Monday, January 12, 2015

'ಕುಪ್ಪಳಿ'ಯಿಂದ 'ತೀರ್ಥಹಳ್ಳಿ'ಗೆ ಶಿಪ್ಟ್!


ಕುಪ್ಪಳಿ, ವಾಟಗಾರು, ದೇವಂಗಿ, ಬಳಗಟ್ಟೆ ಮೊದಲಾದ ಒಂದೆ ಮನೆಯ ಹಳ್ಳಿಗಳಿಂದ ಈ ಮೊದಲೆ, ಕ್ರೈಸ್ತ ಮಿಷನರಿಗಳ ಪ್ರಭಾವ ಪ್ರೋತ್ಸಾಹ ಸಹಾಯಗಳಿಗೆ ಸಿಲುಕಿ, ಕೆಲವು ಹುಡುಗರು ಮೈಸೂರು ಬೆಂಗಳೂರುಗಳಿಗೆ ಓದಲು ಹೋಗಿದ್ದರಷ್ಟೆ. ನನ್ನ ಲೋಕಪ್ರಜ್ಞೆ ತನ್ನ ಬುದ್ಧಿ ನೇತ್ರಗಳನ್ನು ತೆರೆದು ಸುತ್ತಣ ಘಟನೆಗಳನ್ನು ಗ್ರಹಿಸಲು ಕಲಿಯುವುದಕ್ಕೆ ಪೂರ್ವದಲ್ಲಿಯೆ, ಹಾಗೆ ಓದಲು ಹೋಗಿದ್ದು, ಮೈಸೂರಿನ ಹಾರ್ಡ್ವಿಕ್ ಕಾಲೇಜಿನಲ್ಲಿ ಓದುತ್ತಿದ್ದು, (ಹೆಸರಿಗೆ ಮಾತ್ರ ಕಾಲೇಜು, ವಾಸ್ತವವಾಗಿ ಸ್ಕೂಲು) ಹಾರ್ಡ್ವಿಕ್ ಹಾಸ್ಟೆಲ್ ಎಂಬ ಆ ಕಾಲೇಜಿಗೆ ಸೇರಿದ್ದ ಕ್ರಿಶ್ಚಿಯನ್ ಹಾಸ್ಟೆಲಿನಲ್ಲಿ ಬಿಟ್ಟಿ ಊಟ ವಸತಿ ಗಿಟ್ಟಿಸುತ್ತಿದ್ದು, ಓದು ಸಾಕಾಗಿ ಹಿಂತಿರುಗಿಯೂ ಬಿಟ್ಟಿದ್ದರು. ನನಗೆ ನೆನಪಿರುವಂತೆ ಅವರಲ್ಲಿ ಮೂವರೆಂದರೆ: (ಆಗ ನಾನು ಕರೆಯುತ್ತಿದ್ದಂತೆ) ವಾಟಗಾರು ವೆಂಕಟಣ್ಣಯ್ಯ, ಕುಪ್ಪಳಿ ಐಯಪ್ಪ ಚಿಕ್ಕಪ್ಪಯ್ಯ, ದೇವಂಗಿ ತಿಮ್ಮಯ್ಯ ಮಾವ. ಹಾಗೆ ತುಸು ಇಂಗ್ಲಿಷ್ ಯೆಸ್, ಪುಸ್, ಕೆಸ್ ಕಲಿತು ಬಂದ ತಮ್ಮ ಹುಡುಗರನ್ನು ನೋಡಿ ವಯಸ್ಸಾದ ಹಿರಿಯರಿಗೂ ಇಂಗ್ಲಿಷ್ ಕಲಿಯಲು ಮನಸ್ಸಾಗಿ, ಮೋಸಸ್ ಬರುವುದಕ್ಕಿಂತ ಮೊದಲೆ 'ಹುಚ್ಚು ವ್ಯಾಸರಾಯ'ರನ್ನು ನಮ್ಮ ಉಪ್ಪರಿಗೆ ಶಾಲೆಗೆ ನೇಮಿಸಿಕೊಂಡಿದ್ದರು. ನಮ್ಮ ಹಿರಿಯರಿಗೆ ಇಂಗ್ಲಿಷ್ ಅಕ್ಷರಗಳ ಪರಿಚಯ ಮಾತ್ರದಲ್ಲಿಯೆ ಅವರ ವಿದ್ಯಾಭ್ಯಾಸ ಪರಿಸಮಾಪ್ತವಾಯಿತೆಂದು ತೋರುತ್ತದೆ. ಅದನ್ನವರು ಉಪಯೋಗ ಮಾಡಿಕೊಂಡಿದ್ದನ್ನು ನಾನು ನೋಡಿದ್ದೇನೆ: ಮುಂದೆ, ನಮ್ಮ ದೊಡ್ಡ ಚಿಕ್ಕಪ್ಪಯ್ಯ -ಕುಪ್ಪಳಿ ರಾಮಣ್ಣಗೌಡರು) ಅಡಕೆ ವ್ಯಾಪಾರದ, ಸಾಹುಕಾರಿಕೆ ಕೈಕೊಂಡಾಗ, ಅಡಕೆ ತುಂಬಿದ್ದ ರವಾನೆ ಚೀಲಗಳ ಮೇಲೆ 'K.R.G.' ಎಂದು ದೊಡ್ಡದಾಗಿ ಕೆಂಪು ಮಸಿಯಲ್ಲಿ ವಿಳಾಸ ಹಾಕುತ್ತಿದ್ದರು., ತುಂಬ ಹೆಮ್ಮೆಯಿಂದ, ಇತರ ಹಳ್ಳಿಗರಿಗೆ ತಿಳಿಯದ ಇಂಗ್ಲಿಷ್ ತಮಗೊಬ್ಬರಿಗೇ ತಿಳಿಯುವುದು ಎಂಬ ಠೀವಿಯಲ್ಲಿ!

ಇಂಗ್ಲಿಷ್ ಕಲಿಯಬೇಕೆಂಬ ಆಕಾಂಕ್ಷೆಯ ಪರಿಣಾಮ ಅವರ ಮಟ್ಟಿಗೆ ಅಷ್ಟರಲ್ಲಿಯೆ ಪರ್ಯವಸಾನವಾಗಿದ್ದರೂ, ಮಕ್ಕಳಾಗಿದ್ದ ನಮ್ಮ ಬದುಕಿನ ಮೇಲೆ ಅವರವಕೈಗೂಡದ ಆಕಾಂಕ್ಷೆ ಮಹತ್ ಪ್ರಭಾವಕಾರಿಯಾಗಿ ಪರಿಣಮಿಸಿತು: ಮಕ್ಕಳನ್ನು ಓದುವುದಕ್ಕೆ ಹಾಕಬೇಕು ಎಂಬ ಪ್ರಜ್ಞೆ ಅವರಲ್ಲಿ ಉದಿಸುವಂತೆ ಮಾಡಿತ್ತು. ಅವರಿಗೆ ಬುದ್ಧಿ ಸ್ಪಷ್ಟವಾಗಿರದಿದ್ದರೂ, ಬ್ರಿಟಿಷರ ಆಳ್ವಿಕೆಯಲ್ಲಿ, ಮುಂದೆ, ಅವರ ಭಾಷೆಯಾಗಿದ್ದ ಇಂಗ್ಲಿಷನ್ನು ಕಲಿಯದಿದ್ದರೆ, ತಮ್ಮ ಮಕ್ಕಳು ಮುಂದುವರಿಯುವುದು ಸಾಧ್ಯವಿಲ್ಲ ಎಂಬ ಭಾವನೆ ಅವರ ಹೃದಯದಲ್ಲಿ ಮೂಡಿ ಮನವರಿಕೆಯಾಘಗಿತ್ತು. ತತ್‍ಫಲವಾಗಿ ನಾವು ತೀರ್ಥಹಳ್ಳಿಯ ಪೇಟೆಯ ಇಸ್ಕೂಲಿಗೆ ಸೇರುವಂತಾಯಿತು.

ತೀರ್ಥಹಳ್ಳಿ ನಮ್ಮ ಮನೆಗೆ -ಕುಪ್ಪಳಿಗೆ- ಒಂಬತ್ತು ಮೈಲಿ ದೂರದಲ್ಲಿದೆ, ಭೌಗೋಲಿಕವಾಗಿ. ಮಾನಸಿಕವಾಗಿ ಆಗ ಒಂಬೈನೂರು ಮೈಲಿಗಳಾಚೆ ಇತ್ತು; ಈಗ ಒಂಬತ್ತು ಫರ್ಲಾಂಗು ಸಮೀಪದಲ್ಲಿದೆ! ಆಗ ನಮಗೆ ತೀರ್ಥಹಳ್ಳಿ ಎಂದರೆ ಯಾವುದೋ ಒಂದು ಪುರಾಣದ ಪತ್ತನವಿದ್ದಂತೆ: ಕ್ರೂರ ಮೃಗಗಳಿಂದಿಡಿದ ಕಾಡು ಕಣಿವೆ ಮಲೆಗಳಲ್ಲಿ ಸಂದಿಗೊಂದಿಗಳಲ್ಲಿ, ತೂರಿ ಹೋಗುವ ಪ್ರಯಾಣ ದುರ್ಗಮವಾದ ದಾರಿಯಲ್ಲಿ ಹಾದು, ಹಳ್ಳಕೊಳ್ಳ ಹೊಳೆಗಳನ್ನು ದಾಟಿದರೆ ಅದು ಸಿಕ್ಕುತ್ತದಂತೆ! ಬೇಸಗೆಯಲ್ಲಾದರೆ ಕಲ್ಲುಸಾರದ ಮೇಲೆ ದಾಟಬೇಕಂತೆ! ಅಲ್ಲಿ ಎಳ್ಳಾಮಾಸೆಯ ಜಾತ್ರೆಯಲ್ಲಿ ಅಲ್ಲಿಯೆ ಅಂತೆ ಸ್ನಾನ ಮಾಡಿಸುವುದು! ಅಲ್ಲಿ ಹೊಳೆಯ ಮರಳಿನ ಮೇಲೆ ಬುತ್ತಿಕಲ್ಲು ಬಂಡೆ ಬಿದ್ದಿದೆಯಂತೆ! ನಾಲ್ಕಾರು ಆನೆಯ ಗಾತ್ರ! ಭೀಮ ಬುತ್ತಿ ಉಣ್ಣುವಾಗ ಅನ್ನದಲ್ಲಿ ಸಿಕ್ಕಿದ ಕಲ್ಲು ಹರಳಂತೆ ಅದು! ಇನ್ನು ಅವನು ತಿನ್ನುತ್ತಿದ್ದ ಅನ್ನದ ರಾಶಿ ಅದೆಷ್ಟು ದೊಡ್ಡದಿರಬೇಕು? ಮಳೆ ಬಿದ್ದು ಹೊಳೆ ಕಟ್ಟಿದ ಮೇಲೆ ದೋಣಿಎಯ ಮೇಲೆ ಕೂತೇ ದಾಟಬೇಕಂತೆ! ಹೊಳೆಗೆ ನೆರೆ ಬಂದು ನೋಡುವುದಕ್ಕೆ ಹೆದರಿಕೆಯಾಗುತ್ತದಂತೆ ಪ್ರವಾಹ! ಅದುವರೆಗೂ ಹಳ್ಳಿಯಲ್ಲಿಯೆ ಬದುಕು ಸಾಗಿಸಿದ್ದ ಹುಡುಗನ ಜೀವ-ಹುಡುಗರು ಕಣಿಯೊಡ್ಡಿ ಹಿಡಿದಾಗ ಅವರ ಕೈಯಲ್ಲಿ ಸಿಕ್ಕ ಹಕ್ಕಿಯೆ ಎದೆಯಂತೆ- ಹೊಡೆದುಕೊಳ್ಳುತ್ತಿತ್ತು!
ಅಂತೂ ಕಡೆಗೂ ನಾವೆಲ್ಲ -ಐದಾರು ಹುಡುಗರು- ಕಮಾನುಗಾಡಿಯಲ್ಲಿ ಕುಳಿತು ಹೊಳೆಯನ್ನು ದಾಟಿ, ತೀರ್ಥಹಳ್ಳಿಯ ಒಂದು ಬಾಡಿಗೆಯ ಮಳಿಗೆ ಕೋಣೆಗೆ ಓದು ಸಾಗಿಸಲು ಹೋದೆವು.

No comments: