Thursday, January 29, 2015

ಮೊದಲ ಮಹಾಯುದ್ಧಕ್ಕೆ ತತ್ತರಿಸಿದ ಕುಪ್ಪಳಿ!

೧೯೧೮-೧೯೧೪ರ ಅವಧಿಯಲ್ಲಿ ನಡೆದ ಪ್ರಪಂಚದ ಮೊದಲನೆಯ ಮಹಾಯುದ್ಧ ಕಾಲದಲ್ಲಿ ನಾವು ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳಾಗಿದ್ದೆವು. ನಮಗೆ ಆ ಯುದ್ಧದ ವಾರ್ತೆ ಒಂದು ರೌಚಕವಿನೋದ ಮಾತ್ರವಾಗಿತ್ತು. ಅದರ ರೌದ್ರ, ಘೋರ, ಕ್ರೂರ ಮತ್ತು ವಿನಾಶಕರ ರಾಕ್ಷಸೀಯ ಕ್ರಿಯೆಗಳೆಲ್ಲ ನಮಗೆ ಎಂದೋ ನಡೆದ ಒಂದು ಪೌರಾಣಿಕ ಕಥೆಯ ವಸ್ತುವಿನಂತೆ ಸ್ವಾರಸ್ಯ ಸಂಗತಿಗಳಾಗಿದ್ದುವು. ಈಗಿನಂತೆ ಆಗ ಪತ್ರಿಕೆಗಳೂ ಇರಲಿಲ್ಲ; ಇದ್ದವೂ ಬರುತ್ತಿರಲಿಲ್ಲ. ಮಿಷನರಿಗಳು ಹೊರಡಿಸುತ್ತಿದ್ದ ವೃತ್ತಾಂತ ಪತ್ರಿಕೆಯೂ ಅಂಚೆಯ ಆಮೆಯ ಮೇಲೆ ಸವಾರಿ ಮಾಡಿ ಹಳ್ಳಿಮೆನಗಳನ್ನು ತಲುಪುವ ಹೊತ್ತಿಗೆ ಆ ಪತ್ರಿಕಾವಾರ್ತೆಗೆ ವಿಷಯವಾಘಿರಬಹುದಾಗಿದ್ದ ಸಂಗತಿಗಳು ಚರಿತ್ರೆಗೇ ಮೀಸಲಾಗಿ ಸೇರಿಬಿಟ್ಟಿರುತ್ತಿದ್ದುವೇನೊ! ನಮ್ಮಂತಹ ಮಕ್ಕಳಂತೂ, ಈಗಿನ ಮಕ್ಕಳಂತಲ್ಲದೆ, ಆಗ ಪತ್ರಿಕೆ ಓದುವ ತಂಟೆಗೇ ಹೋಗುತ್ತಿರಲಿಲ್ಲ. ಪಾಠ ಓದಿಕೊಳ್ಳುವುದೇ ಹರ್ಮಾಗಾಲವಾಗಿರುವಾಗ ಪತ್ರಿಕೆ ಓದುವ ವ್ಯರ್ಥ ಸಾಹಸಕ್ಕೆ ಯಾರು ಹೋಗುತ್ತಾರೆ? ಆಟಕ್ಕೆ ಸಮಯ ಸಾಲದಿರುವಾಗ! 

ಆದರೂ ಇಸ್ಕೂಲಿನ ಮಕ್ಕಳಾಗಿದ್ದ ನಮಗೆ ಜರ್ಮನಿಗೂ ಇಂಗ್ಲಿಷರಿಗೂ ಯುದ್ಧ ನಡೆಯುತ್ತಿದೆ ಎಂಬುದು ಗೊತ್ತಾಗಿತ್ತು.
ಏಕೆ ಎಂದು ಈಗ ನಾನು ಹೇಳಲಾರೆ, ನಾವೆಲ್ಲ -ನಮ್ಮಲ್ಲಿ ಅನೇಕರು ಜರ್ಮನಿಯ ಪರವಾಗಿರುತ್ತಿದ್ದೆವು. ಇಂಗ್ಲಿಷರಿಗೆ ಅಪಜಯವಾಯಿತೆಂದು ಸುದ್ದಿ ಹಬ್ಬಿದಾಗ, ನಮ್ಮ ಕಡೆಯವರಿಗೆ ಗೆಲುವೆಂದು ಭಾವಿಸಿ ಹಿಗ್ಗುತ್ತಿದ್ದೆವು. ಗೆಳೆಯರೆಲ್ಲ ಎರಡು ಗುಂಪಾಗಿ, ಒಂದು ಗುಂಪು ಜರ್ಮನಿಯವರೆಂದೂ ಮತ್ತೊಂದು ಇಂಗ್ಲಿಷಿನವರೆಂದೂ ಪೆಟ್ಲುಗಳನ್ನೇ ಕೋವಿಗಳನ್ನಾಗೊ ಮಡಿಕೊಂಡು ಯುದ್ಧದ ಆಟವಾಡುತ್ತಿದ್ದೆವು. ಆಗ ಬೀಳುತ್ತಿದ್ದ ಬಲವಾದ ಹೊಡೆತಗಳನ್ನೆಲ್ಲ ’ಜರ್ಮನ್ ಹೊಡೆತ’ ಎಂದೇ ಕೂಗಿ ಜಯಘೋಷ ಮಾಡುತ್ತಿದ್ದೆವು. ಗೋಲಿಯಾಡುವಾಗಲೂ ಎದುರಾಳಿಯ ಒಂದು ಗೋಲಿಗೆ ಯಾವ ವಿಧದ ತನ್ನ ಗೋಲಿಯಿಂದ ಬಲವಾಗಿ ಹೊಡೆದನೆಂದರೆ ಬಿತ್ತು ಜರ್ಮನ್ ಹೊಡೆತಾ! ಎಂದು ಕೇಕೆ ಹಾಕುತ್ತಿದ್ದೆವು. ಬಹುಶಃ ರಾಷ್ಟ್ರದಲ್ಲಿ ಆಗ ನಡೆಯುತ್ತಿದ್ದ ಕಾಂಗ್ರೆಸ್ ಚಳವಳಿಯ ದೂರ ಪ್ರಭಾವ ನಮ್ಮ ಮೇಲೆಯೂ ಆಗಿತ್ತೊ ಏನೊ! ನನಗೆ ಈಗ ನೆನಪಿಗೆ ಬರುವ ಮಟ್ಟಿಗೆ ಆಗಿನ ರೇಷನ್ ಪದ್ಧತಿ ಸೀಮೆಯೆಣ್ಣೆ ಹಂಚಿಕೆಗೆ ಮಾತ್ರ ಸೀಮಿತವಾಗಿ ನಮ್ಮ ನಿತ್ಯ ಜೀವನಕ್ಕೆ ಹೆಚ್ಚಿಗೆ ತೊಂದರೆ ಕೊಡದಿದ್ದುದರಿಂದ ಈಗಿನಂತೆ ಯುದ್ಧ ಮನೆಬಾಗಿಲಿಗೆ -ಅಡುಗೆಮನೆಗೂ- ಬಂದ ಅನುಭವವಾಗುತ್ತಿರಲಿಲ್ಲ.
ಏನು ವಿಡಂಬನೆ! ತೀರ್ಥಹಳ್ಳಿಯ ಎ.ವಿ.ಸ್ಕೂಲಿನ ಮಕ್ಕಳು, ನಾವು ಷೇಕ್ಸ್ಪಿಯರ್ ಮಹಾಕವಿಯ ’ದಿ ಮರ್ಚೆಂಟ್ ಆಫ್ ವೆನಿಸ್’ ನಾಟಕವನ್ನು ಮೂಲ ಇಂಗ್ಲಿಷಿನಲ್ಲಿಯೆ ಆಡಿ, ಬಂದ ಹಣವನ್ನು ಯುದ್ಧನಿಧಿಗೆ ಕಳುಹಿಸಿದ್ದೆವಲ್ಲ! ಆ ನಾಟಕದ ಮುಖ್ಯಪಾತ್ರ ಷೈಲಾಕ್‌ನ ಪಾತ್ರವನ್ನು ನನ್ನ ಮೇಲೆಯೇ ಹೊರಿಸಬೇಕೆ? ಆ ನಾಟಕದಲ್ಲೆಲ್ಲ ಅತಿ ದೀರ್ಘ ಸಂವಾದವಸ್ತು ಷೈಲಾಕನದೇ! ಅರ್ಥವಾಗದ ಅದನ್ನು ಬಾಯಿಪಾಠ ಮಾಡಲಾರದೆ ಅತ್ತೂ ಅತ್ತೂ, ಯಾಂತ್ರಿಕವಾಗಿ ಮಕ್ಕೀಕಾಮಕ್ಕಿಯಾಗಿ ಒಪ್ಪಿಸಿದುದೆ ನನ್ನ ಈಗಿನ ’ಇಂಗ್ಲಿಷ್ ವಿರೋಧಕ್ಕೆ ಗುಪ್ತಕಾರಣವಾಗಿರಬಹುದೇನೊ!
ಆ ಮೊದಲನೆಯ ಮಹಾಯುದ್ಧದ ಪರಿಣಾಮವಾಗಿ, ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ, ಲೋಕದ ಜನ ಹೇಗೆ, ಯಾವ ರೀತಿಗಳಲ್ಲಿ, ಸಂಕಟಪಟ್ಟು ಜಜ್ಜರಿತರಾದರೆಂಬುದು ಈಗ ಇತಿಹಾಸ ಪ್ರಸಿದ್ಧವಾಗಿದೆ. ನಮಗೀಗ ಪ್ರಕೃತವಾದುದು ಆ ಇತಿಹಾಸದಿಂದ ಸಂಪೂರ್ಣ ಅಲಕ್ಷಿತವಾಗಿ, ಅತ್ಯಂತ ಯಃಕಶ್ಚಿತವಾಗಿ, ಯಾರೂ ಗಮನಿಸದೆ ವಿಸ್ಕೃತವಾಗಿರುವ ಒಂದು ಸಂಗತಿ ಕುಪ್ಪಳಿ ಮನೆತನಕ್ಕೆ ಒದಗಿದ ಆರ್ಥಿಕ ಅಪಘಾತ, ಮತ್ತು ತತ್ಪರಿಣಾಮವಾಗಿ ಸಂಭವಿಸಿದ ಕೌಟುಂಬಿಕ ದುರಂತ ಘಟನಾವಳಿ!

No comments: