Tuesday, March 17, 2015

ಲಾಜಿಕಲ್ ಅಲ್ಲ, ಬಯಾಲಾಜಿಕಲ್!

ಒಂದು ಸಂಜೆ ನಾನು ಕುವೆಂಪು ಅವರೊಡನೆ ಮಾತನಾಡುತ್ತಾ ಕುಳಿತಿದ್ದಾಗ ನವ್ಯಕವಿ ಗೋಪಾಲಕೃಷ್ಣ ಅಡಿಗರು ಇದ್ದಕ್ಕಿದ್ದಂತೆ ಅಲ್ಲಿಗೆ ಬಂದರು. ನನಗೆ ಪರಮಾಶ್ಚರ್ಯವಾಯಿತು. ಏಕೆಮದರೆ ಅಡಿಗರೇ ಮುಂತಾಗಿ ನವ್ಯಕವಿಗಳು ಶ್ರೀ ಕುವೆಂಪು ಅವರ ವಿಷಯದಲ್ಲೂ ಅವರ ಕಾವ್ಯದ ವಿಷಯದಲ್ಲೂ ಅಷ್ಟು ಪ್ರಸನ್ನರಾಗಿರಲಿಲ್ಲ. ಅಷ್ಟೇ ಅಲ್ಲ - “ಕುವೆಂಪು ಕವಿಯೇ ಅಲ್ಲ - ಕುವೆಂಪು ಕವಿ ಎಂದಾದರೆ ನಾನು ಕವಿಯೇ ಅಲ್ಲ” ಎಂದು ಅಡಿಗರು ಸಾರಿದ್ದರು. ಜನ ಮನೋಮಂದಿರದಲ್ಲಿ ನೆಲಸಿರುವ ಕವಿ ಯಾರು ಎಂಬುದನ್ನು ಕಾಲ ಇಷ್ಟು ಬೇಗ (೨೦೦೨) ನಿರ್ಧರಿಸುತ್ತದೆ ಎಂದು ಆಗ ನಾನು ಊಹಿಸಿಯೂ ಇರಲಿಲ್ಲ. 
ಅಡಿಗರು ಏಕಾಏಕಿ ಕುವೆಂಪು ಅವರ ಮನೆಗೆ ಬಂದದ್ದೇಕೆ ಎಂದು ತಿಳಯಲಿಲ್ಲ. ಅಡಿಗರು ಕುವೆಂಪು ಅವರಿಗೆ “ನಮಸ್ಕಾರ” ಹೇಳಿದರು. ಕುವೆಂಪು ಅಡಿಗರನ್ನು ತಮ್ಮ ಸಹಜ ಮಂದಸ್ಮಿತದಿಂದ ಸ್ವಾಗತಿಸಿದರು. ಅಡಿಗರು “ಏನೋ ಹುಡುಗ ತಿಳಿಯದೆ ಮಾಡಿಬಿಟ್ಟ, ಅವನನ್ನ ಬಿಡಿಸಿ ಬಿಡಿ” ಎಂದರು. ಕುವೆಂಪು “ಆಗಲಿ, ಈಗಲೇ ಪೋಲೀಸ್ ಸ್ಟೇಷನ್ನಿಗೆ ಫೋನ್ ಮಾಡಿ ಹೇಳುತ್ತೇನೆ, ನೀವು ನಿಶ್ಚಿಂತರಾಗಿ ಮನೆಗೆ ಹೋಗಿ” ಎಂದರು. ಅಡಿಗರು “ತುಂಬಾ ಥ್ಯಾಂಕ್ಸ್” ಎಂದತರು. ಅವರು ಹೊರಡುವ ಮುನ್ನ ಕುವೆಂಪು ಹೇಳಿದರು: “ಅದರೂ ಹುಡುಗ ನಿಮ್ಮ ನವ್ಯವನ್ನೂ ಹಳೆಯದನ್ನಿಸುವಷ್ಟರ ಮಟ್ಟಿಗೆ ನವ್ಯಾತಿನವ್ಯವಾಗಿ ಮಾಡಿದ್ದಾನೆ” ಎಂದು ಹೇಳಿ ಜೋರಾಗಿ ನಕ್ಕರು. ಅಡಿಗರೂ ನಗುತ್ತಾ ಹೊರಟು ಹೋದರು. ಇದು ಯಾವುದರ ಹಿಂದೂ ಮುಂದೂ ತಿಳಿಯದ ನಾನು ಸುಮ್ಮನೆ ಪಿಳಪಿಳನೆ ಕಣ್ಣು ಬಿಡುತ್ತಾ ಕುಳಿತಿದ್ದೆ. ಆನಂತರ ಕುವೆಂಪು ಅವರು ಅಂದು ಬೆಳಗ್ಗೆಯೋ ಮಧ್ಯಾಹ್ನವೋ ನಡೆದಿದ್ದ ಘಟನೆಯನ್ನು ತಿಳಿಸಿದರು.
 

ತರುಣರೊಬ್ಬರು ಬಂದು ತಾವು ಗೋಪಾಲಕೃಷ್ಣ ಅಡಿಗರ ಮಗನೆಂದೂ, ತಮ್ಮ ತಂದೆ ಐವತ್ತು ರೂಪಾಯಿ ಬೇಕೆಂದು ಹೇಳಿಕಳುಹಿಸಿದ್ದಾರೆಂದೂ ಹೇಳಿದ. ಕುವೆಂಪು ಅವರಿಗೆ ಎರಡು ಕಾರಣಗಳಿಗಾಗಿ ಅನುಮಾನ ಮೂಡಿತಂತೆ. ಒಂದು ಅಡಿಗರಿಗೆ ಅಷ್ಟು ದೊಡ್ಡ ಮಗ ಇರುವುದು ಸಾಧ್ಯವಿಲ್ಲ ಎಂಬುದು. ಎರಡನೆಯದು ಅಡಿಗರು ತಮ್ಮ ಮನೆಗೆ ಹಣಕ್ಕಾಗಿ ಹೇಳಿ ಕಳುಹಿಸುತ್ತಾರೆಯೇ ಎಂದು. ಆದ್ದರಿಂದ ಅವರು ಒಂಟಿಕೊಪ್ಪಲು ಪೋಲೀಸ್ ಸ್ಟೇಷನ್ನಿಗೆ ಫೋನ್ ಮಾಡಿದರು. ಪೋಲೀಸಿನವರು ಬಂದು ತರುಣನನ್ನು ಕರೆದುಕೊಂಡು ಹೋಗಿ ವಿಚಾರಿಸಿದ್ದರಲ್ಲಿ ಆತ ಅಡಿಗರ ಮಗನಲ್ಲ, ದೂರದ ಬಂಧು ಎಂದು ತಿಳಿಯಿತು. ಅಡಿಗರು ಬಂದು ಹೇಳಿಹೋದ ಮೇಲೆ ಕುವೆಂಪು ಪೋಲೀಸ್ ಸ್ಟೇಷನ್ನಿಗೆ ಫೋನ್ ಮಾಡಿದರು. ತರುಣನ ಬಿಡುಗಡೆಯಾಯಿತು.
* * *
ನಮ್ಮ ವಿಶ್ವವಿದ್ಯಾನಿಲಯದ ಪ್ರಸಾರಂಗದಿಂದ ಪ್ರಕಟವಾಗುವ ಪ್ರತಿಯೊಂದು ಪುಸ್ತಕವೂ ಪ್ರಕಟಣ ಸಮಿತಿಯ ಒಪ್ಪಿಗೆ ಪಡೆದೇತೀರಬೇಕಾಗಿತ್ತು. ಅದಕ್ಕೆ ಕುವೆಂಪು ಅವರೇ, ಈಗಾಗಲೇ ಹೇಳಿದಂತೆ ಅಧ್ಯಕ್ಷರು. ಡಾ. ಹಾ.ಮಾ.ನಾಯಕರೂ ಒಬ್ಬ ಸದಸ್ಯರು. ಒಮ್ಮೆ ಅವರ ತಮ್ಮ ಡಾ. ಈಶ್ವರ ಅವರ ಒಂದು ಹಸ್ತಪ್ರತಿ ಸಮಿತಿಯ ಮುಂದೆ ಪ್ರಸ್ತಾಪಕ್ಕೆ ಬಂತು. ಅದನ್ನು ನಮ್ಮ ನಿಯಮದಂತೆ ತಜ್ಞರೊಬ್ಬರು ಪರಿಶೀಲಿಸಿ ಪ್ರಕಟಿಸಬಹುದು ಎಂದು ಶೀಫಾರ್‍ಸು ಮಾಡಿದ್ದರು. ಅವರ ಶಿಫಾರ್‍ಸನ್ನು ಸಭೆಯಲ್ಲಿ ಓದಲಾಯಿತು. ಅನಂತರ ಅಧ್ಯಕ್ಷರು “ಸರಿ, ಇನ್ನೇನು ಅದನ್ನು ಪ್ರಕಟಿಸಬಹುದು” ಎಂದರು. 

ಡಾ. ಹಾ.ಮಾ.ನಾಯಕರು “ದಯವಿಟ್ಟು ಬೇಡಿ” ಎಂದರು. ಈ ಅನಿರೀಕ್ಷಿತವಾದ ಆಕ್ಷೇಪಣೆಯಿಂದ ಸಮಿತಿಯ ಸದಸ್ಯರು ಚಕಿತರಾದರು. ಶ್ರೀ ಕುವೆಂಪು “ಏಕೆ, ನಾಯಕರೆ, ಏಕೆ ಬೇಡ” ಎಂದು ಕೇಳಿದರು. ನಾಯಕರು “ಅದರ ಲೇಖಕರಾದ ಡಾ. ಈಶ್ವರ್ ನನ್ನ ತಮ್ಮ. ನಾನು ಸದಸ್ಯನಾಗಿದ್ದು ಅದನ್ನು ಪ್ರಕಟಿಸಲು ಒಪ್ಪುವುದು ನೈತಿಕ ದೃಷ್ಟಿಯಿಂದ ಸರಿಯಲ್ಲ” ಎಂದರು. ಕುವೆಂಪು ಮಂದಸ್ಮಿತರಾಗಿ “ನಾಯಕರೇ ನೀವು ಕೊಡುತ್ತಿರುವ ಕಾರಣ ಲಾಜಿಕಲ್ ಅಲ್ಲ, ಬಯಾಲಾಜಿಕಲ್” ಎಂದರು! ಇಡೀ ಸಮಿತಿ ಘೊಳ್ಳೆಂದು ನಕ್ಕಿತು. ನಾಯಕರ ಆಕ್ಷೇಪಣೆಯನ್ನು ತಳ್ಳಿಹಾಕಿ ಕೃತಿಯನ್ನು ಪ್ರಕಟಿಸಲಾಯಿತು.
[ಕೃಪೆ: ಹೀಗಿದ್ದರು ಕುವೆಂಪು - ಡಾ. ಪ್ರಭುಶಂಕರ, ಡಿ.ವಿ.ಕೆ. ಮೂರ್ತಿ ಪ್ರಕಾಶಕರು, ಮೈಸೂರು. ೨೦೦೨]

No comments: