Friday, January 30, 2015

ಅಪ್ಪಯ್ಯನನ್ನು ಮನೆಬಿಡಿಸಿದ ಎಮ್‍ಡನ್ ಸಬ್‍ಮೆರೀನ್!

ಸಾಹಸಪ್ರಿಯರಾದ ನಮ್ಮ ದೊಡ್ಡ ಚಿಕ್ಕಪ್ಪಯ್ಯ ರಾಮಣ್ಣಗೌಡರು ಲಾಭ ಸಂಪಾದಿಸಿ ಶೃಈಮಂರಾಗುವ ಆಶೆಯಿಂದ ಅಡಕೆ ಮಾರಾಟದ ಸಾಹುಕಾರ ಉದ್ಯಮಕ್ಕೆ ಕೈಯಿಟ್ಟಿದ್ದರು. ತಾವೇ ಸಾಲಮಾಡಿ ಹಣತಂದು, ಇತರೆ ಬೆಳೆಗಾರರಿಗೆ ಮುಂಗಡವಾಗಿ ಸಾಲಕೊಟ್ಟು, ಅಡಕೆ ತುಂಬಿ, ಮೂಟೆಗಳನ್ನು ಬೀರೂರಿಗೆ ಸಾಗಿಸಿ, (ಆಗ ಶಿವಮೊಗ್ಗಕ್ಕೆ ರೈಲು ಬಂದಿರಲಿಲ್ಲವಂತೆ) ಮಂಡಿಗಳ ಮುಖಾಂತರ ಮಾರುತ್ತಿದ್ದರು. ಆ ಕ್ರಮದ ವ್ಯಾಪಾರದಿಂದ ಬರುತ್ತಿದ್ದ ಲಾಭ ಸಾಲದೆಂದು ತೋರಿ, ಇನ್ನೂ ಹೆಚ್ಚು ಹಣ ಸಂಪಾದಿಸುವ ಉಪಾಯ ಕಂಡುಹಿಡಿದರು. ಬೀರೂರಿಗಂತೂ ಅಡಕೆ ಮೂಟೆಗಳನ್ನು ಗಾಡಿಗಳಲ್ಲಿ ಸಾಗಿಸುತ್ತಿದ್ದರಷ್ಟೆ? ಅಲ್ಲಿಂದ ಮದರಾಸಿಗೆ ರೈಲು ರಸ್ತೆ ಏರ್ಪಟ್ಟಿತ್ತು. ರೈಲಿನಲ್ಲಿ ಮದರಾಸಿಗೇ ತಾನೇ ಸಾಗಿಸಿ ಮಾರಿದರೆ ಹೆಚ್ಚಿನ ಬೆಲೆಯ ದಳ್ಳಾಳಿಯ ಜೊತೆಗೆ ಲಾಭವೂ ತಮಗೇ ದೊರೆಯುವುದೆಂದು ತರ್ಕಿಸಿದರು. ಮೂಟೆಗಳನ್ನೆಲ್ಲ ರೈಲಿನಲ್ಲಿ ಮದರಾಸಿಗೆ ಸಾಮಾನು ಗಾಡಿಯಲ್ಲಿ ಕಳುಹಿಸಿ, ತಾವೂ ಹೊರಟರು., ಆಗ ಅವರಿಗೆ ಆಪ್ತರಾಗಿದ್ದು ಅವರ ಉದ್ಯಮಕ್ಕೆ ಸಹಾಯವಾಗಿರುತ್ತಿದ್ದ ವಾಟಗಾರು ಮಂಜಪ್ಪಗೌಡರನ್ನು ಜೊತೆಗೆ ಕೂಡಿಕೊಂಡು. ಮದರಾಸಿನಲ್ಲಿ ಮೂಟೆಗಳನ್ನು ಇಳಿಸಿ, ಮಾರಾಟಕ್ಕೆ ಏರ್ಪಾಡು ಮಾಡುವ ಕಾರ್ಯದಲ್ಲಿ ವ್ಯಾಪಾರಿಗಳೊಡನೆ ವ್ಯವಹಾರದಲ್ಲಿ ತೊಡಗಿ, ಒಂದು ಹೋಟಲಿನಲ್ಲಿ ಇಳಿದುಕೊಂಡರು.
ಅದೇ ರಾತ್ರಿ ಜರ್ಮನಿಯ ಸಮರನೌಕೆ, ಜಲಾಂತರ್ಗಾಮಿಯಾದ ಸಬ್ ಮೇರಿನ್ -’ಎಮ್‌ಡನ್’ ಹೆಸರಿನಿಂದ ಮುಂದೆ ಜಗದ್ ವಿಖ್ಯಾತವಾಯಿತು! -ಮದರಾಸಿನ ಲೈಟ್ ಹೌಸಿಗೆ ಗುರಿಯಿಟ್ಟು ಬಂಗಾಳಕೊಲ್ಲಿಯಿಂದ ಭಯಂಕರವಾಗಿ ಫಿರಂಗಿ ಗುಂಡುಗಳ ದಾಳಿ ನಡೆಸಿಬಿಟ್ಟಿತು!

ಹಕ್ಕಿ ಹಿಂಡಿಗೆ ಕವಣೆಕಲ್ಲು ಬಿದ್ದಂತಾಯಿತು! ಬ್ರಿಟಿಷರ ಕೃಪೆಯಿಂದ ಬಹುಕಾಲ ಪ್ರತ್ಯಕ್ಷ ಯುದ್ಧದ ಕೋಟಲೆಯಿಂದ ಪಾರಾಗಿ ಪ್ರಶಾಂತ ದಾಸ್ಯಜೀವನ ನಡೆಸುತ್ತಿದ್ದ ಪುಕ್ಕಲೆದೆಯ ಜನರು, ವ್ಯಾಪಾರಿಗಳು, ಚಾಕರರು, ನೌಕರರು, ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿ ಲಾಯರಿಗೀಯರಿ ಮಾಡಿಕೊಂಡಿದ್ದ ಬಿಳಿಕಾಲರಿನ ನಾಗರಿಕರು -ಊರುಬಿಟ್ಟು ಓಡಲು ತೊಡಗಿದರು, ಹೇಗಾದರೂ ತಮ್ಮ ಪ್ರಾಣ ಉಳಿಸಿಕೊಂಡರೆ ಸಾಕು ಎಂದು. ಎಲ್ಲೆಲ್ಲಿಯೂ ಹಾಹಾಕಾರ ಗಡಿಬಿಡಿ! ಇನ್ನು, ಆ ಷಹರಿಗೆ ತಮ್ಮ ಜೀವಮಾನದಲ್ಲೇ ಮೊತ್ತಮೊದಲಾಗಿ ಹೋಗಿದ್ದು, ದೂರದ ಸಹ್ಯಾದ್ರಿಯ ನಿಃಶಬ್ದ ಕೊಂಪೆಹಳ್ಳಿಯ ನಿರಾತಂಕ ನಿರುದ್ವಿಗ್ನ ವಾತಾವರಣದಲ್ಲಿಯೆ ಹುಟ್ಟಿ ಬೆಳೆದು ಬದುಕಿದ್ದ ಕುಪ್ಪಳಿ ರಾಮಣ್ಣಗೌಡರು ಮತ್ತು ವಾಟಗಾರು ಮಂಜಪ್ಪಗೌಡರು ಇವರ ಪಾಡು? ಅಡಕೆಯನ್ನೆಲ್ಲ ಯಾವನೊ ಒಬ್ಬ ಶೆಟ್ಟಿ ವ್ಯಾಪಾರಗೆ ಅವನು ಕೇಳಿದ ಬೆಲೆಗೆ ಒಪ್ಪಿಸಿ, ಬದುಕಿದೆಯಾ ಬಡಜೀವ ಎಂದು ಮದರಾಸಿನಿಂದ ಕಾಲುಕಿತ್ತರು! ಪರಿಣಾಮ ಕುಪ್ಪಳಿ ಮನೆತನಕ್ಕೆ ಕೆಲವು ಸಹಸ್ರ ರೂಪಾಯಿಗಳ ನಷ್ಟವಾಯಿತು.
ಅಡಕೆ ತುಂಬಿ ಸಾಹುಕಾರಿಕೆ ಮಾಡುತ್ತಿದ್ದವರು ಚಿಕ್ಕಪ್ಪ ರಾಮಣ್ಣಗೌಡರಾದರೂ ಮನೆಯ ಯಜಮಾನಿಕೆ ನೋಡಿಕೊಳ್ಳುತ್ತಿದ್ದವರು ನನ್ನ ತಂದೆ ವೆಂಕಟಪ್ಪಗೌಡರು. ಅಡಕೆ ವ್ಯಾಪಾರದಲ್ಲಿ ಬಂದ ಲಾಭಕ್ಕೆ ವಿಶೇಷವಾಗಿ ಭಾದ್ಯರಾಗುತ್ತಿದ್ದವರು ರಾಮಣ್ಣಗೌಡರಾದರೂ ಅದರಿಂದ ಈಗ ಒದಗಿದ್ದ ಮಹಾನಷ್ಟಕ್ಕೆ ಅವರೊಬ್ಬರೆ ಹೊಣೆಯಾಗಲು ಸಿದ್ಧರಿರಲಿಲ್ಲ. ಮನೆತನವೆ ಆ ಹೊರೆಯನ್ನು ಹೊರಬೇಕಾಗಿ ಬಂದಿತು.
ನಷ್ಟ ತುಂಬುವ ಮತ್ತು ಸಾಲ ತೀರಿಸುವ ವಿಚಾರವಾಗಿ ಅಣ್ಣತಮ್ಮಂದಿರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಮನಸ್ತಾಪಕ್ಕೂ ತಿರುಗಿತಂತೆ, ಮನೆತನದ ಕೆಲವು ಜಮೀನುಗಳನ್ನು ಮಾರಿ ಸಾಲ ತೀರಿಸಬಹುದು ಎಂದು ಅಡಿಕೆ ಸಾಹುಕಾರ ತಮ್ಮನೂ; ಹಿರಿಯರಿಂದ ಬಂದ ಆತಿಯನ್ನು ಮಾರುವುದು ಬೇಡ, ಹೇಗಾದರೂ ಮಾಡಿ ಆ ಜಮೀನಿನಲ್ಲಿಯೆ ದುಡಿದು ಸಂಪಾದಿಸಿ ಸಾಲ ತೋರಿಸಬಹುದು ಎಂದು ಮನೆಯ ಯಜಮಾನ ಅಣ್ಣನೂ ವಾದಿಸಿ ಹಟಹಿಡಿದಿದ್ದರಂತೆ. ಅಂತೆ ಏಕೆಂದರೆ, ಮಕ್ಕಳಾಗಿದ್ದ ನಮಗೆ ಆ ವಿಚಾರಗಳೊಂದೂ ತಿಳಿಯುತ್ತಲೂ ಇರಲಿಲ್ಲ; ಯಾರೂ ತಿಳಿಸುತ್ತಲೂ ಇರಲಿಲ್ಲ; ಆಟ ಅಲೆದಾಟಗಳಲ್ಲಿಯೆ ಮುಳುಗಿರುತ್ತಿದ್ದ ನಮಗೆ ಅದೊಂದು ಬೇಕಾಗಿಯೂ ಇರಲಿಲ್ಲ.
’ಅಪ್ಪಯ್ಯ’ ಮನೆಯ ಯಜಮಾನರಾಗಿದ್ದರೂ ಮನೆಯ ಖರ್ಚಿಗೆ ಬೇಕಾಗುತ್ತಿದ್ದ ಹಣ ಅಡಕೆ ವ್ಯಾಪಾರದ ಲೇವಾದೇವಿ ಮಾಡುತ್ತಿದ್ದ ’ದೊಡ್ಡ ಚಿಕ್ಕಪ್ಪಯ್ಯ’ನ ಮುಖಾಂತರವೆ ಬರುತ್ತಿತ್ತು. ಮನೆ ಖರ್ಚಿಗೆ ಹಣ ಬೇಕೆಂದು ಅಪ್ಪಯ್ಯ ಕೇಳಲು ಕೈಯಲ್ಲಿ ಹಣದ ಕೊರತೆ ಇದ್ದುದರಿಂದಲೂ ಇರಬಹುದು, ’ಕೊಡಲು ಸಾಧ್ಯವಿಲ್ಲ’ ಎಂದು ಹೇಳಿದುದ.ರ ಜೊತೆಗೆ ಮನೆಯ ಜಮಾಖರ್ಚಿನ ಲೆಖ್ಖ ತೋರಿಸಲು ಕೇಳಿದರೆಂದು ತೋರುತ್ತದೆ. ಏಕೆಮದರೆ ನನಗೆ ನೆನಪಿರುವಂತೆ, ’ಕೊಮಾರೇಗೌಡರು’ ಎಂಬುವವರನ್ನು ಕುಪ್ಪಳಿಗೆ ಕರೆತಂದು ಅವರಿಂದ ಅಪ್ಪಯ್ಯ ಲೆಖ್ಖ ಬರೆಯಿಸಲು ಪ್ರಯತ್ನಿಸುತ್ತಿದ್ದುದನ್ನು ನೋಡಿದ್ದೇನೆ. ಆತ ದೊಡ್ಡಚಿಕ್ಕಪ್ಪಯ್ಯನ ಪರವಾಘಿದ್ದು, ಅವರಿಗೂ ಕರಣಿಕ ಕಾರ್ಯದಲ್ಲಿ ನೆರವಾಗಿದ್ದನಾದ್ದರಿಂದ, ಆತ ನಿಜವಾಗಿಯೂ ಮನೆಯ ಲೆಖ್ಖ ಬರೆದು ಮುಗಿಸಬೇಕೆಂದು ಬಂದಿರಲಿಲ್ಲ ಎಂದು ತೋರುತ್ತದೆ. ಆತ ಹೇಗಾದರೂ ದಿನಗಳನ್ನು ಕಳೆದು ಮನೆಯ ಲೆಖ್ಖದ ಅವ್ಯವಸ್ಥೆಯನ್ನೆಲ್ಲ ಅರಿತುಕೊಂಡು ದೊಡ್ಡಚಿಕ್ಕಪ್ಪಯ್ಯಗೆ )ಆಗ ಅವರು ಕುಪ್ಪಳಿಗೆ ಎರಡು ಮೈಲಿ ದೂರದಲ್ಲಿದ್ದ ’ಹಿಲಿಕೇರಿ’ಯ ಗದ್ದೆ ತೋಟಗಳನ್ನು ನೋಡಿಕೊಂಡು ಅಲ್ಲಿಯೂ ಹೊಸದಾಗಿ ಕಟ್ಟಿದ್ದ ಮನೆಯಲ್ಲಿ ಇರುತ್ತಿದ್ದರು) ತಿಳಿಸಲೆಂದೇ ಬಂದಿದ್ದರೂ ಇರಬಹುದು. ತನಗೆ ಕಜ್ಜಿ ಎಂದೂ ಮೈ ಸ್ವಸ್ಥವಿಲ್ಲೆಂದೂ ಹೇಳಿ ಆಗಾಗ್ಗೆ ಊರಿಗೆ ಹೋಗಿಬರುತ್ತೇನೆ ಎಂದೂ ಹೋಗುತ್ತಿದ್ದುದೂ ಉಂಟು. ಪಾಪ! ಸ್ವಲ್ಪಮಟ್ಟಿಗೆ ಮುಗ್ಧಜೀವಿಯಾಗಿ, ಅಷ್ಟೇನೂ ಲೌಕಿಕತೆ ಇರದಿದ್ದ ಅಪ್ಪಯ್ಯ ಆ ಕರಣಿಕಗೆ ಕಜ್ಜಿ ಹೋಗಲು ಔಷಧಿ ಹಚ್ಚಿ ಅಭ್ಯಂಜನ ಮಾಡಿಸಿದುದೂ ಎಲ್ಲ ವ್ಯರ್ಥವಾಯಿತು! ಮನೆಯ ಆದಾಯದ ಹಣವನ್ನು ಮುಚ್ಚಿಟ್ಟು, ಲೆಖ್ಖವನ್ನು ಸರಿಯಾಗಿ ತೋರಿಸದೆ, ಮನೆ ಖರ್ಚಿಗೆ, ದುಡ್ಡುಕೊಡು ಎಂಬುದಾಗಿ ದೊಡ್ಡಚಿಕ್ಕಪ್ಪಯ್ಯನನ್ನು ಪೀಡಿಸುತ್ತಿದ್ದಾರೆ ಎಂಬರ್ಥದ ಆಪಾದನೆಗೆ ಅಪ್ಪಯ್ಯ ಒಳಗಾಗಬೇಕಾಯಿತೆಂದು ಊಹಿಸುತ್ತೇನೆ. ಮನೆಖರ್ಚಿಗೆ ಹಣವಿಲ್ಲದೆ ಮನೆಯ ಯಜಮಾನಿಕೆ ಮಾಡುವುದು ಹೇಗೆ? ಕಡೆಗೆ ಉಪ್ಪು, ಬೇಳೆ, ಮೆಣಸಿನಕಾಯಿ, ಕೊಬ್ಬರಿ, ಬೆಲ್ಲ, ಕಾಫಿ ಭೀಜ, ಇತ್ಯಾ ದಿನದಿನದ ಸಾಮಾನುಗಳನ್ನಾದರೂ ತಬೇಕಲ್ಲ? (ಆಗ ಎಂಟು ಹತ್ತು ಜನರಿದ್ದರು!) ಬರ್ಷಕ್ಕೆ ಕೊಡುವ ಸೀರೆ ಕೊಡಬೇಕಲ್ಲ? ಮಳೆಗಾಲಕ್ಕೆ ಆಳುಕಾಳುಗಳಿಗೆ ಕಂಬಳಿ ಕೊಂಡು ತರಬೇಕಲ್ಲ? - ಇದನ್ನೆಲ್ಲ ನಿರ್ವಹಿಸುವುದು ಹೇಗೆ? ಮಾನಮರ್ಯಾದೆ ಉಳಿಸಿಕೊಳ್ಳುವುದು ಹೇಗೆ? ಕೈಯಲ್ಲಿ ಕಾಸಿಲ್ಲದ ಯಜಮಾನಿಕೆಯಿಂದ ಪಾರಾಗಲು ಅಪ್ಪಯ್ಯ ಮನೆಬಿಟ್ಟು ಹೊರಡಲು ಅನಿವಾರ್ಯವಾಗಿ ನಿಶ್ಚಯಿಸಿದರು ಎಂದು ತೋರುತ್ತದೆ. ಹಾ ವಿಧಿಯೆ! ಹೊರಟವರು ಮತ್ತೆ ಹಿಂತಿರುಗಲಿಲ್ಲ!

No comments: