು ಸಂಸ್ಕೃತ ತೆಗೆದುಕೊಳ್ಳುವವರು? ಯಾರು ಕನ್ನಡ ತೆಗೆದುಕೊಳ್ಳುವವರು? ಸಂಸ್ಕೃತ ತೆಗೆದುಕೊಳ್ಳಲು ಇಚ್ಛಿಸುವವರೆಲ್ಲ ಎದ್ದು ನಿಲ್ಲಿ!” ಎಂದರು. ಅನೇಕರು ಎದ್ದುನಿಂತುಕೊಂಡರು. ನಾನೂ ಎದ್ದು ನಿಂತೆ. ಅಷ್ಟೊಂದು ಮಂದಿ ಎದ್ದು ನಿಲ್ಲುವಾಗ ನಾನೇಕೆ ಕೂತಿರಬೇಕು? ನಾನೇನು ಕಡಮೆ? “ಸಂಸ್ಕೃತದ ವಿದ್ಯಾರ್ಥಿಗಳೆಲ್ಲ ಮತ್ತೊಂದು ಕೊಠಡಿಗೆ ಹೋಗಿ” ಎಂದರು ಮೇಷ್ಟರು. ತುಂಬ ಹೆಮ್ಮೆಯಿಂದ ನಾನೂ ಇತರರೊಡನೆ ಹೋಗಿ ಬೇರೆ ಕೊಠಡಿಯಲ್ಲಿ ಕುಳಿತೆ. ನನ್ನ ಕೆಲವು ಬ್ರಾಹ್ಮಣೇತರ ಮಿತ್ರರು, ಕನ್ನಡ ತರಗತಿಯಲ್ಲಿಯೆ ಉಳಿದವರು “ಸಂಸ್ಕೃತ ಕಷ್ಟ ಕಣೋ. ಅದು ಬ್ರಾಹ್ಮಣರಿಗೆ ಮಾತ್ರ” ಎಂದು ಬುದ್ಧಿವಾದ ಹೇಳಿದರು. ಬ್ರಾಹ್ಮಣ ಸಹಪಾಠಿಗಳು “ನೀನ್ಯಾಕೆ ಬಂದೆಯೊ ನಮ್ಮ ಜೊತೆಗೆ? ಶೂದ್ರರಿಗೆ ಯಾಕೊ ಸಂಸ್ಕೃತ? ನೀನೇನು ಮಂತ್ರಗಿಂತ್ರ ಹೇಳಿ ಪೌರೋಹಿತ್ಯ ಮಾಡ್ತೀಯೇನೊ? ಸಂಸ್ಕೃತ ನಿನಗೆ ಉಚ್ಛಾರ ಮಾಡೋಕೆ ಆಗೋದಿಲ್ಲ. ನೀನಿ ಅದನ್ನು ಕಲ್ತು ಬರೆದು ಪಾಸು ಮಾಡುವುದು ಹೌದೇನೊ?” ಎಂದು ಅರೆ ಅಣಕದ ಎಚ್ಚರಿಕೆಯ ಮಾತನಾಡಿದರು. “ಓಹೋ ಆದೇನು ಮಹಾ! ಬ್ರಾಹ್ಮಣರಿಗೆ ಮಾತ್ರ ಮೀಸಲೇನೊ?” ಎಂದು ನಾನು ಉಡಾಫೆ ಮಾಡಿ, ಸಂಸ್ಕೃತದ ಕ್ಲಾಸಿನಲ್ಲಿಯೆ ಕುಳಿತೆ. ರಿಜಸ್ಟರಿನಲ್ಲಿ ಹುಡುಗರ ಹೆಸರನ್ನೆಲ್ಲ ಬರೆದುಕೊಳ್ಳುತ್ತಿದ್ದ ಮೂರುನಾಮದ ಪಂಡಿತರು ನನ್ನ ಸರದಿ ಬರಲು, ನಾನು ಹೇಳಿದ ನನ್ನ ಹೆಸರನ್ನು ಕೇಳಿ ಬೆರಗಾಗಿ, ಮೆಟ್ಟಬಾರದ್ದನ್ನು ಮೆಟ್ಟಿದವರಂತೆ, ಜುಗುಪ್ಸೆ ವಿಸ್ಮಯ ಅಸಮಾಧಾನಗಳ ಭಂಗಿಯಿಂದ ತಲೆಯೆತ್ತಿ ನನ್ನ ಕಡೆ ದುರುದುರನೆ ಸ್ವಲ್ಪ ಹೊತ್ತು ನೋಡಿ, ಏನನ್ನೋ ನಿಶ್ಚಯಿಸಿ, ಮತ್ತೆ ತಲೆತಗ್ಗಿಸಿ ಹುಡುಗರ ಹೆಸರು ಬರೆದುಕೊಳ್ಳುವ ತಮ್ಮ ಕರ್ತವ್ಯದಲ್ಲಿ ನಿರತರಾದರು.
ಸಂಸ್ಕೃತದ ವಿಷಯದಲ್ಲಿ ಗೌರವ ವಿಶ್ವಾಸಗಳು ಹುಟ್ಟುವಂತೆ ಅವರು ಮಾತಾಡಲಿಲ್ಲ. ಕಷ್ಟವಾದರೂ ಹೆದರಬೇಡಿ ಎಂದು ಧೈರ್ಯ ಹೇಳಲಿಲ್ಲ. “ನಾಳೆ ಬರುವಾಗ ನೀವೆಲ್ಲ ಅಮರಕೋಶದ ನಾಂದಿಶ್ಲೋಕಗಳನ್ನೆಲ್ಲ ಬಾಯಿಪಾಠ ಮಾಡಿಕೊಂಡು ಬರಬೇಕು” ಎಂದರು. “ಯಸ್ಯಜ್ಞಾನ ದಯಾಸಿಂಧೋ” ಇತ್ಯಾದಿ, ನೀರಿಳಿಯದ ಗಂಟಲಲ್ಲಿ ಕಡುಬು ತುರುಕುವಂತೆ!
ಅದನ್ನೆಲ್ಲ ನಾನು ಮನಸ್ಸಿಗೆ ಹಾಕಿಕೊಳ್ಳಲೆ ಇಲ್ಲ. ನನ್ನಂತೆ ಹಲವರೂ. ಮರುದಿನ ಸಂಸ್ಕೃತದ ಕ್ಲಾಸಿಗೆ ಹೋದಾಗ ಪಂಡಿತರ ಉದ್ದೇಶ ನೆರವೇರಿತು. ಆ ಶ್ಲೋಕಗಳನ್ನು ಬಾಯಿಪಾಠ ಮಾಡುವುದಿರಲಿ, ಅರ್ಥವೆ ಆಗದ ಅವುಗಳನ್ನು ಉಚ್ಛಾರಮಾಡುವುದೂ ಅಸಾಧ್ಯವಾಯಿತು ನಮ್ಮಲ್ಲಿ ಕೆಲವರಿಗೆ. ’ಶೂದ್ರ ಮಕ್ಕಳಿಗೆ ಬಾಯಿ ತಿರುಗುವುದೇ ಇಲ್ಲ! ಇವು ಸಂಸ್ಕೃತ ಕಲಿಯುತ್ತವಂತೆ! ನಿಲ್ಲೊ ಬೆಂಚಿನ ಮೇಲೆ!’ ಹೀಗೆ ಎರಡು ಮೂರು ದಿನ ಏಟು ತಿಂದು ಬೆಂಚಿನ ಮೇಲೆ ಹತ್ತಿ ನಿಂತು ನೋವಿಗೂ ಅವಮಾನಕ್ಕೂ ಹೇಸಿ ರೋಸಿ, ’ಹಾಳು ಸಂಸ್ಕೃತ ಹಾಳಾಗ!’ ಎಂದು ಬೈದು ಮತ್ತೆ ಕನ್ನಡದ ತರಗತಿಗೇ ಸೇರಿದೆವು, ತಾಯಿಯ ಮಡಿಲಿಗೆ ಓಡುವಂತೆ!

Tuesday, March 3, 2015

ಕೇಡಿ ರಿಜಿಸ್ಟರಿಗೆ ಹೆಸರು ಸೇರಿಸಿದ 'ನಾಮ'!


ನಮ್ಮ ಉಪಾಧ್ಯಾಯರುಗಳಲ್ಲಿ ಒಬ್ಬರು ರಾಮರಾಯರು. ಅವರು ಇಂಗ್ಲಿಷ್ ಪಾಠಕ್ಕೆ ಬರುತ್ತಿದ್ದರು. ಬಿಳಿಯ ಪೇಟ, ಕೋಟು, ಕಚ್ಚೆ ಹಾಕಿ ನೀಟಾಗಿರುತ್ತಿದ್ದರು. ಇತರ ಕೆಲವರಂತೆ ಅವರು ಹೊಡೆಯುತ್ತಲೂ ಇರಲಿಲ್ಲ; ಹೆದರಿಸುತ್ತಿದ್ದರೂ ತುಂಬ ಸೌಮ್ಯವಾಗಿ ನಾಗರಿಕವಾಗಿ ನಗುನಗುತ್ತಲೆ ಇರುತ್ತಿದ್ದರು. ಆದ್ದರಿಂದ ನಮಗೆಲ್ಲ ಅವರಲ್ಲಿ ಹೆಚ್ಚು ಗೌರವ, ವಿಶ್ವಾಸ. ಅವರದ್ದು ಒಂದು ಹಟ: ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ಜಾತಿಯ ಲಲಾಟಚಿಹ್ನೆಯನ್ನು, ಅವರು ಹೇಳುತ್ತಿದ್ದಂತೆ 'ಕ್ಯಾಸ್ಟ್‌ಮಾರ್ಕ್’ಅನ್ನು ಇಟ್ಟುಕೊಂಡೇ ಕ್ಲಾಸಿಗೆ ಬರಬೇಕು ಎಂದು. ಬ್ರಾಹ್ಮಣರು, ಕೊಂಕಣಿಗಳು ತಪ್ಪದೆ ಹಾಗೆ ತಿಲಕ ಧರಿಸಿಯೆ ಬರುತ್ತಿದ್ದರು. ನಾನು, ಹೆಸರಿಗೆ ನಾಮಧಾರಿ. ಒಕ್ಕಲಿಗ ಜಾತಿಗೆ ಸೇರಿದ್ದರೂ, ಲಾಂಛನಗಳ ವಿಚಾರದಲ್ಲಿ ಅಷ್ಟೇನೂ ಆಸಕ್ತನಾಗಿರಲಿಲ್ಲ. ಮನೆಯಲ್ಲಿ ಇನ್ನೂ ಚಿಕ್ಕವನಾಗಿದ್ದಾಗ, ನಾಮದ ಪೆಟ್ಟಿಗೆಯ ಮುಂದೆ ಕುಳಿತು ಅಪ್ಪಯ್ಯ ಅಜ್ಜಯ್ಯ ಯಾರಾದರೂ ಹಿರಿಯರು ನಾಮ ಧರಿಸಿಕೊಳ್ಳುತ್ತಿದ್ದಾಗ, ನಾನೂ ಮುಖ ಚಾಚಿ ನಾಮ ಇಡಿಸಿಕೊಳ್ಳುತ್ತಿದ್ದೆ. ಅಷ್ಟೆ ಹೊರತೂ ಅದನ್ನು ಧಾರ್ಮಿಕ ಶ್ರದ್ಧೆಯನ್ನಾಗಿ ಗೌರವಿಸುತ್ತಿರಲಿಲ್ಲ. ತೀರ್ಥಹಳ್ಳಿಯಲ್ಲಂತೂ ನಾಮ ಇಟ್ಟುಕೊಳ್ಳುವುದೆಲ್ಲಿಂದ ಬಂತು? ಆದರೆ ರಾಮರಾಯರ ಪೀಡೆ ತಡೆಯಲಾರದೆ ಒಂದು ಉಪಾಯ ಹೂಡಿದ್ದೆ. ಅವರ ಕ್ಲಾಸು ಇರುವಾಗ, ಯಾರಾದರೂ ಹಣೆಗೆ ನಾಮ ಇಟ್ಟುಕೊಂಡು ಬಂದ ಗೆಳೆಯನನ್ನು ಹಿಡಿದು, ಅವನ ಹಣೆಗೆ ನೇರವಾಗಿ ನನ್ನ ಹಣೆಯನ್ನು ಒತ್ತಿ, ಬಲವಾಗಿ ಒತ್ತಿ, ನನ್ನ ಹಣೆಗೂ ನಾಮದ ಗುರುತು ಬೀಳುವಂತೆ ಮಾಡಿಕೊಂಡು ರಾಮರಾಯರ ತರಗತಿಗೆ ಧೈರ್ಯವಾಗಿ ಹೋಗುತ್ತಿದ್ದೆ. ಒಮ್ಮೊಮ್ಮೆ, ಒಂದೆ ನಾಮ ಇಟ್ಟುಕೊಂಡ ಗೆಳೆಯ ಸಿಕ್ಕದಿದ್ದರೆ, ಮೂರು ನಾಮದ ಐಯ್ಯಂಗಾರ್ ಗೆಳೆಯನನ್ನೆ ಹಿಡಿದು, ಅವನ ಹಣೆಗೆ ನನ್ನ ಹಣೆ ಡಿಕ್ಕಿ ಹೊಡೆಸುತ್ತಿದ್ದೆ. ಆದರೆ ಒಕ್ಕಲಿಗರ ಹುಡುಗ ಎರಡು ಬಿಳಿನಾಮಗಳ ನಡುವೆ ಒಂದು ಕೆಂಪುನಾಮ ಇಟ್ಟುಕೊಳ್ಳುತ್ತಿದ್ದುದು ಅಪೂರ್ವ. ರಾಮರಾಯರು ’ಇದೇನು ಐಯ್ಯಂಗಾರ್ ನಾಮ ಹಾಕಿಕೊಂಡಿದ್ದೀಯಾ?’ ಎಂದು ಕೇಳಿದರೆ, ’ಒಮ್ಮೊಮ್ಮೆ ವಿಶೇಷ ದಿನಗಳಲ್ಲಿ ಗೌಡರೂ ಮೂರುನಾಮ ಹಾಕಿಕೊಳ್ಳುತ್ತಾರೆ, ದಾಸಯ್ಯಗಳಂತೆ!’ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದೆ. ಆದರೆ ಒಮ್ಮೆ ಇಂತಹ ಘಟನೆ ಸಂಭವಿಸಿದ ತರುವಾಯ, ಸ್ನೇಹಿತನ ಹಣೆಯ ಮೂರು ನಾಮ ನನ್ನ ಹಣೆಗೆ ಬಂದಿದ್ದರೂ, ಅವನ ಕೈಯಿಂದಲೆ ಅಕ್ಕಪಕ್ಕದ ಎರಡು ಬಿಳಿನಾಮಗಳನ್ನು ಎಚ್ಚರಿಕೆಯಿಂದ ಒರೆಸಿಹಾಕುವಂತೆ ಮಾಡುತ್ತಿದ್ದೆ.


ಈ ನಾಮದ ದೆಸೆಯಿಂದ ಒಮ್ಮೆ ಕೇಡಿ ರಿಜಿಸ್ಟರಿಗೆ ನನ್ನ ಹೆಸರು ದಾಖಲಾಗಿದ್ದುದೂ ಉಂಟು. ಕೆಲವು ಐಯ್ಯಂಗಾರ ಹುಡುಗರು ಶೂದ್ರನ ಹಣೆಗೆ ಹಣೆಯೊತ್ತಿದರೆ ತಮ್ಮ ಜಾತಿ ಕೆಟ್ಟು ಹೋಗುತ್ತದೆ, ಮಡಿಕೆಟ್ಟು ಮೈಲಿಗೆಯಾಗುತ್ತದೆ ಎಂದು ಹಣೆಮುದ್ರಣಕ್ಕೆ ಒಪ್ಪುತ್ತಿರಲಿಲ್ಲ. ಒಮ್ಮೆ ಜಾತಿಭೇದ ಇಲ್ಲದ ಸ್ನೇಹಿತರಾರೂ ಸಿಕ್ಕಲಿಲ್ಲ, ಹಣೆಗೆ ನಾಮ ಒತ್ತಿಸಿಕೊಳ್ಳುವುದಕ್ಕೆ. ಆದರೆ ರಾಮರಾಯರ ಕ್ಲಾಸಿಗೆ ಹೋಗಲೇಬೇಕಾಯಿತು. ಯಾರಾದರೇನಂತೆ? ಹಣೆಗೆ ನಾಮದ ಚಿಹ್ನೆ ಬಿದ್ದರಾಯಿತು ಎಂದು, ಹತ್ತಿರದ ಗೆಳೆಯನಲ್ಲದ, ಫಕ್ಕನೆ ಎದುರಾಗಿ ಕಣ್ಣಿಗೆ ಬಿದ್ದ ಹುಡುಗನೊಬ್ಬನನ್ನು ಹಣೆಗೆ ಹಣೆಯೊತ್ತಿ, ನಾನು ಬೆಂಚಿನ ಮೇಲೆ ನಿಲ್ಲಬೇಕಾದ ಶಿಕ್ಷಾಪ್ರಸಂಗದಿಂದ ಪಾರು ಮಾಡುವಂತೆ ಕೇಳಿಕೊಂಡೆ. ಅವನು ತುಂಬ ಮಡಿ ಹಾರುವ, ನನ್ನ ಬೇಡಿಕೆಯನ್ನು ತಿರಸ್ಕರಿಸ್ಸು ಮಾತ್ರವಲ್ಲದೆ ’ಶೂದ್ರ’ ’ಮುಟ್ಟಾಳು’ ಎಂದು ಏನೇನೊ ಹೇಳಿಬಿಟ್ಟ. ನನಗೆ ಸಿಟ್ಟು ಏರಿ ’ನಿನ್ನ ಜನಿವಾರ ಕಿತ್ತುಹಾಕಿ, ಮುಖದ ಮೇಲೆ ಉಗುಳಿ ಜಾತಿ ಕೆಡಿಸುತ್ತೇನೆ’ ಎಂದೆ. ಆ ಕಾಲದಲ್ಲಿ ಬ್ರಾಹ್ಮಣರ ಹುಡುಗರು ಎಷ್ಟೇ ಬಲಿಷ್ಠರಾಗಿರಲಿ ಚಿಕ್ಕಚಿಕ್ಕ ಸಾಬರ ಹುಡುಗರಿಗೂ ಶೂದ್ರ ಮಕ್ಕಳಿಗೂ ಹೆದರಿಕೊಳ್ಳುತ್ತಿದ್ದರು, ಎಲ್ಲಿ ಉಗುಳಿ ಜಾತಿ ಕೆಡಿಸುತ್ತಾರೊ ಎಂದು! ಅಂತೂ ಆ ಹುಡುಗ ಹೆಡ್ಮಾಸ್ಟರಿಗೆ ದೂರುಕೊಟ್ಟ. ಸರಿ, ಹೆಡ್ಮಾಸ್ಟರೂ ಬ್ರಾಹ್ಮಣರು. ಶೂದ್ರಮಕ್ಕಳೆಲ್ಲಾ ಬ್ರಾಹ್ಮಣ ಬಾಲಕರೊಡನೆ ಒಂದೇ ಬೆಂಚಿನ ಮೇಲೆ ಮೈಗೆ ಮೈ ಮುಟ್ಟುವಂತೆ ಕುಳಿತುಕೊಂಡು ಬ್ರಾಹ್ಮಣತ್ವವೆಲ್ಲ ಹಾಳಾಗಿ ಹೋಗುತ್ತಿದೆ ಎಂದು ಮೊದಲೇ ಈರ್ಷ್ಯೆಯಲ್ಲಿದ್ದ ಆ ಪುಣ್ಯಾತ್ಮ ನನ್ನನ್ನು ಆಫೀಸು ರೂಮಿಗೆ ಕರೆಸಿ, ವಿಚಾರಣೆ ಮಾಡಿದ. ಆ ಹುಡುಗ ನಾನು ’ಉಗುಳಲಿಲ್ಲ, ಉಗುಳುತ್ತೇನೆ ಎಂದು ಹೆದರಿಸಿದೆನಷ್ಟೆ’ ಎಂದು ಹೇಳಿದರೂ ’ಉಗುಳುತ್ತೇನೆ ಎಂದದ್ದು ಉಗುಳಿದ್ದಕ್ಕಿಂತಲೂ ಕಡುಪಾಪ!’ ಎಂದು ಶಿಕ್ಷೆ ವಿಧಿಸಿಯೆ ಬಿಟ್ಟ: ಬೆತ್ತದಿಂದ ಅಂಗೈಗಳಿಗೆ ಏಟು ಬಿಗಿದು, ಕೇಡಿರಿಜಿಸ್ಟರಿಗೆ ನನ್ನ ಹೆಸರನ್ನು ಸೇರಿಸಿಬಿಟ್ಟ! ಕೇಡಿ ರಿಜಿಸ್ಟರಿಗೆ ಹೆಸರು ಸೇರುವುದೆಂದರೆ ಬಹಳ ಕೆಟ್ಟದ್ದು! ತರುವಾಯದ ಬದುಕಿನಲ್ಲಿ ಹುಡುಗನ ಜೀವನೋಪಾಯಕ್ಕೆ ಧಕ್ಕೆ ತರುತ್ತದೆ! ಅವನು ಮುಂದೆ ಯಾವ ಕೆಲಸಕ್ಕೆ ಅರ್ಜಿ ಹಾಕಿಕೊಳ್ಳಲಿ ಅವನ ಮುಖದಲ್ಲಿರುವ ಈ ಕರಿಗೀಟು -ಬ್ಲಾಕ್‌ಮಾರ್ಕ್- ಅವನಿಗೆ ಕಂಟಕಪ್ರಾಯವಾಗಿ ನಿಲ್ಲುತ್ತದೆ! -ಎಂದೆಡಲ್ಲ ಹೆದರಿಸಿದರು. ಆದರೆ ನನಗಿದ್ದದ್ದು ಆ ಭವಿಷ್ಯ ಜೀವನದ ಅಪಾಯ ಭಯವಲ್ಲ; ಅಂಗೈಗೆ ಬಿದ್ದ ಬೆತ್ತದೇಟಿನ ನೋವು!
ರಾಮರಾಯರು ನಮಗೆ ಸೆಕೆಂಡರಿ ತರಗತಿಗೆ ಇಟ್ಟಿದ್ದ ಇಂಗ್ಲಿಷ್ ಪಠ್ಯ ಪುಸ್ತಕದ ಪಾಠಕ್ಕೆ ಬರುತ್ತಿದ್ದರು. ಅದರಲ್ಲಿ ಕಾಲಿ ಸಿಬ್ಬರ್ ಎಂಬ ಕವಿಯ ’ದಿ ಬ್ಲೈಂಡ್ ಬಾಯ್ -(ಕುರುಡು ಹುಡುಗ) - ಎಂಬ ಒಂದು ಕಿರುಕವನ ಇತ್ತು. ಅದನ್ನು ಪಾಠ ಹೇಳುವಾಗ ಅವರು ನನ್ನನ್ನು ಆ ಕವಿಗೆ ಹೋಲಿಸಿ ಕಾಲಿ ಸಿಬ್ಬರ್ ಎಂದು ಕರೆಯುತ್ತಿದ್ದರು. ಬಹುಶಃ ನಾನು, ಆ ಕವನದ ಮೇಲುಭಾಗದಲ್ಲಿದ್ದು, ಅಂದಿನ ಇಂಗ್ಲಿಷರ ಪದ್ಧತಿಯಂತೆ ಉದ್ದ ಕೂದಲಿನ ವ್ಹಿಗ್ ಧರಿಸಿದ್ದ ಕಾಲಿ ಸಿಬ್ಬರ್ ಕವಿಯ ಚಿತ್ರದಲ್ಲಿದ್ದಂತೆ ಉದ್ದವಾಗಿ ಹೆಗಲು ಮುಟ್ಟುವಂತೆ ಗುಂಗುರು ಕೂದಲು ಬಿಟ್ಟು ಮಧ್ಯ ಬೈತಲೆ ತೆಗೆದು ಬಾಚುತ್ತಿದ್ದುದರಿಂದ ನನ್ನನ್ನು ಅವನಿಗೆ ವಿನೋದಕ್ಕಾಗಿ ಹೋಲಿಸುತ್ತಿದ್ದರು ಎಂದು ಭಾವಿಸುತ್ತೇನೆ.
ಅದೇ ಪಠ್ಯಪುಸ್ತಕದಲ್ಲಿ ವರ್ಡ್ಸ್‌ವರ್ತ್ ಕವಿಯ ’ವಿ ಆರ್ ಸೆವನ್’ - ’ನಾವು ಏಳು ಮಕ್ಕಳು’ - ಎಂಬುದೂ ಇತ್ತು. ನಮ್ಮ ಕೈಯಲ್ಲಿ ಅದನ್ನು ಬಾಯಿಪಾಠ ಮಾಡಿಸಿ ಅವರಿಗೆ ತಿಳಿದ ಮಟ್ಟಿಗೆ ಅರ್ಥ ಹೇಳುತ್ತಿದ್ದರೆಂದು ನನ್ನ ಭಾವನೆ. ಆದರೆ ನಮಗೆ ಆ ವಯಸ್ಸಿನಲ್ಲಿ ಆ ಕವನದ ಧ್ವನಿಯಾಗಲಿ ಅದರ ಹಿರಿಮೆಯಾಗಲಿ ಒಂದಿನಿತೂ ಗ್ರಾಹ್ಯವಾಗುತ್ತಿತ್ತೆಂದು ನನಗೆ ಅನ್ನಿಸುವುದಿಲ್ಲ. ಆ ಕವನದಲ್ಲಿಯೆ ಬರುವ ಬಾಲಕನಿಗೆ ಮೃತ್ಯು ಅರ್ಥವಾಗುವಂತೆ ಉಪಾಧ್ಯಾಯರಿಗೂ ಆಗಿತ್ತೆಂದು ಹೇಳಲಾರೆ. ಎಷ್ಟೋ ವರ್ಷಗಳ ತರುವಾಯ ನಾನು ಮೈಸೂರಿಗೆ ಹೋದಮೇಲೆ, ನನ್ನಲ್ಲಿಯೂ ಕವಿತಾ ಸ್ಫೂರ್ತಿ ಸೆಲೆಯೊಡೆದ ಮೇಲೆ, ಆ ವಿಚಾರವಾದ ಕಾವ್ಯವಿಮರ್ಶೆಯನ್ನೂ ಓದಿ ಕೇಳಿಯಾದ ಮೇಲೆ, ಆ ಸಣ್ಣ ಕವನದ ಮಹಾಧ್ವನಿಸಂಪತ್ತಿಗೆ ನನ್ನ ಹೃದಯ ಕಣ್ಣು ತೆರೆದದ್ದು!