Monday, April 6, 2015

'ರೊಟ್ಟಿರಾಹು' ಬಿಡಿಸಿದ ಅಮ್ಮಂದಿರು!

ನಾನು ’ರೊಟ್ಟಿ’ ಎಂದರೆ ತುಂಬಾ ಬೇಗುತ್ತಿದ್ದೆ. ಊಟಕ್ಕೆ ಕುಳಿತಿದ್ದಾಗ, ಇತರ ಮಕ್ಕಳಿಗಿಂತಲೂ ಹೆಚ್ಚು ರೊಟ್ಟಿ ಬೇಕು ಎಂದು ರಂಪ ಮಾಡುತ್ತಿದ್ದೆ. (’ರೊಟ್ಟಿ’ ಎಂದರೆ ಮಲೆನಾಡಿನ ರೊಟ್ಟಿ. ಅನ್ನ ಮತ್ತು ಅಕ್ಕಿಹಿಟ್ಟು ಕಲಸಿ ನುರಿದು, ಎರಡು ಕೈಗಳಿಂದಲೂ ಚಪ್ಪಾಳೆ ಹೊಡೆದಂತೆ ತಟ್ಟಿ ಹೆಂಚಿನ ಮೇಲೆ ಬೇಯಿಸಿ, ಕಡೆಗೆ ಒಲೆಯ ಕೆಂಡದ ಮೇಲೆ ಸುಡುತ್ತಿದ್ದ ಪದಾರ್ಥ!)

ಮನೆಯ ಅಮ್ಮಂದಿರೆಲ್ಲ ಸೇರಿ ನನಗೆ ’ರೊಟ್ಟಿರಾಹು’ ಮಸಲತ್ತು ಮಾಡಿದರು! ಆ ವಿನೋದದಲ್ಲಿ ನನ್ನ ಅವ್ವನೂ ಭಾಗಿಯಾದರು. ಒಂದು ದಿನ ಕಾಫಿ ಕುಡಿಯುತ್ತಿದ್ದಾಗ ಒಬ್ಬ ಅಮ್ಮ ಕೇಳಿದರು “ಪುಟದಟೂ, ಎಷ್ಟು ಬೇಕಾದರೂ ರೊಟ್ಟಿಕೊಡುತ್ತೇನೆ, ನೀನು ಅಷ್ಟನ್ನೂ ತಿನ್ನುವುದಾಗಿ ಮಾತು ಕೊಟ್ಟರೆ” ಎಂದು. ನನಗೆ ಬಹಳ ಖಷಿ, ’ಓಹೋ!’ ಎಂದು ಸಮ್ಮತಿಸಿ ಸವಾಲು ಹಾಖಿದೆ. “ಎಷ್ಟು ತಿನ್ನುತ್ತೀಯಾ?” ”ಎಷ್ಟು ಬೇಕಾದರೂ!” “ಹತ್ತು?” “ಅಯ್ಯೊ ಹತ್ತು ಯಾವ ಮೂಲೆಗೆ? ಹನ್ನೆರಡು!” ಎಂದೆ. “ಸುಳ್ಳೋ ಬದ್ದೋ?” ಎಂದು ಮೂದಲಿಕೆಯ ಧ್ವನಿಯಲ್ಲಿ ನನ್ನ ಮಾತಿನ ಸತ್ಯತೆಯನ್ನು ಪ್ರಶ್ನಿಸಿದರು. “ದೇವರಾಣೆಗೂ” ಎಂದೇ ಬಿಟ್ಟೆ! ಆಗ ನಮಗೆ ದೇವರು, ಆಣೆ ಈ ವಿಚಾರಗಳಲ್ಲಿ ಇದ್ದದ್ದು ಅತ್ಯಂತ ಲಘು ಭಾವನೆಯಷ್ಟೆ!!
“ಹಾಗದರೆ, ನಾಳೆ ಮಧ್ಯಾಹ್ನದ ಕಾಫಿಗೆ?”
“ಓಹೋ! ಅದಕ್ಕೇನಂತೆ?” ಎಂದು ಸಮ್ಮತಿಸಿದೆ.
ನನಗೆ ಆ ದಿನವೆಲ್ಲ ಎಂದಿಗೆ ನಾಳೆ ಬರುತ್ತದೆಯೆ? ಎಂದಿಗೆ ಬೇಗ ಆ ದಿನ ಮಧ್ಯಾಹ್ನವಾಘುತ್ತದೆಯೆ? ಎಂದು ಅವಸರವೇ ಅವಸರ ಮನಸ್ಸಿನಲ್ಲಿ.
ಈ ಸುದ್ದಿ ನನ್ನ ಜೊತೆಯ ಹುಡುಗರಿಗೆಲ್ಲ ಮುಟ್ಟಿತು! ಕೆಲವರಿಗೆ ಖುಷಿ! ಕೆಲವರಿಗೆ ಆಶ್ಚರ್ಯ! ಕೆಲವರಿಗೆ ಕರುಬು! ಕೆಲವರು ನನಗೆ ಸೂಚನೆ ಇತ್ತರು “ಬರಿಯ ರೊಟ್ಟಿಗೆ ಏಕೆ ಒಪ್ಪಿದೆಯೋ ಜೊತೆಗೆ ತುಪ್ಪ, ಚಟ್ನಿ ಕೇಳಬೇಕೊ ಬೇಡವೋ ಬರೀಬೆಪ್ಪು!” ಎಂದುಬಿಟ್ಟರು.
“ಬರೀ ರೊಟ್ಟಿ ಯಾರಾದರೂ ತಿನ್ನುತ್ತಾರೆಯೆ? ತುಪ್ಪ ಚಟ್ನಿ ಹಾಕದೆ ಇದ್ದರೆ ಪಂತದಲ್ಲಿ ಅವರೇ ಸೋತ ಹಾಗೆ! ನಾನು ತಿಂದರೆ ತಾನೆ? ಅಷ್ಟೇ ಅಲ್ಲ. ಒಂದೊಂದು ರೊಟ್ಟಿಗೆ ಎಷ್ಟು ತುಪ್ಪ ಚಟ್ನಿ ಹಾಖುತ್ತಾರೋ ಹನ್ನೆರಡು ರೊಟ್ಟಿಗೂ ಹನ್ನೆರಡರಷ್ಟು ಚಟ್ನಿ ತುಪ್ಪ ಹಾಕಲೇಬೇಕು” ಎಂದು ವಾದಿಸಿದೆ.
ಅಷ್ಟು ರೊಟ್ಟಿ ತುಪ್ಪ ಚಟ್ನಿಗಳನ್ನು ತಿನ್ನುವುದರಲ್ಲಿ ನನಗೆ ಶಂಕೆ ಇರಲಿಲ್ಲ. ನನ್ನ ಗಣಿತ ಮತ್ತು ತರ್ಕಗಳು ಅತ್ಯಾಶೆಯ ಬಕಾಸುರಕ್ಷೇತ್ರಕ್ಕೆ ಸೇರಿದವಾಗಿದ್ದುವು. ನನ್ನ ಧೈರ್ಯ ಎಂತಹ ಮೂರ್ಖವಾದದ ಮೇಲೆ ನಿಂತಿತ್ತು ಎಂದರೆ: ನಾನು ದಿನವೂ ಉಣ್ಣುವ ಅನ್ನ -ಸಾರನ್ನ, ಮಜ್ಜಿಗೆಯನ್ನ -ಗಾಥ್ರದಲ್ಲಿ ಇಷ್ಟಿರುತ್ತದೆ. ಅದರ ಪಕ್ಕದಲ್ಲಿ ಹನ್ನೆರಡು ರೊಟ್ಟಿ ರಾಶಿಯಾಗಿಟ್ಟರೆ ಅದಕ್ಕಿಂತಲೇನು ದೊಡ್ಡದಾಗಿರುವುದಲ್ಲ. ಆದ್ದರಿಂದ ಸುಲಭವಾಗಿ ಗೆಲ್ಲುತ್ತೇನೆ! ರೊಟ್ಟಿಯ ಸಾಂದ್ರತೆಯ ವಿಚಾರದ ಭೌತಶಾಸ್ತ್ರ ನನ್ನ ಬಳಿಗಿನ್ನೂ ಸುಳಿದಿರಲಿಲ್ಲ. ಆಸೆಯ ತರ್ಕದಲ್ಲಿ ಸಾಮರ್ಥ್ಯ ವಿಧೇಯನಾದ ಅನುಯಾಯಿಯಾಗಿಬಿಟ್ಟಿತ್ತು?
ಮರುದಿನ ಬಂದಿತು. ಬುದ್ಧಿಗೆ ಏನಾದರೂ ವಿವೇಕವಿದ್ದಿದ್ದರೆ ಸ್ಪರ್ಧೆಗೆ ತಕ್ಕಮಟ್ಟಿನ ಸಿದ್ಧತೆಯ ಪ್ರಯತ್ನವನ್ನಾದರೂ ಮಾಡುತ್ತಿತ್ತು. ಬೆಳಗಿನ ಕಾಫಿ ತಿಂಡಿ ತಿನ್ನುವುದನ್ನಾದರೂ ತಿಂದು ಕುಡಿಯಬಹುದಾಗಿತ್ತು. ಉಹ್ಞು! ಅಪರಾಹ್ನ ಒದಗುವ ರೊಟ್ಟಿ ರಾಶಿಯ ಭೋಗದ ಉತ್ಸಾಹದಲ್ಲಿ ಪುಷ್ಕಳವಾಗಿಯೆ ಕಬಳಿಸಿದ್ದೆ!
ಅಪರಾಹ್ನ ನಮ್ಮನ್ನೆಲ್ಲ ಕಾಫಿಗೆ ಕರೆದಾಗ ಇತರ ಮಕ್ಕಳಿಗೆ ದಿನವೂ ಕೊಡುವಂತೆ ರೊಟ್ಟಿ ತುಪ್ಪ ಚಟ್ನಿ ಕೊಟ್ಟು ಕಳಿಸಿದರು. ನನಗೊಬ್ಬನಿಗೇ ಮಣೆ ಹಾಕಿ ಕೂರಿಸಿ ಅಗಲವಾದ ಬಾಳೆಯ ಎಲೆಯನ್ನು -ಬಾಡಿಸಿದ ದೊಡ್ಡ ಕುಡಿಬಾಳೆಯೆಲೆ! ಊಟಕ್ಕೂ ಸಾಕಾಗುವಷ್ಟು! -ಹಾಸಿ, ರೊಟ್ಟಿ ಕುತ್ತುರೆ ಹಾಕಿದರು! ಪಕ್ಕದಲ್ಲಿಯೆ ಗಟ್ಟಿತುಪ್ಪದ ದೊಡ್ಡ ಉಂಡೆ! ಅದಕ್ಕೆ ಬಳಿಯೆ ಚಟ್ನಿಯ ಸಣ್ಣದೊಂದು ಗುಡ್ಡೆ! ನನಗೆ ಆನಂದವೊ ಆನಂದ! ಎಂದಾದರೂ, ಹುಡುಗರು ಯಾರಾದತರೂ, ಸ್ವಲ್ಪ ಜಾಸ್ತಿ ಬೇಕು ಎಂದು ಕೇಳಿದರೆ, ಬೈದೊ ಗುದ್ದಿಯೊ ತಲೆ ಮೇಲೆ ಕುಟ್ಟಿಯೊ ನಿರಾಕರಿಸುತ್ತಿದ್ದವರು ಈವೊತ್ತು ನನಗೆ ಎಷ್ಟು ಧಾರಾಳವಾಗಿ ನೀಡುತ್ತಿದ್ದಾರೆ! ಆ ದೃಶ್ಯವನ್ನು ಕೆಲವು ಅಮ್ಮಂದಿರು ದೂರದೀರದ ಮೂಲೆಗಳಲ್ಲಿ ನಿಂತು ನೋಡುತ್ತಾ ಬಾಯಿಮುಚ್ಚಿಕೋಂಡು ನಗುತ್ತಿದ್ದರೆಂದು ತೋರುತ್ತದೆ.
ನನ್ನ ಗೆಲುವಿನ ವಿಚಾರದಲ್ಲಿ ನನಗೆ ಇನಿತೂ ಸಂಶಯವಿರಲಿಲ್ಲ. ಅಂತಃಪುರದ ಹೆಂಗಳೆಯರ ಎದುರಿನ ಉತ್ತರಕುಮಾರನಂತೆ ನಾನು “ಅರ್ಜುನ ಧೈರ್ಯ”ದಿಂದಲೆ ಕಾಳಗಕ್ಕೆ ಇಳಿದೆ. ರೊಟ್ಟಿಯ ತುಂಡು ಮುರಿದು ತುಪ್ಪದ ಮತ್ತು ಚಟ್ನಿಯ ಗುಡ್ಡೆಗಳಿಗೆ ಠೀವಿಯಿಂದ ಅದ್ದಿ, ಆದಷ್ಟು ತುಪ್ಪ ಚಟ್ನಿಗಳು ರೊಟ್ಟಿ ತುಂಡಿನ ವಶವಾಗುವಂತೆ ಮಾಡಿ, ಅಗಲವಾಗಿ ಬಾಯಿ ಕಳೆದು ತೂರಿಸಿ, ಕೆನ್ನೆಯುಬ್ಬಿಸಿ ಅಗಿದು ತಿನ್ನಲಾರಂಭಿಸಿದೆ. ಕಾಲುಭಾಗ ರೊಟ್ಟಿ ಮುಗಿಯುವುದರೊಳಗೆ ಕಾಫಿ ಕೇಳಿದೆ. “ರೊಟ್ಟಿ ತಿನ್ನು ಆಮೇಲೆ ಕಾಫಿ ಕುಡಿಯಬಹುದಂತೆ” ಎಂದಾಗ ಅದಕ್ಕೊಪ್ಪಲಿಲ್ಲ. ನಾನು ಕೇಳಿದಷ್ಟು ತುಪ್ಪ ಚಟ್ನಿ ಕೊಟ್ಟಂತೆ ಕಾಪಿಯನ್ನೂ ಕೊಡಲೇಬೇಕೆಂದು ವಾದಿಸಿದೆ. ನನ್ನ ಪರಾಭವಕ್ಕೆ ನಾನೆ ಕಂದಕ ಅಗೆದುಕೊಳ್ಳುತ್ತಿದ್ದೇನೆಂದು ಚೆನ್ನಾಗಿ ತಿಳಿದ ಆ ಅಮ್ಮ ಮುಗುಳುನಗುತ್ತಾ ಕಾಫಿ ಪಾತ್ರೆಯನ್ನೇ ತಂದಿಟ್ಟು ಬೇಕಾದಷ್ಟನ್ನು ಲೋಟಕ್ಕೆ ಬೊಗಗಿಸಿಕೊಳ್ಳಲು ಹೇಳಿ ಮತ್ತೆ ಒಲೆಸರಕ್ಕೆ ರೊಟ್ಟಿ ತಟ್ಟಿ ಬೇಯಿಸಲು ಹೋಗಿ ಕುಳಿತರು. ಒಂದು ರೊಟ್ಟಿ ಅರ್ಧ ಮುಗಿಯುವ ವೇಳೆಗೆ ತುಪ್ಪ ಚಟ್ನಿ ಅರ್ಧಕ್ಕಿಂತಲೂ ಹೆಚ್ಚು ಖರ್ಚಾಗಿತ್ತು. ದೂರದಿಂದ ನೋಡುತ್ತಿದ್ದ ಯಾರೋ ಒಬ್ಬರು ಅಮ್ಮ ಸಲಹೆಕೊಟ್ಟರು, ಹುಡುಗನ ಮೇಲೆ ‘ಪಾಪ!’ ಎಂಬ ಕರುಣೆಯಿಂದ: “ಅಷ್ಟು ಚಟ್ನೀ ತಿನ್ನಬ್ಯಾಡೋ, ಮುಖಾಮುರೀತದೆ!”. ಆದರೆ ನಾನು ಆ ಸಕಹೆಗೆ ತಪ್ಪು ಅರ್ಥ ಮಾಡಿ, ನನ್ನನು ವಂಚಿಸುವುದಕ್ಕಾಗಿಯೆ ಹಾಗೆ ಹೇಳುತ್ತಿದ್ದಾರೆ ಎಂಬ ಲೋಭಬುದ್ಧಿಯಿಂದ ಅವರ ಹಿತವಾದವನ್ನು ತಿರಸ್ಕರಿಸಿ, ಹಟಮಾಡಿ, ಮತ್ತಷ್ಟು ತುಪ್ಪ ಚಟ್ನಿ ಹಾಕಿಸಿಕೊಂಡೇಬಿಟ್ಟೆ!
ಒಂದು ರೊಟ್ಟಿ ಪೂರೈಸಿತು. ಇನ್ನೂ ಹತ್ತೊಹನ್ನೊಂದೊ ರೊಟ್ಟಿ ರಾಶಿಯಾಗಿ ಎದುರಿಗೆ ನಿಂತಿವೆ, ದಂಡಿನಂತೆ! ನನ್ನ ಮುಖ ಸ್ವಲ್ಪ ಪೆಚ್ಚಾಯಿತು. ಆಗಲೇ ಹೊಟ್ಟೆ ತುಂಬಿಹೋದಂತಿತ್ತು! ಕುರುಸೇನೆಯನ್ನು ಎದುರುಗೊಂಡ ಉತ್ತರಕುಮಾರನಂತಾಗಿ ನನ್ನ ದೃಷ್ಟಿ ಬೆಬ್ಬಳಿಸಿತು, ಇದಿರೆ ನಿಂತು ಮೂದಲಿಸುತ್ತಿದ್ದ ರೊಟ್ಟಿಸಂಕುಲವನ್ನು ನೋಡಿ! “ಬಿಟ್ಟುಗಿಟ್ಟು ಹೋಗೀಯಾ ಮತ್ತೆ!” ಎಂದು ರೊಟ್ಟಿ ಸುಡುತ್ತಿದ್ದ ಅಮ್ಮ ತಮ್ಮ ಪಕ್ಕದಲ್ಲಿಟ್ಟುಕೊಂಡಿದ್ದ ನೆಕ್ಕಿಕೋಲನ್ನು ನೆಲಕ್ಕೆ ಬಡಿದು ಎಚ್ಚರಿಕೆ ಕೊಟ್ಟರು.
“ಅಷ್ಟೊಂದು ತುಪ್ಪ ಚಟ್ನಿ ಕಾಫಿ ಎಲ್ಲ ಕೊಟ್ಟಿದ್ದು ಯಾಕೆ? ನಾನು ಅವನ್ನೆಲ್ಲ ತಿಂತೀನಿ ಅಂತಾ ಪಂತ ಕಟ್ಟಿದ್ನೇನು? ಅವೇ ಹೊಟ್ಟೆ ತುಂಬಿಬಿಟ್ಟಿವೆ!” ಎಂದು ದೂರಿದೆ.
“ನೀನೆ ಹಾಕಿ ಹಾಕಿ ಅಂತಾ ಇಕ್ಕಿಸಿಕೊಂಡದ್ದು! ನಾನೆ ಹೇಳಲಿಲ್ಲೇನು ಬ್ಯಾಡಾ ಸಾಕೂ ಅಂತಾ” ಎಂದು ಅಣುಕುದನಿಯಲ್ಲಾಡಿದರು ಆ ಅಮ್ಮ.
ಮತ್ತೆ, ಸೋಲೊಪ್ಪಿಕೊಳ್ಳದ ಛಲಮನಸ್ಸು ’ಮರಳಿ ಯತ್ನವ ಮಾಡು’ವ ದೃಢ ಸಂಕಲ್ಪದಿಂದ ರೊಟ್ಟಿಗೆ ಕೈಹಾಕಿತು. ತುಪ್ಪ ಚಟ್ನಿಗಳಿಗೆ ಅದ್ದಿ ಬಾಯಿಗೆ ಹಾಕಿಕೊಂಡು ಮುಕಕಿಮುಕ್ಕಿ ಅಗಿದು ನುಂಗಿದೆ. ಈಗಾಗಲೆ ರುಚಿಯ ಅಂಶ ಹಿಂದಾಗಿ ಹಟದ ಅಂಶದ ಮೇಲೆಯೆ ನಾಲಗೆ ಹಲ್ಲುಗಳು ಕೆಲಸ ಮಾಡುತ್ತಿದ್ದುವು!
ಹೇಗೋ ಏನೊ ಅಂತೂ ಭಗೀರಥ ಪ್ರಯತ್ನ ಸದೃಶ ಬಕಾಸುರ ಪ್ರಯತ್ನ ಮಾಡಿ ಒಂದೂವರೆ ರೊಟ್ಟಿಯನ್ನು ಮುಗಿಸುವ ಹೊತ್ತಿಗೆ ಹಲ್ಲು ನಾಲಿಗೆ ಹೊಟ್ಟೆ ಮನಸ್ಸು ಎಲ್ಲ ಸುಸ್ತಾಗುವಂತೆ ಭಾಸವಾಗಿ ವಿಮೋಚನೋಪಾಯಕ್ಕಾಗಿ ಮುಂದೇನು ಮಾಡನೇಕೆಂದು ಯೋಚಿಸತೊಡಗಿದೆ.
ಮಾಣಿಗೆಯತ್ತ ತೆರೆದಿದ್ದ ಬಾಗಿಲ ಕಡೆ ಅಭೀಷ್ಟಕ ದೃಷ್ಟಿ ಬೀರಿದೆ. ಮಾಣಿಗೆ ದಾಟಿದರೆ ಜಗಲಿಗೆ ತೆರೆಬಿದ್ದ ಬಾಗಿಲು, ಅಲ್ಲಿಂದ ಮುಂದೆ ಅಂಗಳ, ಹೆಬ್ಬಾಗಿಲು!
ಪಕ್ಕದಲ್ಲಿದ್ದ ಕಾಫಿಯನ್ನು ಗೊಟಗೊಟನೆ ಕುಡಿದೆ. ರೊಟ್ಟಿ ಸುಡುತ್ತಿದ್ದ ಅಮ್ಮ ಒಲೆಯ ಕೆಂಡದ ಮೇಲೆ ರೊಟ್ಟಿ ತಿರುಗಿಸುತ್ತಿದ್ದರು; ಮತ್ತೊಂದು ರೊಟ್ಟಿ ಹೆಂಚಿನ ಮೇಲೆ ಬೇಯುತ್ತಿತ್ತು. ಇನ್ನೊಂದು ರೊಟ್ಟಿ ಎಡಗೈ ಅಂಗೈಮೇಲೆ ಅರ್ದಸೃಷ್ಟಿಯಾಗಿ ಅಗಲಕ್ಕೆ ತಟ್ಟಿಸಿಕೊಳ್ಳಲು ವರ್ತುಕವಾಗಿ ಕಾಯ್ದಿತ್ತು. ಕೈ ಮನಸ್ಸು ಕಣ್ಣು ಎಲ್ಲವೂ ಕಾರ್ಯಮಗ್ನವಾಗಿದ್ದುವು. ಇದೇ ಸುಸಮಯ ಎಂದು ನಿರ್ಣಯಿಸಿದೆ. ಕೈ ಎಂಜಲಾಗಿದೆ, ಬಾಯಿ ತೊಳೆಯಬೇಕು ಎಂಬೆಲ್ಲ ಸಂಪ್ರದಾಯದ ದಾಕ್ಷಿಣ್ಯದಗಳನ್ನೂ ಆಚೆಗೆ ದಬ್ಬಿ, ಚಂಗನೆ ನೆಗೆದೆದ್ದು, ಮಾಣಿಗೆಯಿಂದ ಜಗಲಿಗೆ ನುಗ್ಗಿ, ಅಂಗಳಕ್ಕೆ ಹಾರಿ, ಹೆಬ್ಬಾಗಲಿನಿಂದ ಜೊತೆಯ ಗೆಳೆಯರು ಆಡುತ್ತಿದ್ದ ಕಣಕ್ಕೆ ಓಡಿದೆ! ಅಮ್ಮ ತಲೆಯೆತ್ತಿ ನೋಡಿದಾಗ ಖಾಲಿ ಮಣೆ, ಬಾಳೆಯೆಲೆಯ ಮೇಲೆ ಸ್ವಲ್ಪ ಅಸ್ತವ್ಯಸ್ತಾವಸ್ಥೆಯಲ್ಲಿದ್ದ ಹತ್ತೂವರೆ ರೊಟ್ಟಿಗಳು ಅವರ ನೋಟಕ್ಕೆ ಮೂದಲಿಕೆಯಾಗಿ ಬಿದ್ದಿದ್ದುವು.
“ಹಿಡುಕೊಳ್ರೋ! ಹಿಡುಕೊಳ್ರೋ! ಪುಟ್ಟು ಓಡಿದ!” ಎಂಬ ಅವರ ಕರೆಗೆ ಇತರ ಅಮ್ಮಂದಿರ ನಗೆಯೆ ಮಾರುತ್ತರವಾಗಿತ್ತು!!