Wednesday, January 7, 2015

ಜನವರಿ 7 : 1924ರ ದಿನಚರಿ

ಕೆಲವು ಸ್ನೇಹಿತರು ಬಂದರು. ಸುಮಾರು ಅಪರಾಹ್ನ ಎರಡು ಗಂಟೆಯ ಸಮಯದಲ್ಲಿ ನಾನು ಮಾತನಾಡುತ್ತಿದ್ದಾಗ 'ಪ್ರೇತಸಿದ್ಧಾಂತ'ದ (Theory of spirits) ನನ್ನ ಭಾವನಗೆಳನ್ನು ಅರ್ಥ ಮಾಡಿಕೊಳ್ಳುವ ಮಟ್ಟದಲ್ಲಿರಲಿಲ್ಲ ನನ್ನ ಮಿತ್ರರು. ಅವರನ್ನು ಮನಗಾಣಿಸುವುದು ನನಗೆ ಪ್ರಯಾಸಕರವಾಯ್ತು. ಒಂದು ಸಮಸ್ಯೆ ನನ್ನನ್ನು ಪೀಡಿಸಿತು. ಅವರೆಲ್ಲ ಬೀಳ್ಕೊಂಡ ಮೇಲೆ ನಾನೊಬ್ಬನೆ ಕುಳಿತು ಶ್ರೀಕೃಷ್ಣನನ್ನೂ ಸ್ವಾಮಿ ವಿವೇಖಾನಂದರನ್ನೂ ಇತರರನ್ನೂ ನನ್ನ ನೆರವಿಗೆ ಬರುವಂತೆ ಬೇಡಿಕೊಂಡೆ. ಚೆನ್ನಾಗಿ ಅತ್ತೂ ಬಿಟ್ಟೆ. ಬೆಳಿಗ್ಗೆ ಒಂದು ಥಿಯಾಸಫಿಯ ಪುಸ್ತಕದಲ್ಲಿ 'ಶ್ರೀಕೃಷ್ಣನು Logas ಮಾತ್ರನೆಂದೂ ಪರಬ್ರಹ್ಮದ ಅಂಶಮಾತ್ರನೆಂದೂ ಓದಿದ್ದು, ಈ ಹಾಳು ಮಂದಿ ಸಮಸ್ಯೆಯನ್ನು ಬಿಡಿಸುತ್ತೇವೆ ಎಂದು ಹೊಸ ಹೊಸ ಪದಗಳನ್ನು ನೆಯ್ದು ವಿಷಯವನ್ನು ಮತ್ತೂ ಜಟಿಲವನ್ನಾಗಿ ಮಾಡಿ ಜೀವನಿಗೂ ದೇವನಿಗೂ ಇರುವ ಅಂತರವನ್ನು ಇನ್ನೂ ದೂರಾಂತರವನ್ನಾಗಿ ಮಾಡುತ್ತಾರಲ್ಲಾ ಎಂದು ನನ್ನ ಮನಸ್ಸು ರೇಗಿ ಹುಚ್ಚೆದ್ದು ಹೋಗಿತ್ತು. ತುಸು ಸಿಟ್ಟಿನಿಂದಲೆ ರೂಮಿನಿಂದ ಹೊರಬಿದ್ದು ಏಕಾಂತ ಸ್ಥಳಕ್ಕಾಗಿ ಚಾಮುಂಡಿಬೆಟ್ಟದ ತಪ್ಪಲಿಗೆ ಅಭಿಮುಖವಾಗಿ ಬೀದಿಯಲ್ಲಿ ಸರಸರನೆ ನಡೆದೆ. ದಾರಿ ಸೀಳುತ್ತಿರುವಂತೆ ಭಾಸವಾಗಿ ಸಿಟ್ಟಿಗೆ ಒಂದೆರಡು ಸಾರಿ ರಸ್ತೆಯನ್ನು ಒದ್ದೂ ಬಿಟ್ಟೆ. ಹೋಗುತ್ತಾ ಒಮ್ಮೆ ಅತ್ತು, ಕೃಷ್ಣನನ್ನೂ ಕಡೆಗೆ ಪೂಜ್ಯರಾದ ನನ್ನ ಸ್ವಾಮಿ ವಿವೇಕಾನಂದರನ್ನೂ ತರಾಟೆಗೆ ತೆಗೆದುಕೊಂಡೆ. ಅಷ್ಟರಲ್ಲಿ ಒಂದು ಸಂಗತಿ ಜರುಗಿತ್ತು. ಒಂದು ಹಕ್ಕಿ ಮರದಲ್ಲಿ ಹಾಡುತ್ತಿದ್ದುದು ಕೇಳಿಸಿತು, ಹಕ್ಕಿ ಮಾತ್ರ ಕಾಣುತ್ತಿರಲಿಲ್ಲ. ಇದ್ದಕ್ಕಿದ್ದ ಹಾಗೆ ಬುದ್ಧಿಗೆ ಹೊಳೆಯಿತು: ಶ್ರೀಕೃಷ್ಣನೇ ಆ ರೂಪದಲ್ಲಿ ನ್ನನ್ನು ಸಾಂತ್ವನಗೊಳಿಸಲು ಬಂದಿದ್ದಾನೆ ಎಂದು. ಏನೊ ಒಂದು ರಸಾನಂದ ನನ್ನ ಚೇತನವನ್ನು ತುಂಬಿತ್ತು. ಹಕ್ಕಿಯನ್ನು ನೋಡಲಾಗದಿದ್ದರೂ ಹಾಡಿನಿಂದ ಅದರ ಅಸ್ತಿತ್ವವನ್ನರಿಯಬಹುದು ಎಂದು. ಜೇಬಿನಲ್ಲಿ ಭಗವದ್ಗೀತೆ ಇತ್ತು.
ಒಂದೆರಡು ಫರ್ಲಾಂಗು ಮುಂದೆ ಹೋಗಿ ಒಂದು ಹೂವಿನ ಪೊದೆಯ ಪಕ್ಕದಲ್ಲಿ ಕುಳಿತು ಎರಡು ಮೂರು ಶ್ಲೋಕಗಳನ್ನು ಓದಿದೆ: 'ಕೆಲವರು ವೇದಗಳನ್ನು ಓದಿ ತಪ್ಪಾಗಿ ಅರ್ಥಮಾಡಿ ಅನರ್ಥಕಾರವಾಗಿ ಬೋಧಿಸುತ್ತಾರೆ.' ಹಾಗೆಯೆ ಆಲೋಚಿಸಿದೆ, ಥಿಯಾಸಫಿಗಳು ಮೂರ್ಖರು! ಏಕೆಂದರೆ, ಭಗವಂತನಿಗೂ ನಮಗೂ ಇರುವ ಅಂತರವನ್ನು ಹೆಚ್ಚಿಸುತ್ತಾರೆ.

1 comment:

Unknown said...

ಥಿಯಾಸಫಿಗಳು ಮೂರ್ಖರು! ಏಕೆಂದರೆ, ಭಗವಂತನಿಗೂ ನಮಗೂ ಇರುವ ಅಂತರವನ್ನು ಹೆಚ್ಚಿಸುತ್ತಾರೆ.