Wednesday, January 28, 2015

ಕುಪ್ಪಳಿ ಮನೆಯ ಹುಡುಗರು!

ತೀರ್ಥಹಳ್ಳಿಯಲ್ಲಿ ಓದಲು ಬಂದಿದ್ದ ನಮ್ಮ ಗುಂಪು ತಕ್ಕಮಟ್ಟಿಗೆ ಕುಪ್ರಸಿದ್ಧವೆ ಆಗಿತ್ತು. ನಮ್ಮ ಹಳ್ಳಿಯ ಮನೆಯಲ್ಲಿ ಊರಿಗೆಲ್ಲ ನಾವೇ ಯಜಮಾನರು. ಸುತ್ತಮುತ್ತಣ ಗದ್ದೆ, ಅಡಕೆತೋಟ, ಕಾಡು, ಬಯಲು, ಗುಡ್ಡ ಎಲ್ಲವೂ ನಮ್ಮದೇ! ಪರರು ಮತ್ತು ಪರರಿಗೆ ಸೇರಿದ್ದು ಎಂಬುದು ನಮ್ಮ ಅನುಭವಕ್ಕೆ ಬಂದೇ ಇರಲಿಲ್ಲ. ಎಲ್ಲಿ ಹೋದರೂ ಎಲ್ಲಿ ಅಲೆದರೂ ಅನ್ಯರದ್ದು ಎಂಬುದಿರಲಿಲ್ಲ. ಆಗಿನ್ನೂ ನಮ್ಮದು ಅವಿಭಕ್ತ ಕುಟುಂಬವಾಗಿದ್ದರಿಂದ ಹಿಸ್ಸೆಯಾದ ಮನೆಗಳಲ್ಲಿ ನಡೆಯುತ್ತಿದ್ದ ಕಲಹಗಳಿಗೂ ಅವಕಾಶವಿರಲಿಲ್ಲ. ಯಾವ ಹಣ್ಣಿನ ಮರದ ಯಾವ ಹಣ್ಣಾದರೂ ನಮ್ಮದೇ ಆಗಿರುತ್ತಿತ್ತು. ’ಇದು ಅವರಿಗೆ ಸೇರಿದ್ದು; ನಾವು ಮುಟ್ಟಬಾರದು. ನಾವು ತೆಗೆದುಕೊಂಡರೆ ಕದ್ದಂತಾಗುತ್ತದೆ; ಜಗಳಕ್ಕೆ ಬರುತ್ತಾರೆ’ ಎಂಬ ಕೋಟಲೆಯನ್ನೇ ಅರಿಯದಾಗಿದ್ದೆವು. ಆದರೆ ತೀರ್ಥಹಳ್ಳಿಗೆ ಬಂದಮೇಲೆ ಹೆಜ್ಜೆ ಹಜ್ಜೆಗೆ ’ಇದು ಅವರ ಮನೆ’ ’ಇದು ಅವರ ಹಿತ್ತಲು’ ’ಈ ಮಾವಿನ ಮರ ಅವರಿಗೆ ಸೇರಿದ್ದು!’ ’ಚಕ್ಕೋತ ಮರವಿರುವ ಆ ಜಾಗಕ್ಕೆ ಅವರು ವಾರಸುದಾರರು!’ ’ಈ ಗೋಡೆ ಅವರ ಕಾಂಪೌಂಡು, ಅದರ ಮೇಲೆ ನೀವು ಹತ್ತಿ ಕೂರಬಾರದು!’ ಇತ್ಯಾದಿ ಅನುಲ್ಲಂಘನೀಯಗಳಿಗೆ ಒಳಗಾಗಬೇಕಾಯಿತು. ಆದರೆ ನಮ್ಮ ಹುಡುಗು ಚಾಳಿ ಅದನ್ನೆಲ್ಲ ಅಷ್ಟೊಂದು ಮನಸ್ಸಿಗೆ ಹಾಕಿಕೊಳ್ಳಲೆ ಇಲ್ಲ. ಯಾವುದಾದರೊಂದು ಮರದಲ್ಲಿ ಹಣ್ಣು ಬಿಟ್ಟಿದ್ದರೆ, ನೇರವಾಗಿ, ಯಾವ ಅಪರಾಧ ಭಾವನೆಯೂ ಇಲ್ಲದೆ, ಹತ್ತಿ ಕೀಳುತ್ತಿದ್ದೆವು. ಒಂದು ವೇಳೆ ವಾರಸುದಾದರರು ಕಂಡು ಅಟ್ಟಿಕೊಂಡು ಬಂದರೆ ಕಾಲಿಗೆ ಬುದ್ದಿ ಹೇಳುತ್ತಿದ್ದೆವು. ಮೊದಮೊದಲು ಯಾರೋ ಹುಡುಗರು ಎಂದು ಶಾಪ ಹಾಕಿ ಸುಮ್ಮನಾಗುತ್ತಿದ್ದರು. ಆದರೆ ಕ್ರಮೇಣ ನಮ್ಮ ಖ್ಯಾತಿ ಹಬ್ಬಿತು: ’ಕುಪ್ಪಳಿ ಮನೆ ಹುಡುಗರು’ ಎಂದು ಗೊತ್ತಾದ ಮೇಲೆ, ನಾವು ಜಯಪ್ರದರಾಗಿ ಲೂಟಿ ಮಾಡಿ, ತಿಂದು ಬಾಯಿ ಒರೆಸಿಕೊಂಡು ಮನೆಗೆ ಬರುವಷ್ಟರಲ್ಲಿ, ದೂರು ನಮಗಿಂತಲೂ ಮೊದಲೆ ನಮ್ಮ ಮನೆಗೆ ಸೇರಿರುತ್ತಿತ್ತು. ಸರಿ, ಮೋಸಸ್ ಮೇಷ್ಟರ ಛಡಿ ಏಟು ಅಂಗೈ ಊದಿಕೊಳ್ಳುವಂತೆ ಬೀಳುತ್ತಿತ್ತು. ಆದರೇನು? ಛಡಿ ಏಟಿನ ಭಯಕ್ಕಿಂತಲೂ ಕೊಳ್ಳೆ ಹೊಡೆಯುವ ಸಾಹಸದ ಆಕರ್ಷಣೆಯೆ ಅದಮ್ಯವಾಗಿ ಇರುತ್ತಿತ್ತು!

ನಮ್ಮ ಬಾಲ್ಯಕ್ರೀಡಾಶೀಲತೆಯಂತೂ ನಾನಾ ಕ್ಷೇತ್ರಗಳಲ್ಲಿ ನಾನಾ ರೂಪಗಳಲ್ಲಿ ಪಟ್ಟಣ ಜೀವನ ಪರಿಚಯ ಮುಂದುವರಿದಂತೆಲ್ಲ ಶಾಖೋಪಶಾಖೆಗಳಾಗಿ ಮುಂದುವರಿಯುತ್ತಿತ್ತು. ಸ್ಕೂಲಿನ ಆಟಗಳಲ್ಲಿ ಮುಖ್ಯವಾದುದೆಂದರೆ ಪುಟ್‌ಬಾಲ್, ಕ್ರಿಕೆಟ್, ಬ್ಯಾಡ್‌ಮೆಂಟನ್, ಉಳಿದ ಬೀದಿ ಆಟಗಳೆಂದರೆ ಗೋಲಿ, ಚಿಣ್ಣಿದಾಂಡು, ಬುಗುರಿ, ಜೊತೆಗೆ ಚಕ್ರಬಿಡುವುದು: ಸಾಮಾನ್ಯವಾಗಿ ತೀರ್ಥಹಳ್ಳಿ-ಶಿವಮೊಗ್ಗ ರಸ್ತೆಯಲ್ಲಿ ಎರಡೊ ಮೂರೊ ಮೈಲಿಗಳೂ ಸ್ಪರ್ಧೆ ಹೂಡಿ ಚಕ್ರಬಿಡುತ್ತಾ ಓಡುತ್ತಿದ್ದೆವು; ಆದರೆ ಅದು ಬರಿಯ ಖಾಲಿ ಆಟವಾಗಿರಲಿಲ್ಲ; ಅಲ್ಲಲ್ಲಿ ಸಾಧ್ಯವಾದಲ್ಲೆಲ್ಲ ಲೂಟಿಯೂ ನಡೆಯುತ್ತಿತ್ತು; ಕಬ್ಬಿನ ಹಿತ್ತಲು ಕಂಡಾಗ, ದಾರಿಪಕ್ಕದ ಕಬ್ಬಗೋಲುಗಳನ್ನು ಮುರಿಯದೆ ಬಿಡುತ್ತಿರಲಿಲ್ಲ. ಯಾರಾದರೂ ತೋಡದಲ್ಲಿ ಚಕ್ಕೋತದ ಹಣ್ಣು ನೇತಾಡುತ್ತಿರುವುದನ್ನು ಕಂಡರೆ, ಒಬ್ಬನು ಮರ ಹತ್ತಿ ಹಣ್ಣು ಕೊಯ್ದು ಹಾಕಿದರೆ, ಮತ್ತೊಬ್ಬನು ಅದು ಕೆಳಗೆ ಬಿದ್ದು ಸದ್ದಾಗದಂತೆ ಬುತ್ತಿ ಹಿಡಿದು ಬೇಲಿಯಾಚೆಗೆ ಇದ್ದವರ ಕೈಗೆ ಎಸೆಯುತ್ತಿದ್ದು, ಮನೆಯವರಿಗೇನಾದರೂ ಸುಳಿವು ಹತ್ತಿ ಕೆಟ್ಟ ಬೈಗುಳಗಳ ಆಶೀರ್ವಾದ ಮಾಡುತ್ತಾ ಟ್ಟಿಸಿಕೊಂಡು ಬಂದರೆ, ಚಂಗನೆ ನೆಗೆದು, ಹಾರಿ, ವೇಗವಾಗಿ ತೀರ್ಥಹಳ್ಳಿ ಕಡೆಗೆ ಚಕ್ರ ಬಿಡುತ್ತಿದ್ದೆವು! ಇನ್ನೂ ಒಂದು ಆಟವೆಂದರೆ, ಕಳ್ಳ-ಪೋಲಿಸ್: ಒಂದು ಕಳ್ಳರ ಗುಂಪು, ಒಂದು ಪೋಲಿಸರ ಗುಂಪು. ಮೊದಲು ಕಳ್ಳರ ಗುಂಪು ಹಕ್ಕಲು ಕುರುಚಲು ಕಾಡು ದಟ್ಟ ಕಾಡುಗಳಲ್ಲಿ ಅಡಗಿದ ಮೇಲೆ, ಗೊತ್ತಾದ ಹೊತ್ತು ಕಳೆದು ಪೋಲಿಸರ ಗುಂಪು ಬೆನ್ನಟ್ಟುತ್ತಿತ್ತು! ಆ ಆಟವೂ ಕೂಡ ಖಾಲಿ ಆಟವಾಗಿರುತ್ತಿರಲಿಲ್ಲ, ಕಳ್ಳ ಪೋಲೀಸು ಇಬ್ಬರಿಗೂ! ಕಲ್ಲಸಂಪಗೆ ಹಣ್ಣು, ಬೆಮ್ಮಾರಲ ಹಣ್ಣು, ಕರ್ಜಿ ಹಣ್ಣು, ಕಾರೆಹಣ್ಣು, ಕಾಕಿಹಣ್ಣು, ಹುಳಿಚೊಪ್ಪಿನ ಹಣ್ಣು, ಇನ್ನೂ ಏನೇನೊ ಹೆಸರಿಲ್ಲದ ಆದರೆ ರುಚಿಯಿರುವ ಹಣ್ಣುಗಳು ಅಂಗಿಜೇಬಿಗೂ ಇಳಿಬೀಳುತ್ತಿದ್ದುವು ಹೊಟ್ಟೆ ತುಂಬಿದ ತರುವಾಯ! ಆಗ ನಮ್ಮ ಬದುಕಿನಲ್ಲಿ ಆಟಕ್ಕೇ ಪ್ರಥಮ ಸ್ಥಾನ, ಪ್ರಧಾನ ಸ್ಥಾನ; ಓದುವುದೂ ಮನೆಯವರ ಹೆದರಿಕೆಯಿಂದ; ಅವರಿಂದೊದಗಬಹುದಾದ ಪ್ರಹಾರಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ. ಓದು ಜೀವನೋಪಾಯಕ್ಕಾಗಿ ಎಂಬ ಭಾವನೆಯಂತೂ ನಮ್ಮ ಬಳಿ ಸುಳಿಯುತ್ತಿರಲಿಲ್ಲ. ಕುಪ್ಪಳಿಯಿದೆ, ಗದ್ದೆಯಿದೆ, ತೋಟವಿದೆ, ಅಪ್ಪಯ್ಯ, ಅಜ್ಜಯ್ಯ, ದೊಡ್ಡ ಚಿಕ್ಕಪ್ಪಯ್ಯ ಇದ್ದಾರೆ. ಮತ್ತೆ ನಮಗೇನು ಸಂಪಾದನೆಯ ತೆವಲು? ಬದುಕು ಚಿರಕಾಲವೂ ಹಾಗೆಯೇ ಇರುತ್ತದೆ ಎಂಬಂತೆ: ನಾವು ಯಾವಾಗಲೂ, ಬಾಲಕರಾಗಿ, ಮನೆಯವರ ಬಲತ್ಕಾಋದಿಂದ ಅವರ ತೃಪ್ತಿಗಾಗಿ ಓದುತ್ತಿರುವುದು, ರಜಾ ಬಂದಾಗ ಮನೆಗೆ ಹೋಗುತ್ತಿರುವುದು, ರಜ ಮುಗಿಯಲು ಮತ್ತೆ ತೀರ್ಥಹಳ್ಳಿಗೆ ಬಂದು ಇಸ್ಕೂಲಿಗೆ ಹೋಗುವುದು! ಇನ್ನು ವಿದ್ಯೆ, ಸಂಸ್ಕೃತಿ, ಹುದ್ದೆ, ಜ್ಞಾನಸಂಪಾದನೆ ಮುಂತಾದುವು ನಮ್ಮ ಭಾಗಕ್ಕೆ - ಅಂತೂ ನನ್ನ ಭಾಗಕ್ಕೆ - ಮೊಲದ ಕೊಂಬುಗಳಾಗಿದ್ದುವು!

No comments: