Friday, March 13, 2015

ಅರೆಕೊಪ್ಪನೊಂದಿಗೆ ಕಲ್ಲಿನಗೋಲಿ ದರೋಡೆ!

ತೀರ್ಥಹಳ್ಳಿ ಎ.ವಿ.ಸ್ಕೂಲಿನ ವ್ಯಕ್ತಿಗಳಲ್ಲಿ ಉಪಾಧ್ಯಾಯ ವರ್ಗದವರಿಗಿಂತಲೂ ಹೆಚ್ಚಾಗಿ ನಮ್ಮನ್ನೆಲ್ಲ ವಿಶೇಷವಾಗಿ ಆಕರ್ಷಿಸಿದವರೆಂದರೆ ಇಸ್ಕೋಲ್ ಜವಾನ ’ಅರೆಕೊಪ್ಪ’, ’ಅರೆ ಕೊಪ್ಪ’ ಎಂದು ಹುಡುಗರೆಲ್ಲ ಕರೆಯುತ್ತಿದ್ದರು; ಆದರೆ ಉಪಾಧ್ಯಾಯರು ಅವನನ್ನು ’ಆರೋಕ್ಯಂ’ ಎಂದು ಕೂಗುತ್ತಿದ್ದರು. ಬಹುಶಃ ಅವನ ತಂದೆ ತಾಯಿ ತಮಿಳುನಾಡಿನ ಕಡೆಯಿಂದ ಬಂದ ಕ್ರೈಸ್ತಮತಾವಲಂಬಿಗಳಾಗಿದ್ದರೆಂದು ತೋರುತ್ತದೆ. ಆದರೆ ಆಗ ನಮಗಿನ್ನೂ ಮತಪ್ರಜ್ಞೆಯೆ ಇರಲಿಲ್ಲವಾದ್ದರಿಂದ ಅವನ ಜಾತಿ, ಮತ್ತು ಊರು, ಭಾಷೆ ಇದೊಂದೂ ನಮ್ಮ ಗಮನಕ್ಕೆ ಬರುತ್ತಿರಲಿಲ್ಲ. ಕನ್ನಡವಲ್ಲದೆ ಅವನು ಬೇರೆಯ ಭಾಷೆಯನ್ನು ಆಡುತ್ತಿದ್ದನೊ ಇಲ್ಲವೊ ನನಗೆ ತಿಳಿಯದು. ಅವನ ಚಿಕ್ಕಪ್ಪನೊಬ್ಬ ಸ್ಕೂಲಿನ ಸಮೀಪದಲ್ಲದ್ದ ’ಬಂಗಲೆ’(ಟಿ.ಬಿ.)ಯ ಮೇಟಿಯಾಗಿದ್ದ. ಅವನೊಡನೆ ’ಅರೆಕೊಪ್ಪ’ ಇರುತ್ತಿದ್ದ. ಬಹುಶಃ ತನ್ನ ಮನೆಯವರೊಡನೆ ಬೇರೆ ಭಾಷೆ ಆಡುತ್ತಿದ್ದನೋ ಏನೊ?

ಆಗ ಅವನಿಗೆ ಬಹುಶಃ ಇಪ್ಪತ್ತರ ಆಚೆ ಈಚೆಯ ವಯಸ್ಸಿದ್ದಿರಬಹುದು. ದೃಢಕಾಯನಾಗಿದ್ದು ನಮ್ಮ ತಂಟೆ, ಚೇಷ್ಟೆ ಹೋರಾಟ ಹೊಡೆದಾಟಗಳೆಲ್ಲೆಲ್ಲ ನಮ್ಮ ಪಕ್ಷವಹಿಸುತ್ತಿದ್ದ ಅವನು ನಮಗೆ ’ವೀರಪುರುಷ’ನಾಗಿದ್ದ.
ಸ್ಕೂಲಿನ ಎದುರಿಗೇ ದೇವಂಗಿಯವರು ತಮ್ಮ ಹುಡುಗರನ್ನು ಓದಿಸಲು ಮನೆ ಮಾಡಿದ್ದರು. ಬಾಡಿಗೆ ಮನೆಯಲ್ಲ, ಅವರದೇ ಸ್ವಂತ ಕಟ್ಟಿಸಿದ್ದ ಮನೆ. ನನ್ನ ಓರಗೆಯವರಾಗಿ ಅದೇ ಸ್ಕೂಲಿನಲ್ಲಿ ಓದುತ್ತಿದ್ದರು ದೇವಂಗಿಯ ಡಿ.ಆರ್. ವೆಂಕಟಯ್ಯ ಮತ್ತು ಡಿ.ಎನ್. ಹಿರಿಯಣ್ಣ. ”ಅರೆಕೊಪ್ಪ’ನಿಗೆ ಅವರಲ್ಲಿ ಭಕ್ತಿಸದೃಶ ಗೌರವ. ಬಹುಶಃ ಅವರಿಂದ ಆಗಾಗ ಉಪಕೃತನಾಗುತ್ತಿದ್ದರಲೂಬಹುದು.
ನಾವು ಬಂಧುಗಳಾಗಿಯೂ ಸ್ನೇಹಿತರಾಗಿಯೂ ಆಟಪಾಟಗಳಲ್ಲಿ ಸೇರುತ್ತಿದ್ದೆವು. ಗೋಲಿಯಾಟವೇ ಹೆಚ್ಚು ಪ್ರಿಯವಾಘಿದ್ದ ಸಮಯ. ಕೊಂಡ ಗೋಲಿಗಳಲ್ಲಿ ಕೆಲವು ಬಹುಬೇಗನೆ ಹಿಟ್ಟು ಹಿಟ್ಟಾಗಿ ಹಾಳಾಗುತ್ತಿದ್ದುವು. ಅವುಗಳನ್ನು ’ಕಲ್ಲಿನಗೋಲಿ’ಗಳೆಂದೂ ಉಳಿದವುಗಳನ್ನು ’ಹಿಟ್ಟಿನಗೋಲಿ’ಗಳೆಂದೂ ಕರೆಯುತ್ತಿದ್ದೆವು. ನಮಗೆ ;ಕಲ್ಲಿನಗೋಲಿ’ಗಳನ್ನು ಸಂಗ್ರಹಿಸುವ ಗೀಳು. ಕೊಳ್ಳುವಾಗಲೆ ’ಕಲ್ಲಿನಗೋಲಿ’ಗಳನ್ನೆ ಕೊಳ್ಳಬಹುದಾಗಿತ್ತಲ್ಲಾ ಅಂದರೆ, ಇದು ಕಲ್ಲಿನದು ಇದು ಹಿಟ್ಟಿನದು ಎಂದು ಗುರುತಿಸಲಾಗದಂತೆ ಅವುಗಳಿಗೆ ಬಣ್ಣ ಬಳಿದಿರುತ್ತಿದ್ದರು. ಅವುಗಳನ್ನು ಉಪಯೋಗಿಸುವುದಕ್ಕೆ ಶುರುಮಾಡಿದ ಮೇಲೆಯೆ ಗೊತ್ತಾಗುತ್ತಿತ್ತು, ಯಾವುದು ಹಿಟ್ಟಿನದು ಯಾವುದು ಕಲ್ಲಿನದು ಎಂದು. ಆದ್ದರಿಂದ ಯಾವ ಯಾವ ಹುಡುಗರ ಕೈಲಿ ಕಲ್ಲಿನ ಗೋಲಿಗಳಿವೆ ಎಂದು ಗೊತ್ತಾಗುತ್ತಿತ್ತೋ ಅವರನ್ನು ಗೋಲಿಯಾಟಕ್ಕೆ ಆಹ್ವಾನಿಸುತ್ತಿದ್ದೆವು. ಸಆಮಾನ್ಯವಾಗಿ ಕ್ಲಾಸು ಪ್ರಾರಂಬವಾಗುವುದಕ್ಕೆ ಮೊದಲು ಅಥವಾ ಕ್ಲಾಸು ಬಿಟ್ಟ ಮೇಲೆ ಸ್ಕೂಲಿನ ಬಳಿಯೆ ಆಟಕ್ಕೆ ತೊಡಗುತ್ತಿದ್ದೆವು. ಸರಿ, ಆಟ ಪ್ರಾರಂಭವಾಗಿ ಅರ್ಧ ಮುಂದುವರಿಯುವಷ್ಟರಲ್ಲಿ ಪೂರ್ವಸಂಕೇತದಂತೆ ಅರೆಕೊಪ್ಪ ಹಾಜರಾಗುತ್ತಿದ್ದ “ಯಾಕ್ರೊ ಸ್ಕೂಲ್ ಹತ್ರ ಗೋಲಿಯಾಡೋದು? ಹೆಡ್‌ಮಾಸ್ಟರ್ ಹೇಳಿದ್ದಾರೆ, ಕೊಡ್ರೊ ಇಲ್ಲಿ ಗೋಲೀನ!” ಎಂದು ಗದರಿಸುತ್ತಿದ್ದಂತೆ ನಾವು - ನಾನು, ವೆಂಟಯ್ಯ, ಹಿರಿಯಣ್ಣ, ರಾಮರಾವ್, ದೊರೆಸ್ವಾಮಿ ಮೊದಲಾದ ಗೆಳೆಯರ ಗುಂಪಿನವರು -ನಮ್ಮ ಗೋಲಿಗಳನ್ನೆಲ್ಲಾ ಅವನ ಕೈಗೆ ಕೊಟ್ಟುಬಿಡುತ್ತಿದ್ದೆವು. ನಾವು ಹೆದರಿ ಕೊಟ್ಟುದನ್ನು ಕಂಡು ಇತರರೂ ತಮ್ಮತಮ್ಮ ಗೋಲಿಗಳನ್ನೆಲ್ಲಾ ಮನಸ್ಸಿಲ್ಲದ ಮನಸ್ಸಿನಿಂದ ಅವನ ಕೈಗೆ ಕೊಡುತ್ತಿದ್ದರು. ಅವನು ಬಹಳ ಸಿಟ್ಟುಗೊಂಡಂತೆ ನಟಿಸಿ ಗೋಲಿಗಳನ್ನೆಲ್ಲ ತುಂಬ ಎತ್ತರವಾಗಿ ಸ್ಕೂಲಿನ ತಾಋಸಿಗೆ ಎಸೆದುಬಿಟ್ಟು “ಇನ್ನು ಮೇಲೆ ಇಲ್ಲಿ ಗೋಲಿಯಾಡೀರಿ, ಹುಷಾರ್!” ಎಂದು ಸ್ಕೂಲಿನೊಳಕ್ಕೆ ಹೋಗಿಬಿಡುತ್ತಿದ್ದ. ನಾವೆಲ್ಲರೂ ಪೆಚ್ಚುಮೋರೆ ಹಾಕಿಕೊಂಡು -(ನಮ್ಮ ಗುಂಪಿನವರದು ಬರಯ ನಟನೆ) - ಮನೆಗೆ ಹೋಗುತ್ತಿದ್ದೆವು. ಹುಡುಗರೆಲ್ಲ ಹೋದ ಮೇಲೆಅರೆಕೊಪ್ಪ ಸ್ಕೂಲಿನ ಉದ್ದ ಏಣಿಹಾಕಿಕೊಂಡು ತಾರಸಿಗೆ ಹತ್ತಿ ಆ ಗೋಲಿಗಳನ್ನೆಲ್ಲ ಒಟ್ಟುಮಾಡಿ ತೆಗೆದು ಇಳಿಯುತ್ತಿದ್ದಂತೆ ಎದುರುಮನೆಯಲ್ಲಿಯೆ ಇದ್ದು ನೋಡುತ್ತಿದ್ದ ನಾವು ಎಂದರೆ ನಮ್ಮ ಗುಂಪಿನವರು, ನಸುಗತ್ತಲೆಯ ಮರೆಯಲ್ಲಿ ಸ್ಕೂಲಿನ ಬಳಿಗೆ ಓಡುತ್ತಿದ್ದೆವು. ಆಮೇಲೆ ಅರೆಕೊಪ್ಪ ದರೋಡೆ ಹಂಚುವಂತೆ ಆ ಕಲ್ಲಿನ ಗೋಲಿಗಳನ್ನೆಲ್ಲ ನಮಗೆ ತನ್ನ ಪಕ್ಷಪಾತಕ್ಕನುಗುಣವಾಗಿ ಹಂಚಿಕೊಡುತ್ತಿದ್ದ!
ಇದಕ್ಕಿಂತಲೂ ಸ್ವಾರಸ್ಯವಾಗಿಯೂ ರೌಚಕವಾಗಿಯೂ ಇರುವ ಇನ್ನೊಂದು ಘಟನೆ ’ಅರೆಕೊಪ್ಪ’ನ ನೆನಪಿನೊಡನೆ ಸಂಗತವಾಗಿದೆ -ಹೆಮ್ಮಲಗನ ಘಟನೆ:

No comments: