Thursday, January 22, 2015

ಹಾವುಗಳಿಗೆ ಕಲ್ಲು ಹೊಡೆದ ಧೀರರು!

ಒಂದು ಸಂಜೆ ಶಾಲೆ ಮುಗಿಯುವ ಘಂಟೆ ಹೊಡೆದೊಡನೆಯೆ ಕಟ್ಟೆಯೊಡೆದು ಕೆರೆಯ ನೀರು ಭೋರೆಂದು ಹೊರಗೆ ಧುಮುಕಿ ಹರಿದು ನುಗ್ಗುವಂತೆ ಬಾಳಕರೆಲ್ಲ ಸಂತೋಷ ಘೋಷಗೈಯುತ್ತಾ ತಂತಮ್ಮ ಮನೆಯ ಕಡೆಗೆ ಧಾಔಇಸತೊಡಗಿದರು. ಅಷ್ಟರಲ್ಲಿ ಎರಡು ದೊಡ್ಡ ಹಾವುಗಳು ಹಾದಿಯಲ್ಲಿ ದಾಟಿ ಬಂಗಲೆಯ ಬಯಲಿನತ್ತ ಹೋಗುತ್ತಿದ್ದುದು ಕಣ್ಣಿಗೆ ಬಿದ್ದು ಪೇಟೆಯ ಹುಡುಗರೆಲ್ಲ ಹೆದರಿ ಕೂಗಿಕೊಂಡು ಓಡಿದರು. ಆದರೆ ನಾವು -ನಾನು, ಕಡೆಮಕ್ಕಿ ಸುಬ್ಬಣ್ಣ, ಕುಪ್ಪಳಿ ಮಾಣಪ್ಪ- ದೊಡ್ಡ ದೊಡ್ಡ ಕಲ್ಲುಗಳನ್ನು ಕೈಗೆ ತೆಗೆದುಕೊಂಡು ಅವುಗಳನ್ನು ಅಡ್ಡಗಟ್ಟಿ ಹೊಡೆಯತೊಡಗಿದೆವು. ಅವು ಭಯದಿಂದ ಅತ್ತ ಇತ್ತ ನುಗ್ಗಿದುವು. ದೂರನಿಂತು ನೋಡುತ್ತಿದ್ದ ಹುಡುಗರು ನಮ್ಮನ್ನು ಕೂಗಿ ಕರೆದು ಅಪಾಯದಿಂದ ಪಾರುಮಾಡಲು ಬೊಬ್ಬೆ ಹಾಕುತ್ತಿದ್ದರು. ಈ ಗಲಭೆ ಶಾಲೆಗೂ ಮುಟ್ಟಿ ಉಪಾಧ್ಯಾರುಗಳೆಲ್ಲ ಹೊರ ಅಂಗಳದಲ್ಲಿ ನೆರೆದು ನಮ್ಮನ್ನು ಕರೆಯತೊಡಗಿದರು. ನಾವು ಕಾಡುಹಳ್ಳಿಯ ಬಾಳಕರಾದುದರಿಂದ ನಮಗೆ ಆ ಹಾವುಗಳು ಅಪರಿಚಿತವೂ ಆಗಿರಲಿಲ್ಲ, ಭಯಂಕರವೂ ಆಗಿರಲಿಲ್ಲ. ಅದೂ ಅಲ್ಲದೆ ಒಂದು ಬಗೆಯ ಬೇಟೆಯಂತಾಗಿ ನಮಗೆ ಉಲ್ಲಾಸವೋ ಉಲ್ಲಾಸ. ಅದೂ ಅಲ್ಲದೆ ನಮಗೆ ಅವು ಗಾತ್ರದಲ್ಲಿ ಬಹುದೊಡ್ಡದಾಗಿ ಕಂಡರೂ ನಾಗರಹಾವುಗಳಲ್ಲ ಕೇರೆ ಹಾವುಗಳು ಎಂಬುದೂ ಗೊತ್ತಾಗಿತ್ತು. ಆದ್ದರಿಂದ ನಾಔಉ ಹೆದರದೆ ನುಗ್ಗಿ ಕಲ್ಲು ಹೊಡೆದೇ ಹೊಡೆದೆವು. ಉಪಾಧ್ಯಾಯರ ಕೂಗಿಗೂ ಮನ್ನಣೆ ಕೊಡಲಿಲ್ಲ. ಕ್ಲಾಸಿನ ಹೊರಗೂ ಇವರದೇನು ಅಧಿಕಾರ? ಎಂಬುದು ನಮ್ಮ ಬುದ್ಧಿ. ಅಂತೂ ಆ ಹಾವುಗಳು ಏಟು ತಿಂದರೂ ಪೊದೆಗಳಲ್ಲಿ ನುಗ್ಗಿ ತಪ್ಪಿಸಿಕೊಂಡು ಕಣ್ಮರೆಯಾಗಿಬಿಟ್ಟವು. ನಾವು ’ಅಂಜುಬುರುಕ ಪೇಟೆಯ ಮಕ್ಕಳು’ ಎಂದು ಇತರ ಬಾಲಕರನ್ನು ಅಣಕಿಸಿ ಉಪಾಧ್ಯಾಯರುಗಳ ಕಡೆ ತಿರುಗಿಯೂ ನೋಡದೆ ಮನೆಗೆ ಹೋದೆವು. ಅದು ನಮಗೆ ಅತ್ಯಂತ ಸಾಮಾನ್ಯ ವಿಷಯವಾಗಿದ್ದುದರಿಂದ ಅದನ್ನು ಮರೆತೂಬಿಟ್ಟೆವು.

ಆದರೆ ಇತರ ಹುಡುಗರಿಗೂ, ಬಹುಮಟ್ಟಿಗೆ ಹಾರುವರೇ ಆಗಿದ್ದ ಉಪಾಧ್ಯಾಯವರ್ಗದವರಿಗೂ ಅದು ಅದ್ಭುತ ಸಾಹಸದ ವಿಷಯವಾಗಿ ತೋರಿತ್ತು! ನಮ್ಮ ಮನಸ್ಸಿನಿಂದ ಅದು ಸಂಪೂರ್ಣವಾಗಿ ಅಳಿಸಿಹೋಗಿದ್ದರೂ ಅವರೆಲ್ಲ ಅದರ ವಿಚಾರವಾಗಿಯೆ ಪ್ರಸ್ತಾಪಿಸುತ್ತಾ ಶ್ಲಾಘಿಸುತ್ತಾ ಟೀಕಿಸುತ್ತಾ ’ಶೂದ್ರರ ಮಕ್ಕಳೆ ಹಾಗೆ’ ಎಂದು ಮಾತಾಡಿಕೊಳ್ಳುತ್ತಾ ಮನೆ ಸೇರಿದ್ದರು.
ಮರುದಿನ ಕ್ಲಾಸಿನಲ್ಲಿ ’ಯಾರು ನಿನ್ನೆ ಹಾವುಗಳನ್ನು ಹೊಡೆಯುತ್ತಿದ್ದವರು ಎದ್ದು ನಿಂತುಕೊಳ್ಳಿ’ ಎಂದರು, ನಮ್ಮ ತರಗತಿಯ ಉಪಾಧ್ಯಾಯರು, ಬೆತ್ತದ ರಾಘವಾಚಾರ್ಯರು!
ನಮ್ಮ ಧೈರ್ಯವನ್ನು ಪ್ರಶಂಸಿಸುತ್ತಾರೋ ಏನೋ ಎಂದು ಭಾವಿಸಿ ನಾವು ಮೂವರೂ ಎದ್ದು ನಿಂತೆವು. ಆದರೆ ಪ್ರಶಂಸೆಗೆ ಬದಲಾಗಿ ನಮಗೆ ಕಾದಿದ್ದುದು ಬೆತ್ತದೇಟು.
***
ಏತಕ್ಕಾಗಿ ನಮ್ಮನ್ನು ಬಯ್ದು, ಎಚ್ಚರಿಕೆ ಹೇಳಿ, ಸಾದಾಶಿಕ್ಷೆ ಕೊಟ್ಟರೋ ನನಗಿನ್ನೂ ಅಥ್ವಾಗಿಲ್ಲ. (’ಸಾದಾಶಿಕ್ಷೆ’ ಎಂದರೆ, ಅಷ್ಟು ಬಲವಾಗಿ ಅಲ್ಲದೆ, ಮೆಲ್ಲನೆ, ಚಾಚಿದ ಅಂಗೈಗೆ ತುಸು ಬಿಸಿ ಮುಟ್ಟಿಸುವುದು. ’ಕಠಿಣ ಶಿಕ್ಷೆ’ ಎಂದರೆ ಬಾಸುಂಡೆ ಏಳುವಂತೆ ಬಡಿಯುವುದು.)
ಹುಡುಗರು ಅಪಾಯಕ್ಕೆ ಒಳಗಾಗುವ ಸಂಭವವಿರುವುದರಿಂದ ಅಂಥ ಕೆಲಸಕ್ಕೆ ಇನ್ನು ಮುಂದೆ ಹೋಗಬಾರದು ಎಂದೋ? ಉಪಾಧ್ಯಾಯರೆಲ್ಲ ಕೂಗಿ ಬೊಬ್ಬೆಯಿಟ್ಟು ಕರೆದರೂ ಲೆಕ್ಕಿಸದೆ ಹೋದುದು ’ಅವಿಧೇಯತೆ’ ಎಂದೋ? ಹಾವು ಪೂಜಾಯೋಗ್ಯವಾದ ಪವಿತ್ರ ಪ್ರಾಣಿ; ಹುತ್ತಕ್ಕೆ ಹತ್ತಿ ಹೂಮುಡಿಸಿ ಹಾಲೆರೆದು ಪೂಜಿಸುತ್ತಾರೆ; ಅಂಥ ನಾಗದೇವರುಗಳನ್ನು ಕೊಲ್ಲುವುದಕ್ಕೆ ಹೋದದ್ದು ಪಾಪವಾದ್ದರಿಂದ ಅಂತಹ ಪಾಪಕಾರ್ಯಗಳಿಂದ ನಮ್ಮನ್ನು ವಿಮುಖಗೊಳಿಸಲೆಂದೋ? ದೇವರೆ ಬಲ್ಲ!

No comments: