Friday, January 2, 2015

ಬಾಲಕ ಪುಟ್ಟಪ್ಪನ ಹನುಮನೊಡನಾಟ!

ಇನ್ನೊಂದು ಅಪೂರ್ವವಾದ ಮತ್ತು ಅರ್ಥಪೂರ್ಣವಾದ ಚಿತ್ರ ನೆನಪಿಗೆ ಹೊಳೆಯುತ್ತಿದೆ: ಮುಂದೆ, ಎಷ್ಟೋ ವರ್ಷಗಳ ತರುವಾಯ, ನಾನು ಕನ್ನಡದ ಮಹಾಕವಿಯಾಗಿ 'ಶ್ರೀರಾಮಾಯಣದರ್ಶನಂ' ಮಹಾಛಂದಸ್ಸಿನ ಮಹಾಕಾವ್ಯವನ್ನು ರಚಿಸಿದುದಕ್ಕೂ ಅದಕ್ಕೂ ಏನಾದರೂ ಅತೀಂದ್ರಿಯ ಸಂಬಂಧವಿರಬಹುದೇ ಎಂದು ಅಚ್ಚರಿಪಡುತ್ತೇನೆ.
 

 ಆಗತಾನೆ ತಾರುಣ್ಯವನ್ನು ದಾಟಿ ಯೌವ್ವನದ ಹೊಸ್ತಿಲಲ್ಲಿ ಕಾಲಿಟ್ಟಿದ್ದ ವಾಟಿಗಾರು ಮಂಜಪ್ಪಗೌಡರು (ಆಗ ನಮಗೆ ಅವರು 'ಮಂಜಣ್ಣಯ್ಯ' ಮಾತ್ರ ಆಗಿದ್ದರು.) ಕುಪ್ಪಳಿಗೆ ಉಳಿಯಲು ಬಂದಾಗಲೆಲ್ಲ ಅವರಿಂದ ಓಲೆಗರಿಯ ಕಟ್ಟುಗಳ ರೂಪದಲ್ಲಿ ಇರುತ್ತಿದ್ದ ರಾಮಾಯಣ ಭಾರತಗಳಲ್ಲಿ ಯಾವುದಾದರೂ ಒಂದೆರಡು ಸಂಧಿಗಳನ್ನು ಓದಿಸಿ ಆಲಿಸುತ್ತಿದ್ದರು, ಅಪ್ಪಯ್ಯ, ದೊಡ್ಡಚಿಕ್ಕಪ್ಪಯ್ಯ, ಅಜ್ಜಯ್ಯ ಮೊದಲಾದವರು. ರಾತ್ರಿ ಊಟಕ್ಕೆ ಕರೆಯುವುದು ಅಂತಹ ಸಂದರ್ಭಗಳಲ್ಲಿ ಸ್ವಲ್ಪ ತಡವಾಗುತ್ತಿದ್ದುದು ವಾಡಿಕೆ; ಏಕೆಂದರೆ ವಿಶೇಷ ಔತಣದ ಪಾಕಕಾರ್ಯ ಪೂರೈಕೆಯ ದೆಸೆಯಿಂದ. ಮಕ್ಕಳು ಅವರವರ ತಂದೆಯ ತೊಡೆಯ ನಡುವೆ ಹುದುಗಿ, ಹೊದ್ದ ಶಾಲಿನಿಂದ ತಲೆ ಮಾತ್ರ ಕಾಣುವಂತೆ ಬೆಚ್ಚಗೆ ಕುಳಿತು ಆಲಿಸುತ್ತಿದ್ದುವು. ನಾನೂ, ಮುಂಡಿಗೆಗೆ ಒರಗಿ ಶಾಲು ಹೊದ್ದು ಕುಳಿತು, ಯಾವುದೋ ಅಲೌಕಿಕ ಅತೀಂದ್ರಿಯ ವ್ಯಾಪಾರವನ್ನು ಗಮನಿಸುತ್ತಿರುವಂತೆ, ವಿಸ್ಮಯಾನಂದಗಳ ಸಮ್ಮಿಶ್ರಣ ಭಂಗಿಯಿಂದ ಆಲಿಸುತ್ತಿದ್ದೆ. ನನಗೀಗ ನೆನಪಾಗುತ್ತಿರುವ ಸಂದರ್ಭದಲ್ಲಿ, ಮಂಜಪ್ಪಗೌಡರು ಓದಿ ಅರ್ಥ ಹೇಳುತ್ತಿದ್ದ ಭಾಗ, ತೊರವೆ ರಾಮಾಯಣದಲ್ಲಿ ಆಂಜನೇಯನ ಸಮುದ್ರಲಂಘನದ ಸನ್ನಿವೇಶವಾಗಿತ್ತು. ಹಳ್ಳಿಯ ಹುಡುಗನಾಗಿದ್ದ ನನ್ನ ಆ ವಯಸ್ಸಿಗೆ ರಾಮಾಯಣದ ಕಥೆ ಅದರ ಭ್ರೂಣಾವಸ್ಥೆಗಿಂತಲೂ ಪೂರ್ವತರದ್ದಾಗಿತ್ತು. ರಾಮ ಸೀತೆ ಹನುಮಂತ ರಾವಣರ ಹೆಸರುಗಳು ಕಿವಿಯ ಮೇಲೆ ಬಿದ್ದಿರಬಹುದಾಗಿದ್ದರೂ ಕಥೆಯ ರೂಪ ಅಖಂಡವಾಗಿರದೆ ತೆನ್ನಾಲಿ ರಾಮಕೃಷ್ಣನ ಚಿತ್ರಕಲೆಯ ಮಾದರಿಯದಾಗಿತ್ತು! ಆದರೂ ನನಗೆ ಮಂಜಣ್ಣಯ್ಯ ತುಸು ರಾಗವಾಗಿ ಓದಿ ಹನುಮಂತ ಹಾರಿದುದನ್ನು ಅರ್ಥಯ್ಸುತ್ತಿದ್ದಾಗ ಏನು ಕುತೂಹಲ! ಏನು ರೋಮಾಂಚನ! ಮುಂದೇನು? ಮುಂದೇನು? -ಎಂಬ ಆತುರ! ತುಸು ವ್ಯಾಖ್ಯಾನ ಹೇಳಿ, ಮುಂದಿನ ಪದ್ಯ ಓದಲು ಗಮಕಿ ಸಾವಧಾನವಾಗಿ ಮುಂದುವರಿದಾಗ ನನಗೆ ಅದೊಂದೂ ಅರ್ಥವಾಗದೆ, ಆ ಪದ್ಯದ ಮೇಲೆ ಸಿಟ್ಟೂ ಬರುತ್ತಿತ್ತು! ಅದೇಕೆ ನಾನೂ ತಿಳಿಯಬಹುದಾದ ಗದ್ಯವೇ ಆಗಿರಬಾರದಾಗಿತ್ತು ಎಂದು?! ಜೊತೆಗೆ ಅಷ್ಟರಲ್ಲಿಯೇ "ಬಳ್ಳೆ ಹಾಕಿದ್ದಾರೆ" ಎಂಬ ಊಟದ ಕರೆಯು ಬಂದು, ಎಲ್ಲರೂ ರಾಮಾಯನದ ಲೋಕದಿಂದ ಕಡುಬು ತುಂಡುಗಳ ಅಡುಗೆ ಮನೆಗೆ ನಿರ್ಲಿಪ್ತ ನಿರ್ವ್ಯಸನಿಗಳಾಗಿ ನಿರ್ದಾಕ್ಷಿಣ್ಯವಾಗಿ ಹೊರಟುಬಿಡುತ್ತಿದ್ದರು, ನನ್ನನ್ನೂ ನನ್ನ ಹನುಮಂತನನ್ನೂ ಆಕಾಶದ ಮಧ್ಯೆ ಸಾಗರದ ಮೇಲೆ ತ್ರಿಶಂಕು ಸ್ವರ್ಗದಲ್ಲಿಯೇ ತ್ಯಜಿಸಿಬಿಟ್ಟು! 'ಈ ದೊಡ್ಡವರನ್ನು ಆಶ್ರಯಿಸಿದರೇ ಹೀಗೆ, ನಾನೇ ಇದನ್ನೆಲ್ಲ ಓದಿಕೊಳ್ಳುವುದನ್ನು ಕಲಿತುಬಿಟ್ಟರೆ ಇವರ ಯಾರ ಹಂಗೂ ಇಲ್ಲದೆ ಬೇಕಾದಾಗ ಬೇಕಾದಷ್ಟು ಕಾಲ ಹನುಮಂತನೊಡನೆ ಹಾರಿ, ಮುಂದೆ ನಡೆಯುವುದನ್ನೆಲ್ಲ ಕಾಣುತ್ತೇನೆ' ಎಂದು ಸಾಹಸದ ಸಂಕಲ್ಪ ಮಾಡುತ್ತಿದ್ದೆ. ಬಹುಶಃ ಆ ಅಭೀಷ್ಟೆಯ ಹೃದಯದಲ್ಲಿ, ಬೀಜದ ಅಂತರತಮ ಗರ್ಭದಲ್ಲಿ ಮುಂಬರುವ ಮಹಾವಟ ವೃಕ್ಷವು ಸುಪ್ತಗುಪ್ತವಾಗಿರುವಂತೆ, ಶ್ರೀರಾಮಾಯಣದರ್ಶನಂ ಮಹಾಕಾವ್ಯ ಅಂತರ್ಗತವಾಗಿ ನಿದ್ರಿಸುತ್ತಿತ್ತೊ ಏನೋ?

No comments: