ತೀರ್ಥಹಳ್ಳಿಗೆ ಬಂದ ಒಂದೆರಡು ದಿನಗಳಲ್ಲಿಯೆ ಅಪ್ಪಯ್ಯನಿಗೆ ಸಣ್ಣಗೆ ಶಿತ ಕೆಮ್ಮು ಶುರುವಾಯಿತು. ಜ್ವರವೂ ಬರುತ್ತಿತ್ತೊ ಏನೊ, ಆದರೆ ಅವರು ಅದನ್ನು ಅಷ್ಟಾಗಿ ಮನಸ್ಸಿಗೆ ಹಾಕಿಕೊಳ್ಳದೆ ಮನೆಗೆ ಸಾಮಾನು ತಂದು ಹಾಕಲೂ ಮತ್ತು ತಮ್ಮ ಮುಂದಿನ ಜೀವನೋಪಾಯದ ಕಾರ್ಯಕ್ರಮಕ್ಕೆ ಸಹಾಯ ಸಲಕರಣೆಗಳನ್ನು ಒದಗಿಸಿಕೊಳ್ಳಲೂ ತಿರುಗುತ್ತಿದ್ದರು, ತುಂತುರು ಮಳೆಯನ್ನೂ ಲೆಕ್ಕಿಸದೆ. ಆಗ ದೇವಂಗಿ ರಾಮಣ್ಣಗೌಡರು ತಮ್ಮ ಮನೆಯ ಮಕ್ಕಳನ್ನು ಓದಿಸಲು ತೀರ್ಥಹಳ್ಳಿಯಲ್ಲಿ ಒಂದು ಸ್ವಂತದ ಮಂಗಳೂರು ಹೆಂಚಿನ ಮನೆಯನ್ನು ಕಟ್ಟಿಸಿದ್ದರು. ಮುಂದೆ ನನಗೆ ತುಂಬ ಹತ್ತಿರದ ಬಾಲ್ಯ ಸ್ನೇಹಿತರಾಗಿ ಪರಿಣಮಿಸಿದ ವೆಂಕಟಯ್ಯ, ಹಿರಿಯಣ್ನ ಮೊದಲಾದವರು ಅಲ್ಲಿ ಓದಲಿಕ್ಕಿದ್ದರು. ರಾಮಣ್ಣಗೌಡರೂ ಆಗಾಗ ತೀರ್ಥಹಳ್ಳಿಗೆ ಬಂದು ಎರಡು ಮೂರು ದಿವಸ ಇದ್ದು ಹೋಗುತ್ತಿದ್ದರು. ನನ್ನ ತಂದೆ ಅವರೊಡನೆ ಕೌಟುಂಬಿಕ ಸಮಸ್ಯೆಗಳನ್ನು ಕುರಿತು ವಿಚಾರ ವಿನಿಮಯಕ್ಕೆ ಹೋಗುತ್ತಿದ್ದರೆಂದು ತೋರುತ್ತದೆ. ಬಹುಶಃ ಧನಸಹಾಯವನ್ನೂ ಕೇಳಿರಬಹುದು. ಸಫಲವಾಗಿತ್ತೊ ಇಲ್ಲವೊ ನಾನು ಹೇಳಲಾರೆ! (ದೇವಂಗಿ ರಾಮಣ್ಣಗೌಡರ ತಂಗಿಯನ್ನು ಕುಪ್ಪಳಿ ರಾಮಣ್ಣಗೌಡರೂ, ರಾಮಣ್ಣಗೌಡರ ತಂಗಿಯನ್ನು ದೇವಂಗಿಗೌಡರೂ ಮದುವೆಯಾಗಿದ್ದರು)
ಒಂದು ಸಂಗತಿ ನನಗೆ ಚೆನ್ನಾಗಿ ನೆನಪಿಗೆ ಬರುತ್ತದೆ. ನನ್ನ ತಂದೆಗೆ ಕಾಯಿಲೆ ಪ್ರಾರಂಭವಾಗಿತ್ತು. ತಾವೇ ಹೋಗಲು ಸಾಧ್ಯವಗದೆ ನನಗೆ ಹೇಳಿದರು. ದೇವಂಗಿಯವರ ಮನೆಗೆ ಹೋಗಿಬರಲು ಏನೋ ಕೆಲಸಕ್ಕಾಗಿ, ನಾನು ಸಂಕೋಚ ಪ್ರದರ್ಶನ ಮಾಡಿ ಹಿಂಜರಿದೆ. ಆಗ ಅವರು ತುಸು ವಿರಕ್ತಭಾವದಿಂದ ಮುನಿದು ’ಓಹೋಹೋ! ಇವನಿಗೆ ಅಲ್ಲಿಗೆ ಹೋಗಲು ಬಹಳ ನಾಚಿಗೆ ಬಂತೇನೋ? ನಿನ್ನ ಈ ಬೂಲ ನೋಡಿದರೇ ಸಾಕು! ನಿನಗೆ ಹೆಣ್ಣು ಕೊಟ್ಟು ಬಿಡ್ತಾರೆ ಅಂತ ಮಾಡಿಯೇನೋ?* ಎಂದು ಮೂದಲಿಸಿದರು. ಬಹುಶಃ ಅವರ ಭಾವನೆ ಹೀಗಿತ್ತು ಎಂದು ತೋರುತ್ತದೆ: ದೇವಂಗಿಯಂತಹ ಶ್ರೀಮಂತರಾದ ದೊಡ್ಡ ಮನೆತನದವರು ವೇಷಭೂಷಣಗಳಲ್ಲಿ ಮುಂದುವರಿದವರು, ಬಗ್ಗಿ ಸಾರೋಟಿನಲ್ಲಿ ಸಂಚರಿಸುತ್ತಿದ್ದವರು, ತಮ್ಮ ಮಗನಂತಹ ಸಾಧಾರಣ ಕಾಡುಹುಡುಗನಿಗೆ ಎಂದಿಗಾದರೂ ಹೆಣ್ಣು ಕೊಡುತ್ತಾರೆಯೇ? ಅವರ ಹೆಣ್ಣುಮಕ್ಕಳು ಓದಲಿಕ್ಕೆಂದು ಆ ಮನೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಇವನು ಹೋಗಲು ಸಂಕೋಚಪಟ್ಟುಕೊಳ್ಳುತ್ತಿದದಾನಲ್ಲಾ? ಅವರು ಬರಿಯ ಬಾಂಧವ್ಯದ ದೃಷ್ಟಿಯಿಂದ ನಂಟರಾಗಿರಬಹುದು. ಆದರೆ ಯೋಗ್ಯತೆಯ ದೃಷ್ಟಿಯಿಂದ? ಅವರೆಲ್ಲಿ? ನಾವೆಲ್ಲಿ?
ಅಂತೂ ಅಪ್ಪಯ್ಯಗೆ ಜ್ವರ ಏರಿ ಹಾಸಿಗೆ ಹಿಡಿಯುವಂತಾಯಿತು. ಮಳೆಗಾಲವೂ ಪ್ರಾರಂಭವಾಗಿತ್ತು. ತೀರ್ಥಹಳ್ಳಿಗೆ ಬಂದಿದ್ದ ಒಬ್ಬರ ಕೈಲಿ ಕುಪ್ಪಳಿಗೆ ಹೇಳಿ ಕಳಿಸಿದರು. ಹಿರಿಕೊಡಿಗೆಯಲ್ಲಿದ್ದ ನನ್ನ ತಾಐಇಯನ್ನು ಕರೆದುಕೊಂಡು ಬರಲು. ಐಯ್ಯಪ್ಪಗೌಡರು (ಬಸಪ್ಪಗೌಡರ ಹಿರಿಯ ಮಗ. ಮೈಸೂರಿಗೆ ಓದಲು ಹೋಗಿದ್ದು ಹಿಂತಿರುಗಿದ್ದವರು) ಹಿರಿಕೊಡಿಗೆಗೆ ವರ್ತಮಾನ ಕಳಿಸಲು, ಅವ್ವ ಇಬ್ಬರು ಹೆಣ್ಣು ಮಕ್ಕಳನ್ನೂ ಕರೆದುಕೊಂಡು ಕುಪ್ಪಳಿಗೆ ಧಾವಿಸಿದರು. ನೋಡುತ್ತಾರೆ, ಗಂಡ ಮನೆತೊರೆದು ಹೋಗಿದ್ದಾರೆ! ಆ ತಾಐಇಯ ಹೃದಯ ನನ್ನ ಬರವಣಿಗೆಗೆ ಎಟುಕುತ್ತದೆಯೆ? ಈ ನಡುವೆ ಸುದ್ದಿಯೊಂದು ಹಬ್ಬಿತ್ತಂತೆ: ಹೀಲಿಕೇರಿಯ ಮನೆಯಲ್ಲಿದ್ದ ಕುಪ್ಪಳಿ ರಾಮಣ್ಣಗೌಡರು ತೀರ್ಥಹಳ್ಳಿಗೆ ನನ್ನ ತಾಯಿ ತಂಗಿಯರನ್ನು ಕರೆದೊಯ್ಯಲಿದ್ದ ಗಾಡಿಯನ್ನು ತಡೆಯುತ್ತಾರಂತೆ ಎಂದು. ಅದಕ್ಕೆ ಐಯಪ್ಪಗೌಡರು ಯಾರು ತಡೆಯುತ್ತಾರೋ ಬರಲಿ, ನೋಡುತ್ತೇನೆ! ಬಾರುಮಾಡಿ ಕೋವಿ ಹಿಡಿದುಕೊಂಡೇ ನಾನೂ ಗಾಡಿಯ ಹಿಂದೂಗಡೆ ಕಾವಲು ಇರುತ್ತೇನೆ ಎಂದರಂತೆ. ಗಾಡಿ ತಡೆಯುವುದಕ್ಕೆ ಕಾರಣ ಇಷ್ಟೆ. ನನ್ನ ತಂದೆ ಮನೆಯ ಯಜಮಾನ್ಯ ವಹಿಸಿದ್ದವರು. ಆ ದೃಷ್ಟಿಯಿಂದ ಮನೆತನಕ್ಕೆ ಸೇರಿದ್ದ ಬೆಳ್ಳಿಬಂಗಾರದ ಡಾಗೀನು ಅವರ ವಶದಲ್ಲಿತ್ತು. ಅವರ ಹೆಂಡತಿಯ ಕೈಲಿ ಆ ಡಾಗೀನುಗಳನ್ನೆಲ್ಲ ಗಾಡಿಯಲ್ಲಿ ತೀರ್ಥಹಳ್ಳಿಗೆ ಸಾಗಿಸುತ್ತಾರ ಎಂಬ ಅನುಮಾನ! ಆದರೆ ವಾಸ್ತವವಾಗಿ ಅಂಥಾದ್ದೇನೂ ನಡೆಯಲಿಲ್ಲ.
***
* ಮುಂದೆ ಅದೇ ದೇವಂಗಿ ರಾಮಣ್ಣಗೌಡರ ಮಗಳು ಹೇಮಾವತಿಯೇ, ದಿವಂಗತ ಕುಪ್ಪಳಿ ವೆಂಕಟಪ್ಪಗೌಡರ ಸೊಸೆಯಾಗಿ ಬರುತ್ತಾರೆ! ಈ ಮಾತನ್ನು ವೆಂಕಟಪ್ಪಗೌಡರು ಆಡಿದಾಗ, ಇನ್ನೂ ಹೇಮಾವತಿಯವರ ಜನನವೇ ಆಗಿರಲಿಲ್ಲ! ಮುಂದೆ ಸುಮಾರು ೨೫ ವರ್ಷಗಳ ನಂತರ ನಡೆಯಲಿರುವ ಕಾರ್ಯವೊಂದು ಅಭೀಪ್ಸಾರೂಪದಲ್ಲಿ ವ್ಯಕ್ತವಾಗಿತ್ತೊ ಏನೊ!
ಒಂದು ಸಂಗತಿ ನನಗೆ ಚೆನ್ನಾಗಿ ನೆನಪಿಗೆ ಬರುತ್ತದೆ. ನನ್ನ ತಂದೆಗೆ ಕಾಯಿಲೆ ಪ್ರಾರಂಭವಾಗಿತ್ತು. ತಾವೇ ಹೋಗಲು ಸಾಧ್ಯವಗದೆ ನನಗೆ ಹೇಳಿದರು. ದೇವಂಗಿಯವರ ಮನೆಗೆ ಹೋಗಿಬರಲು ಏನೋ ಕೆಲಸಕ್ಕಾಗಿ, ನಾನು ಸಂಕೋಚ ಪ್ರದರ್ಶನ ಮಾಡಿ ಹಿಂಜರಿದೆ. ಆಗ ಅವರು ತುಸು ವಿರಕ್ತಭಾವದಿಂದ ಮುನಿದು ’ಓಹೋಹೋ! ಇವನಿಗೆ ಅಲ್ಲಿಗೆ ಹೋಗಲು ಬಹಳ ನಾಚಿಗೆ ಬಂತೇನೋ? ನಿನ್ನ ಈ ಬೂಲ ನೋಡಿದರೇ ಸಾಕು! ನಿನಗೆ ಹೆಣ್ಣು ಕೊಟ್ಟು ಬಿಡ್ತಾರೆ ಅಂತ ಮಾಡಿಯೇನೋ?* ಎಂದು ಮೂದಲಿಸಿದರು. ಬಹುಶಃ ಅವರ ಭಾವನೆ ಹೀಗಿತ್ತು ಎಂದು ತೋರುತ್ತದೆ: ದೇವಂಗಿಯಂತಹ ಶ್ರೀಮಂತರಾದ ದೊಡ್ಡ ಮನೆತನದವರು ವೇಷಭೂಷಣಗಳಲ್ಲಿ ಮುಂದುವರಿದವರು, ಬಗ್ಗಿ ಸಾರೋಟಿನಲ್ಲಿ ಸಂಚರಿಸುತ್ತಿದ್ದವರು, ತಮ್ಮ ಮಗನಂತಹ ಸಾಧಾರಣ ಕಾಡುಹುಡುಗನಿಗೆ ಎಂದಿಗಾದರೂ ಹೆಣ್ಣು ಕೊಡುತ್ತಾರೆಯೇ? ಅವರ ಹೆಣ್ಣುಮಕ್ಕಳು ಓದಲಿಕ್ಕೆಂದು ಆ ಮನೆಯಲ್ಲಿದ್ದಾರೆ ಎಂದ ಮಾತ್ರಕ್ಕೆ ಇವನು ಹೋಗಲು ಸಂಕೋಚಪಟ್ಟುಕೊಳ್ಳುತ್ತಿದದಾನಲ್ಲಾ? ಅವರು ಬರಿಯ ಬಾಂಧವ್ಯದ ದೃಷ್ಟಿಯಿಂದ ನಂಟರಾಗಿರಬಹುದು. ಆದರೆ ಯೋಗ್ಯತೆಯ ದೃಷ್ಟಿಯಿಂದ? ಅವರೆಲ್ಲಿ? ನಾವೆಲ್ಲಿ?
***
* ಮುಂದೆ ಅದೇ ದೇವಂಗಿ ರಾಮಣ್ಣಗೌಡರ ಮಗಳು ಹೇಮಾವತಿಯೇ, ದಿವಂಗತ ಕುಪ್ಪಳಿ ವೆಂಕಟಪ್ಪಗೌಡರ ಸೊಸೆಯಾಗಿ ಬರುತ್ತಾರೆ! ಈ ಮಾತನ್ನು ವೆಂಕಟಪ್ಪಗೌಡರು ಆಡಿದಾಗ, ಇನ್ನೂ ಹೇಮಾವತಿಯವರ ಜನನವೇ ಆಗಿರಲಿಲ್ಲ! ಮುಂದೆ ಸುಮಾರು ೨೫ ವರ್ಷಗಳ ನಂತರ ನಡೆಯಲಿರುವ ಕಾರ್ಯವೊಂದು ಅಭೀಪ್ಸಾರೂಪದಲ್ಲಿ ವ್ಯಕ್ತವಾಗಿತ್ತೊ ಏನೊ!

No comments:
Post a Comment