Tuesday, March 24, 2015

ಶಂಕರಾಚಾರ್ಯರು ಹಸ್ತಾಮಲಕರಿಗೆ ಬೋಧಿಸಿದ್ದ ನರಕದ ಶಿಕ್ಷೆಯ ಪರಿಣಾಮ!

ಒಮ್ಮೆ ಬೇಸಗೆಯ ರಜದಲ್ಲಿ ನಾವೆಲ್ಲ ಮನೆಗೆ ಹೋಗಿದ್ದಾಗ ಉಪ್ಪರಿಗೆಯ ಮೇಳಣ ನಾಗಂದಿಗೆಯಲ್ಲಿ ಕೆಲವು ಪುಸ್ತಕಗಳಿದ್ದುದು ಕಣ್ಣಿಗೆ ಬಿತ್ತು. ಅವೆಲ್ಲ ಹರಿದು ಮುರಿದು ಒರಲೆ ಹತ್ತಿಹೋಗಿದ್ದುವು. ಬಹುಶಃ ಅವುಗಳನ್ನು ತೇರಿಗೆ ಹೋದವರು ಯಾರೋ ಮಾರಾಟಗಾರನ ಪುಸಲಾಯಿಕೆಗೆ ದಾಕ್ಷಿಣ್ಯವಶರಾಗಿ ಕೊಂಡುಕೊಂಡು ಬಂದಿದ್ದರೆಂದು ತೋರುತ್ತದೆ. ಅವನ್ನು ಯಾರಾದರೂ ಓದಿದ್ದರೆಂದು ಹೇಳುವಂತಿರಲಿಲ್ಲ. ಅವುಗಳನ್ನೆಲ್ಲ ತೆಗೆದು ಧೂಳು ಕಸ ಝಾಡಿಸಿ ನೋಡಿದಾಗ ಒಂದೆರಡೇ ತೆಳ್ಳೆನಯ ಪುಸ್ತಕಗಳು ಓದುವ ಮಟ್ಟಿಗೆ ಅಕ್ಷತವಾಘಿದ್ದುದು ಕಂಡುಬಂತು. ಮಬ್ಬುಮಬ್ಬಾದ ಭಂಗುರ ಕಾಗದದ ಮೇಲೆ ಅಚ್ಚು ಮಾಡಿದ್ದ ಮಾರ್ಕೆಟ್ಟಿನ ಪುಸ್ತಕಗಳವು. ಅವುಗಳಲ್ಲಿ ಒಂದರ ಮೇಲೆ ’ಶಂಕರಾಚಾರ್ಯರು ಹಸ್ತಾಮಲಕರಿಗೆ ಬೋಧಿಸಿದ್ದು’ ಎಂದಿತ್ತು. ಅದು ಪದ್ಯದಲ್ಲಿತ್ತು. ನನಗೆ ಕುತೂಹಲವಾಗಿ ಅದನ್ನು ಓದಲು ತೊಡಗಿದೆ. ನನಗೆ ಆ ನೀತಿಬೋಧೆಯ ಭಾಷೆ ಎಷ್ಟರಮಟ್ಟಿಗೆ ಕರಾರುವಕ್ಕಾಗಿ ಅರ್ಥವಾಯಿತೋ ಏನೋ ತಿಳಿಯದು. ಆದರೆ ಅದರಲ್ಲಿದ್ದ ನರಕವರ್ಣನೆ ತನ್ನ ಭಯಾನಕತೆಯಿಂದಲೆ ನನ್ನ್ನನು ಆಕರ್ಷಿಸಿತು!

ಶಂಖರಾಚಾರ್ಯರು ಶಿಷ್ಯನಿಗೆ ಮನುಷ್ಯರು ಮಾಡುವ ಯಾವ ಯಾವ ಪಾಪಗಳಿಗೆ ಎಂತೆಂತಹ ಶಿಕ್ಷೆಗಳನ್ನು ಯಮ ವಿಧಿಸುತ್ತಾನೆ ಎಂಬುದನ್ನು ಘೋರವಾಗಿ ವರ್ಣೀಸಿದ್ದರು. ಹಾದರ ಮಾಡುವವರಿಗೆ ಏನು ಶಿಕ್ಷೆ? ಅದರಲ್ಲಿಯೂ ಗಂಡಸರಿಗೆ ಯಾವ ವಿಧ? ಹೆಂಗಸರಿಗೆ ಯಾವ ವಿಧ? ಪ್ರಾಣೀಗಳನ್ನು ಕೊಲ್ಲುವವರಿಗೆ ಯಾವ ತರಹದ ಯಾತನೆ? ಮಾಂಸಾಹಾರಿಗಳಿಗೆ ಯಾವಯಾವ ಕುದಿಸಿದೆಣ್ಣೆಯ ಕಡಾಯಿಗಳಲ್ಲಿ ಎಷ್ಟೆಷ್ಟು ಸಾರಿ ಅದ್ದಿ ಅಭ್ಯಂಜನ ಮಾಡಿಸುತ್ತಾರೆ? ಕೆಂಪಗೆ ಕಾದ ಉಕ್ಕಿನ ಪಕ್ಷಿಗಳು ಹೇಗೆ ಕಣ್ಣು ತಲೆ ಕುಟುಕಿ ತಿನ್ನುತ್ತವೆ? ಶೂಲಕ್ಕೆ ಹೇಗೆ ಏರಿಸುತ್ತಾರೆ? ಇತ್ಯಾದಿ ಇತ್ಯಾದಿ.
ಓದುತ್ತಾ ಓದುತ್ತಾ ನನಗೆ ಹೆದರಿಕೆಯಾಗಿ ಬೆವರು ಕಿತ್ತುಕೊಂಡಿತು. ಅದರಲ್ಲಿಯೂ ಆಚಾರ್ಯರು ನಮೂದಿಸಿದ ಕೆಲವು ಪಾಪಗಳನ್ನು ನಾನೇ ದಿನವೂ ಯಾವ ಮುಲಾಜು ಇಲ್ಲದೆ ಎಷ್ಟೋ ಸಲ ಮಾಡಿದ್ದೇನಲ್ಲಾ! ಸತ್ತಮೇಲೆ ನನ್ನ ಗತಿ ಏನು? ಅದರಲ್ಲಿಯೂ ಹಾದರಗೀದರದಂತಹ ಪಾಪಕ್ಕೆ ಒದಗುವ ಶಿಕ್ಷೆಯ ವಿಚಾರವಾಗಿ ನನಗೇನೂ ಭಯವಾಗಲಿಲ್ಲ. ಏಕಂದರೆ ಆ ಪಾಪದ ಅರ್ಥವೂ ಗೊತ್ತಿರಲಿಲ್ಲ.; ಅದಕ್ಕೂ ನನಗೂ ಏನೂ ಸಂಬಂಧವಿರಲೂ ಇಲ್ಲ. ಆದರೆ ಮಾಂಸಾಹಾರ! ಊಟ ಮಾಡುವಾಗಲೆಲ್ಲ ಸಾಧಾರಣವಾಗಿ ಆ ಪಾಪ ಮಾಡಿಯೆ ಮಾಡಿದ್ದೇನೆ! ಒಂದಲ್ಲ ಎರಡಲ್ಲ ನೂರಾರು ಪ್ರಾಣಿಗಳ ಮಾಂಸ ಭಕ್ಷಿಸಿದ್ದೇನಲ್ಲಾ! ಊರುಕೋಳಿ, ಕಾಡುಕೋಳಿ, ಚಿಟ್ಟುಗೋಳಿ, ಹುಂಡುಕೋಳಿ, ಊರುಹಂದಿ, ಕಾಡುಹಂದಿ, ಕಣೆಹಂದಿ, ಬರ್ಕ, ಕಬ್ಬೆಕ್ಕು, ಮೊಲ, ಊರುಕುರಿ, ಕಾಡುಕುರಿ, ಮಿಗ, ಕಡ, ಚಿಪ್ಪಿನಹಂದಿ, ಇನ್ನೂ ಎಷ್ಟೋ ಭೂಚರ ಜಂತುಗಳು! ಇನ್ನು ವಾಯುಚರ ಪಕ್ಷಿಗಳಲ್ಲಿ? ಹೊರಸಲು ಹಕ್ಕಿ, ಹಾಡ್ಲು ಹಕ್ಕಿ, ಮಣೆಹಾಡ್ಲು ಹಕ್ಕಿ, - ಕಡೆಗೆ ರಬ್ಬರು ಬಿಲ್ಲಿನಲ್ಲಿ ನಾನೇ ಷಿಕಾರಿ ಮಾಡಿದ ಪಿಕಳಾರ, ಕುಟುರ, ಗಿಳಿ, ಅರಸಿನ ಬುರುಡೆ ಇಂತಹ ನೂರಾರು ಹೆಸರಿಲ್ಲದ ಹಕ್ಕಿಗಳು! ಇನ್ನು ಜಲಚರಗಳು? ಲೆಕ್ಕವಿಲ್ಲ! ಅಯ್ಯೊ ದೇವರೆ, ಚಿತ್ರಗುಪ್ತನ ದಫ್ತರ ಪುಸ್ತಕವೆಲ್ಲ ಸಾಲುವುದಿಲ್ಲವಲ್ಲಾ ನನ್ನೊಬ್ಬನ ಪಾಪಗಳ ಪಟ್ಟಿಯನ್ನೆ ಬರೆಯುವುದಕ್ಕೆ? ನನ್ನ ಗತಿಯೇನು?
ಕುದಿಯುವ ಎಣ್ಣೆಯ ಕಡಾಯಿಯಲ್ಲಿ ಅದ್ದುತ್ತಾರೆ, ಕೆಂಪಗೆ ಕಾದ ಶೂಲಕ್ಕೆ ಚುಚ್ಚುತ್ತಾರೆ ಎಂದೆಲ್ಲ ಓದಿದಾಗ ಹೆದರಕೆಯಾಯ್ತು. ಆದರೆ “ಕಂದ, ಕೇಳ್” ಎಂದು ಶುರುಮಾಡಿ ಆಚಾರ್ಯರು “ಕೊಳೆತ ಪುರೀಷ ಮೂತ್ರದ ರಾಶಿಯಲ್ಲಿ” ಹಾಕುತ್ತಾರೆ ಯಮದೂತರು ಎಂದು ಘೊಷಿಸಿದಾಗ ಹೆದರಿಕೆಯ ಜೊತೆಗೆ ಹೆದರಿಕೆಯನ್ನು ಸಾಔಇರ ಪಾಲು ಮೀರಿ ‘ಅಸಹ್ಯ’ ‘ಜುಗುಪ್ಸೆ’ ‘ಹೇಸಿಗೆ’ ‘ವಾಕರಿಕೆ’ ಎಲ್ಲ ಒಟ್ಟಿಗೆ ಆಗಿ ‘ಕೆಟ್ಟೆ!’ ಎಂದುಕೊಂಡು ಪುಸ್ತಕ ಮುಚ್ಚಿಟ್ಟುಬಿಟ್ಟೆ!
ಬಾಲಕನ ಅದ್ಭುತ ಕಲ್ಪನೆ ಕೆರಳಿತು: ಅತ್ಯಂತ ಬೀಭತ್ಸಕರವಾದ ಚಿಂತೆಯಲ್ಲಿ ಮಗ್ನನಾಗಿ ಕುಳಿತುಬಿಟ್ಟೆ!
ಬಹಳ ಹೊತ್ತಿನ ಚಿಂತನೆಯ ಪರಿಣಾಮವಾಗಿ ಒಂದು ನಿಧಾರಕ್ಕೆ ಬಂದೆ. ಮೋಸಸ್ ಮೇಷ್ಟರು ಕೊಟ್ಟಿದ್ದ ಸುವಾರ್ತೆಯಲ್ಲಿ ಯೇಸುಸ್ವಾಮಿ ಬೋಧಿಸಿದ್ದು ನೆನಪಿಗೆ ಬಂತು: ಪಾಪಕ್ಕೆ ಪಶ್ಚಾತ್ತಾಪವೆ ಪ್ರಾಯಶ್ಚಿತ್ತ ಎಂಬುದು. ನರಕಶಿಕ್ಷೆಯ ಭಯದಿಂದ ಆಗಲೇ ನನ್ನಲ್ಲಿ ಪಶ್ಚಾತ್ತಾಪ ಶುರುವಾಗಿಬಿಟ್ಟಿತ್ತಷ್ಟೆ? ಆ ಪಶ್ಚಾತ್ತಾಪವನ್ನೆ ಸ್ವಲ್ಪ ಮುಂದುವರಿಸಿದರಾಯ್ತು, ಪ್ರಾಯಶ್ಚಿತ್ತದಿಂದ ಪಾಪವೆಲ್ಲ ಪರಿಹಾರವಾಗಿಯೆ ಆಘುತ್ತದೆ. ಇನ್ನು ಮೇಲೆ ಪಾಪ ಮಾಡದ ಹಾಗೆ ನೋಡಿಕೊಂಡರಾಐತು! ಅಮದರೆ ಇನ್ನು ಮೇಲೆ ಮಾಂಸಾಹಾರವನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ನಿರ್ಧರಿಸಿದೆ. ಅದೇನು ಸಾಧಾರಣ ನೀರ್ಧಾರವಾಗಿರಲಿಲ್ಲ. ಆ ನಿರ್ಧಾರ ಬುದ್ಧನ ಪತ್ನೀಪುತ್ರರಾಜ್ಯ ಪರಿತ್ಯಾಗಗಳೀಗಿಂತಲೂ ಕಡಮೆಯಾgiರಲಿಲ್ಲವೆಂಬುದು ಮಾಂಸಾಹಾರದ ರುಚಿಯರಿತ ನಾಲಗೆಗಳಿಗಲ್ಲದೆ ಉಳಿದವರಿಗೆ ಗೊತ್ತಾಗುವುದಿಲ್ಲ!
ನನ್ನ ಉದ್ಧಾರವನ್ನೇನೊ ಮಾಡಿಕೊಳ್ಳಲು ನಿರ್ಧರಿಸಿದ್ದೆ. ಆದರೆ ಅಷ್ಟರಿಂದಲೆ ಮನಸ್ಸಿಗೆ ತೃಪ್ತಿಯಾಗಲಿಲ್ಲ. ನನ್ನ ಒಡನಾಡಿಗಳು, ಗೆಳೆಯರು, ಬಂಧುಮಿತ್ರರು, ಮನೆಯವರು ಇವರೆಲ್ಲ ನರಕಕ್ಕೆ ಹೋಗಿ, ಪಡಬಾರದ ಯಾತನೆಪಡುತ್ತಾರಲ್ಲಾ ಎಂದು ಪರುಧಃಖಕಾತರತೆ ಹೃದಯವನ್ನಾಕ್ರಮಿಸಿತು. ಅವರೆಲ್ಲ ನರಕಕ್ಕೆ ಹೋಗಿ ನಾನೊಬ್ಬನೆ ಸ್ವರ್ಗದಲ್ಲೇನು ಮಾಡುವುದು? ಆದ್ದರಿಂದ ಶಂಕರಾಚಾರ್ಯರಂತೆ ಅವರೆಲ್ಲರಿಗೂ ಬೋಧನೆ ಮಾಡಿ ಅವರನ್ನೂ ನರಕದಿಂದ ಪಾರುಮಾಡಬೇಕೆಂದು ಮನಸ್ಸು ಮಾಡಿದೆ. ಆದರೆ ದೊಡ್ಡವರೆಲ್ಲ ನನ್ನಂತಹ ಅರಿಯದವನ ಮಾತು ಕೇಳುತ್ತಾರೆಯೆ? ಆದ್ದರಿಂದ ನನ್ನ ಜೊತೆಗಾರರನ್ನಾದರೂ ನರಕದಿಂದ ಉಳಿಸಬೇಕೆಂದು ಸಂಕಲ್ಪಿಸಿ, ಅವರನ್ನೆಲ್ಲ ಉಪ್ಪರಿಗೆಯಲ್ಲಿ ಕಲೆಹಾಕಿದೆ. ಅವರೆಲ್ಲರೂ -ಸುಬ್ಬಣ್ಣ, ಧರ್ಮು, ಮಾಣಪ್ಪ, ಓಬಯ್ಯ, ತಿಮ್ಮು, ವೆಂಕಟಯ್ಯ ಇತ್ಯಾದಿ -ನಾನು ಕಥೆ ಹೇಳಬಹುದೆಂದು ಆಸಿಸಿ ನೆರೆದರು.
ಹಸ್ತಾಮಲಕರಿಗೆ ಶಂಕರಾಚಾರ್ಯರು ಹೇಳಿದ್ದ ನರಕದ ಶಿಕ್ಷೆಗಳನ್ನೆಲ್ಲ ರಾಗವಾಗಿ ಓದಿ ಮನದಟ್ಟುವಂತೆ ವಿವರಿಸಿದೆ. ಸತ್ತಮೇಲೆ ಮುಂದೆ ಒದಗಬಹುದಾದ ಕೇಡುಗಳನ್ನೆಲ್ಲ ಆಲಿಸಿದ್ದ ಎಲ್ಲರೂ ಪ್ರಭಾವಿತರಾದರೆಂದು ಭಾವಿಸಿ, ಪರಿಹಾರ ಕ್ರಮಗಳನ್ನು ಸೂಚಿಸಿದೆ. ಇದುವರೆಗೆ ಮಾಡಿದ ಪಾಪಕ್ಕೆ ಪರಿಹಾರ ರೂಪವಾಗಿ ಪಶ್ಚಾತ್ತಾಪ ರೂಪವಾದ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕೆಂದೂ ಮುಂದೆ ಅಮತಹ ಪಾಪ ಸಂಭವಿಸದಂತೆ ಮಾಡಲು ಮಾಂಸಾಹಾರವನ್ನೇ ಸಂಪೂರ್ಣವಾಗಿ ಬಿಟ್ಟುಬಿಡಬೇಕೆಂದೂ ಹೃದಯಸ್ಯಂದಿಯಾಘಿ ಬೋಧಿಸಿದೆ. ಎಲ್ಲರೂ ಒಪ್ಪಿದಂತೆ ತೋರಿಸದರು. ಅದು ಎಷ್ಟರಮಟ್ಟಿಗೆ ಬುದ್ಧಿಪೂರ್ವಕವಾಗಿತ್ತು, ಮತ್ತೆಷ್ಟರಮಟ್ಟಿಗೆ ಹೃತ್ಪೂರ್ವಕವಾಘಿತ್ತು ಎಂಬುದು ಕಾಲಕ್ರಮೇಣ ತಿಳಿಯುತ್ತದಷ್ಟೆ.
ಸರಿ, ಎಲ್ಲರೂ ದೇವರ ಮೇಲೆ ಆಣೆಯಿಟ್ಟು ಶಪಥಮಾಡಿದೆವು; ಇನ್ನುಮೇಲೆ ಮಾಂಸಾಹರ ಸೇವಿಸುವುದಿಲ್ಲ ಎಂದು.
ನಾವು ಪ್ರತಿಜ್ಞೆಮಾಡಿದ ಒಂದೆರಡು ದಿನಗಳಲ್ಲಿಯೆ ಮನೆಯಲ್ಲಿ ಏನೋ ಒಂದು ತಂತಿಗೆ ಸಂಬಂಧಿಸಿದ ಕಟ್ಟಳೆ ನಡೆಯಿತು. ನಂಟರಿಷ್ಟರು ಬಹಳ ಮಂದಿ ನೆರೆದಿದ್ದರು. ರಾತ್ರಿ ಹೊರಜಗುಲಿಲ್ಲಿ ಗಂಡಸರಿಗೆಲ್ಲ ‘ಬಳ್ಳೆ’ ಹಾಕಿದ್ದರು, ಒಳಗೆ ಅಡುಗೆ ಮನೆಯಲ್ಲಿ ಜಾಗ ಸಾಲದಗುತ್ತದೆ ಎಂದು. ನಾವೆಲ್ಲ ಹುಡುಗರೂ ಒಂದೆಡೆ ಸಾಲಾಗಿ ಕುಳಿತೆವು. ಯಾರೂ ತೊಟ್ಟ ಶಪಥವನ್ನು ಮುರಿಯಬಾರದು ಎಂದು ಎಲ್ಲರಿಗೂ ಎಚ್ಚರಿಕೆ ಕೊಟ್ಟಿತ್ತು.
ಆ ಕಟ್ಟಳೆಯ ಸ್ವರೂಪ ಎಂಥಾದ್ದಾಗಿತ್ತು ಎಂದರೆ, ಊಟದಲ್ಲಿ ತುಂಡು ಕಡುಬೇ ಪ್ರಧಾನ. ಕಡುಬನ್ನು ಎಲ್ಲರಿಗೂ ಇಕ್ಕುತ್ತಾ ಬಂದರು. ಅದರ ಹಿಂದೆ ಮಾಂಸದ ಹುಳಿಯೂ ಪದ್ಧತಿಯಂತೆ ಹಿಂಬಾಲಿಸಿತು. ಬಡಿಸುವವರು ನನ್ನ ಎಲೆಯ ಮುಂದೆ ಬಂದೊಡನೆ ನಾನು ಎರಡೂ ಕೈಗಳನ್ನು ಅಡ್ಡ ಹಾಕಿ ‘ಬೇಡ’ ಎಂದೆ. ಬಡಿಸುವವರಿಗಂತೂ ದಿಗ್‌ಭ್ರಮೆ. ಕಡುಬು ತುಂಡು ಎಂದರೆ ಪ್ರಾಣ ಬಿಡುವಷ್ಟು ಬೇಗುತ್ತಿದ್ದವನು ಈ ಹೊತ್ತೇಕೆ ಹೀಗೆ ವರ್ತಿಸುತ್ತಿದ್ದಾನೆ ಎಂದು? ಬಡಿಸುವವರು ತುಸು ತತ್ತರಿಸಿ ನಿಂತರು. ಪಂಕ್ತಿಯಲ್ಲಿ ಊಟಕ್ಕೆ ಕುಳಿತಿದ್ದು ಸಮೀಪವಾಗಿದ್ದು ಗಮನಿಸಿದ ನೆಂಟರನೇಕರು ಬೆರಗಾಗಿ ನನ್ನತ್ತ ಕಡೆ ನೋಡಿದರೆ. ಹಿರಿಯರು ಯಾರೋ ಒಬ್ಬರು ಕೂಗಿದರು ‘ಬ್ಯಾಡ ಅನ್ನಬಾರದೋ, ಕಟ್ಟಳೆ ದಿನದ್ದು’ ಎಂದು. ಆದರೆ ನಾನು ಅಡ್ಡ ಹಿಡಿದಿದ್ದ ಕೈಗಳನ್ನು ತೆಗೆಯದೆ ಮುಖವನ್ನು ಅಡ್ಡಗಟ್ಟುವಂತೆ ಮುಮದಕ್ಕೆ ಚಾಚಿ ಬೇಡವೇ ಬೇಡ ಎಂದುಬಿಟ್ಟೆ. ಬಡಿಸುತ್ತಿದ್ದವರು ಪಕ್ಕದ ಎಲೆಗೆ ಹೋದರು. ಅಲ್ಲಿಯೂ ‘ಬೇಡ!’ ಅದರ ಪಕ್ಕದ ಎಲೆಯೂ ’ಬೇಡ’ ಎಂದಿತು. ಇಡೀ ಪಂಕ್ತಿಯೇ ನಮ್ಮ ಮೇಲೆ ಕಣ್ಣು ಹಾಕಿತು! ಅಂತೂ ಶಪಥ ತೊಟ್ಟ ನಾವೆಲ್ಲರೂ ಕಡುಬನ್ನು ಮಾತ್ರ ಇಕ್ಕಿಸಿಕೊಂಡು ತುಂಡನ್ನು ಬೇಡವೆಂದೇಬಿಟ್ಟೆವು. ಬಡಿಸುವವರು ಹುಡಗರ ಸಾಲನ್ನು ದಾಟಿ ಮುಂದೆ ಬಡಿಸುತ್ತಾ ಹೋದರು. ಹಿರಿಯರೊಬ್ಬರು ಹುಡುಗರಿಗೆ ಕಡುಬಿಗೆ ನಂಚಿಕೊಳ್ಳಲು ತುಪ್ಪ ಬೆಲ್ಲ ಬಡಿಸಲು ಹೇಳಿದರು. ಅದರಂತೆ ತುಪ್ಪಬೆಲ್ಲ ನಂಚಿಕೊಂಡು ತಿನ್ನತೊಡಗಿದೆವು.
ಆದರೆ ನಮ್ಮಲ್ಲಿ ಒಬ್ಬ, ಅತ್ಯಂತ ಕಿರಿಯ, ಕಡುಬಿಗಾಗಲಿ ತುಪ್ಪಬೆಲ್ಲಕ್ಕಾಗಲಿ ಕೈಹಾಕಲೆ ಇಲ್ಲ. ಕಣ್ಣಿಂದ ಬುಬುಳನೆ ನೀರು ಸುರಿಸುತ್ತಾ ನೀರವವಾಗಿ ಅಳುತ್ತಾ ಕುಳಿತಿದ್ದ. ಮೊದಮೊದಲು ಯಾರೂ ಗಮನಿಸಲಿಲ್ಲ. ಆದರೆ ಸ್ವಲ್ಪ ಹೊತ್ತಿನೊಳಗಾಗಿ ಒಬ್ಬರ ಕಣ್ಣಿಗೆ ಬಿದ್ದು, ಅವರು “ಯಾಕೋ, ತಮ್ಮ, ಅಳ್ತಾ ಕೂತಿಯಲ್ಲಾ” ಎಂದು ಎಲ್ಲರಿಗೂ ಕೇಳಿಸುವಂತೆ ಕೂಗಿದರು. ಅವನ ಳು ಮತ್ತೂ ಜೋರಾಯಿತು. ಏಕೆ ಎಂದು ಕೇಳಿದರೆ ಹೇಳದೆಯೆ ಹೋದ. ಕಡೆಗೆ ಅವನ ಅಮ್ಮನೆ ಬಂದು ಕೈಹಿಡಿದೆತ್ತಿ ಒಳಗೆ ಕರೆದು ಹೋದರು. ಅಲ್ಲಿ ಕಡುಬಿಗೆ ಮಾಂಸದ ಹುಳಿ ಹಾಕಿಸಿಕೊಂಡು ನಮ್ಮ ಯಾರ ಭಯವೂ ಇಲ್ಲದೆ ತಿಂದನಂತೆ!
***
ಆ ಕಿರಿಯನೇನೊ ಪ್ರಪ್ರಥಮ ಪ್ರಲೋಭನಕ್ಕೇ ಸೋತು ಶರಣಾಗಿ ಪ್ರತಿಜ್ಞೆ ಮುರಿದು ಶಪಥದಿಂದ ಪಾರಾಗಿಬಿಟ್ಟಿದ್ದ! ಆದರೆ ಉಳಿದವರ ಪ್ರತಿಜ್ಞೆಯೂ ಬಹಳ ಕಾಲ ಉಳಿಯಲಿಲ್ಲ. ಸ್ವರ್ಗಾರೋಹಣ ಪರ್ವದಲ್ಲಿ ಒಬ್ಬೊಬ್ಬರೆ ಪಾಂಡವರು ಉರುಳಿದಂತೆ ಸ್ವಲ್ಪ ಕಾಲದಲ್ಲಿಯೆ ಒಬ್ಬರಾದಮೇಲೊಬ್ಬರು ಮಾಂಸರುಚಿಯಿಂದ ತಪ್ಪಿಸಕೊಳ್ಳಲಾರದೆ ಶರಣುಹೊಡೆದರು. ನಾನೊಬ್ಬನೆ, ಹಟಕ್ಕಾಗಿ ಎಂದೇ ನನ್ನ ಭಾವನೆ, ಅನೇಕ ವರ್ಷಗಳವರೆಗೆ ಅದನ್ನು ಸಾಧಿಸಿದ್ದೆ.
ಹೀಗೆಯೆ ನನ್ನ ಬದುಕಿನಲ್ಲಿ ಭಂಗಗೊಂಡ ಪ್ರತಿಜ್ಞೆಗಳಿಗೆ ಲೆಖ್ಖವಿಲ್ಲ; ಆಧ್ಯಾತ್ಮಿಕ ಸಾಧನೆಗೂ ಬ್ರಹ್ಮಷರ್ಯಪಾಲನೆಗೂ ಆಹಾರ ನಿಯಂತ್ರಣ ಬಹಳ ಆವಶ್ಯಕವೆಂಬ ಭ್ರಾಂತಿಗೆ ಸಿಕ್ಕಿ ಅನೇಕ ವರ್ಷಗಳ ಕಾಲ ಒಪ್ಪತ್ತು ಊಟ ಮಾಡಿ, ರಾಥ್ರಿ ನೆನೆಸಿಟ್ಟಿದ್ದ ಕಡಲೆ ತಿಂದು, ಕಾಲ ಹಾಕಿದ್ದೆ. ಬೇಟೆಯ ಹುಚ್ಚನ್ನು ಬಿಡಲಾರದೆ, ಹುಲಿ ಹಂದಿ ಮುಂತಾದ ಕ್ರೂರಜಂತುಗಳನ್ನಲ್ಲದೆ ಮೊಲ ಜಿಂಕೆ ಮುಂತಾದ ಸಾಧುಪ್ರಾಣಿಗಳನ್ನು ಹೊಡೆಯುವುದಿಲ್ಲ ಎಂದು ಶಪಥಮಾಡಿ, ದೊಡ್ಡ ಬೇಟೆಯಲ್ಲಿ ಬಿಲ್ಲಿಗೆ ಕುಳಿತು, ಮಿಗ ಕಾಡುಕುರಿ ಬರ್ಕ ಮೊದಲಾದುವುಗಳನ್ನು ಗುಂಡಿಕ್ಕಿ ಕೊಲ್ಲದೆ ಬಿಟ್ಟು ಇತರ ಬೇಟೆಗಾರರಿಂದ ಚೆನ್ನಾಗಿ ಅನ್ನಿಸಿಕೋಂಡಿದ್ದೇನೆ. ಉಲ್ಲೇಖಾರ್ಹವಲ್ಲದ ಇನ್ನೆನಿತೆನಿತೊ ದುರಭ್ಯಾಸಗಳನ್ನು ತ್ಯಜಿಸಲು ವ್ರತಪ್ರತಿಜ್ಞೆ ಶಪಥಗಳನ್ನು ವೀರನಿಷ್ಠೆಯಿಂದ ಕೈಕೊಂಡು, ಮತ್ತೆ ಮತ್ತೆ ಸೋತು, ಉರುಳಿ, ಬಿದ್ದು, ಎದ್ದು ಪಯಣ ಸಾಗಿಸಿದ್ದೇನೆ. ಆದರೆ, ಶ್ರೀಗುರುಕೃಪೆಯಿಂದ, ಸೋತರೂ ಬಿದ್ದರೂ ಉರುಳಿದರೂ ಗಾಯಗೊಂಡರೂ ಮತ್ತೆ ಮತ್ತೆ ಎದ್ದು ದೃಢಪ್ರತಿಜ್ಞನಾಗಿ ಮುಂದುವರಿಯುವ ಛಲವನ್ನು ಮಾತ್ರ ಎಂದೂ ಕೈಬಿಟ್ಟಿಲ್ಲ.

No comments: