Monday, February 2, 2015

ನನ್ನ ಮಗನ್ನ ಚೆನ್ನಾಗಿ ಓದಿಸ್ತೀನಿ!

ಬೇಸಿಗೆ ರಜಕ್ಕೆ ನಾವೆಲ್ಲ ಮನೆಗೆ ಬಂದಿದ್ದೆವು. ಇನ್ನನು ರಜ ಮುಗಿಯುವುದರಲ್ಲಿದೆ. ನಮ್ಮ ಮನಸ್ಸು, ರಜ ಮುಗಿದು ಒಂದೆರಡು ದಿನಗಳಾದ ಮೇಲೆಯೇ ಹೋದರಾಯಿತು ಎಂದು. ಆದರೆ ಒಂದು ದಿನ ಅಪ್ಪಯ್ಯ ಹೇಳಿದರು ಹುಡುಗರಿರಾ, ನಾಳೆ ತೀರ್ಥಹಳ್ಳಿಗೆ ಹೊರಡೋಣರೊ ನಾನೂ ಬರ್‍ತೀನಿ.

ಸಾಧಾರಣವಾಗಿ ನಾವೆಲ್ಲ ತೀರ್ಥಹಳ್ಳಿಗೆ ಹೋಗುವಾಗ ನಮ್ಮ ಕಮಾನು ಗಾಡಿ ಸಿದ್ಧವಾಗುತ್ತಿತ್ತು. ಆದರೆ ಆವೊತ್ತು ಗಾಡಿ ಕಟ್ಟಿಸಲಿಲ್ಲ. ’ಅಪ್ಪಯ್ಯ’ನ ಜೊತೆ ಆ ದಿನ ತೀರ್ಥಹಳ್ಳಿಗೆ ಹೊರಟವರು ನಾಔಉ ಮೂವರು. ನಾಣು, ಮಾನಪ್ಪ, (ಬಸಪ್ಪಗೌಡರ ಎರಡನೆಯ ಮಗ.) ಕಡೇಮಕ್ಕಿ ಸುಬ್ಬಣ್ಣ. ’ಅಪ್ಪಯ್ಯ’ನೊಡನೆ ಕಾಲು ನಡಿಗೆಯಲ್ಲಿಯೆ ತುಂಬ ಉಲ್ಲಾಸಿದಂದ ಹೊರಟೆವು. ’ಅಪ್ಪಯ್ಯ’ನೂ ನಗುತ್ತಾ ಹಾಸ್ಯ ಮಾಡುತ್ತಾ, ಬೆಲ್ಲಾ ಕದ್ದವರಾರಯ್ಯ?’ ಎಂದು ರಾಗವಾಗಿ ಹಾಡಿ ನಮ್ಮನ್ನು ನಗಿಸುತ್ತಾ, (ತೀರ್ಥಹಳ್ಳಿಯ ನಮ್ಮ ಹುಲ್ಲುಗುಡಿಸಿಲಿನ ಮನೆಯಲ್ಲಿ, ಅಟ್ಟದ ಮೇಲೆ ಡಬ್ಬದಲ್ಲಿಟ್ಟಿರುತ್ತಿದ್ದ ಬೆಲ್ಲವನ್ನು ನಾವೆಲ್ಲ ಕದಿಯಲು ಮಸಲತ್ತು ಮಾಡಿದೆವು. ಆ ಸಾಹಸಕ್ಕೆ ಮುಂದಾಳಾಗಿ ಅಟ್ಟ ಏರಿದವನು ಮಾನಪ್ಪ. ಅಂಗಿ ಜೇಬುಗಳೆಲ್ಲ ಭರಿಯಾದ ಮೇಲೆಯೂ ಕದ್ದ ಇನ್ನಷ್ಟನ್ನು ಎಲ್ಲಿ ಬಚ್ಚಿಟ್ಟುಕೊಳ್ಲುವುದು ಎಂಬುದು ಅವನಿಗೆ ತೋರದೆ, ಗಾಬರಿಯಲ್ಲಿ ಕಟ್ಟಿದ್ದ ಕೌಪೀನದೊಳಗೆ ಅದನ್ನೆಲ್ಲ ತೂರಿಸಿಬಿಟ್ಟಿದ್ದನ್ನು! ಅಟ್ಟದಿಂದ ಇಳಿಯುವಾಗ ಸದ್ದಾಗಿ ಕಳ್ಳ ಸಿಕ್ಕಿಬಿದ್ದನು! ಜೇಬಿನಲ್ಲಿಟ್ಟಿದ್ದ ಬೆಲ್ಲವನ್ನೇನೊ ಕಿತ್ತುಕೊಂಡರು. ಆದರೆ ಲಂಗೋಟಿಯ ಒಳಗಿದ್ದುದನ್ನು ಥೂ ಎಂದು ಬಿಟ್ಟುಬಿಟ್ಟರು. ಅದನ್ನು ಉಳಿದ ಹುಡುಗರೂ ಅಸಹ್ಯಪಟ್ಟುಕೊಂಡು ತೆಗೆದುಕೊಳ್ಳಲೊಪ್ಪಲಿಲ್ಲ. ಕಡೆಗೆ ಅದಷ್ಟಾದರೂ ಕಳ್ಳನಿಗೇ ದಕ್ಕಿಬಿಟ್ಟಿತು! ಆ ಸಂದರ್ಭವನ್ನೇ ’ಅಪ್ಪಯ್ಯ’ ಗುರಿಮಾಡಿ ಮಾನಪ್ಪನನ್ನು ಲೇವಡಿ ಮಾಡಿ ನಮ್ಮನ್ನೆಲ್ಲ ನಗಿಸಿದ್ದು!) ಒಂಬತ್ತು ಮೈಲಲಿಗಳ ಕಾಡುರಸ್ತೆಯನ್ನು ನಮಗೆ ದಣಿವಾಗದ ರೀತಿಯಲ್ಲಿ ಸಾಗಿಸಿಬಿಟ್ಟರು. ಅವರ ಮನಸ್ಸಿನ ಒಳತೋಟಿಯನ್ನಾಗಲಿ, ಅವರ ಹೃದಯದಲ್ಲಿ ಬೆಂಕಿಕಾರುತ್ತಿದ್ದ ಜ್ವಾಲಾಮುಖಿಯ ತಾಪವನ್ನಾಗಲಿ ಒಂದಿನಿತೂ ಸುಳಿವುದೋರಲಿಲ್ಲ. ನಮ್ಮಷ್ಟೇ ಹುಡುಗಾಟಿಕೆಯಾಡುತ್ತಿದ್ದ ಅವರೊಡನೆ ತುಂಗಾನದಿಯ ದೋಣಿಗಂಡಿಯನ್ನು ತಲುಪಿದೆವು. (ಆಗತಾನೆ ಮಳೆ ಪ್ರಾರಂಭವಾಗಿ ಕಲ್ಲುಸಾರ ಮುಚ್ಚಿತ್ತು. ಈಗಿನ ಸೇತುವೆ ಇರಲಿಲ್ಲ.) ಸಣ್ಣ ತುಂತುರು ಮಳೆಯಲ್ಲಿ ತುಸು ನೆನೆಯಲೂ ಬೇಕಾಯಿತು, ದೋಣಿ ಈ ದಡಕ್ಕೆ ಬರುವವರೆಗೆ. ಅಂತೂ ಹೊಳೆ ದಾಟಿ ಕತ್ತಲಾಗುವುದಕ್ಕೆ ಮೊದಲೆ ನಮ್ಮ ’ಮನೆ’ (ಹುಲ್ಲು ಗುಡಿಸಲು) ಸೇರಿಕೊಂಡೆವು. (ರಜಾಕಾಲದಲ್ಲಿ ಒಬ್ಬ ಆಳು ಮಾತ್ರ ಅಲ್ಲಿ ಇರುತ್ತಿದ್ದ. ಅಡುಗೆ ಮಾಡಿಹಾಕಿ ನಮ್ಮನ್ನು ನೋಡಿಕೊಳ್ಳುತ್ತಿದ್ದ, ’ಅಮ್ಮ’ ಮನೆಗೆ ಬಂದುಬಿಟ್ಟಿದ್ದರುಪಳಿ ಮನೆಯಲ್ಲಿ ಹೆತ್ತ ತಾಐಇಯನ್ನು ’ಅವ್ವ’ ಎಂದೂ ಉಳಿದವರನ್ನು ’ಅಮ್ಮ’ ಎಂದೂ ಕರೆಯುತ್ತಿದ್ದುದು ರೂಢಿ)
ನಾವೆಲ್ಲ ತೀರ್ಥಹಳ್ಳಿಗೆ ಹೋಗಿ ನಾಲ್ಕಾರು ದಿನ ಕಳೆದಿರಬಹುದು. ನಮ್ಮ ತಂದೆ ಏನು ಮಾಡುತಿದ್ದರು? ಏಕೆ ನಮ್ಮನ್ನು ತೀರ್ಥಹಳ್ಳಿಗೆ ಬಿಟ್ಟಮೇಲೆ ಎಂದಿನಂತೆ ಹಿಂದಕ್ಕೆ ಕುಪ್ಪಳಿಗೆ ಹೋಗದೆ ಅಲ್ಲಿಯೆ ಇರುತ್ತಿದ್ದರು? ಇದೊಂದನ್ನೂ ನಾನು ಗಮನಿಸಲಿಲ್ಲ, ಇತರ ಹುಡುಗರಂತೆ. ನಾವು ನಮ್ಮದೇ ಪ್ರಪಂಚದಲ್ಲಿ ನಿಶ್ಚಿಂತರಾಗಿ ಇರುತ್ತಿದ್ದೆವು. ಆಗ ತಿಳಿಯದಿದ್ದರೂ ಆಮೇಲೆ ತಿಳಿದುಬಂದುದನ್ನು ಹೇಳುತ್ತೇನೆ: ಅಪ್ಪಯ್ಯ ಮನೆ ಬಿಟ್ಟು ಧುಡುಮ್ಮನೆ ಹೊರಟಿರಲಿಲ್ಲ. ಆಪ್ತರು ನಂಟರಿಷ್ಟರೊಡನೆ ಆಲೋಚನೆ ಮಾಡಿ, ಯಾವ ಉಪಾಯವೂ ತೋರದೆ, ಮನೆಯನ್ನು ತೊರೆಯುವ ನಿರ್ಣಯವನ್ನು ಕೈಕೊಂಡಿದ್ದರು. ಆಗ ನನ್ನ ತಾಯಿಯವರು ನನ್ನ ಇಬ್ಬರು ತಂಗಿಯರೊಡನೆ ಅವರ ತವರು ಮನೆಗೆ ಹಿರಿಕೊಡಿಗೆಗೆ ಹೋಗಿದ್ದರು. ಆದ್ದರಿಂದ ಅವರ ಸಾಂತ್ವನದ ಮತ್ತು ಹಿತವಚನದ ಬೆಂಬಲವೂ ತಂದೆಯವರಿಗೆ ಲಭಿಸಲಿಲ್ಲ.
ಇನ್ನೂ ಜೀವಿಸಿರುವ ವಾಟಗಾರು ಮಂಜಪ್ಪಗೌಡರು ಹೇಳುವಂತೆ, ನಮ್ಮ ತಂದೆಯನ್ನು ಅವರು, ಒಂದೆರಡು ಸಾರಿ, ಮನೆಬಿಟ್ಟು ಹೊರಟವರನ್ನು ಹಡಗಿನ ಮಕ್ಕಿ ಹಾಡ್ಯದಲ್ಲಿ ತಡೆದು ಏನೇನೊ ಸಮಾಧಾನ ಹೇಳಿ ಮನೆಗೆ ಹಿಂದಿರುಗಿಸದ್ದರಂತೆ! ಹೀಗೆ ತುಂಬ ಕರ್ಕಶವಾಗಿದ್ದ ಮನಸ್ಸಿನ ಒಳತೋಟಿಯ ಅನಂತರವೆ ಅವರು ಮನೆಬಿಟ್ಟಿದ್ದರು. ನಾನು ಹಿಂದೆಯೆ ತಿಳಿಸಿರುವಂತೆ ನನ್ನ ತಂದೆ ತುಂಬ ಕೃಶಕಾಯರಾಗಿದ್ದರು. ಇನ್ನಾರಲ್ಲಿಯೂ ನಾಣು ಕಾಣದಿರುತ್ತಿದ್ದ ಅವರ ಕುತ್ತಿಗೆಯ ಸಪುರವನ್ನೂ ಗಂಟಲಿನಿಂದ ದೀರ್ಘವಾಗಿ ಹೊರಚಾಚಿರುತ್ತಿದ್ದ ಗೋಮಾಳೆಯನ್ನೂ ಕಂಡು ಹುಡುಗನಾಗಿದ್ದ ನಾನು ’ಏಕೆ ಹೀಗಿದೆ?’ ಎಂದು ಏನೋ ಒಂದು ತರಹದ ದುಃಖಮಿಶ್ರಿತವಾದ ಬೆರಗನ್ನು ಅನುಭವಿಸುತ್ತಿದ್ದುದು ಈಗಲೂ ನನೆಪಿಗೆ ಬರುತ್ತದೆ. ನಮ್ಮ ಮನೆಯಲ್ಲಿ ಅವರಷ್ಟು ಬಡಕಲಾಗಿ ಯಾರೂ ಇರಲಿಲ್ಲ.
ನಿಜವೊ ಅಲ್ಲವೊ ನನಗೆ ತಿಳಿಯದು. ನಿಜವಲ್ಲ ಎಂದು ಭಾವಿಸುವುದು ನನಗೆ ಹಿತಕರವಾಗಿದೆ. ಏಕೆಂದರೆ ಕುಪ್ಪಳಿಯಂತಹ ದೊಡ್ಡ ಮನೆಯಲ್ಲಿ ಯಜಮಾನಿಕೆ ಮಾಡುತ್ತಿದ್ದು, ಎಲ್ಲರ ಗೌರವಕ್ಕೆ ಭಾಜನವಾಗಿದ್ದು, ಪಟೇಲರೂ ಆಘಿದ್ದ ವೆಂಕಟಪ್ಪಗೌಡರು ತೀರ್ಥಹಳ್ಳಿಯಲ್ಲಿ ಹೋಟೆಲಿಟ್ಟು ಜೀವನಯಾಪನೆ ಮಾಡಲು ನಿಶ್ಚಯಿಸಿದ್ದರು ಎಂದರೆ ನನಗೆ ನಂಬಲಿಕ್ಕಾಗುವುದಿಲ್ಲ. ಮಾತ್ರವಲ್ಲ, ಅವಮಾನಕರವಾಗಿ ಜುಗುಪ್ಸೆಯನ್ನು ಅನುಭವಿಸುವಂತಾಗುತ್ತದೆ. ಬಂದಬಂದ ಎಂಥವರಿಗೆಲ್ಲ ತಿಂಡಿತಟ್ಟೆ ತಂದು ಕೊಡುವ, ಎಲೆ ಹಾಕಿ ಊಟಕ್ಕೆ ಬಡಿಸುವ ನನ್ನ ತಂದೆಯನ್ನು ಊಹಿಸುವುದೂ ನನಗೆ ಅಸಾಧ್ಯ! ಅದರಲ್ಲಿಯೂ ಮುಖ್ಯವಾಗಿ ನನಗೋಸ್ಕರವಾಘಿಯೆ ಹಾಗೆ ಮಾಡಲು ನಿಶ್ಚಯಿಸಿದ್ದರು ಎಂಬುದನ್ನು ನೆನೆದರಂತೂ ನನಗೆ ಅಳು ಬರುತ್ತದೆ.
ಅವರು ಪದೇ ಪದೇ ಹೇಳುತ್ತಿದ್ದರಂತೆ ನನ್ನ ಮಗನ್ನ ಚೆನ್ನಾಗಿ ಓದಿಸ್ತೀನಿ ಎಂದು. ಆ ಗುರಿ ಸಾಧಿಸಬೇಕಾದರೆ ಅವರು ಪೇಟೆಯಲ್ಲಿ ಇರಬೇಕಾಗುತ್ತಿತ್ತು. ಆಗ ಆ ಪ್ರಾಂತಕ್ಕೆಲ್ಲ ಸ್ಕೂಲು ಇದ್ದುದು ತೀರ್ಥಹಳ್ಳಿಯಲ್ಲಿಯೆ. ಪೇಟೆಯಲ್ಲಿದ್ದು ಏನಾದರೂ ಒಂದು ಜೀವನೋಪಾಯದ ಕಸುಬು ಮಾಡಲೇಬೇಕಷ್ಟೆ? ಅವರಿಗೆ ಅತ್ಯಂತ ಸುಲಭವಾಗಿ ಕಂಡದ್ದು ’ಹೊಟಲು’, ಏಕೆಂದರೆ ಅದಕ್ಕೆ ಬೇಕಾದ ಮುಖ್ಯ ಸಾಮಗ್ರಿ ಅಕ್ಕಿ, ಅದನ್ನು ಊರಿಂದ ತರಿಸಿಕೊಳ್ಳಬಹುದು ಎಂದು! ಅಂತೂ ಭಗವಂತ ಬಹುಶಃ ಒಂದು ದುರಂತವನ್ನು ಮತ್ತೊಂದು ದುರಂತದಿಂದಲೆ ನಿವಾರಿಸಿದನೋ ಏನೊ?

No comments: