Wednesday, January 14, 2015

ಕವಿಯ ಒಂದು ನೆನಪು : ಮಲೆಗಳಲ್ಲಿ ಮದುಮಗಳಲ್ಲಿ ಅದರ ಛಾಯೆ!

ಮೊದಲು ಇದನ್ನು ಓದಿಕೊಂಡುಬಿಡಿ: ಇನ್ನು ನೆನಪಿರುವ ಚಿತ್ರ -ುಳಿದೆಲ್ಲ ಮರೆತು ಆ ಚಿತ್ರ ಏಕೆ ನೆನಪಿದೆಯೋ ನನಗೆ ತಿಳಿಯದು. ಅದೇನೂ ಅಂತಹ ಅಸಾಮಾನ್ಯದ ದೃಶ್ಯವೂ ಅಲ್ಲ. ಅದನ್ನು ಕುರಿತು ಏಕೆ ಬರೆಯುತ್ತಿದ್ದೇನೆಯೋ ಅದೂ ತಿಳಿಯದಾಗಿದೆ. ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಇದು ಅತ್ಯಂತ ಅಪ್ರಕೃತ, ಅಸ್ವರಸ, ನೀರಸ! -ನಾನಿದ್ದ ಮಳಿಗೆಯ ಬಳಿಗೆ, ಒಂದು ಎತ್ತರದ ಪ್ರಾಕಾರದ ಒಳಗೆ ಇದ್ದ ಅಂಗಳವನ್ನು ಸುತ್ತುಗಟ್ಟಿ ಕೋಣೆಗಳಿದ್ದುವು. ಅವಕ್ಕೆ ಬಾಗಿಲೂ ಇರಲಿಲ್ಲ. ಇಡೀ ಕಟ್ಟಡ ಸರ್ವರಿಗೂ ತೆರೆದಂತೆ ತೆರೆದೇ ಇತ್ತು. ಅದನ್ನು 'ಮುಸಾಫರ್ ಖಾನೆ' ಎಂದು ಎಲ್ಲರೂ ಕರೆಯುತ್ತಿದ್ದರು. ನಮಗೆ ಅದರ ಅರ್ಥವೂ ಗೊತ್ತಿರದಿದ್ದುದರಿಂದ ಅದರ ವಿಚಾರವಾಗಿ ಏನೇನೊ ಭಯಂಕರ ಕಲ್ಪನೆಗಳನ್ನು ಕಟ್ಟಿಕೊಂಡಿದ್ದೆವು. ಅಲ್ಲಿ ಯಾವಾಗಲೂ ಗಡ್ಡ ಬಿಟ್ಟುಕೊಂಡವರು, ಉದ್ದ ನಿಲುವಂಗಿಯವರು, ಕೊಳಕಿನ ಮುದ್ದೆಯಾಗಿರುವವರು, ಭಿಕ್ಷುಕರಂಥವರು - ಒಟ್ಟಿನಲ್ಲಿ ನಮ್ಮ ಭಾಗಕ್ಕೆ ನಾವು ದೂರವೇ ಇರಬೇಕಾಗಿರುವಂತಹ ರಹಸ್ಯ ವ್ಯಕ್ತಿಗಳು -ಇರುತ್ತಿದ್ದರು. ನಾವು ಅದರೊಳಗೆ ಅಂಗಳಕ್ಕೆ ಹೋಗಲೂ ಹೆದರುತ್ತಿದ್ದೆವು. ನಮ್ಮನ್ನು ಕದ್ದುಕೊಂಡು ಹೋಗುತ್ತಾರೆ ಎಂದು ಭಯ! ನಮ್ಮನ್ನು ಯಾವುದಾದರೂ ಒಂದು ಪ್ರಾಣಿಯನ್ನಾಗಿ ಮಂತ್ರಶಂಕ್ತಿಯಿಂದ ಪರಿವರ್ತಿಸಿ ದೂರ ದೂರಕ್ಕೆ ಕೊಂಡೊಯ್ದು, ಮತ್ತೆ ಮನುಷ್ಯರನ್ನಾಗಿ ಮಾಡಿ ಮಾರತ್ತಾರೆ ಎಂದು ಹೆದರಿಕೆ! ಎಳೆಮಕ್ಕಳನ್ನು ಕೊಯ್ದು ಮಾಂಸ ಬೇಯಿಸಿ ತಿಂದೇ ಬಿಡುತ್ತಾರೆ ಎಂಬ ದಿಗಿಲು!

ಆ ಮುಸಾಫರ್ ಖಾನೆಯ ಹಿಂಭಾಗದಲ್ಲಿ ಒಂದು ಕೆರೆಯಿತ್ತು. ಅದೇನು ಅಂತಹ ದರ್ಶನೀಯ ಸ್ಥಾನವಾಗಿರಲಿಲ್ಲ. ಅದೊಂದು ಹೊಟ್ಟುಗೆರೆ, ಬೇಸಿಗೆಯಲ್ಲಿ ಕೆಸರೇ ನೀರು! ಊರುಹಂದಿಗಳು ಎಮ್ಮೆಗಳು ಮಗ್ಗುಲು ಬೀಳುತ್ತಿದ್ದುವು. ಜನರು ಮಲಬಾಧೆ ತೀರಿಸುವುದಕ್ಕೂ ಧಾರಾಳವಾಗಿ ಉಪಯೋಗಿಸುತ್ತಿದ್ದರು. ನನಗೆ ನೆನಪಿರುವಂತೆ ನಾವು ಅಲ್ಲಿಗೆ ಹೋಗುತ್ತಿದ್ದುದು, ಮಗ್ಗುಲು ಬಿದ್ದಿರುತ್ತಿದ್ದ ಊರುಹಂದಿಗಳಿಗೆ ಕಲ್ಲು ಹೊಡೆದೆಬ್ಬಿಸಿ ಅಲ್ಲಿದ್ದ ಕುರುಚಲು ಕಾಡಿನಲ್ಲೆಲ್ಲಾ ಅಟ್ಟುವುದಕ್ಕಾಗಿ. ಕುಪ್ಪಳಿಯಲ್ಲಿ ನಮ್ಮ ಹಿರಿಯರು ಹೆಗ್ಗಾಡಿನಲ್ಲಿ ಬೇಟೆಯಾಡುತ್ತಿದ್ದುದನ್ನು ಅನುಕರಿಸಿ ಆಟವಾಡುತ್ತಿದ್ದೆವಷ್ಟೆ: ಹಳು ನುಗ್ಗಿ, ಬಿಲ್ಲಿಗೆ ನಿಂತು! -ಬಹುಶಃ ಆಗ ನಾನು ಓದಲು ಹೋಗುತ್ತಿದ್ದುದು ಪೇಟೆಯಲ್ಲಿರುತ್ತಿದ್ದ ಒಂದು ಪ್ರಾಥಮಿಕ ಶಾಲೆ ಇರಬಹುದೆಂದು ತೋರುತ್ತದೆ. ಆಗ ನನ್ನ ಪ್ರಜ್ಞೆ ಇನ್ನೂ ಸ್ಮೃತಿಯಲ್ಲಿ ಸ್ಥಾಯಿಯಾಗಿ ನಿಲ್ಲಲಾರದೆ, ಅಂಬೆಗಾಲಿಕ್ಕಿಯೋ ತಿಪ್ಪತಿಪ್ಪ ಹೆಜ್ಜೆಯಿಟ್ಟೋ ತತ್ತರಿಸುತ್ತಿದ್ದಿರಬೇಕು!
***
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ, ತಿರುಪತಿ ಯಾತ್ರೆಗೆಂದು ಹೋಗಿದ್ದ ಹಳೆಮನೆ ದೊಡ್ಡಣ ಹೆಗ್ಗಡೆಯನ್ನು ಹೋಲುವ ಮೂಕ ಗೋಸಾಯಿಯೊಬ್ಬ ಗೋಸಾಯಿಗಳ ಗುಂಪಿನಲ್ಲಿ ಕಂಡುಬರುವ ಚಿತ್ರಣವಿದೆ. ಅಲ್ಲಿನ ವಿವರಣೆಯನ್ನು ಗಮನಿಸಿದರೆ, ಬಾಲ್ಯದಲ್ಲಿ ಕವಿ ಕಂಡ ಮುಸಾಫರ್ ಖಾನೆಯಯಲ್ಲಿ ಬೀಡು ಬಿಡುತ್ತಿದ್ದ, ಗಡ್ಡಬಿಟ್ಟುಕೊಂಡವರು, ಉದ್ದ ನಿಲುವಂಗಿಯವರು, ಕೊಳಕಿನ ಮುದ್ದೆಯಾಗಿರುವವರು, ಭಿಕ್ಷುಕರಂಥವರು - ಒಟ್ಟಿನಲ್ಲಿ ನಮ್ಮ ಭಾಗಕ್ಕೆ ನಾವು ದೂರವೇ ಇರಬೇಕಾಗಿರುವಂತಹ ರಹಸ್ಯ ವ್ಯಕ್ತಿಗಳು -ಇರುತ್ತಿದ್ದರು.ಎಂಬ ಮಾತಿನ ಪ್ರಭಾವವನ್ನು ಮನಗಾಣಬಹುದು. ಮುಸಾಫರ್ ಖಾನೆಯ ಆ ಚಿತ್ರಣದಿಂದ ಬಾಲಕನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ, ಮದ್ದು, ಮಾಟ, ವಶೀಕರಣ ಮೊದಲಾದ ಭಯೋತ್ಪಾದಕ ವಿಚಾರಗಳೂ ಕಾದಂಬರಿಯ ವಿವರಗಳಲ್ಲಿ ತಳುಕು ಹಾಕಿಕೊಂಡಿರುವುದನ್ನು ಕಾಣಬಹುದು.
ನೆನಪಿನ ದೋಣಿಯಲ್ಲಿ ಕವಿ ಬರೆದಂತೆ, ಈ ನೆನಪಿನ ಚಿತ್ರ ಸಾಹಿತ್ಯ ವಿಮರ್ಶೆಯ ದೃಷ್ಟಿಯಿಂದ ಅಪ್ರಕೃತವೂ ಅಸ್ವರಸವೂ ನೀರಸವೂ ಅಲ್ಲ! ಪ್ರಕೃತವೂ ಸ್ವರಸವೂ ರಸವೂ ಆಗಿದೆ ಎನ್ನಲಡ್ಡಿಯಿಲ್ಲ.

No comments: