Friday, February 27, 2015

ಮರಣಕ್ಕೆ ಮುನ್ನ ನಕ್ಕ ಅಪ್ಪಯ್ಯ!

ಒಂದು ಸಾಯಂಕಾಲ ಆ ಮೂರಂಕಣದ ಗುಡಿಸಲಿನ ಜಗಲಿ ಎಂಬ ಹೆಸರು ಹೊತ್ತಿದ್ದ ನಡುವಣ ಅಂಕಣದಲ್ಲಿ ಅಪ್ಪಯ್ಯನನ್ನು ಮಲಗಿಸಿದ್ದರು. ಅಲ್ಲಿ ಬೇರೆ ಯಾರೂ ಇರಲಿಲ್ಲ. ಅವರ ಪಾದಗಳೆಡೆ ಕುಳಿತು ದುಃಖಾರ್ತೆಯಾಗಿದ್ದ ನನ್ನ ಅವ್ವ ಏನೇನನ್ನೊ ಮೆಲ್ಲಗೆ ಹೇಳುತ್ತಾ ಕುಳಿತಿದ್ದರು. ತಾಯಿ ಹೇಳುತ್ತಿದ್ದುದು ಅಪ್ಪಯ್ಯನಿಗೆ ಕೇಳಿಸುತ್ತಿತ್ತು. ಆದರೆ ಮಾತು ನಿಂತುಹೋಗಿದ್ದುದರಿಂದ ಯಾವ ಪ್ರತ್ಯುತ್ತರದ ಪ್ರತಿಕ್ರಿಯೆಯನ್ನು ತೋರಿಸಲಾಗುತ್ತಿರಲಿಲ್ಲ. ಆದರೂ ಅವರು ಪ್ರಜ್ಞಾವಂತರಾಗಿ ಕಣ್ಣು ತೆರೆದು ನೋಡುತ್ತಿದ್ದರು. ನಾನು ಬಹುಶಃ ಹೊರಗೆ ಆಟಕ್ಕೆ ಹೋಗುವವನು, ಅವ್ವ ಕರೆದುದರಿಂದಲೊ ಏನೊ ಸರಿಯಾಗಿ ನೆನಪಿಲ್ಲ, ಅವ್ವನ ಪಕ್ಕದಲ್ಲಿ ಅಪ್ಪಯ್ಯನ ಪಾದದೆಡೆ ನಿಂತು ಜ್ವರತಪ್ತರಾಗಿ ಶೀರ್ಣವಾಗಿ ಮೂಕವಾಗಿದ್ದ ಅಪ್ಪಯ್ಯನ ಮುಖದ ಕಡೆ ನೋಡುತ್ತಾ ಇದ್ದೆ. ಅಪ್ಪಯ್ಯ ನನ್ನನ್ನೇ ನೋಡುತ್ತಾ ಮೌನವಾಗಿ ಮಲಗಿದ್ದರು. ಇದ್ದಕ್ಕಿದ್ದ ಹಾಗೆ ಅವರ ಮುಖ ಪ್ರಸನ್ನವಾಯಿತು; ಮುಗುಳು ನಗೆಯ ಅಲೆ ತುಟಿಗಳೆಡೆ ಸಂಚರಿಸಿತು. ಯಾವುದೋ ಅತ್ಯಂತ ಸುಖದ, ಸಂತೋಷದ, ಮಂಗಳಮಯ ದೃಶ್ಯವನ್ನು ಅವಲೋಕಿಸಿದವರಂತೆ ಅವರ ಮುಖ ಹರ್ಷಕಾಂತಿಯಿಂದ ದೀಪ್ತವಾಯಿತು. ಅದುವರೆಗೂ ನಾಲಗೆ ಬಿದ್ದುಹೋಗಿ ಮೂಕರಾಗಿದ್ದವರು ಆನಂದ ತಾಡಿತರಾದವರಂತೆ ನಗತೊಡಗಿದರು. ಆ ನಗೆಗೆ ದುರ್ಬಲವಾಗಿ ಎಲುಬುಚರ್ಮವಾಗಿದ್ದ ಅವರ ಮೈ ಕುಲುಕುತಿತ್ತು! ಯಾತಕ್ಕೆ ನಕ್ಕರೋ ಏನೋ ನಮಗೆ ತಿಳಿಯದಿದ್ದರೂ ಅದು ಸಂತೋಷದಿಂದ ಉಂಟಾದುದು ಎಂದು ಅವ್ವನಿಗೂ ಆಸೆ ಅಂಕುರಿಸಿತು, ಬಹುಶಃ ರೋಗ ವಿಮುಖವಾಗುವ ಸೂಚನೆ ಇರಬಹುದು ಎಂದು!
ಆದರೆ ಆ ನಗೆ, ಆ ಹರ್ಷ ಅವ್ವ ಊಹಿಸಿದಂತೆ ರೋಗವಿಮುಖತೆಗೆ ಮುನ್ಸೂಚನೆಯಾಗಿರಲಿಲ್ಲವೆಂಬುದು ಆ ರಾತ್ರಿಯೆ ಗೊತ್ತಾಯಿತು:
ನಮ್ಮ ತಂದೆ ತಾವು ಸಾಯುವ ಮುನ್ನ ನನ್ನ ಕಡೆ ನೋಡುತ್ತಾ ಏನೋ ತುಂಬ ಹರ್ಷದಾಯಕವಾದುದನ್ನು ಕಂಡಂತೆ ಸಂತೋಷಾತಿಶಯದಿಂದ ನಕ್ಕ ಆ ಚಿತ್ರ ನನ್ನ ಜೀವಮಾನವನ್ನೆಲ್ಲ ಬೆಂಬತ್ತಿ ಬಂದಿದೆ. ಏಕೆ ನಕ್ಕರು? ನನ್ನ ಮುಖದಲ್ಲಿ ಅವರಿಗೆ ಹರ್ಷದಾಯಕ ಮಿಂಚಿತು, ಶಾರೀರಿಕವಾಗಿ ಮಾನಸಿಕವಾಗಿ ಅವರಿದ್ದ ದುಃಸ್ಥಿತಿಯಲ್ಲಿ ಹಾಗೆ ನಗಲು ಸಾಧ್ಯವೇ ಇರಲಿಲ್ಲ. ಹಾಸ್ಯ ಪ್ರಚೋದನೆಗೂ ಅಲ್ಲಿ ಯಾವ ಕಾರಣವೂ ಇರಲಿಲ್ಲ; ತಮ್ಮ ಮಗನ ಮಂಗಲಮಯ ಭವಿಷ್ಯತ್ತಿನ, ಲೋಕೋತ್ತರ ಅಭ್ಯುದಯ ನಿಃಶ್ರೇಯಸಗಳ ಸಕೃದ್ದರ್ಶನವೇನಾದರೂ ಆಯಿತೆ? ಅಥವಾ ತಾವು ತಮ್ಮ ಮರಣಾನಂತರ ಆ ಮಗನಿಗೇ ಮಗನಾಗಿ ಹುಟ್ಟಿ, ಆ ಅವನ ಅಭ್ಯುದಯ ನಿಃಶ್ರೇಯಸಗಳಲ್ಲಿ ಪಾಳುಗೊಂಡು, ದೇಶವಿದೇಶಗಳಲ್ಲಿ ಉದ್ಯಮಿಯಾಗಿ ಸಂಚರಿಸುವ ಚಿತ್ರವೇನಾದರೂ ಗೋಚರವಾಯಿತೆ? ಅಂತಹುದೇ ಆದ ಒಂದು ದುರಂತ ಸನ್ನಿವೇಶದಲ್ಲಿ ಸುಮಾರು ಹನ್ನೆರಡು ವರ್ಷಗಳ ತರುವಾಯ, ಪ್ರಾಣತ್ಯಾಗ ಮಾಡುವ ಮುನ್ನ ನಮ್ಮ ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರೂ ಮೈಲಿಯಾಗಿ ಆಗತಾನೆ ಗುಣಗೊಳ್ಳುತ್ತಿದ್ದ ನನ್ನನ್ನು ಕುರಿತು ಆಡಿದ ಮಾತುಗಳೂ ನಮ್ಮ ತಂದೆಯ ನಗೆಯಷ್ಟೇ ರಹಸ್ಯಾರ್ಥಪೂರ್ಣವಾಗಿದ್ದು, ಮುಂದೆ ಸಾರ್ಥಕಗೊಂಡುದನ್ನು ನೆನೆದರೆ, ಸಾಯುವ ಮುನ್ನ ನಮ್ಮ ತಂದೆಗೆ ಕಂಡದ್ದು 'ಭವಿಷ್ಯದ್ದರ್ಶನ’ವೆಂದೇ ನಂಬೇಕಾಗುತ್ತದೆ. ಆ ಮಟ್ಟಿಗಾದರೂ ಅವ್ವ ತಿರುಪತಿ ದೇವರಿಗೆ ಮುಡಿಪು ಕಟ್ಟಿ ಬೇಡಿಕೊಂಡದ್ದು ಸಾರ್ಥಕವಾಯಿತೊ ಏನೊ!
ಮಧ್ಯರಾತ್ರಿಯಾಗಿತ್ತೆಂದು ತೋರುತ್ತದೆ. ಹುಡುಗರು ನಾವೆಲ್ಲ ಮಲಗಿ ನಿದ್ದೆ ಹೋಗಿದ್ದೆವು. ಇದ್ದಕ್ಕಿದ್ದ ಹಾಗೆ ಏನೋ ಆದಂತಾಗಿ ಬೆಚ್ಚಿಬಿದ್ದು ಎಚ್ಚರಗೊಂಡೆ: ಅಳು, ರೋದನ, ಗೋಳಾಟದಿಂದ ಮನೆ ತುಂಬಿಹೋಗಿತ್ತು! ಜೊತೆ ಮಲಗಿದ್ದ ಹುಡುಗರೂ ಎದ್ದರು! ಅವರೂ ಅಳುತ್ತಾ ನನ್ನಂತೆಯೆ ಬಾಗಿಲೆಡೆಗೆ ನುಗ್ಗಿದರು. ಗುಡಿಸಲಿನ ನಡುವಣ ಅಂಕಣದಲ್ಲಿ ನನ್ನ ತಾಯಿ ಗೋಳಾಡುತ್ತಿದ್ದರು, ಏನೇನನ್ನೊ ಹೇಳಿಕೊಳ್ಳುತ್ತಾ. ನಮ್ಮ ದೊಡ್ಡಚಿಕ್ಕಪ್ಪಯ್ಯನವರೂ ಅಯ್ಯೋ ಎಂದು ಅಳುತ್ತಿದ್ದರು. ನಡೆದ ಸಂಗತಿಯ ಅರಿವೂ ಸ್ಪಷ್ಟವಾಗಿರದಿದ್ದರೂ, ಬಾಯಿಗೆ ನೀರು ಬಿಡುವುದೇ ಮುಂತಾದವುಗಳಿಂದ ನನಗೆ ಹೊಳೆಯಿತು, ಅಪ್ಪಯ್ಯ ನಮ್ಮನ್ನಗಲಿ ಹೋಗುತ್ತಿದ್ದಾರೆ ಎಂದು. ಅಷ್ಟರಲ್ಲಿ ಮೋಸಸ್ ಮೇಷ್ಟರು ತಮ್ಮ ಅಧಿಕಾರವಾಣಿಯಿಂದ ಗದರಿಸಿ ನಮ್ಮನ್ನೆಲ್ಲ ಕೋಣೆಗೆ ಹಿಂತಿರುಗಿ ಹಾಸಿಗೆಯಲ್ಲಿ ಮಲಗುವಂತೆ ಮಾಡಿದರು. ನಾನು ಅಳುತ್ತಲೇ ಇದ್ದೆ. ತಂದೆಯ ಸಾವಿನ ಪೂರ್ಣ ಅರ್ಥವಾಗಿ ನಾನು ಅಳುತ್ತಿದ್ದೆನೋ ಅಥವಾ ನನ್ನ ತಾಯಿ ಗೋಳಾಡುತ್ತಿದ್ದುದರಿಂದ ಅಳುತ್ತಿದ್ದೆನೋ ಈಗ ಸರಿಯಾಗಿ ಹೇಳಲಾರೆ.
ದೊಡ್ಡ ಚಿಕ್ಕಪ್ಪಯ್ಯ ರೋದಿಸುತ್ತಿದ್ದುದನ್ನು ನೋಡಿ ಮೋಸಸ್ ಮೇಷ್ಟರು "ಏನು ಗೌಡರೆ? ನೀವೆ ಹೀಗೆ ರೋದಿಸಿದರೆ ಹೇಗೆ?" ಎಂಬರ್ಥದ ಮಾತುಗಳನ್ನಾಡಿ ಸಮಾಧಾನ ಮಾಡಲು ಹೋದಾಗ ಅವರು "ಅಯ್ಯೋ, ಮೇಷ್ಟರೆ, ಇದ್ದೊಬ್ಬ ಅಣ್ಣನನ್ನು ಕಳಕೊಂಡೆನಲ್ಲಾ ಇನ್ನು ಎಲ್ಲಿಂದ ತರಲಿ ಅಂಥಾ ಅಣ್ಣನನ್ನು?" ಎಂಬರ್ಥದ ಮಾತುಗಳನ್ನಾಡಿದುದು ನನಗೆ ಕೇಳಿಸಿತ್ತು.

ಮರುದಿನ ಬೆಳಿಗ್ಗೆ, ಕಾಯಿಲೆ ಸುದ್ದಿಯನ್ನು ಕೇಳಿ, ನೋಡಿ ಹೋಗಲು ತೀರ್ಥಹಳ್ಳಿಗೆ ಬಂದಿದ್ದ ನಾಲ್ಕಾರು ನಂಟರು ಬೆರೆದರುರೂ ಬಂದಿದ್ದರು. ಕಳೇಬರವನ್ನು ಗಾಡಿಯಲ್ಲಿ ದೋಣಿಗಂಡಿಗೆ ಸಾಗಿಸಿ, ದೋಣಿಯಲ್ಲಿ ಆಚೆಗೆ ಕೊಂಡೊಯ್ದರು. ತಂದೆಯ ಶವವಿದ್ದ ಗಾಡಿಯಲ್ಲಿಯೆ ಅವರ ಪಾದದೆಡೆ ಕುಳಿತು ತಾಯಿ ದುಃಖಿಸುತ್ತಿದ್ದರು. ನಾನೂ ನನ್ನ ತಂಗಿಯರಿಬ್ಬರೂ ಇತರ ಹುಡುಗರೊಡನೆ ಮತ್ತೊಂದು ಗಾಡಿಯಲ್ಲಿ ಹಿಂಬಾಲಿಸಿದೆವು. ದೊಡ್ಡವರೆಲ್ಲ, ದೇವಂಗಿ ರಾಮಣ್ಣಗೌಡರೂ ಸೇರಿ, ನಡೆದೇ ಬಂದರು ಕುಪ್ಪಳಿಗೆ. ಗಾಡಿ ಸುಡುಗಾಡಿನ ಬಳಿಯ ಕೂಡುಹಟ್ಟಿಯ ಹತ್ತಿರ ರಸ್ತೆಯಲ್ಲಿ ನಿಂತಿತು. ಅಷ್ಟರಲ್ಲಿ ಮನೆಯ ಅಮ್ಮದಿರೆಲ್ಲ ಅಲ್ಲಿ ನೆರೆದಿದ್ದರು. (ಹೆಣವನ್ನು ಮನೆಗೆ ಕೊಂಡೊಯ್ಯಲಿಲ್ಲ) ಒಬ್ಬೊಬ್ಬರಾಗಿ ಬಂದು ಅಪ್ಪಯ್ಯನ ಕಳೇಬರವನ್ನು ನೋಡಿ ಗೋಳಿಟ್ಟರು. ಅವ್ವನನ್ನೂ ಸಂತೈಸಲು ಯತ್ನಿಸಿದರು. ಹುಡುಗರಾಗಿದ್ದ ನಮ್ಮನ್ನೆಲ್ಲ ಮನೆಗೆ ಹೋಗಿ ಎಂದು ಕಳುಹಿಸಿಬಿಟ್ಟರು. ನಾನೂ ನನ್ನ ತಂಗಿಯರಿಬ್ಬರೂ ಅಳುತ್ತಲೆ ಮನೆಯನ್ನು ಸೇರಿ, ಜಗಲಿಯ ಕೆಸರು ಹಲಗೆಯ ಮೇಲೆ ಕುಳಿತು ಬಿಕ್ಕಿ ಬಿಕ್ಕಿ ಅತ್ತೆವು. ಅಂಗಳದಲ್ಲಿದ್ದ ತುಳಸೀಕಟ್ಟೆಯ ಕಲ್ಲಿನ ದೇವರು ಕಲ್ಲಾಗಿಯೆ ಕುಳಿತಿತ್ತು.
***
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ, ದೊಡ್ಡಣ್ಣ ಹೆಗ್ಗಡೆಯ ಶವವನ್ನು ತೀರ್ಥಹಳ್ಳಿಯಿಂದ ಗಾಡಿಯಲ್ಲಿ, ಹಳೆಮನೆ ಶ್ಮಶಾಣಕ್ಕೆ ತಂದ ಸನ್ನಿವೇಶದ ವರ್ಣನೆಯಲ್ಲಿ ಮೇಲಿನ ಘಟನೆಯ ಛಾಯೆಯನ್ನು ಸಹೃದಯರು ಕಾಣಬಹುದಾಗಿದೆ


No comments: