ಎಲ್ಲಕ್ಕಿತ ಹೆಚ್ಚಾಗಿ, ನನ್ನ ನೆನಪಿನಲ್ಲಿ ಇಂದಿಗೂ ಪೂಜ್ಯವಾಗಿ ಉಳಿದಿರುವ ಚಿತ್ರವೆಂದರೆ ಅಜ್ಜಯ್ಯನ ನೇತೃತ್ವದಲ್ಲಿ ನವರಾತ್ರಿಯ ಒಂಬತ್ತು ದಿನಗಳೂ ಅಖಂಡವೆಂಬಂತೆ ನಡೆಯುತ್ತಿದ್ದ ಸರಸ್ವತೀ ಪೂಜೆ. ಅದು ನಡೆಯುತ್ತಿದ್ದುದು ನಮ್ಮ ಮನೆಯ ಉಪ್ಪರಿಗೆಯ ಮೇಲಣ ಮಳಿಗೆ ಕೋಣೆಯಲ್ಲಿ. ಯಾವ ಚಿತ್ರಪಟವಾಗಲಿ, ವಿಗ್ರಹವಾಗಲಿ ವಾಗ್ದೇವಿಯನ್ನು ಪ್ರತಿಮಿಸುತ್ತಿರಲಿಲ್ಲ: ಪುಸ್ತಕಗಳು! ಪುಸ್ತಕಗಳೂ ಮತ್ತೂ ಪುಸ್ತಕಗಳು! ಮತ್ತು, ನಾವು ಓದು ಬರೆಯಲು ಪ್ರಾರಂಭಿಸಿದ ಮೇಲೆ ನಮ್ಮ ಸ್ಲೇಟು, ಬಳಪ, ಸೀಸದಕಡ್ಡಿ, ಲೇಖನಿ, ಕಾಪಿ ಪುಸ್ತಕ, ಕೊನೆಗೆ ಮಸಿದೌತಿ! ಪುಸ್ತಕಗಳೆಂದರೆ ನಮ್ಮ ಮನೆಯಲ್ಲಿ ಆಗ ಅಚ್ಚಾದ ಪುಸ್ತಕಗಳ ಲೈಬ್ರರಿ ಇತ್ತೆಂದು ಯಾರಾದರೂ ಭಾವಿಸಿಯಾರು? ಅವೆಲ್ಲ ಓಲೆಗರಿ ಪುಸ್ತಕಗಳು! ಎರಡೋ ಮೂರೋ ದೊಡ್ಡ ದೊಡ್ಡ ಬೆತ್ತದ ಪೆಟ್ಟಿಗೆಗಳಲ್ಲಿ ತುಂಬಿ ಇಡುತ್ತಿದ್ದ ಓಲೆಗರಿ ಪುಸ್ತಕಗಳು - ರಾಮಾಯಣ, ಭಾರತ, ಜೈಮಿನಿ, ಸಹ್ಯಾದ್ರಿಕಾಂಡ, ಇತ್ಯಾದಿ, ಇತ್ಯಾದಿ. ಬಹುಶಃ ಅವುಗಳೆಲ್ಲ ಕನ್ನಡ ಜಿಲ್ಲೆಯಿಂದ ಬಂದ ಐಗಳ ಕೈಲಿ ಬಹಳ ಹಿಂದಿನಿಂದಲೂ ಬರೆಯಿಸಿದ್ದವಿರಬೇಕು. ಒಂದೊಂದು ಗ್ರಂಥಕ್ಕೂ ವರುಷೆವೆಲ್ಲ, ಅದನ್ನು ಬರೆದು ಮುಗಿಸುವ ತನಕ, ಮನೆಯಲ್ಲಿಯೇ ಊಟ, ಬಟ್ಟೆ, ತಿಂಡಿ ಎಲ್ಲವನ್ನೂ ನೀಡಿ, ಅದು ಮುಕ್ತಾಯವಾದಂದು ವಿಶೇಷ ಪೂಜೆ ನಡೆಸಿ ಲಿಪಿಕಾರನಿಗೆ ಕೊಡಬೇಕಾಗಿದ್ದ ಆಗಿನ ಕಾಲಕ್ಕೆ ತುಂಬ ದುಬಾರಿಯೆ ಆದ, ನೂರೊ ಇನ್ನೂರೊ ರೂಪಾಯಿಗಳನ್ನು ಸಂತೋಷದಿಂದ ಸಂಭಾವನೆಯಾಗಿ ಕೊಟ್ಟಿರಬೇಕು. ಅಂತೂ ಅಜ್ಜಯ್ಯ ಅವುಗಳೊಡನೆ ವ್ಯವಹರಿಸುತ್ತಿದ್ದ ರೀತಿಯನ್ನು ನೋಡಿಯೇ ನಮಗೆ ಅವು ಅತ್ಯಂತ ಅಮೂಲ್ಯವೂ ಪವಿತ್ರವೂ ಆದ ವಸ್ತುಗಳು ಎಂಬ ಭಾವನೆ ಮೂಡುತ್ತಿತ್ತು.
ಆ ಬೆತ್ತದ ಪೆಟ್ಟಿಗೆಗಳು ಕರಿಹಿಡಿದು ಕರ್ರಗಾಗಿರುತ್ತಿದ್ದುವು. ಏಕೆಂದರೆ ಮಲೆನಾಡಿನ ಮಳೆಗಾಲದಲ್ಲಿ ತೇವವಾಗಿ ಬೂಸಲು ಬಂದು ಹಾಳಾಗದಂತೆ, ಅವುಗಳನ್ನು 'ಹೊಗ್ಗಂಡಿ'ಯಲ್ಲಿ ಇಟ್ಟಿರುತ್ತಿದ್ದುದರಿಂದ: (ಹೊಗ್ಗಂಡಿ ಎಂದರೆ ಹೊಗೆಯ ಕಂಡಿ, ಅಡುಗೆ ಮಾಡುವ ಜಾಗದಲ್ಲಿ ನೇರವಾಗಿ ಮೇಲಕ್ಕೆ ಹೊಗೆ ಹೋಗುವಂತೆ ಕಂಡಿ ಬಿಟ್ಟಿರುತ್ತಾರೆ. ಸುಮಾರು 8-10 ಅಡಿಯಷ್ಟು ಚೌಕವಾಗಿ. ಅದಕ್ಕೆ ತೊಲೆಗಳನ್ನು ಚೌಕಟ್ಟಾಗಿ ಜೋಡಿಸಿ, ದಪ್ಪ ರೀಪುಗಳನ್ನು ಜಾಲಂದ್ರವಾಗುವಂತೆ ಹೊಡೆದು ಕೂರಿಸಿ, ಅದರ ಮೇಲೆ, ಅದು ಒಳ ಉಪ್ಪರಿಗೆಯ ಒಂದು ಮೂಲೆಯಾಗಿ ಬೆಳಕು ಮಳೆ ಗಾಳಿ ಥಂಡಿಗಳಿಗೆ ದೂರವಾಗುವುದರಿಂದ, ಥಂಡಿ ತಗಲಿ ಹಾಳಾಗಬಾರದಂತಹ ಸಾಮಾನುಗಳನ್ನೆಲ್ಲ ಇಟ್ಟಿರುತ್ತಾರೆ, ಹರಿಗಳಲ್ಲಿ, ಪೆಟ್ಟಿಗೆಗಳಲ್ಲಿ, ಮೆತ್ತುಹಾಕಿದ ಮಡಕೆಗಳಲ್ಲಿ, ಚೀಲಗಳಲ್ಲಿ, ಉಗ್ಗಗಳಲ್ಲಿ, ಸಿಕ್ಕಗಳಲ್ಲಿ!) ಅಜ್ಜಯ್ಯ ಆ ಪೆಟ್ಟಿಗೆಗಳಿಂದ ಆ ಓಲೆಗರಿ ಗ್ರಂಥಗಳನ್ನು ನವರಾತ್ರಿ, ಉಗಾದಿ, ದೀಪಾವಳಿಯಂತಹ ಹಬ್ಬಗಳಲ್ಲಿ ಹೊರತೆಗೆದು, ಅವನ್ನು ಯಾವುದೋ ಒಂದು ವಿಶೇಷ ರೀತಿಯ ತೈಲದಿಂದ ಉಜ್ಜಿ ಶುಚಿಮಾಡುತ್ತಿದ್ದರು. ಓದುತ್ತಲೂ ಇದ್ದರೆಂದು ತೋರುತ್ತದೆ. ಆದರೆ ನಮ್ಮೊಡನೆ ಅವರು ಅವುಗಳ ವಿಚಾರವಾಗಿ ಮಾತನಾಡಿದುದಾಗಲಿ, ಕಥೆ ಹೇಳಿದುದನ್ನಾಗಲಿ, ರಾಗವಾಗಿ ಓದಿ ಮನರಂಜಿಸಿದುದನ್ನಾಗಲಿ ನಾನು ನೆನೆಯಲಾರದವನಾಗಿದ್ದೇನೆ.
.......................................................ಮುಂದುವರೆಯುವುದು
No comments:
Post a Comment