Saturday, January 10, 2015

ಮೋಸಸ್ ಮೇಷ್ಟರು ಬಿತ್ತಿದ ಪ್ರಾರ್ಥನೆಯ ಕಿಡಿ - 3

ಕ್ರಿಸ್ತನ ಬೋಧೆಯಿಂದ ನನ್ನ ಸಹಪಾಂಶು ಸಹಪಾಠಿಗಳಿಗೆ ಏನಾಯಿತೆಂಬುದನ್ನು ನಾನು ನಿಜವಾಗಿ ಹೇಳಲಾರೆ; ನನ್ನ ಮೇಲಾದ ಪರಿಣಾಮವನ್ನು ಮಾತ್ರ ಹೇಳಬಲ್ಲೆ.
ಅದುವರೆಗೆ ದೇವರು ಜೀವಲೋಕ ಪರಲೋಕ ಇವುಗಳ ವಿಚಾರವಾಗಿ ನಾನು ಪ್ರಜ್ಞಾಪೂರ್ವಕ ಬುದ್ಧಿಯಿಂದ ಆಲೋಚಿಸಿದ್ದನೆಂದು ತೋರುವುದಿಲ್ಲ. ಧೂಳಾಡುವ ಎಂಟೊಂಬತ್ತು ವರ್ಷದ ಹಳ್ಳಿ ಮಕ್ಕಳೊಡನೆ ಅಂಥಾದ್ದನ್ನೆಲ್ಲ ಮಾತಾಡುವರಾರು? ಅಂಥಾದ್ದನ್ನೆಲ್ಲ ಆಲೋಚಿಸಿ ಮಾತನಾಡಬಲ್ಲ ಹಿರಿಯರು ಕೂಡ ಯಾರಿದ್ದರು ಅಲ್ಲಿ? ಬಹುಶಃ ಅಂತಹ ಗುರುವಿಷಯ ಜಿಜ್ಞಾಸೆಗೆ ಶೂದ್ರರೆಂದೂ ಅರ್ಹರಲ್ಲ; ಅದೆಲ್ಲ ಬ್ರಾಹ್ಮಣರಿಗೆ ಸೇರಿದ್ದು; ಅವರ ಪಾದಪೂಜೆ ಮಾಡಿ, ಅವರು ಶಾಸ್ತ್ರ ಹೇಳಿದಂತೆ ಕೇಳಿಕೊಂಡಿದ್ದರೆ ಸಾಕು - ಎಂಬ ಸಂಪ್ರದಾಯದ ಶ್ರದ್ಧೆಯೂ ಆ ಮೌಢ್ಯಕ್ಕೆ ಪೋಷಕವೂ ರಕ್ಷಕವೂ ಆಗಿತ್ತೆಂದು ತೋರುತ್ತದೆ.
ಮನೆಯಲ್ಲಿ ದೇವರ ಪೂಜೆ ನಡೆಯುತ್ತಿತ್ತು; ಭೂತದ ಬನದಲ್ಲಿ ವರ್ಷಕ್ಕೊಮ್ಮೆ ಬಲಿ, ಹರಕೆ ಜರುಗುತ್ತಿತ್ತು; ದೆಯ್ಯ, ಜಕ್ಕಿಣಿ, ಕಲ್ಕುಟಿಗ ಮುಂತಾದ ದೆವ್ವ ಪಿಶಾಚಿಗಳ ಭೀಕರ ಕಥನಗಳೂ ಕಿವಿಯ ಮೇಲೆ ಬಿದ್ದು, ಕತ್ತಲೆಯಾದ ಮೇಲೆ ಮನೆ ತುಂಬ ಅವುಗಳ ಓಡಾಟದ ಹೊಂಚಿಕೆಯನ್ನು ಊಹಿಸಿ ಭಾವಿಸಿ ಬೆವರಿ ಬೇಗುದಿಗೊಳ್ಳುತ್ತಿದ್ದೆವು.
ಅದೃಶ್ಯದಲ್ಲಿ, ಅಪ್ರಾಕೃತದಲ್ಲಿ, ಅತೀಂದ್ರಿಯದಲ್ಲಿ ನಂಬಿಕೆ ನಮಗೆ ಹುಟ್ಟುಗುಣವಾಗಿತ್ತು. ಆದರೆ ಆ ಅತೀಂದ್ರಿಯ ವಸ್ತು, ಅದರ ಸ್ವರೂಪ, ಅದರಿಂದ ನಮ್ಮ ಮೇಲಾಗುವ ಪ್ರಭಾವ-ಇವುಗಳೆಲ್ಲ ಬೀಭತ್ಸ ಮತ್ತು ಭಯಾನಕ ವಲಯಗಳದ್ದೇ ಆಗಿತ್ತು. ದೇವರೂ ಕೂಡ ಬೃಹದಾಕಾರಗೊಂಡ, ನಿರಂಕುಶಾಧಿಕಾರಿ ದೆವ್ವವೇ ಆಗಿದ್ದ!
ದೇವರು, ಜೀವ, ಜಗತ್ತು, ಪಾಪ, ಪುಣ್ಯ, ಕರ್ಮ ಮುಂತಾದ ವಿಷಯಗಳನ್ನು ಕುರಿತು ನಮ್ಮಂತಹ ಮಕ್ಕಳೊಡನೆ ಯಾರು ತಾನೆ ಪ್ರಸ್ತಾಪಿಸುತ್ತಾರೆ? ಅದನ್ನು ತಿಳಿದುಕೊಳ್ಳುವ ಸಾಮರ್ಥ್ಯ, ಇಚ್ಛೆ ಇರುತ್ತದೆಯೇ ಮಕ್ಕಳಿಗೆ? ಅಂತಹ 'ಗುರು' ವಿಷಯ 'ಲಘು'ಗಳಿಗೇಕೆ? ಆದರೆ ಕ್ರೈಸ್ತಮತ ಪ್ರಚಾರಕರ ಭೋಧೆಗೆ ಒಳಗಾಗಿ ಕ್ರಿಸ್ತಮತವನ್ನಪ್ಪಿದ ಯುವಕ ಮೋಸಸ್ ಮೇಷ್ಟರಿಗೆ ನಾವು ಅಷ್ಟು 'ಲಘು'ಗಳಾಗಿ ತೋರಲಿಲ್ಲ. ಅವರು ನಮಗೆ ಕನ್ನಡ ಇಂಗ್ಲಿಷ್ ಕಲಿಸುವುದರ ಜೊತೆಗೆ ಯೇಸುಕ್ರಿಸ್ತನ ಕಥೆಯನ್ನು ಹೇಳಿದರು. ಮತಪ್ರಚಾರಕ ಉದ್ದೇಶದಿಂದಿರಬಹುದು. ಕನ್ನಡದಲ್ಲಿ ಅಚ್ಚಾಗಿದ್ದ 'ಮಾರ್ಕನ ಸುವಾರ್ತೆ' ಎಂಬ ಕಿರುಹೊತ್ತಿಗೆಯನ್ನು ಬಿಟ್ಟಿಯಾಗಿ, ನಮನಮಗೇ ಕೊಟ್ಟರು! ನಮ್ಮ ಮೆದುಳಿನ ವಿಚಾರದಲ್ಲಿ ಅದುವರೆಗೆ ಯಾರೂ ತೋರಿಸದಿದ್ದ ಗೌರವವನ್ನು ಹೊಣೆಗಾರಿಕೆಯನ್ನು ಹೊರಿಸಿ, ಆ ಪುಟ್ಟ, ಮುದ್ದಾಗಿ ಅಚ್ಚು ಮಾಡಿದ್ದ, ಮಾರ್ಕನ ಸುವಾರ್ತೆಯನ್ನು ನಮನಮಗೇ ಕೊಟ್ಟುಬಿಟ್ಟರು! ಒಬ್ಬೊಬ್ಬರಿಗೆ ಒಂದೊಂದು! ನನ್ನ ಬದುಕಿಗೆ ಬಂದು ಹೊಸಬಾಗಿಲು ತೆರೆದಂತಾಯ್ತು. ಒಂದು ವಿಸ್ಮಯಕಾರಕ ನೂತನ ಪ್ರಪಂಚಕ್ಕೆ ಪ್ರವೇಶಿಸಿದಂತಾಯ್ತು ನನ್ನ ಪ್ರಜ್ಞೆ. ಯಾವುದು ಎಷ್ಟರಮಟ್ಟಿಗೆ ಬುದ್ಧಿ ಸ್ಪಷ್ಟವಾಗಿತ್ತೋ ನಾನೀಗ ಹೇಳಲಾರೆ. ಆದರೆ ಪ್ರಾರ್ಥನೆ ಮಾಡಿದರೆ ದೇವರು ಓಕೊಳ್ಳುತ್ತಾನೆ; ಇಷ್ಟಗಳನ್ನು ಸಲ್ಲಿಸುತ್ತಾನೆ; ಯೇಸುಸ್ವಾಮಿ ಗುಡ್ಡದ ನೆತ್ತಿಗೆ ಹೋಗಿ ಪ್ರಾರ್ಥನೆ ಮಾಡಿದನು. ಆ ಪ್ರಾರ್ಥನೆ ಮತ್ತು ಶ್ರದ್ಧೆ ಎರಡೂ ಸೇರಿದರೆ 'ಪವಾಡ'ಗಳಾಗುತ್ತವೆ; ರೋಗಿ ಗುಣ ಹೊಂದುತ್ತಾನೆ; ಕುರುಡ ಕಾಣುತ್ತಾನೆ; ಭಗವಂತನು ಭೂಮಿಗಿಳಿದು ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಇತ್ಯಾದಿಗಳನ್ನು ಕೇಳಿ ನನ್ನ ಚೇತನ ಭಕ್ತಿದೀಪ್ತವಾಯಿತು. ಮೇಲಿನ ತತ್ವಗಳಿಗೆ ಹಿಂದೂ ಪುರಾಣ ಕಥೆಗಳಲ್ಲಿ ಬರಗಾಲವೇನಿಲ್ಲ. ಆದರೆ ಅವುಗಳನ್ನು ಕುರಿತು ಬುದ್ಧಿ ಗೋಚರವಾಗುವಂತೆ ನಮ್ಮೊಡನೆ ಯಾರೂ ಜಿಜ್ಞಾಸೆ ಮಾಡಿರಲಿಲ್ಲ. ಅಲ್ಲದೆ ಯೇಸು ಸ್ವಾಮಿಯಂತೆಯೇ ಐತಿಹಾಸಿಕವಾದ ಬುದ್ಧಾದಿ ವಿಭೂತಿಪುರುಷರ ಜೀವನ ಕಥೆಗಳನ್ನು ಹೇಳಿ, ಹೃದಯಸ್ಪರ್ಶಿಯಾದ ಆ ತತ್ವಗಳು ಬುದ್ಧಿಯಲ್ಲಿಯೂ ಬೆಳಗುವಂತೆ ನಮ್ಮವರು ಯಾರೂ ತಿಳಿಸುವ ಗೋಜಿಗೆ ಹೋಗಿರಲಿಲ್ಲ.
ಸರಿ, ಯೇಸುಸ್ವಾಮಿಯಂತೆ ನಾವೂ ಗುಡ್ಡದ ನೆತ್ತಿಗೆ ಹೋಗಿ ಪ್ರಾರ್ಥನೆ ಮಾಡಿದರೆ ನಮಗೂ...? ಏನು? ಏನಾಗುತ್ತದೆ? ಏಕೆ? ತಿಳಿಯದು! - ಅಂತೂ ಹಾಗೆ ಪ್ರಾರ್ಥನೆ ಮಾಡಬೇಕು ಎಂಬ ಪ್ರೇರಣೆ ಉತ್ಕಟವಾಯಿತು. ನನ್ನ ಜೊತೆ 'ಐಗಳ ಶಾಲೆ'ಯಲ್ಲಿ ಓದುವುದಕ್ಕಿದ್ದ, (ಕೆಲವರು ನನಗಿಂತಲೂ ವಯಸ್ಸಾದವರು), ಇತರ ಬಾಲಕರಿಗೆ ಅದನ್ನೆಲ್ಲ ಹೇಳಿ ಒಪ್ಪಿಸಿದೆ. ಎಲ್ಲರೂ ಸಂಜೆಯ ಹೊತ್ತು ನಮ್ಮ ಮನೆಯ ಹಿಂದಿರುವ ಗುಡ್ಡಕ್ಕೆ (ಎಷ್ಟೋ ವರ್ಷಗಳ ಆನಂತರ ಅದಕ್ಕೆ 'ಕವಿಶೈಲ' ಎಂದು ನಾಮಕರಣ ಮಾಡಿದವನು ನಾನೆ!) ಏರಿದೆವು.
ಸೂರ್ಯ ಇನ್ನೂ ಮುಳುಗಿರಲಿಲ್ಲ. ಸಾಯಂ ಸಮಯದ ಗೋಧೂಳಿಯ ಹೊಂಗಾಂತಿ ಪಿಪಾಸೆಗೆ ಮಾದಕೋದ್ದೀಪಕವಾಗಿತ್ತು. ಕಲ್ಲು ಬಂಡೆಗಳೇ, ಅದರಲ್ಲಿಯೂ ಹಾಸುಗಲ್ಲುಗಳೇ ಹೆಚ್ಚಾಗಿರುವ ಆ ಗುಡ್ಡದ ಪಶ್ಚಿಮ ಭಾಗದಲ್ಲಿ ಒಂದೆಡೆ ನಾವೆಲ್ಲ ಪ್ರಾರ್ಥನೆ ಮಾಡುವುದಕ್ಕೆ ಯೋಗ್ಯವಾದ ಭಾಗವನ್ನು ಆರಿಸಿಕೊಂಡೆವು. ಏಕೊ ಏನೊ ತಿಳಿಯದು: ಕಣೆ ಬಿದಿರು ಗಳುಗಳನ್ನು ಕಡಿದು ಸುತ್ತಲೂ, ಒಡ್ಡು ಹಾಕಿ, ಪ್ರಾರ್ಥನಾ ವಲಯವನ್ನು ಪ್ರತ್ಯೇಕವಾಗಿ ಗುರುತಿಸುವಂತೆ ಮಾಡಿಕೊಂಡೆವು. ದನ ಗಿನ ನುಗ್ಗಿ ಸೆಗಣಿ ಹಾಕಬಾರದು ಎಂದಿರಬಹುದು. ಎಲ್ಲರೂ ಮೊಳಕಾಲು ಮಂಡಿಯೂರಿ, ಕೈಮುಗಿದುಕೊಂಡು ಕ್ರೈಸ್ತರು ಕೂರುವ ಭಂಗಿಯಲ್ಲಿ ಕುಳಿತು ಬಾಯಿಪಾಠ ಮಾಡಿದ ಪ್ರಾರ್ಥನೆ ಮಾಡಿದೆವು:
"ಪರಲೋಕದಲ್ಲಿರುವ ನಮ್ಮ ತಂದೆಯೇ, ನಿನ್ನ ನಾಮವು ಪರಿಶುದ್ಧವಾಗಲಿ. 
ನಿನ್ನ ರಾಜ್ಯವು ಬರಲಿ. 
ಪರಲೋಕದಲ್ಲಿ ನೆರವೇರುವಂತೆ ನಿನ್ನ ಇಚ್ಛೆ ಭೂಲೋಕದಲ್ಲಿಯೂ ನೆರವೇರಲಿ.
ನಮ್ಮ ದಿನದಿನದ ಆಹಾರವನ್ನು ಈ ದಿನವೂ ದಯಪಾಲಿಸು.
ನಮ್ಮ ಸಾಲಗಾರರನ್ನು ನಾವು ಕ್ಷಮಿಸುವಂತೆ ನಮ್ಮ ಸಾಲಗಳನ್ನೂ ನೀನು ಕ್ಷಮಿಸು.
ನಾವು ಪಾಪವಶರಾಗದಂತೆ ನಮ್ಮನ್ನು ಪಾಪಪುರುಷನಿಂದ ಪಾರು ಮಾಡು."
ಪ್ರಾರ್ಥನೆ ನಮಗೆ ತಿಳಿಯುವ ಭಾಷೆಯಲ್ಲಿತ್ತು. ತಿಳಿಯುವ ಧಾಟಿಯಲ್ಲಿತ್ತು. ಸಂಸ್ಕೃತದಲ್ಲಿರುವಂತೆ ಪ್ರೌಢಕಾವ್ಯರೀತಿಯಲ್ಲಿಯೇ ಅಗ್ರಾಹ್ಯವಾಗಿರಲಿಲ್ಲ. ಏನೋ ಒಂದು ಮಹತ್ತಾದುದನ್ನು ಸಾಧಿಸಿದ ಹಿಗ್ಗಿನಿಂದ ನಾವೆಲ್ಲ ಕಪ್ಪಾಗುತ್ತಿದ್ದ ಬೈಗಿನಲ್ಲಿ ಗುಡ್ಡವಿಳಿದೆವು. ಎದುರು ಗುಡ್ಡದ ದಟ್ಟವಾದ ಕಡು ಮರಮರದೆಲೆಯ ಮಸಿ ಮುದ್ದೆಯ ಗೋಡೆಯಾಗಿತ್ತು.

1 comment:

Unknown said...

ಮಹಾಕವಿಯೂ ಮಗುವೇ