Friday, February 27, 2015

ಮರಣಕ್ಕೆ ಮುನ್ನ ನಕ್ಕ ಅಪ್ಪಯ್ಯ!

ಒಂದು ಸಾಯಂಕಾಲ ಆ ಮೂರಂಕಣದ ಗುಡಿಸಲಿನ ಜಗಲಿ ಎಂಬ ಹೆಸರು ಹೊತ್ತಿದ್ದ ನಡುವಣ ಅಂಕಣದಲ್ಲಿ ಅಪ್ಪಯ್ಯನನ್ನು ಮಲಗಿಸಿದ್ದರು. ಅಲ್ಲಿ ಬೇರೆ ಯಾರೂ ಇರಲಿಲ್ಲ. ಅವರ ಪಾದಗಳೆಡೆ ಕುಳಿತು ದುಃಖಾರ್ತೆಯಾಗಿದ್ದ ನನ್ನ ಅವ್ವ ಏನೇನನ್ನೊ ಮೆಲ್ಲಗೆ ಹೇಳುತ್ತಾ ಕುಳಿತಿದ್ದರು. ತಾಯಿ ಹೇಳುತ್ತಿದ್ದುದು ಅಪ್ಪಯ್ಯನಿಗೆ ಕೇಳಿಸುತ್ತಿತ್ತು. ಆದರೆ ಮಾತು ನಿಂತುಹೋಗಿದ್ದುದರಿಂದ ಯಾವ ಪ್ರತ್ಯುತ್ತರದ ಪ್ರತಿಕ್ರಿಯೆಯನ್ನು ತೋರಿಸಲಾಗುತ್ತಿರಲಿಲ್ಲ. ಆದರೂ ಅವರು ಪ್ರಜ್ಞಾವಂತರಾಗಿ ಕಣ್ಣು ತೆರೆದು ನೋಡುತ್ತಿದ್ದರು. ನಾನು ಬಹುಶಃ ಹೊರಗೆ ಆಟಕ್ಕೆ ಹೋಗುವವನು, ಅವ್ವ ಕರೆದುದರಿಂದಲೊ ಏನೊ ಸರಿಯಾಗಿ ನೆನಪಿಲ್ಲ, ಅವ್ವನ ಪಕ್ಕದಲ್ಲಿ ಅಪ್ಪಯ್ಯನ ಪಾದದೆಡೆ ನಿಂತು ಜ್ವರತಪ್ತರಾಗಿ ಶೀರ್ಣವಾಗಿ ಮೂಕವಾಗಿದ್ದ ಅಪ್ಪಯ್ಯನ ಮುಖದ ಕಡೆ ನೋಡುತ್ತಾ ಇದ್ದೆ. ಅಪ್ಪಯ್ಯ ನನ್ನನ್ನೇ ನೋಡುತ್ತಾ ಮೌನವಾಗಿ ಮಲಗಿದ್ದರು. ಇದ್ದಕ್ಕಿದ್ದ ಹಾಗೆ ಅವರ ಮುಖ ಪ್ರಸನ್ನವಾಯಿತು; ಮುಗುಳು ನಗೆಯ ಅಲೆ ತುಟಿಗಳೆಡೆ ಸಂಚರಿಸಿತು. ಯಾವುದೋ ಅತ್ಯಂತ ಸುಖದ, ಸಂತೋಷದ, ಮಂಗಳಮಯ ದೃಶ್ಯವನ್ನು ಅವಲೋಕಿಸಿದವರಂತೆ ಅವರ ಮುಖ ಹರ್ಷಕಾಂತಿಯಿಂದ ದೀಪ್ತವಾಯಿತು. ಅದುವರೆಗೂ ನಾಲಗೆ ಬಿದ್ದುಹೋಗಿ ಮೂಕರಾಗಿದ್ದವರು ಆನಂದ ತಾಡಿತರಾದವರಂತೆ ನಗತೊಡಗಿದರು. ಆ ನಗೆಗೆ ದುರ್ಬಲವಾಗಿ ಎಲುಬುಚರ್ಮವಾಗಿದ್ದ ಅವರ ಮೈ ಕುಲುಕುತಿತ್ತು! ಯಾತಕ್ಕೆ ನಕ್ಕರೋ ಏನೋ ನಮಗೆ ತಿಳಿಯದಿದ್ದರೂ ಅದು ಸಂತೋಷದಿಂದ ಉಂಟಾದುದು ಎಂದು ಅವ್ವನಿಗೂ ಆಸೆ ಅಂಕುರಿಸಿತು, ಬಹುಶಃ ರೋಗ ವಿಮುಖವಾಗುವ ಸೂಚನೆ ಇರಬಹುದು ಎಂದು!
ಆದರೆ ಆ ನಗೆ, ಆ ಹರ್ಷ ಅವ್ವ ಊಹಿಸಿದಂತೆ ರೋಗವಿಮುಖತೆಗೆ ಮುನ್ಸೂಚನೆಯಾಗಿರಲಿಲ್ಲವೆಂಬುದು ಆ ರಾತ್ರಿಯೆ ಗೊತ್ತಾಯಿತು:
ನಮ್ಮ ತಂದೆ ತಾವು ಸಾಯುವ ಮುನ್ನ ನನ್ನ ಕಡೆ ನೋಡುತ್ತಾ ಏನೋ ತುಂಬ ಹರ್ಷದಾಯಕವಾದುದನ್ನು ಕಂಡಂತೆ ಸಂತೋಷಾತಿಶಯದಿಂದ ನಕ್ಕ ಆ ಚಿತ್ರ ನನ್ನ ಜೀವಮಾನವನ್ನೆಲ್ಲ ಬೆಂಬತ್ತಿ ಬಂದಿದೆ. ಏಕೆ ನಕ್ಕರು? ನನ್ನ ಮುಖದಲ್ಲಿ ಅವರಿಗೆ ಹರ್ಷದಾಯಕ ಮಿಂಚಿತು, ಶಾರೀರಿಕವಾಗಿ ಮಾನಸಿಕವಾಗಿ ಅವರಿದ್ದ ದುಃಸ್ಥಿತಿಯಲ್ಲಿ ಹಾಗೆ ನಗಲು ಸಾಧ್ಯವೇ ಇರಲಿಲ್ಲ. ಹಾಸ್ಯ ಪ್ರಚೋದನೆಗೂ ಅಲ್ಲಿ ಯಾವ ಕಾರಣವೂ ಇರಲಿಲ್ಲ; ತಮ್ಮ ಮಗನ ಮಂಗಲಮಯ ಭವಿಷ್ಯತ್ತಿನ, ಲೋಕೋತ್ತರ ಅಭ್ಯುದಯ ನಿಃಶ್ರೇಯಸಗಳ ಸಕೃದ್ದರ್ಶನವೇನಾದರೂ ಆಯಿತೆ? ಅಥವಾ ತಾವು ತಮ್ಮ ಮರಣಾನಂತರ ಆ ಮಗನಿಗೇ ಮಗನಾಗಿ ಹುಟ್ಟಿ, ಆ ಅವನ ಅಭ್ಯುದಯ ನಿಃಶ್ರೇಯಸಗಳಲ್ಲಿ ಪಾಳುಗೊಂಡು, ದೇಶವಿದೇಶಗಳಲ್ಲಿ ಉದ್ಯಮಿಯಾಗಿ ಸಂಚರಿಸುವ ಚಿತ್ರವೇನಾದರೂ ಗೋಚರವಾಯಿತೆ? ಅಂತಹುದೇ ಆದ ಒಂದು ದುರಂತ ಸನ್ನಿವೇಶದಲ್ಲಿ ಸುಮಾರು ಹನ್ನೆರಡು ವರ್ಷಗಳ ತರುವಾಯ, ಪ್ರಾಣತ್ಯಾಗ ಮಾಡುವ ಮುನ್ನ ನಮ್ಮ ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರೂ ಮೈಲಿಯಾಗಿ ಆಗತಾನೆ ಗುಣಗೊಳ್ಳುತ್ತಿದ್ದ ನನ್ನನ್ನು ಕುರಿತು ಆಡಿದ ಮಾತುಗಳೂ ನಮ್ಮ ತಂದೆಯ ನಗೆಯಷ್ಟೇ ರಹಸ್ಯಾರ್ಥಪೂರ್ಣವಾಗಿದ್ದು, ಮುಂದೆ ಸಾರ್ಥಕಗೊಂಡುದನ್ನು ನೆನೆದರೆ, ಸಾಯುವ ಮುನ್ನ ನಮ್ಮ ತಂದೆಗೆ ಕಂಡದ್ದು 'ಭವಿಷ್ಯದ್ದರ್ಶನ’ವೆಂದೇ ನಂಬೇಕಾಗುತ್ತದೆ. ಆ ಮಟ್ಟಿಗಾದರೂ ಅವ್ವ ತಿರುಪತಿ ದೇವರಿಗೆ ಮುಡಿಪು ಕಟ್ಟಿ ಬೇಡಿಕೊಂಡದ್ದು ಸಾರ್ಥಕವಾಯಿತೊ ಏನೊ!
ಮಧ್ಯರಾತ್ರಿಯಾಗಿತ್ತೆಂದು ತೋರುತ್ತದೆ. ಹುಡುಗರು ನಾವೆಲ್ಲ ಮಲಗಿ ನಿದ್ದೆ ಹೋಗಿದ್ದೆವು. ಇದ್ದಕ್ಕಿದ್ದ ಹಾಗೆ ಏನೋ ಆದಂತಾಗಿ ಬೆಚ್ಚಿಬಿದ್ದು ಎಚ್ಚರಗೊಂಡೆ: ಅಳು, ರೋದನ, ಗೋಳಾಟದಿಂದ ಮನೆ ತುಂಬಿಹೋಗಿತ್ತು! ಜೊತೆ ಮಲಗಿದ್ದ ಹುಡುಗರೂ ಎದ್ದರು! ಅವರೂ ಅಳುತ್ತಾ ನನ್ನಂತೆಯೆ ಬಾಗಿಲೆಡೆಗೆ ನುಗ್ಗಿದರು. ಗುಡಿಸಲಿನ ನಡುವಣ ಅಂಕಣದಲ್ಲಿ ನನ್ನ ತಾಯಿ ಗೋಳಾಡುತ್ತಿದ್ದರು, ಏನೇನನ್ನೊ ಹೇಳಿಕೊಳ್ಳುತ್ತಾ. ನಮ್ಮ ದೊಡ್ಡಚಿಕ್ಕಪ್ಪಯ್ಯನವರೂ ಅಯ್ಯೋ ಎಂದು ಅಳುತ್ತಿದ್ದರು. ನಡೆದ ಸಂಗತಿಯ ಅರಿವೂ ಸ್ಪಷ್ಟವಾಗಿರದಿದ್ದರೂ, ಬಾಯಿಗೆ ನೀರು ಬಿಡುವುದೇ ಮುಂತಾದವುಗಳಿಂದ ನನಗೆ ಹೊಳೆಯಿತು, ಅಪ್ಪಯ್ಯ ನಮ್ಮನ್ನಗಲಿ ಹೋಗುತ್ತಿದ್ದಾರೆ ಎಂದು. ಅಷ್ಟರಲ್ಲಿ ಮೋಸಸ್ ಮೇಷ್ಟರು ತಮ್ಮ ಅಧಿಕಾರವಾಣಿಯಿಂದ ಗದರಿಸಿ ನಮ್ಮನ್ನೆಲ್ಲ ಕೋಣೆಗೆ ಹಿಂತಿರುಗಿ ಹಾಸಿಗೆಯಲ್ಲಿ ಮಲಗುವಂತೆ ಮಾಡಿದರು. ನಾನು ಅಳುತ್ತಲೇ ಇದ್ದೆ. ತಂದೆಯ ಸಾವಿನ ಪೂರ್ಣ ಅರ್ಥವಾಗಿ ನಾನು ಅಳುತ್ತಿದ್ದೆನೋ ಅಥವಾ ನನ್ನ ತಾಯಿ ಗೋಳಾಡುತ್ತಿದ್ದುದರಿಂದ ಅಳುತ್ತಿದ್ದೆನೋ ಈಗ ಸರಿಯಾಗಿ ಹೇಳಲಾರೆ.
ದೊಡ್ಡ ಚಿಕ್ಕಪ್ಪಯ್ಯ ರೋದಿಸುತ್ತಿದ್ದುದನ್ನು ನೋಡಿ ಮೋಸಸ್ ಮೇಷ್ಟರು "ಏನು ಗೌಡರೆ? ನೀವೆ ಹೀಗೆ ರೋದಿಸಿದರೆ ಹೇಗೆ?" ಎಂಬರ್ಥದ ಮಾತುಗಳನ್ನಾಡಿ ಸಮಾಧಾನ ಮಾಡಲು ಹೋದಾಗ ಅವರು "ಅಯ್ಯೋ, ಮೇಷ್ಟರೆ, ಇದ್ದೊಬ್ಬ ಅಣ್ಣನನ್ನು ಕಳಕೊಂಡೆನಲ್ಲಾ ಇನ್ನು ಎಲ್ಲಿಂದ ತರಲಿ ಅಂಥಾ ಅಣ್ಣನನ್ನು?" ಎಂಬರ್ಥದ ಮಾತುಗಳನ್ನಾಡಿದುದು ನನಗೆ ಕೇಳಿಸಿತ್ತು.

ಮರುದಿನ ಬೆಳಿಗ್ಗೆ, ಕಾಯಿಲೆ ಸುದ್ದಿಯನ್ನು ಕೇಳಿ, ನೋಡಿ ಹೋಗಲು ತೀರ್ಥಹಳ್ಳಿಗೆ ಬಂದಿದ್ದ ನಾಲ್ಕಾರು ನಂಟರು ಬೆರೆದರುರೂ ಬಂದಿದ್ದರು. ಕಳೇಬರವನ್ನು ಗಾಡಿಯಲ್ಲಿ ದೋಣಿಗಂಡಿಗೆ ಸಾಗಿಸಿ, ದೋಣಿಯಲ್ಲಿ ಆಚೆಗೆ ಕೊಂಡೊಯ್ದರು. ತಂದೆಯ ಶವವಿದ್ದ ಗಾಡಿಯಲ್ಲಿಯೆ ಅವರ ಪಾದದೆಡೆ ಕುಳಿತು ತಾಯಿ ದುಃಖಿಸುತ್ತಿದ್ದರು. ನಾನೂ ನನ್ನ ತಂಗಿಯರಿಬ್ಬರೂ ಇತರ ಹುಡುಗರೊಡನೆ ಮತ್ತೊಂದು ಗಾಡಿಯಲ್ಲಿ ಹಿಂಬಾಲಿಸಿದೆವು. ದೊಡ್ಡವರೆಲ್ಲ, ದೇವಂಗಿ ರಾಮಣ್ಣಗೌಡರೂ ಸೇರಿ, ನಡೆದೇ ಬಂದರು ಕುಪ್ಪಳಿಗೆ. ಗಾಡಿ ಸುಡುಗಾಡಿನ ಬಳಿಯ ಕೂಡುಹಟ್ಟಿಯ ಹತ್ತಿರ ರಸ್ತೆಯಲ್ಲಿ ನಿಂತಿತು. ಅಷ್ಟರಲ್ಲಿ ಮನೆಯ ಅಮ್ಮದಿರೆಲ್ಲ ಅಲ್ಲಿ ನೆರೆದಿದ್ದರು. (ಹೆಣವನ್ನು ಮನೆಗೆ ಕೊಂಡೊಯ್ಯಲಿಲ್ಲ) ಒಬ್ಬೊಬ್ಬರಾಗಿ ಬಂದು ಅಪ್ಪಯ್ಯನ ಕಳೇಬರವನ್ನು ನೋಡಿ ಗೋಳಿಟ್ಟರು. ಅವ್ವನನ್ನೂ ಸಂತೈಸಲು ಯತ್ನಿಸಿದರು. ಹುಡುಗರಾಗಿದ್ದ ನಮ್ಮನ್ನೆಲ್ಲ ಮನೆಗೆ ಹೋಗಿ ಎಂದು ಕಳುಹಿಸಿಬಿಟ್ಟರು. ನಾನೂ ನನ್ನ ತಂಗಿಯರಿಬ್ಬರೂ ಅಳುತ್ತಲೆ ಮನೆಯನ್ನು ಸೇರಿ, ಜಗಲಿಯ ಕೆಸರು ಹಲಗೆಯ ಮೇಲೆ ಕುಳಿತು ಬಿಕ್ಕಿ ಬಿಕ್ಕಿ ಅತ್ತೆವು. ಅಂಗಳದಲ್ಲಿದ್ದ ತುಳಸೀಕಟ್ಟೆಯ ಕಲ್ಲಿನ ದೇವರು ಕಲ್ಲಾಗಿಯೆ ಕುಳಿತಿತ್ತು.
***
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ, ದೊಡ್ಡಣ್ಣ ಹೆಗ್ಗಡೆಯ ಶವವನ್ನು ತೀರ್ಥಹಳ್ಳಿಯಿಂದ ಗಾಡಿಯಲ್ಲಿ, ಹಳೆಮನೆ ಶ್ಮಶಾಣಕ್ಕೆ ತಂದ ಸನ್ನಿವೇಶದ ವರ್ಣನೆಯಲ್ಲಿ ಮೇಲಿನ ಘಟನೆಯ ಛಾಯೆಯನ್ನು ಸಹೃದಯರು ಕಾಣಬಹುದಾಗಿದೆ


ಮರಣಕ್ಕೂ ಮುನ್ನ ಜೋರಾಗಿ ನಕ್ಕ ತಂದೆ!

ಒಂದು  ಸಾಯಂಕಾಲ ಆ ಮೂರಂಕಣದ ಗುಡಿಸಲಿನ ಜಗಲಿ ಎಂಬ ಹೆಸರು ಹೊತ್ತಿದ್ದ ನಡುವಣ ಅಂಕಣದಲ್ಲಿ ಅಪ್ಪಯ್ಯನನ್ನು ಮಲಗಿಸಿದ್ದರು. ಅಲ್ಲಿ ಬೇರೆ ಯಾರೂ ಇರಲಿಲ್ಲ. ಅವರ ಪಾದಗಳೆಡೆ ಕುಳಿತು ದುಃಖಾರ್ತೆಯಾಗಿದ್ದ ನನ್ನ ಅವ್ವ ಏನೇನನ್ನೊ ಮೆಲ್ಲಗೆ ಹೇಳುತ್ತಾ ಕುಳಿತಿದ್ದರು. ತಾಯಿ ಹೇಳುತ್ತಿದ್ದುದು ಅಪ್ಪಯ್ಯನಿಗೆ ಕೇಳಿಸುತ್ತಿತ್ತು. ಆದರೆ ಮಾತು ನಿಂತುಹೋಗಿದ್ದುದರಿಂದ ಯಾವ ಪ್ರತ್ಯುತ್ತರದ ಪ್ರತಿಕ್ರಿಯೆಯೆನ್ನು ತೋರಿಸಲಾಗುತ್ತಿರಲಿಲ್ಲ. ಆದರೂ ಅವರು ಪ್ರಜ್ಞಾವಂತರಾಗಿ ಕಣ್ಣು ತೆರೆದು ನೋಡುತ್ತಿದ್ದರು. ನಾನು ಬಹುಶಃ ಹೊರಗೆ ಆಟಕ್ಕೆ ಹೋಗುವವನು, ಅವ್ವ ಕರೆದುದರಿಂದಲೊ ಏನೊ ಸರಿಯಾಗಿ ನೆನಪಿಲ್ಲ, ಅವ್ವನ ಪಕ್ಕದಲ್ಲಿ ಅಪ್ಪಯ್ಯನ ಪಾದದೆಡೆ ನಿಂತು, ಜ್ವರತಪ್ತರಾಗಿ ಶೀರ್ಣವಾಗಿ ಮೂಕವಾಗಿದ್ದ ಅಪ್ಪಯ್ಯನ ಮುಖದ ಕಡೆ ನೋಡುತ್ತಾ ಇದ್ದೆ. ಅಪ್ಪಯ್ಯ ನನ್ನನ್ನೇ ನೋಡುತ್ತಾ ಮೌನವಾಗಿ ಮಲಗಿದ್ದರು. ಇದ್ದಕ್ಕಿದ್ದ ಹಾಗೆ ಅವರ ಮುಖ ಪ್ರಸನ್ನವಾಯಿತು; ಮುಗುಳು ನಗೆಯ ಅಲೆ ತುಟಿಗಳೆಡೆ ಸಂಚರಿಸಿತು. ಯಾವುದೋ ಅತ್ಯಂತ ಸುಖದ, ಸಂತೋಷದ, ಮಂಗಳಮಯ ದೃಶ್ಯವನ್ನು ಅವಲೋಕಿಸಿದವರಂತೆ ಅವರ ಮುಖ ಹರ್ಷಕಾಂತಿಯಿಂದ ದೀಪ್ತವಾಯಿತು. ಅದುವರೆಗೂ ನಾಲಗೆ ಬಿದ್ದುಹೋಗಿ ಮೂಕರಾಗಿದ್ದವರು ಆನಂದ ತಾಡಿತರಾದವರಂತೆ ನಗತೊಡಗಿದರು. ಆ ನಗೆಗೆ ದುರ್ಬಲವಾಗಿ ಎಲುಬುಚರ್ಮವಾಗಿದ್ದ ಅವರ ಮೈ ಕುಲುಕುತ್ತಿತ್ತು! ಯಾತಕ್ಕೆ ನಕ್ಕರೋ ಏನೋ ನಮಗೆ ತಿಳಿಯದಿದ್ದರೂ ಅದು ಸಂತೋಷದಿಂದ ಉಂಟಾದುದು ಎಂದು ಅವ್ವನಿಗೂ ಆಸೆ ಅಂಕುರಿಸಿತು, ಬಹುಶಃ ರೋಗ ವಿಮುಖವಾಗುವ ಸೂಚನೆ ಇರಬಹುದು ಎಂದು!
ಆದರೆ ಆ ನಗೆ, ಆ ಹರ್ಷ ಅವ್ವ ಊಹಿಸಿದಂತೆ ರೋಗವಿಮುಖತೆಗೆ ಮುನ್ಸೂಚನೆಯಾಗಿರಲಿಲ್ಲವೆಂಬುದು ಆ ರಾತ್ರಿಯೆ ಗೊತ್ತಾಯಿತು:


ಮಧ್ಯರಾತ್ರಿಯಾಗಿತ್ತೆಂದು ತೋರುತ್ತದೆ. ಹುಡುಗರು ನಾವೆಲ್ಲ ಮಲಗಿ ನಿದ್ದೆ ಹೋಗಿದೆವು. ಇದ್ದಕ್ಕಿದ್ದ ಹಾಗೆ ಏನೋ ಆದಂತಾಗಿ ಬೆಚ್ಚಿಬಿದ್ದು ಎಚ್ಚರಗೊಂಡೆ: ಅಳು, ರೋದನ, ಗೋಳಾಟದಿಂದ ಮನೆ ತುಂಬಿಹೋಗಿತ್ತು! ಜೊತೆ ಮಲಗಿದ್ದ ಹುಡುಗರೂ ಎದ್ದರು! ಅವರೂ ಅಳುತ್ತಾ ನನ್ನಂತೆಯೆ ಬಾಗಿಲೆಡೆಗೆ ನುಗ್ಗಿದರು. ಗುಡುಸಲಿನ ನಡುವಣ ಅಂಕಣದಲ್ಲಿ ನನ್ನ ತಾಯಿ ಗೋಳಾಡುತ್ತಿದ್ದರು, ಏನೇನನ್ನೊ ಹೇಳಿಕೊಳ್ಳುತ್ತಾ. ನಮ್ಮ ದೊಡ್ಡಚಿಕ್ಕಪ್ಪಯ್ಯನವರೂ ಅಯ್ಯೋ ಎಂದು ಅಳುತ್ತಿದ್ದರು. ನಡೆದ ಸಂಗತಿಯ ಅರಿವೂ ಸ್ಪಷ್ಟವಾಗಿರದಿದ್ದರೂ, ಬಾಯಿಗೆ ನೀರು ಬಿಡುವುದೇ ಮುಂತಾದವುಗಳಿಂದ ನನಗೆ ಹೊಳೆಯಿತು, ಅಪ್ಪಯ್ಯ ನಮ್ಮನ್ನಗಲಿ ಹೋಗುತ್ತಿದ್ದಾರೆ ಎಂದು. ಅಷ್ಟರಲ್ಲಿ ಮೋಸಸ್ ಮೇಷ್ಟರು ತಮ್ಮ ಅಧಿಕಾರವಾಣಿಯಿಂದ ಗದರಿಸಿ ನಮ್ಮನ್ನೆಲ್ಲ ಕೋಣೆಗೆ ಹಿಂತಿರುಗಿ ಹಾಸಿಗೆಯಲ್ಲಿ ಮಲಗುವಂತೆ ಮಾಡಿದರು. ನಾನು ಅಳುತ್ತಲೇ ಇದ್ದೆ. ತಂದೆಯ ಸಾವಿನ ಪೂರ್ಣ ಅರ್ಥವಾಗಿ ನಾನು ಅಳುತ್ತಿದ್ದೆನೋ ಅಥವಾ ನನ್ನ ತಾಯಿ ಗೋಳಾಡುತ್ತಿದ್ದುದರಿಂದ ಅಳುತ್ತಿದ್ದೆನೋ ಈಗ ಸರಿಯಾಗಿ ಹೇಳಲಾರೆ.
ದೊಡ್ಡ ಚಿಕ್ಕಪ್ಪಯ್ಯ ರೋದಿಸುತ್ತಿದ್ದುದನ್ನು ನೋಡಿ ಮೋಸಸ್ ಮೇಷ್ಟರು ’ಏನು ಗೌಡರೆ? ನೀವೆ ಹೀಗೆ ರೋದಿಸಿದರೆ ಹೇಗೆ?’ ಎಂಬರ್ಥದ ಮಾತುಗಳ್ನನಾಡಿ ಸಮಾಧಾನ ಮಾಡಲು ಹೋದಾಗ ಅವರು ’ಅಯ್ಯೋ, ಮೇಷ್ಟರೆ, ಇದ್ದೊಬ್ಬ ಅಣ್ಣನನ್ನು ಕಳಕೊಂಡೆನಲ್ಲಾ ಇನ್ನು ಎಲ್ಲಿಂದ ತರಲಿ ಅಂಥಾ ಅಣ್ಣನನ್ನು?’ ಎಂಬರ್ಥದ ಮಾತುಗಳನ್ನಾಡಿದುದೂ ನನಗೆ ಕೇಳಿಸಿತು.
***
ಮರಣಶಯ್ಯೆಯಲ್ಲಿದ್ದ ತಂದೆ ಮಗನ ಕಡೆ ನೋಡಿ ಜೋರಾಗಿ ನಕ್ಕ ಸನ್ನಿವೇಶಕ್ಕೆ ಕವಿಯ ಪ್ರತಿಕ್ರಿಯೆ:
ನಮ್ಮ ತಂದೆ ತಾವು ಸಾಯುವ ಮುನ್ನ ನನ್ನ ಕಡೆ ನೋಡುತ್ತಾ ಏನೋ ತುಂಬ ಹರ್ಷದಾಯಕವಾದುದನ್ನು ಕಂಡಂತೆ ಸಂತೋಷಾತಿಶಯದಿಂದ ನಕ್ಕ ಆ ಚಿತ್ರ ನನ್ನ ಜೀವಮಾನವನ್ನೆಲ್ಲ ಬೆಂಬತ್ತಿ ಬಂದಿದೆ. ಏಕೆ ನಕ್ಕರು? ನನ್ನ ಮುಖದಲ್ಲಿ ಅವರಿಗೆ ಹರ್ಷದಾಯಕವಾಗುವಂತೆ ಯಾವ ’ದರ್ಶನ’ ಮಿಂಚಿತು, ಶಾರೀರಕವಾಗಿ ಮಾನಸಿಕವಾಗಿ ಅವರಿದ್ದ ದುಸ್ಥಿತಿಯಲ್ಲಿ ಹಾಗೆ ನಗಲು ಸಾಧ್ಯವೇ ಇರಲಿಲ್ಲ. ಹಾಸ್ಯ ಪ್ರಚೋದನೆಗೂ ಅಲ್ಲಿ ಯಾವ ಕಾರಣವೂ ಇರಲಿಲ್ಲ; ತಮ್ಮ ಮಗನ ಮಂಗಲಮಯ ಭವಿಷ್ಯತ್ತಿನ, ಲೋಕೋತ್ತರ ಅಭ್ಯುದಯ ನಿಃಶ್ರೇಯಸಗಳ ಸಕೃದ್ದರ್ಶನವೇನಾದರೂ ಆಯಿತೆ? ಅಥವಾ ತಾವು ತಮ್ಮ ಮರಣಾನಂತರ ಆ ಮಗನಿಗೇ ಮಗನಾಗಿ ಹುಟ್ಟಿ, ಆ ಅವನ ಅಭ್ಯುದಯ ನಿಃಶ್ರೇಯಸಗಳಲ್ಲಿ ಪಾಲುಗೊಂಡು, ದೇಶವಿದೇಶಗಳಲ್ಲಿ ಉದ್ಯಮಿಯಾಗಿ ಸಂಚರಿಸುವ ಚಿತ್ರವೇನಾದರೂ ಗೋಚರವಾಯಿತೆ? ಅಂತಹುದೇ ಆದ ಒಂದು ದುರಂತ ಸನ್ನಿವೇಶದಲ್ಲಿ ಸುಮಾರು ಹನ್ನೆರಡು ವರ್ಷಗಳ ತರುವಾಯ, ಪ್ರಾಣತ್ಯಾಗ ಮಾಡುವ ಮುನ್ನ ನಮ್ಮ ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರೂ ಮೈಲಿಯಾಗಿ ಆಗತಾನೆ ಗುಣಗೊಳ್ಳುತ್ತಿದ್ದ ನನ್ನನ್ನು ಕುರಿತು ಆಡಿದ ಮಾತುಗಳೂ ನಮ್ಮ ತಂದೆಯ ನಗೆಯಷ್ಟೇ ರಹಸ್ಯಾರ್ಥಪೂರ್ಣವಾಘಿದ್ದು, ಮುಂದೆ ಸಾರ್ಥಕಗೊಂಡುದನ್ನು ನೆನೆದರೆ, ಸಾಯುವ ಮುನ್ನ ನಮ್ಮ ತಂದೆಗೆ ಕಂಡದ್ದು ’ಭವಿಷ್ಯದ್ದರ್ಶನ'ವೆಂದೇ ನಂಬಬೇಕಾಗುತ್ತದೆ. ಆ ಮಟ್ಟಿಗಾದರೂ ಅವ್ವ ತಿರುಪತಿ ದೇವರಿಗೆ ಮುಡಿಪು ಕಟ್ಟಿ ಬೇಡಿಕೊಂಡದ್ದು ಸಾರ್ಥಕವಾಯಿತೊ ಏನೊ!

Tuesday, February 10, 2015

ಮರಣದೆಡೆಗೆ ಮುಖ ಮಾಡಿದ ಅಪ್ಪಯ್ಯ!

ಗಾಡಿ ತಡೆಯುವ ಸುದ್ದಿ ಇನ್ನೊಂದು ತರಹದ ದುರಂತಕ್ಕೆ ಪರಿಣಾಮಕಾರಿಯಾಯಿತು. ಅಪ್ಪಯ್ಯನ ಕಿವಿಗೆ ಆ ಸುದ್ದಿ ಬಿದ್ದು ಅವರು ಅಸ್ಥಿರರಾದರು. ಮನೆಯ ಡಾಗೀನು ಯಾವುದನ್ನೂ ಸಾಗಿಸುತ್ತಿರಲಿಲ್ಲವಾದ್ದರಿಂದ ಆ ವಿಚಾರವಾಗಿ ಅವರಿಗೆ ದಿಗಿಲಾಗಲಿಲ್ಲ. ಆದರೆ ಒಬ್ಬರು ಗಾಡಿ ತಡೆದು, ಇನ್ನೊಬ್ಬರು ಕೋವಿ ಹಾರಿಸಿ, ಏನು ಅನಾಹುತವಾಗುತ್ತದೆಯೊ ಎಂದು ಹೆದರಿ ಅಶಂಕೆಯಿಂದ ಉದ್ವಿಗ್ನರಾದ ಅವರು ಜ್ವರದಲ್ಲಿಯೆ ಕೊಡೆಹಿಡಿದುಕೊಂಡು ದೋಣಿಗಂಡಿಗೆ ಹೋಗಿ ಅಲ್ಲಿಯ ಅಶ್ವತ್ಥಕಟ್ಟೆಯ ಮೇಲೆ ಕುಪ್ಪಳಿಯಿಂದ ಬರುವ ಗಾಡಿಯನ್ನು ನಿರೀಕ್ಷಿಸುತ್ತಾ ಕುಳಿತರು. ಆಗಾಗ ಮಳೆ ಬೀಳುತ್ತಿತ್ತು; ಶಿತಗಾಳಿ ಭರ್ರನೆ ಹೊಳೆಕಡೆಯಿಂದ ಬೀಸುತ್ತಿತ್ತು. ಇವರಿಗೆ ಜ್ವರ ಏರಿತ್ತು. ಬೆಳಿಗ್ಗೆ ಹನ್ನೊಂದು ಹನ್ನೆರಡು ಗಂಟೆಯವರೆಗೆ ಕಾದು ನಿರಾಶರಾಗಿ ಹಿಂತಿರುಗಿ ಬಂದು, ತುಸು ಪಥ್ಯ ಸ್ವೀಕರಿಸಿ ಮಲಗಿದರು. ಅವರ ಮನಸ್ಸು ಅಶಂಕೆಯ ತಾಂಡವರಂಗವಾಘಿತ್ತು. ಮತ್ತೆ ಎದ್ದು ಸುಮಾರು ಎರಡು ಗಂಟೆಯ ಹೊತ್ತಿಗೆ ದೋಣಿಗಂಡಿಗೆ ಹೋಗಿ ಕೂತು ಬೈಗಿನವರೆಗೂ ಕಾದರು ಗಾಡಿ ಬರಲಿಲ್ಲ. ಅವರಿಗೆ ಅದುವರೆಗೂ ಯಾವುದು ಗಾಳಿ ಸಉದ್ದಿಯಾಗಿತ್ತೋ ಅದು ಈಗ ನಿಜವಾಗಿ ತೋರತೊಡಗಿ ತುಂಬ ಅಧೀರರಾದರು. ಯಾರ ಕೈಲಿ ಹೇಳುವುದು? ಯಾರನ್ನು ಕಳಿಸುವುದು ನೋಡಿಬರಲು? ನಾವೆಲ್ಲ ಚಿಕ್ಕಮಕ್ಕಳು! ಅಂತೂ ತುಂಬ ನಿಃಶಕ್ತರಾಗಿ ಆಯಾಸದಿಂದಲೂ ಹತಾಶೆಯಿಂದಲೂ ಕುಗ್ಗಿ ಕತ್ತಲಾದ ಮೇಲೆ ಮಳೆಗಾಳಿಗಳ ಮಧ್ಯೆ ಮನೆಗೆ ಬಂದರು!
ಮತ್ತೆ ಮರುದಿನವೂ ದೋಣಿಗಂಡಿಗೆ ಗಾಡಿಗಾಗಿ ಕಾಯಲು ಹೋಗುತ್ತಿದದ್ರೋ ಏನೊ? ಆದರೆ ಜ್ವರ ಏರಿ, ಕೆಮ್ಮು, ಕಫ ಹೆಚ್ಚಿ, ನಿತ್ರಾಣವಾಗಿ, ಹಾಸಗೆಯಿಂದ ಏಳಲಾರದೆ ಮಲಗಿಬಿಟ್ಟರು.
ಅಂತೂ ಮರುದಿನ ಐಯ್ಯಪ್ಪ ಚಿಕ್ಕಪ್ಪಯ್ಯ ನನ್ನ ತಾಯಿತಂಗಿಯರನ್ನು ತೀರ್ಥಹಳ್ಳಿಗೆ ಕರೆತಂದುಬಿಟ್ಟರು. ಅಪ್ಪಯ್ಯಗೆ ಕಾಯಿಲೆ ವಿಷಮಿಸಿದ್ದನ್ನು ನೋಡಿ ಔಷಧಿಪಥ್ಯಗಳ ಏರ್ಪಾಡನ್ನೂ, ನಮ್ಮ ಮನೆಮೇಷ್ಟರಾಗಿದ್ದ ಶ್ರೀಯುತ ಮೋಸಸ್ ಅವರೊಡಗೂಡಿ, ಮಾಡತೊಡಗಿದರು. ಕಾಯಿಲೆ ದಿನದಿನಕ್ಕು ವಿಷಮಿಸುತ್ತಾ ಹೋಯಿತು. ಆಮೇಲೆ ಮಾತನಾಡುವ ಶಕ್ತಿ ಕುಂದುತ್ತಾ ಹೋಗಿ, ನಾಲಗೆಯೆ ಬಿದ್ದುಹೋಯಿತು. ಪ್ರಜ್ಞೆ ಬಂದಾಗ ಏನನ್ನಾದರೂ ಹೇಳಲು ಪ್ರತ್ನಿಸಿ ಸನ್ನೆ ಮಾಡುತ್ತಿದ್ದರಷ್ಟೆ!
ಜನರ ಸಂಚಾರ ಕ್ಲಿಷ್ಟವಾಗಿ, ವಾಹನ ಸೌಕರ್ಯಗಳೂ ಅಭಾವವಾಗಿದ್ದು ಅದರಲ್ಲಿಯೂ ಮಳೆಗಾಲ ಹಿಡಿದಿದ್ದ ಆ ಸಮಯದಲ್ಲಿ ನಮ್ಮ ತಂದೆಯ ಕಾಯಿಲೆಯ ಸುದ್ದಿ ದೂರದೂರದ ಹಳ್ಳಿಗಳಲ್ಲಿ ಬೇಸಾಯದಲ್ಲಿ ತೊಡಗಿದ್ದ ಬಂಧುವರ್ಗಕ್ಕೆ ತಲುಪುವುದು ಬಹಳ ತಡವೇ ಆಯತೆಂದು ತೋರುತ್ತದೆ. ಅಂತೂ ಕುಪ್ಪಳಿ ವೆಂಕಟಪ್ಪಗೌಡರು ತೀರ್ಥಹಳ್ಳಿಉಯಲ್ಲಿ ಈಗಲೊ ಆಗಲೊ ಎಂಬಂತೆ ಕಾಯಿಲೆ ಬಿದ್ದಿದ್ದಾರಂತೆ ಎಂಬ ವಾರ್ತೆ ಇತರರಿಗೆಂತೊ ಅಂತೆಯೆ ಹೀಲಿಕೇರಿಗೂ ತಲುಪಿ ದೊಡ್ಡಚಿಕ್ಕಪ್ಪಯ್ಯನೂ ಬಂದರು. ಬಂದವರು ತುಂಬಾ ದಿಗಿಲುಗೊಂಡು ಪಶ್ಚತ್ತಪ್ತರಾದರು. ಇಷ್ಟು ವಿಷಮಕ್ಕೆ ಏರಿದೆ ಎಂದು ಅವರು ಎಣಿಸಿರಲಿಲ್ಲ. ಡಾಕ್ಟರುಗಳನ್ನು ಕರೆತಂದತರು. ಆಗ ತೀರ್ಥಹಳ್ಳಿಯಲ್ಲಿ, ಔಷಧಿ ಮಾರಾಟಮಾಡುವವರನ್ನೂ ಡಾಕ್ಟರುಗಳೆಂದೆ ಭಾವಿಸಿದ್ದರು ಜನ. ಷರಾಯಿ ಬೂಟು, ಹ್ಯಾಟು ಹಾಕಿ ಕೊರಳಿಗೆ ಸ್ಟೆಥಾಸ್ಕೋಪನ್ನು ತಗುಲಿಸಿಕೊಂಡಿದ್ದವರೊಬ್ಬರು ಬಂದು ಏನೇನೊ ಮಾಡಿಹೋದರು. ಹುಡುಗನಾಗಿದ್ದ ನಾನು ಕಾಯಿಲೆ ಸಾವಿನಲ್ಲಿ ಪರಿಣಮಿಸುತ್ತದೆ ಎಂದು ನಂಬಿರಲಿಲ್ಲ. ಅದರಲ್ಲಿಯೂ ದೊಡ್ಡ ಚಿಕ್ಕಪ್ಪಯ್ಯ, ಡಾಕ್ಟರು, ಐಯ್ಯಪ್ಪ ಚಿಕ್ಕಪ್ಪಯ್ಯ, ಸ್ವತಃ ನಮ್ಮ ಭಯಕ್ಕೇ ಕಾರಣರಾಗಿದ್ದ ಮೋಸಸ್ ಮೇಷ್ಟರು ಇವಬರೆಲ್ಲ ಇರುವಾಗ ಕಾಯಿಲೆ ಗುಣವಾಘದೆ ಇರುತ್ತದೆಯೆ ಎಂಬ ಅಣಗುಕೆಚ್ಚು. ಜೊತೆಗೆ, ಬೇರೆ ಯಾರೂ ಇಲ್ಲದಿರುವಾಗ, ಶೋಕಾಕುಲೆಯಾಘಿದ್ದ ನನ್ನ ತಾಯಿ ನಾಲಗೆ ಬಿದ್ದು ಹೋಗಿ ಮಾತಾಡಲಾರದಿದ್ದ ತನ್ನ ಸ್ವಾಮಿಯ ಬಳಿ ಕುಳಿತು ಪರಿತಪಿಸುತ್ತಾ, ಧರ್ಮಸ್ಥಳ ತಿರುಪತಿ ಇತ್ಯಾದಿ ದೇವರುಗಳಿಗೆ ತನ್ನ ದೈನ್ಯವನ್ನು ಹೇಳಿಕೊಂಡು, ಮೂರುಕಾಸು ಆರುಕಾಸುಗಳನ್ನು ನಮ್ಮ ತಂದೆಗೆ ’ಸುಳಿಸಿ’ ಅಂದರೆ ಪ್ರದಕ್ಷಿಣೆ ಬರಿಸಿ, ತನ್ನ ಜೀವನದೇವತೆಗೆ ಗುಣವಾದರೆ ಬೆಳ್ಳಿಸರಿಗೆ ಮಾಡಿಸಿ ಹಾಕುವುದಾಗಿ ಹೇಳಿಕೊಳ್ಳುತ್ತಿದ್ದುದನ್ನು ಕಂಡಾಗ ನನಗೂ ಧೈರ್ಯವಾಗುತ್ತಿತ್ತು, ಇಂಥಾ ಭಕ್ತೆಯಾಗಿರುವ ನನ್ನ ಅವ್ವನ ಅಹವಾಲನ್ನು ದೇವರುಗಳು ಮನ್ನಿಸದೆ ಇರುತ್ತಾರೆಯೆ ಎಂದು!