Friday, January 16, 2015

ತನ್ನನ್ನು ತಾನೇ ಕಂಡುಕೊಂಡ ಒಂದು ದಿನ!

1924 ಜನವರಿ 16 ಬುಧವಾರದ ದಿನಚರಿ:
ಬೆಳಿಗ್ಗೆ ಎದ್ದವನೆ ವ್ಯಾಯಾಮ ಮಾಡಿದೆ. ಸ್ನಾನದ ತರುವಾಯ ಹೆಡ್ಮಾಸ್ಟರ ಮನೆಗೆ ಹೋದೆ. ಏನೂ ಫಲವಾಗಲಿಲ್ಲ. ಹಸ್ತಪ್ರತಿಯೊಡನೆ ಹಿಂತಿರುಗಿದೆ. ಕೆ.ಮಲ್ಲಪ್ಪನವರೊಡನೆ ಆತ್ಮ ಬ್ರಹ್ಮ ಕುರಿತು ಮಾತಾಡಿದೆ. ಅವರು ತುಂಬ ಬಿಸಿಯಾದರು, ತಣ್ಣೀರೆರಚಿ ಬಂದೆ. ರೂಮಿಗೆ ಬಂದಾಗ ಪಿ. ಮಲ್ಲಯ್ಯ ಬಂದಿದ್ದರು. ಅವರಿಗೆ ನನ್ನ ಕವನಗಳನ್ನು ತೋರಿಸಿದೆ. ನಾವಿಬ್ಬರೂ ಕೋದಂಡರಾಮ ಮುದ್ರಣಾಲಯಕ್ಕೆ ಹೋಗಿ ನನ್ನ ಚಿಕ್ಕ ಕಥೆ 'ಅಮಲನಕಥೆ'ಯನ್ನು ಅವನು ಪ್ರಕಟಿಸಲು ಸಾಧ್ಯವೆ ಎಂದು ವಿಚಾರಿಸಿದೆವು. ಅವನು ಸಾಧ್ಯವಿಲ್ಲ ಎಂದನು. ತರುವಾಯ ಪಬ್ಲಿಕ್ ಲೈಬ್ರರಿಗೆ ಹೋದೆವು. ನಾನು ಕೆಲವು ಮಾಸಪತ್ರಿಕೆಗಳನ್ನು ನೋಡಿದೆ.
ಹೊರಗಡೆಯ ಪ್ರಪಂಚದ ಕಡೆ ಕಣ್ಣು ಹಾಯಿಸಿದಾಗ ಅದೆಂತಹ ಗಲಿಬಿಲಿಯನ್ನು ಅದು ಎದುರುಗೊಳ್ಳುತ್ತದೆ: ರಣಭೇರಿ. ವೀಣಾವಾದ್ಯ, ನಾನಾ ಕಲೆಗಳ ಬಣ್ಣಬಣ್ಣದ ಸಂತೆ, ಅವರೊಡನೆಲ್ಲ ಬೆರೆಯಬೇಕೆಂದು ಮನಸ್ಸಾಗುತ್ತದೆ. ಈ ಮಹಾಜಗತ್ತಿನ ಬೃಹಜ್ಜೀವನ ಜಟಿಲಜಾಲದಲ್ಲಿ ನಾನೊಂದು ಅಣುವಿಗಿಂತಲೂ ಅಣುವಾಗಿ ಶೂನ್ಯವಾಗಿ ಬಿಡುತ್ತೇನೆ. ಈ ಅಪಾರ ರಣರಂಗದಲ್ಲಿ, ಎಲ್ಲಿ ಒಬ್ಬೊಬ್ಬನೂ ತಾನೆ ಸೇನಾಧಿಪತಿಯಾಗಲು ಹೆಣಗುತ್ತಾನೆಯೋ ಅಲ್ಲಿ, ನಾನೇನು ಮಹಾ? ಒಂದು ಕಃಪದಾರ್ಥ! ಆದರೂ ನನಗೊಂದು ಮಹದಾನಂದ ಉಂಟಾಗುತ್ತಿದೆ. ನನ್ನನ್ಯಾರು ಲೆಕ್ಕಿಸುತ್ತಾರೆ? ಆಗ ಕಣ್ಣು ಅಂತರ್ಮುಖವಾಗುತ್ತದೆ. ಕಣ್ಣು ಒಳಕಡೆಗೆ ಹೊರಳಿದಾಗ, ನನ್ನನ್ನು ಲೆಕ್ಕಿಸುವ ವ್ಯಕ್ತಿ ನೀನೊಬ್ಬನೆ! ಈ ವಿಷಯವಾಗಿ ಒಂದು ಕವನ ಬರೆಯಬೇಕೆಂದಿದ್ದೇನೆ. ರಾತ್ರಿ ಒಂಬತ್ತು ಗಂಟೆಯಲ್ಲಿ 'The Wreck of Titanic' 'ಟೈಟಾನಿಕ್ ಮಹಾನೌಕೆ' ಮುಳುಗಿಹೋದ ವಿಚಾರ ಓದಿದೆ. ಅದರ ನಾವಿಕರು ಸಾವನ್ನಪ್ಪಿದ ಧೈರ್ಯದಿಂದ ಪ್ರಚೋದಿತನಾಗಿ ಒಂದು ವೀರಕವನವನ್ನು ಬರೆಯಲು ಆಶೆಯಾಗಿದೆ. ರಾತ್ರಿ ಮಲಗಿದಾಗ ರಚಿಸುತ್ತೇನೆಂದು ತೋರುತ್ತದೆ. ದೇವದೇವ, ನೀನೊಬ್ಬನೆ ನನ್ನನ್ನು  ಲೆಕ್ಕಿಸುವವನು; ನೀನೊಬ್ಬನೆ ಸತ್ಯ, ಉಳಿದವರೆಲ್ಲ ಮಿಥ್ಯೆ. ಕೃಷ್ಣ! ಕೃಷ್ಣ! ಕೃಷ್ಣ!
***
ಜೇಮ್ಸ್ ಕಸಿನ್ಸ್ ಅವರನ್ನು ಭೇಟಿಯಾಗುವ ಮುಂಚೆಯೇ ಅಮಲನ ಕಥೆ ಪ್ರಕಟಣೆಗೆ ಸಿದ್ಧಗೊಂಡಿತ್ತು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.

No comments: