ಅಜ್ಜಯ್ಯನ ಸರಸ್ವತೀ ಪೂಜೆ - 2
ಅಂತೂ ನವರಾತ್ರಿ ಬಂದಿತೆಂದರೆ ಉಪ್ಪರಿಗೆಯ ನೆಲ ಸೆಗಣಿ ಬಳಿದು ಶುಚಿಯಾಗುತಿತ್ತು. ಕಸ ಕರಿಬಲೆ ಹೊಡೆದು ಹಸನಾಗುತ್ತಿತ್ತು, ಊರುಹೆಂಚು ಹೊದಿಸಿದ್ದ ಮಾಡು. ಮಳಿಗೆ ಕೋಣೆ ದೇವಾಲಯವಾಗುತ್ತಿತ್ತು. ಓಲೆಗರಿ ಗ್ರಂಥಗಳೆಲ್ಲ ಮಣೆಗಳ ಮೇಲೆ ಒಪ್ಪವಾಗಿ ಜೋಡಿಸಲ್ಪಟ್ಟು ಪೂಜ್ಯವಾಗುತ್ತಿದ್ದುವು. ನಮಗೂ ಓದುವ ಬರೆಯುವ ಪೀಡೆಯಿಂದ ಎಂಟು ಹತ್ತು ದಿನಗಳ ಮಟ್ಟಿಗಾದರೂ ತಪ್ಪಿಸಿಕೊಳ್ಳುವ ಸುಯೋಗ ದೊರೆಯುತ್ತಿತ್ತು. ಏಕೆಂದರೆ, ಆಗ ಒಂದು ಕಾಗದದ ಚೂರು ಕೂಡ ಸರಸ್ವತಿಯ ಶರೀರವಾಗುತ್ತಿದ್ದ ಕಾಲ! ನಮ್ಮ ಕಾಲೆಲ್ಲಿಯಾದರೂ ಒಂದಿನಿತು ಸೋಕಿಸಿದರೂ ಅದಕ್ಕೆ ನಮ್ಮ ಕೈ ಮುಟ್ಟಿಸಿ, ಹಣೆ ಮುಟ್ಟಿಕೊಂಡು, ನಮಸ್ಕರಿಸಿ, ವಿದ್ಯಾಮಾತೆಯ ಕ್ಷಮಾಪಣೆ ಕೇಳಿಕೊಳ್ಳುವಂತೆ ನಮ್ಮ ಹಿರಿಯರು ಕಲಿಸಿದ್ದರು. ಆ ಪಾಠವನ್ನೆ ಕಟುವಾಗಿ ಅನುಷ್ಠಾನಕ್ಕೆ ತರುತ್ತಿದ್ದೆವು ನಾವು. ಓಲೆಗರಿ ಪುಸ್ತಕಗಳು, ಮನೆಯ ಲೇವಾದೇವಿಯ ಲೆಕ್ಕದ ಪುಸ್ತಕಗಳು ಪವಿತ್ರವೂ ಪೂಜ್ಯವೂ ಆಗಿ ಸರಸ್ವತಿಯ ಪೀಠಕ್ಕೇರಿದರೆ, ನಾವು ಓದುವ ಬರೆಯುವ ಸ್ಲೇಟು ಪುಸ್ತಕಗಳೇನು ಕಡಮೆ ಪವಿತ್ರವೆ? ಅವೂ ಪೂಜ್ಯವಲ್ಲವೆ? ಅವೂ ಸರಸ್ವತಿಯ ಅಂಗಭಾಗ ತಾನೆ? ಆದ್ದರಿಂದ ನಾವೂ ನಮ್ಮ ಸ್ಲೇಟು ಪುಸ್ತಕಗಳನ್ನೆಲ್ಲ ಒಂದು ಸಣ್ಣ ಮಣೆಯ ಮೇಲೆ ಓಲೆಗರಿಯ ಹೊತ್ತಗೆಗಳ ಅಡಿಯಲ್ಲಿ ಇಟ್ಟು ಗೆದ್ದೆವಪ್ಪಾ ಎಂದು ಹೊರೆಯಿಳಿಸಿ ದಣಿವಾರಿಸಿಕೊಳ್ಳುವವರಂತಾಗುತ್ತಿದ್ದೆವು. 'ಸಿಲೇಟು' 'ಪೊಸ್ತಕ' ಎರಡೇ ಏಕೆ ಪವಿತ್ರ? ಸರಸ್ವತಿಯ ಉಪಕರಣಗಳಾದ ಸಿಲೇಟು ಕಡ್ಡಿ, ಸೀಸದ ಕಡ್ಡಿ, ಲೇಖನಿ, ಮಸಿದೌತಿ ಇವು ಮಾಡಿದ ಪಾಪ ಏನು? ಎಂದು ಅವುಗಳನ್ನು ಸಹ ಪವಿತ್ರಗೊಳಿಸಿ ಪೀಠಕ್ಕೆ ಜೋಡಿಸಿ ಪೂಜಾರ್ಹವಾಗಿಸುತ್ತಿದ್ದೆವು!
ಮಳಿಗೆ ಕೋನೆಯ ಪುಸ್ತಕರೂಪದ ಸರಸ್ವತಿದೇವಿ ತರತರದ ಸುವಾಸನೆಯ ಹೂವುಗಳಿಂದ ಸಿಂಗರಗೊಳ್ಳುತ್ತಿದ್ದಳು. ಎತ್ತರವಾದ ದೊಡ್ಡ ನೀಲಾಂಜನಗಳಲ್ಲಿ (ಅವುಗಳನ್ನು ನಾವು ದೀಪದ ಕಂಭವೆಂದೇ ಕರೆಯುತ್ತಿದ್ದುದು) ಉದ್ದವಾಗಿ ಹೊಸೆದ ಬತ್ತಿಗಳು, ಎಣ್ಣೆಯಲ್ಲಿ ಮುಳುಗಿದ ಹಾವುಗಳಂತೆ ಸೊಡರುಗಳ ಹೆಡೆಯೆತ್ತಿ ರಮಣೀಯವಾಗುತ್ತಿದ್ದುವು. ಮಿಂದು ಮಡಿಯುಟ್ಟು ನಮ್ಮನ್ನೆಲ್ಲ ಅಜ್ಜಯ್ಯ ಸಾಲಾಗಿ ನಿಲ್ಲಿಸಿ ತಮ್ಮ ಗಂಭೀರ ಠೀವಿಯಿಂದ ಭಾವಪೂರ್ವಕವಾಗಿ ತರತರದ ಆಕಾರದ ಆರತಿಗಳನ್ನೆತ್ತಿ ಪೂಜೆ ಮಾಡುತ್ತಿದ್ದರು, ಘಂಟೆ ಬಾರಿಸುತ್ತಾ. ಆಮೇಲೆ "ಬೆನಕಾ! ಬೆನಕಾ! ಏಕದಂತಾ! ಪಚ್ಚೆಕಲ್ಲು! ಪಾಣಿಪೀಠ! ಮುತ್ತಿನುಂಡೆ! ಹೊನ್ನಘಂಟೆ! ಇಂತೀ ಒಪ್ಪುವ ಸಿರಿ ಸಿದ್ಧಿ ವಿನಾಯಕ ದೇವರ ಪಾದಕ್ಕೆ ಇಪ್ಪತ್ತೊಂದು ನಮಸ್ಕಾರಗಳು" ಎಂದು ಅಜ್ಜಯ್ಯ ಹೇಳಿಕೊಟ್ಟಂತೆ ತುಸು ರಾಗವಾಗಿ ನಮ್ಮ ಕೈಯಲ್ಲಿ ಕೊಟ್ಟಿರುತ್ತಿದ್ದ ಗಂಧಾಕ್ಷತೆ ಎರಚಿ, ಎಲ್ಲರೂ ಸಾಷ್ಟಾಂಗ ಪ್ರಣಾಮ ಮಾಡುತ್ತಿದ್ದೆವು. ಅಂದರೆ ನಾವು ಆಗ ಹೇಳುತ್ತಿದ್ದಂತೆ 'ಅಡ್ಡ ಬೀಳುತ್ತಿದ್ದೆವು'
................ಮುಂದುವರೆಯುವುದು
No comments:
Post a Comment