Friday, January 9, 2015

ಮೋಸಸ್ ಮೇಷ್ಟರು ಬಿತ್ತಿದ ಪ್ರಾರ್ಥನೆಯ ಕಿಡಿ - 2

ಮೋಸಸ್ ಅವರ ಆಗಮನದ ತರುವಾಯ 'ಐಗಳು' ಎಂಬ ನಾಮ ಸಂಪೂರ್ಣವಾಗಿ ಅಳಿಸಿಹೋಗಿ, 'ಮೇಷ್ಟರು' ಎಂಬ ಬಿರುದು ಪಟ್ಟಕ್ಕೇರಿತು ಮತ್ತು ಪಾಶ್ಚಾತ್ಯ ಪ್ರಭಾವದ ಆಧುನಿಕ ಪ್ರಪಂಚಕ್ಕೆ ಪ್ರವೇಶಿಸಿತು, ನಮ್ಮ ಉಪ್ಪರಿಗೆಯ ಶಾಲೆ.
ಮಕ್ಕಳೆಲ್ಲ ಅವರ ವ್ಯಕ್ತಿತ್ವದ ಪ್ರಭಾವಕ್ಕೆ ಬಹು ಸುಲಭವಾಗಿಯೆ ಒಳಗಾದೆವು. ಮೊದಲನೆಯದಾಗಿ, ಅವರ ವೇಷಭೂಷಣ ನಮ್ಮ ಹಳ್ಳಿಗರ ರೀತಿಯಿಂದ ಪ್ರತ್ಯೇಕವಾಗಿದ್ದು, ಪಟ್ಟಣದ ನಾಗರಿಕತೆಯ ಶೋಭೆಯಿಂದ ನಮ್ಮ ಶ್ಲಾಘನೆಗೆ ಒಳಗಾಗಿ ಆಕರ್ಷಣೀಯವಾಗಿತ್ತು. ಅವರು ಹಾಕಿಕೊಳ್ಳುತ್ತಿದ್ದ ಬಟ್ಟೆಗಳು ಅದೆಷ್ಟು ಬೆಳ್ಳಗೆ? ಅಷ್ಟು ಬೆಳ್ಳಗಿರುವ ಬಟ್ಟೆಗಳನ್ನು ನಾವು ಸಾಮಾನ್ಯವಾಗಿ ನೋಡಿಯೆ ಇರಲಿಲ್ಲ. ನಮ್ಮ ಅಪ್ಪಯ್ಯ ಚಿಕ್ಕಪ್ಪಯ್ಯ ಅಜ್ಜಯ್ಯ ಅವರು ತೀರ್ಥಹಳ್ಳಿಯ ಮಾರ್ವಾಡಿ ಅಂಗಡಿಯಿಂದ ಕೊಂಡು ತರುತ್ತಿದ್ದ ಪಂಚೆಗಳು, ತಂದಾಗ ಮಾತ್ರ ತಕ್ಕಮಟ್ಟಿಗೆ ಬೆಳ್ಳಗಿದ್ದು, ನಮ್ಮ ಕಣ್ಮೆಚ್ಚಿಗೆ ಪಡೆಯುತ್ತಿದ್ದುವು. ಆದರೆ ಉಪಯೋಗಿಸಲು ತೊಡಗಿದ ಮೇಲೆ ಅವು ಎಂದಿಗೂ ಆ ಧವಳಿಮತೆಯನ್ನು ಮತ್ತೆ ಪಡೆಯುತ್ತಿರಲಿಲ್ಲ. ಒಗೆ ಕಂಡಂತೆಲ್ಲ ಅವುಗಳ ಬಣ್ಣಗೇಡು ಮುಂದುವರಿಯುತ್ತಿತ್ತು! ಸಾಬೂನು, ಸೋಪು ಈ ಮಾತುಗಳೂ ಪರಕೀಯವೂ ಅಪರಿಚಿತವೂ ಆಗಿದ್ದ ಆ ಕಾಲದಲ್ಲಿ ಚಬಕಾರ, ಚೌಳು, ಸೀಗೆ, ಅಂಟುವಾಳಕಾಯಿ ಇವುಗಳು ಬಟ್ಟೆಗಳಿಗೆ ಅಚ್ಚ ಬಿಳಿಯ ಸುಣ್ಣದ ಶ್ವೇತತ್ವವನ್ನು ದಯಪಾಲಿಸಲು ಸಮರ್ಥವಾಗುತ್ತಿರಲಿಲ್ಲ. ಆದ್ದರಿಂದಲೆ ಎಂದು ತೋರುತ್ತದೆ, ಬಿಳಿ ಬಟ್ಟೆಯ ವಿಚಾರವಾಗಿ ನಮ್ಮವರಿಗೆ ಒಂದು ತಿರಸ್ಕಾರ ಭಾವನೆ ಹೃದ್ಗತವಾಗಿ ಬಿಟ್ಟಿತು! ಎಟುಕದ ದ್ರಾಕ್ಷಿ ಹುಳಿ ಎಂಬಂತೆ!
ಅವರು ಬೆಳ್ಳನೆಯ ಕಚ್ಚೆಯುಟ್ಟು, ಹೊಸ ನಮೂನೆಯ ಷರ್ಟು ಹಾಕಿ, ಮೇಲೆ ಕರಿಯ ಅಥವಾ ಗೀರುಗೀರಿನ ಅಥವಾ ಇನ್ನಾವುದೊ ಕಣ್ಣು ಸೆಳೆಯುವ ಬಣ್ಣದ ಕೋಟು ಹಾಕಿಕೊಳ್ಳುತ್ತಿದ್ದರು. ಎಲ್ಲಕ್ಕಿಂತಯಲೂ ಕಿರೀಟಪ್ರಾಯವಾಗಿದ್ದುದೆಂದರೆ ಅವರು ಬಿಟ್ಟಿದ್ದ ಕ್ರಾಪು! ಅವರು ಎಣ್ಣೆ ಹಾಕಿ ಬಾಚಿ ಬೈತಲೆ ತೆಗೆದರೆಂದರೆ, ಮುಂದಲೆ ಚೌರ ಮಾಡಿಸಿಕೊಂಡು ಹಿಂದಲೆ ಜುಟ್ಟು ಬಿಟ್ಟಿದ್ದ ನಮ್ಮ ತಲೆಗಳು ನಾಚಿ ಮೂಲೆ ಸೇರುವಂತಾಗುತ್ತಿತ್ತು. ಅವರ ಕ್ರಾಫನ್ನೇ ನೋಡಿ ನೋಡಿ ಕರುಬಿ, ನಮ್ಮ ತಲೆಗಳನ್ನೂ ಏತಕ್ಕೆ ಹೀಗೆ ಚೌರ ಮಾಡಿಸಿಕೊಳ್ಳಬಾರದು ಎಂಬ ಮತೀಯ ಕ್ರಾಂತಿಭಾವವೋ ಎಂಬಂತಹ, ಒಂದು ಭಯಂಕರ ಮನೋಧರ್ಮ ಇಣುಕುತ್ತಿತ್ತು.
ಆ ಬಾಹ್ಯದ ಅನುಕರಣದ ಆಶೆ ನಮ್ಮಲ್ಲಿ ಆಶಾಮಾತ್ರವಾಗಿಯೆ ಉಳಿಯಬೇಕಾಗಿತ್ತು. ಅದು ಕೈಗೂಡುವ ಸಂಭವ ಒಂದಿನಿತೂ ಇರಲಿಲ್ಲ. ನಮ್ಮ ತಲೆಯ ಮೇಲಣ ಕೂದಲು ನಮ್ಮದೇ ಆಗಿದ್ದರೂ ಅದರ ಹಕ್ಕೆಲ್ಲ ನಮ್ಮ ತಂದೆ ತಾಯಿಗಳಿಗೆ ಹಿರಿಯರಿಗೆ ಸೇರಿದ್ದಾಗಿತ್ತು. ನಮ್ಮ ತಲೆಯ ಮೇಲೆ ಆ ಕೂದಲು ಹೇಗಿರಬೇಕು? ಹೇಗಿರಬಾರದು? ಎಂಬುದರ ಮೇಲಣ ಅಧಿಕಾರ ನಮಗೆ ಸ್ವಲ್ಪವೂ ಇರಲಿಲ್ಲ. ನಮ್ಮ ಆ ತಲೆಯ ಕೂದಲು ನಮ್ಮ ಮಟ್ಟಿಗೆ ಬರಿಯ ಐಹಿಕದ ವಸ್ತುವಾಗಿದ್ದರೂ, ನಮ್ಮ ಹಿರಿಯರಿಗೆ ಅವರ ಆಮುಷ್ಮಿಕ ಕ್ಷೇಮಕ್ಕೆ ಕೊಂಡೊಯ್ಯುವ ಸೂತ್ರವಾಗಿತ್ತು. ಜುಟ್ಟನ್ನು ಕತ್ತರಿಸಿ ಮಂಡೆ ಬೋಳಿಸುವುದು ಅಪ್ಪ ಅಮ್ಮ ಸತ್ತದ್ದಕ್ಕೆ ಸಂಕೇತವಾಗುತ್ತಿತ್ತು. ಅಪ್ಪ ಅಮ್ಮ ಬದುಕಿರುವವರು ಯಾರಾದರೂ ತಲೆ ಬೋಳಿಸುವುದುಂಟೆ? ಅಂತಹ ಪಾಷಂಡಿಕರ್ಮಕ್ಕೆ ನಮ್ಮನ್ನೆಂದೂ ಬಿಡುತ್ತಿರಲಿಲ್ಲ. ಅಲ್ಲದೆ ಹಾಗೆ ಮಾಡುವವರು ಜಾತಿಭ್ರಷ್ಟರಾದಂತೆಯೆ ಅಲ್ಲವೆ? ಅದು ಜಾತಿ ಕೆಟ್ಟ ಕಿಲಸ್ತರಿಗೆ ಮತ್ತು ಮುಸಲ್ಮಾನರಿಗೆ ಮಾತ್ರವೆ ಯೋಗ್ಯ: ಹಿಂದೂಗಳಿಗೆ ಶಿಖೆಯೇ ಸ್ವರ್ಗಕ್ಕೊಯ್ಯುವ ಏಣಿ! ಮತ್ತು ಧರ್ಮಧ್ವಜ!
ನಮ್ಮ ಬುರುಡೆಯ ಮೇಲಣ ವಸ್ತುವಿನ ವಿಚಾರದಲ್ಲಿ ನಮ್ಮ ಹಿರಿಯರಿಗೆ ಇರುತ್ತಿದ್ದ ಆಸಕ್ತಿ ನಮ್ಮ ಮಂಡೆಯ ಒಳಗಿನ ವಸ್ತುವಿನಲ್ಲಿಯೂ ಇರುತ್ತಿದ್ದರೆ ಮುಂದೆ ನಡೆದುದು ನಡೆಯುತ್ತಿರಲಿಲ್ಲವೋ ಏನೊ? ಆದರೆ ಮೆದುಳಿನ ವ್ಯಾಪಾರ ಆಲೋಚನಾ ರೂಪವಾದ್ದರಿಂದ ಆ ಅಗೋಚರದ ವಿಷಯದ ಕಡೆಗೆ ಅವರ ಲಕ್ಷ ಅಷ್ಟಾಗಿ ಬೀಳಲಿಲ್ಲ. ಆ ಕಾರಣವಾಗಿಯೆ ನಮಗೆ ಅಲ್ಲಿ ತಕ್ಕಮಟ್ಟಿನ ಸ್ವಾತಂತ್ರಕ್ಕೆ ಅವಕಾಶ ಒದಗಿತು. ಬಾಹ್ಯಕವಾಗಿ ನಡೆಯಲಾರದಿದ್ದ ಕ್ರಾಂತಿ ದಮನಗೊಂಡು ಆಂತರಿಕವಾಗಿ ತಲೆಯೆತ್ತಿತ್ತು. ನಮ್ಮ ಹೊಸ ಉಪಾಧ್ಯಾಯರ ಕ್ರೈಸ್ತಮತ ಬೋಧೆಗೆ ನಮ್ಮ ಮನಸ್ಸಿನ ಮೊಗ್ಗು ತನ್ನ ಬುದ್ಧಿಯ ಬಾಗಿಲು ತೆರೆದು ಮೆಲ್ಲಮೆಲ್ಲನೆ ಅರಳಿತು
.............. ಮುಂದುವರೆಯುವುದು

No comments: