Tuesday, January 6, 2015

ಜನವರಿ 6 : ತೊಂಬತ್ತೊಂದು ವರ್ಷಗಳ ಹಿಂದಿನ ದಿನಚರಿ!

ಅಮಾವಾಸ್ಯೆಯ ದಿನ ಅಭ್ಯಂಜನ ಮಾಡಬಾರದು ಎಂದು ಕೆಲವರು ನಿಷೇಧಿಸಿದರೂ ನಾನು ಎಣ್ಣೆ ಸ್ನಾನ ಮಾಡಿ, (ಭಾನುವಾರದ ಹಕ್ಕು) ಕೊಟಡಿಗೆ ಬಂದು, ಎರಡು ತುಪ್ಪದ ದೋಸೆ ತರಿಸಿದೆ. ನಾನೊಬ್ಬನೆ ತಿನ್ನಲು ಶುರು ಮಾಡಲು ಕುಚೇಷ್ಟೆಯ ಶ್ರೀ ಬಾಲಕೃಷ್ಣನು ಬಂದು ನನ್ನ ಎದುರು, ಕೊಳಲು ಹಿಡಿದು ಬಲಗೈ ಊರಿ, ಒರಗಿದಂತೆ ಕುಳಿತನು. ಮುಗುಳು ನಗುತ್ತಿದ್ದನು. ಅವನ ಸಾನ್ನಿಧ್ಯ ನನಗೆ ತುಂಬ ಹರ್ಷದಾಯಕವಾಗಿತ್ತು. ಸಲುಗೆಯ ಮಾತುಗಳಿಂದ ಅವನನ್ನು ಕೇಳಿಕೊಂಡೆ 'ದೋಸೆ ತಿನ್ನುವುದನ್ನು ಮೊದಲು ನೀನೆ ಪ್ರಾರಂಭಿಸು' ಎಂದು. ಅವನು ಒಪ್ಪಲಿಲ್ಲ. ನಾನೆ ದೋಸೆಯ ಒಂದು ಚೂರನ್ನು ಕಿತ್ತು ಅವನ ಬಾಯಿಯ ಬಳಿಗೆ ಒಯ್ದೆ ತಿನ್ನಿಸಲೆಂದು. ಆದರೆ ಅವನು ಹಿಂದು ಹಿಂದಕ್ಕೆ ಸರಿದುಬಿಟ್ಟ. ನನಗೆ ಮುನಿಸು ಬಂದು, ಕೊಟಡಿಯಿಂದಾಚೆಗೆ ನಡಿ ಎಂದು ಆಜ್ಞೆ ಮಾಡಿದೆ. ಅವನು ಮಾತ್ರ ನಗುತ್ತಲೆ ಅಲ್ಲೆ ಇದ್ದನು. ಅವನಿಗೆ ಕೊಡಲೆಂದು ಹಿಡಿದಿದ್ದ ಚೂರನ್ನು, ಬಾಯಿಗೆ ಹಾಕಿಕೊಂಡೆ. ಆಗ ಅವನೂ ಬಾಯಿಗೆ ಹಾಕಿಕೊಂಡ, ಅದೇ ಚೂರನ್ನು, ನಾನು ಅವನಿಗೆ ತಿನ್ನಿಸಬೇಕೆಂದಿದ್ದು ನಾನು ಬಾಯಿಗೆ ಹಾಕಿಕೊಂಡಿದ್ದ ಚೂರನ್ನೆ! ಎಡಗೈಯಿಂದ ಕೊಳಲು ಹಿಡಿದಿದ್ದ ಬಲಗೈಯನ್ನು ಊರಿ ಬಾಲಲೀಲೆಯಿಂದ ಓರೆಯಾಗಿ ಕುಳಿತೇ ಇದ್ದ. ಹಾಗೆ ನಾನೂ ಅವನೂ ಏಕಕಾಲದಲ್ಲಿ ದೋಸೆಗಳನ್ನೆಲ್ಲ ತಿಂದೆವು. ನಮ್ಮ ಆನಂದ ಮಾತಿಗೆ ಮೀರಿತ್ತು. ನಡುವೆ ನಾನು ಅವನಿಗೊಂದು ಏಟು ಕೊಟ್ಟು, ಲಂಬೋದರ (ದೊಡ್ಡಹೊಟ್ಟೆ) ನವನೀತಚೋರ (ಬೆಣ್ಣೆಕಳ್ಳ) ಎಂದು ಕರೆಯಬೇಕೆಂದಿದ್ದೆ. ನಾನು ಎರಡೇ ದೋಸೆ ತರಿಸಿದ್ದೆ. ಅವನೂ ಎರಡು ತಿಂದ, ನಾನೂ ಎರಡು ತಿಂದಿದ್ದೆ. ಸುಖವೋ ಪರಾಕಾಷ್ಠೆಯನ್ನೈದಿತ್ತು. ನಾನು ಒಂದು ದೊಡ್ಡ ಚೂರನ್ನು ತೆಗೆದುಕೊಂಡಾಗ ಆ ಹುಡುಗನೂ ಅಂತಹುದೇ ಒಂದು ದೊಡ್ಡ ಚೂರನ್ನು ತೆಗೆದುಕೊಳ್ಳುತ್ತಿದ್ದ. ಅಂತೂ ಕಡೆಗೆ ದೋಸೆಗಳು ಮಾಯವಾಗಿದ್ದುವು! ದೋಸೆಗಳನ್ನು ಕಟ್ಟಿದ್ದ ಕಾಗದ ಮತ್ತು ಎಲೆಗಳನ್ನು ಎಸೆಯಲು ಹೇಳಿದೆ. ಆದರೆ ಅವನು ತುಂಟಗಣ್ಣು ಮಾಡಿ ಒಲ್ಲೆ ಎಂದುಬಿಟ್ಟನು. 'ಆಗಲಿ, ಕೃಷ್ಣ, ನೀನು ಮತ್ತೆ ಬಂದರೆ ನಿನಗೂ ಹಾಗೆ ಮಾಡುತ್ತೇನೆ' ಎಂದೆ. ಹಾಗೆ ಹೇಳುತ್ತಾ ಎಲೆ ಕಾಗದಗಳನ್ನು ಕೈಗೆ ತೆಗೆದುಕೊಂಡೆ; ಅವನೂ ತೆಗೆದುಕೊಂಡ. ನಾನು ಎಸೆದಾಗ ಅವನೂ ಎಸೆದ. ಅವು ಒಂದೇ ಜಾಗದಲ್ಲಿ ಬಿದ್ದು, ಒಂದಾದುವು. ಅವನು ನನ್ನ ಕಡೆ ನೋಡುತ್ತಾ ನಗುತ್ತಾ ನಿಂತಿದ್ದ. ನಾನು ನಡೆದ ಇದನ್ನೆಲ್ಲ ಬರೆಯಲು ಡೈರಿ ತೆಗೆದುಕೊಂಡೆ. ಅವನು ಹೇಳಿದ 'ಬರೆಯಬಾರದು!' ನಾನು ಲೆಕ್ಕಿಸಲಿಲ್ಲ, ಹೇಳಿದೆ 'ನಿನ್ನ ತಂಟೆಯ ಆಟವನ್ನು ಎಲ್ಲರಿಗೂ ತೋರಿಸುತ್ತೇನೆ' ನಾನು ಇದನ್ನೆಲ್ಲ ಬರೆಯುತ್ತಿದ್ದಾಗ ಅವನು ಕುತ್ತಿಗೆ ಚಾಚಿ ನೋಡುತ್ತಲೇ ಇದ್ದ ಇದರ ಕಡೆಯೆ. 'ನೀನೆ ನೋಡುತ್ತಿದ್ದೀಯಲ್ಲಾ? ಹೇಳು, ಇದೆಲ್ಲ ಸುಳ್ಳೊ ನಿಜವೊ? ಎಂದೆ........
***
ಇದೊಂದು ಅಪರೂಪವಾದ ದಾಖಲೆ. ದಿನಚರಿಯ ಪುಟವಾದ್ದರಿಂದ ಕವಿಯ ಅಂದಿನ ಮನಸ್ಥಿತಿಯನ್ನರಿಯಲು ಬಹು ಸಹಕಾರಿ. ಯಾರಾದರೂ ಕುವೆಂಪುವನ್ನು ಓದಿಕೊಂಡಿರುವ ಮನಃಶಾಸ್ತ್ರಜ್ಞರು ಈ ಸನ್ನಿವೇಶವನ್ನು ವಿಶ್ಲೇಷಿಸಬೇಕು. ಆಗ ಕವಿಯನ್ನು ಬೇರೊಂದು ಆಯಾಮದಲ್ಲಿ ಅರ್ಥ ಮಾಡಿಕೊಳ್ಳಲು ಬೇಕಾದ ಕೀಲಿಕೈ ಸಿಗುತ್ತದೆ.

No comments: