Thursday, January 1, 2015

ಅಜ್ಜಯ್ಯನ ಸರಸ್ವತೀ ಪೂಜೆ - 3

ಆ ನವರಾತ್ರಿಯ ಸರಸ್ವತೀ ಪೂಜೆಗೆ ಸಂಬಂಧಪಟ್ಟು ಪ್ರಭಾವಶಾಲಿಯಾಗಿದ್ದ ಮತ್ತೊಂದು ವಿಷಯವೆಂದರೆ ಅವಿಚ್ಛಿನ್ನ ನಂದಾದೀಪದ ಅನವರತ ರಕ್ಷೆಯ ಜಾಗರಣೆ ಸೇವೆ! ಅದರಲ್ಲಿ ಏನೋ ಒಂದು 'ಅನುಭಾವ'ದ ಸಂಪತ್ತು ನಮ್ಮ ಬುದ್ಧಿಗೆ ಅಗೋಚರವಾಗಿ ಅಂತಃಪ್ರಜ್ಞೆಗೆ ಸೋಂಕುತ್ತಿತ್ತೆಂದು ತೋರುತ್ತದೆ. ಏಕೆಂದರೆ ಈಗಲೂ ಅದನ್ನು ನೆನೆದಾಗಲೆಲ್ಲ ನನ್ನ ಮನಸ್ಸು ಯಾವುದೋ ಅನಂತಕಾಲದ ಗರ್ಭಗುಡಿಯ ಪವಿತ್ರತೆಯನ್ನು ಪ್ರವೇಶಿಸಿದಂತೆ ಪುಲಕಿತವಾಗುತ್ತದೆ, ಅಹೇತುಕವಾಗಿ! ಮಳಿಗೆ ಕೋಣೆಯಲ್ಲಿ ದೊಡ್ಡ ದೀಪದ ಕಂಬದ ಮೇಲೆ ಹೊತ್ತಿಸಿದ ಹೆಬ್ಬತ್ತಿಯ ಸೊಡರು ನವರಾತ್ರಿ ಪೂರೈಸುವ ತನಕ ಕೆಡದೆ ಉರಿಯಲೇಬೇಕಾಗಿತ್ತು. ಹಗಲೂ ರಾತ್ರಿಯೂ! 

ಹಗಲೇನೋ ಸರಿ; ಯಾರಾದರೂ ಉಪ್ಪರಿಗೆಯಲ್ಲಿ ಇದ್ದೇ ಇರುತ್ತಿದ್ದರು ಅಥವಾ ಯಾವುದಾದರೂ ಕೆಲಸಕ್ಕಾದರೂ ಬಂದು ಬಂದು ಹೋಗಿಯೇ ಹೋಗುತ್ತಿದ್ದರು. ಅವರು ಆಗಾಗ ಕೋಣೆಯಲ್ಲಿ ಇಣುಕಿ, ಬತ್ತಿ ಉರಿದಿದ್ದರೆ ಮುಂದಕ್ಕೆ ಹಾಕಿ, ಎಣ್ಣೆ ಬತ್ತಿದ್ದರೆ ಎಣ್ಣೆ ಹಾಕಿ, ಸೊಡರು ಕೆಡದಂತೆ ನೋಡಿಕೊಳ್ಳುವುದು ಸುಲಭವಾಗಿತ್ತು. ಆದರೆ, ರಾತ್ರಿ? ಆ ಕೆಲಸಕ್ಕೆ ನಿಯೋಜಿತವಾಗುತ್ತಿದ್ದುದು, ಸಾಮಾನ್ಯವಾಗಿ, ಹುಡುಗರೆ, ನಮ್ಮ ಮನೆಯಲ್ಲಿ ಓದಲು ಬಂದು ಇರುತ್ತಿದ್ದವರು. ಅವರಲ್ಲಿ ಕೆಲವರು ದೊಡ್ಡವರು, ಅಂದರೆ ಮನೆಯವರಾಗಿದ್ದ ನಮಗಿಂತಲೂ ನಾಲ್ಕಾರು ವರ್ಷಕ್ಕೆ ಹಿರಿಯರು. ಅವರಲ್ಲಿ ಯಾರಾದರೂ ಆ ಮಳಿಗೆ ಕೋಣೆಯಲ್ಲಿ ಮಡಿಯಾಗಿ ಮಲಗಿ, ರಾತ್ರೆಯೂ ದೀಪ ಆರದಂತೆ ನೋಡಿಕೊಳ್ಳುತ್ತಿದ್ದರು. ಚಿಕ್ಕವರಾದ ನಮಗೆ ಕರುಬು! ನಾವೂ ಮಲಗುತ್ತೇವೆ ಎಂದು ನಮ್ಮ ಹಟ. ಆದರೆ ನಮ್ಮನ್ನೆ ಮಲಗಲು ಬಿಟ್ಟರೆ ನಮ್ಮಂತೆಯೆ ದೀಪವೂ ನಿದ್ದೆ ಹೋಗಬಹುದೆಂದು ಹಿರಿಯರ ಆಕ್ಷೇಪಣೆ. ಕಡೆಗೆ ಒಂದು ರಾಜಿಯಾಗಿ ನಮಗೆಲ್ಲ ಆನಂದ: ಒಬ್ಬ ದೊಡ್ಡವನ ಜೊತೆ ಯಾರಾದರೂ ಒಬ್ಬ ಚಿಕ್ಕವ ಮಲಗುವುದು ಎಂದು.

ಹೂವು, ಗಂಧ, ಲೋಬಾನ, ಕರ್ಪೂರ ಇತ್ಯಾದಿಗಳ ಸಂಮಿಶ್ರಿತ ಸುವಾಸನೆ ಆ ನಮ್ಮ ಉಪ್ಪರಿಗೆಯ ಮಳಿಗೆಕೋಣೆಯನ್ನು ಭೂಮಿಯಿಂದೆತ್ತಿ ದಿವ್ಯನಂದನದ ಅಂಗವನ್ನಾಗಿ ಪರಿವರ್ತಿಸುತ್ತಿತ್ತು. ರಾತ್ರಿ ಸುತ್ತಲೂ ನಿಶ್ಯಬ್ಧ, ನಿಬಿಡ ಘೋರಾಂಧಕಾರ! ಸಹ್ಯಾದ್ರಿಯ ಸಾಂದ್ರ ರುಂದ್ರ ಉನ್ನತ ಅರಣ್ಯಮಯ ಪರ್ವತಶ್ರೇಣಿಯ ಉಗ್ರ ಗಂಭೀರ ಸಾನಿಧ್ಯದ ಪ್ರಭಾವದ ಮಧ್ಯೆ ಆ ದೀಪದ ಕಂಬದ ಸೊಡರು ಎಂತಹ ಪ್ರಶಾಂತ ಶೀತಲ ಜ್ಯೋತಿಯಾಗಿ ತಾನು ಬೆಳಗುತ್ತಿದ್ದ ಅತ್ಯಂತ ಅಲ್ಪವಾದ ವಲಯಕ್ಕೆ ಒಂದು -ನಿರಾಶೆಯ ನಡುವೆ ಆಶೆಯಂತೆ, ಭೀತಿಯ ಹೃದಯದಲ್ಲಿಯೆ ಹೊಮ್ಮುವ ಧೈರ್ಯದಂತೆ- ಒಂದು ಆಧ್ಯಾತ್ಮಿಕ ಪರಿವೇಶವನ್ನುಂಟು ಮಾಡುತ್ತಿತ್ತು! ಅದನ್ನು ರಕ್ಷಿಸುವ ನಮಗೆ ಅದೆಂತಹ ಹೆಮ್ಮೆಯ ಜವಾಬುದಾರಿ! ಅದನ್ನು ರಕ್ಷಿಸುವ ಒಂದು ಉಪಾಯವೊ ಎನ್ನುವಂತೆ - ಕಣ್ಣು ಮುಚ್ಚಿದರೆ ಅದೆಲ್ಲಿ ಕೆಟ್ಟು ಹೋಗುತ್ತದೆಯೋ ಎಂದು - ನಾವು ನಿದ್ದೆ ಹೋಗಬಾರದು ಎಂಬ ಸಂಕಲ್ಪದಿಂದ ಕಣ್ಣು ತೆರೆದುಕೊಂಡು ಅದನ್ನೆ ನೋಡುತ್ತಾ ಮಲಗುತ್ತಿದ್ದೆವು. ಆದರೆ ಕಣ್ಣು ಕುಗುರುತ್ತಿತ್ತು. ದಣಿದ ಮಕ್ಕಳ ಮನಸ್ಸಿನ ಮೇಲೆ ನಿದ್ರಾದೇವಿ ತನ್ನ ತಾಯಿಸೆರಗನ್ನು ಬೀಸುತ್ತಿದ್ದಳು. ಎಲ್ಲವೂ ಮಬ್ಬುಮಬ್ಬು ಮಂಜುಮಂಜು ಆಗಿ ಪ್ರಜ್ಞೆಯಿಂದ ಜಾರಿ ಹೋಗುವಂತಾಗುತ್ತಿತ್ತು. ಆಗ ಇದ್ದಕ್ಕಿದ್ದಂತೆ ಫಕ್ಕನೆ, ಜಾಗರಣೆಯ ಸಂಕಲ್ಪದ ಪ್ರಜ್ಞೆ ಬಹಿರ್ಗೊಂಡು, ಕಣ್ಣುಗಳನ್ನು ಬಲತ್ಕಾರವಾಗಿ ತೆರೆಯಿಸುತ್ತಿತ್ತು. ಅಯ್ಯೊ ಮಲಗಿಬಿಟ್ಟಿದ್ದೆವಲ್ಲಾ! ಇನ್ನು ಖಂಡಿತ ಮಲಗಬಾರದು; ಕಣ್ಣು ಬಿಟ್ಟುಕೊಂಡೇ ಇರಬೇಕು; ಎಂಬ ಸಂಕಲ್ಪ ತುಸು ಹೊತ್ತಿನಲ್ಲಿಯೆ ನಿದ್ದೆಯ ವೈತರಣಿಗೆ ಅದ್ದಿಉ ಹೋಗುತ್ತಿತ್ತು. ಬೆಳ್ಳಗೆ ಬೆಳಗಾದ ಮೇಲೆಯೆ ಪಕ್ಕದಲ್ಲಿರುವ ದೊಡ್ಡವನು -ಅವನು ರಾತ್ರಿಯಲ್ಲಿ ನಡುನಡುವೆ ಎದ್ದು ತನ್ನ ಕರ್ತವ್ಯ ಪಾಲನೆ ಮಾಡಿ ಕೃತಕೃತ್ಯನಾದವನು- ನೂಕಿ ಎಬ್ಬಿಸಿದ ಮೇಲೆಯೆ ಕಣ್ಣುಜ್ಜಿಕೊಂಡು ಏಳುತ್ತಿದ್ದುದು ನಾವು!
ಅಜ್ಜಯ್ಯನ ನೆನಪಿನೊಡನೆ ಅವಿಭಕ್ತವಾಗಿ ಹೊಂದಿಕೊಂಡಿರುವ ಇಂತಹುದೇ ಮತ್ತೊಂದು ಎಂದರೆ -ಆಕಾಶದೀಪ: ಕಾರ್ತಿಕ ಮಾಸದಲ್ಲಿ ದಿನವೂ ಕತ್ತಲಾಗುವ ಹೊತ್ತು ಅವರು ಸಂಪಿಗೆ ಮರದ ಬುಡದಲ್ಲಿ ಮನೆಯ ಬಳಿಯ ಅಡಕೆ ತೋಟದ ಪಕ್ಕದಲ್ಲಿ ನೆಟ್ಟಿರುತ್ತಿದ್ದ ಉದ್ದ ಗಳುವಿನ ತುದಿಗೆ ಹಗ್ಗದ ಮೂಲಕ ಏರಿಸಿ ಕಟ್ಟಿ ರಾತ್ರಿಯೆಲ್ಲ ಉರಿಯುವಂತೆ ಮಾಡಿಡುತ್ತಿದ್ದ ನಾಲ್ಕು ಕಡೆಯೂ ಗಾಳಿಗೆ ಆರದಂತೆ ಗಾಜಿನಿಂದ ಭದ್ರಪಡಿಸಿರುತ್ತಿದ್ದ ಲಾಂದ್ರದ ದೀಪ! ಎರಡೂವರೆಯೊ ಮೂರೊ ಅಡಿಗಳೆತ್ತರದ ನಾವು ಬಾನೆತ್ತರಕ್ಕೇರುತ್ತಿದ್ದ ಆ ದೀಪವನ್ನು ನೋಡುತ್ತಾ ಒಂದು ಅಸೀಮ ಅನಂತತೆಯನ್ನೇ ಅನುಭವಿಸುತ್ತಿದ್ದೆವು. ನಮ್ಮ ಮರ್ತ್ಯಸ್ಥ ಕಲ್ಪನೆಗೆ ಆ ದೀಪ ಏರುತ್ತೇರುತ್ತಾ ಅಮರ್ತ್ಯ ಲೋಕೋನ್ನತವಾಗಿ ತೋರುತ್ತಿತ್ತು. ಆಕಾಶಕ್ಕೆ ಮುಟ್ಟಮುಟ್ಟ, ಇನ್ನೇನು ನಕ್ಷತ್ರಕ್ಕೆ ತಗುಲಿಯೆ ಬಿಡುತ್ತದೆ ಎಂಬಂತೆ ಭಾಸವಾಗಿ ಹಿಗ್ಗುತ್ತಿತ್ತು ನಮ್ಮ ಪುಟ್ಟ ಹೃದಯ! ಒಂದು ಏಣಿ ಹಾಕಿದರೆ ಸಾಕು, ಆ ದೀಪದ ನೆತ್ತಿಯಿಂದ ಮೇಲಕ್ಕೆ, ಆಕಾಶ ನಮ್ಮ ಕೈಗೆ ಎಟುಕುತ್ತಿತ್ತು! ಆಗ ನಮಗೆ ಆಕಾಶ ಅಭಾವ ಸ್ವರೂಪದ್ದಾಗಿರಲಿಲ್ಲ; ಮುಷ್ಟಿ ಗ್ರಾಹ್ಯವಾಗಬಹುದಾದ ಘನ ವಸ್ತುವಾಗಿತ್ತು. ಅಜ್ಜಯ್ಯನ ಆ ಕಾರ್ತಿಕ ದೀಪದ ಆರೋಹಣ ನಮಗೆ, ಒಂದು ಆಧ್ಯಾತ್ಮಕ ಸ್ವರ್ಗಾರೋಹಣದಂತೆ ನಮ್ಮ ಚೇತನದ ಅಭೀಪ್ಸೆಯ ಊರ್ಧ್ವಗಮನ ಸಾಹಸಕ್ಕೆ ಸಂಕೇತವಾಗಿತ್ತೊ ಏನೊ?
ಕಲಾತ್ಮಕವಾದ ಇಂತಹ ಪದ್ಧತಿಗಳು ವಸ್ತುನಿಷ್ಠವಾದ ಬಾಹ್ಯದೃಷ್ಟಿಗೆ ಅಲ್ಪವೂ ಸಾಧಾರಣವೂ ಬರಿಯ ಕಂದಾಚಾರ ಮಾತ್ರವೂ ಆಗಿ ತೋರಬಹುದಾದರೂ ಭಾವನಿಷ್ಠ ಅಂತರ್‍ದೃಷ್ಟಿಗೆ, ಅದೊಂದು ಅಮೃತಮಯ ಚಿರಂತನ ಆಧ್ಯಾತ್ಮಕ ಅನುಭವದಂತೆ ನಿಗೂಢವೂ ಅಂತಃಸ್ಥಾಯಿಯೂ ಆಗಿರುವ ಸ್ಮೃತಿ ಮಂದಿರದ ನಂದಾದೀಪವಾಗಿ ಜೀವಮಾನವನ್ನೆಲ್ಲ ತನ್ನ ಗುಪ್ತದೀಪ್ತಿಯಿಂದ ಬೆಳಗುತ್ತಿರುತ್ತದೆ.

No comments: