Tuesday, January 27, 2015

ಗೆಳೆಯರಿಬ್ಬರನ್ನು ನುಂಗಿದ ಹೊಸ ಗೆಳೆಯ - ತುಂಗಾ ಹೊಳೆ!

ತೀರ್ಥಹಳ್ಳಿಗೆ ಓದಲು ಬಂದಮೇಲೆ ನನ್ನ ಬದುಕಿನಲ್ಲಿ ಪರಿಣಾಮಕಾರಿಯಾಗಿ ಪ್ರಭಾವ ಬೀರುವಂತೆ ಪ್ರವೇಶಿಸಿದ ?ಂದು ಹೊಸ ವಸ್ತು ಎಂದರೆ -ಹೊಳೆ! ತುಂಗಾ ಮತ್ತು ಅದರ ಸಣ್ಣ ಉಪನದಿ ಕುಶಾವತಿ. ತೀರ್ಥಹಳ್ಳಿಗೆ ಒಂಬತ್ತು ಮೈಲಿ ದೂರದಲ್ಲಿರುವ ಕುಪ್ಪಳಿಯಲ್ಲಿ ಕೆರೆಯಿದೆ, ತೊರೆಯಿದೆ; ಆದರೆ ನಾವು ಈಸಾಡಬಹುದಾದ ಹೊಳೆ ಇಲ್ಲ. ಮನೆಯ ಬಳಿಯ ಕೆರೆ ಆಳವಾಗಿದ್ದುದರಿಂದ ಹುಡುಗರು ಅತ್ತ ಕಡೆ ಸುಳಿಯಬಾರದೆಂದು ಹಿರಿಯರ ಕಟ್ಟಪ್ಪಣೆ; ಅಲ್ಲದೆ ಅದರ ನೀರೇ ಮನೆಯಕಡೆ ಬಾವಿಗೆ ಬರುತ್ತಿದ್ದು, ಅದನ್ನು ಕುಡಿಯಲು ಉಪಯೋಗಿಸುತ್ತಿದ್ದು, ಕೆರೆಯ ನೀರನ್ನು ಕಲುಷಿತಗೊಳಿಸುವುದು ನಿಷಿದ್ಧವಾಗಿತ್ತು. ಇನ್ನು ಹತ್ತಿರದ ಹಳ್ಳಗಳೋ? ಬೇಸಗೆಯಲ್ಲಿ ಕಪ್ಪೆಗಳಿಗೂ ಈಜಲು ಸಾಕಾಗುವಷ್ಟು ನೀರು ಇರುತ್ತಿರಲಿಲ್ಲ, ಮಳೆಗಾಲದಲ್ಲಿ ತುಂಬಿ ಭೋರ್ಗರೆದು ರಭಸದಿಂದ ಹರಿಯುತ್ತಿದ್ದುದರಿಂದ ಹತ್ತಿರ ಹೋಗಲೂ ಹೆದರಿಕೆಯಾಗುತ್ತಿತ್ತು. ಆದ್ದರಿಂದ ತೀರ್ಥಹಳ್ಳಿಗೆ ಬಂದಮೇಲೆ ಹೊಳೆ ಒಂದು ಮನಮೋಹಕ ಆಕರ್ಷಣೀಯ ಕೆಳೆ ಆಗಿತ್ತು.

ಆದರೆ ಆ ಆಕರ್ಷಣೆಯಲ್ಲಿಯೂ ಒಂದು ಭಯದ ಅಂಶ ಹುದುಗಿರುತ್ತಿತ್ತು. ಹೊಳೆಯಲ್ಲಿ ಮೊಸಳೆಗಳಿದ್ದು, ಆಗೊಮ್ಮೆ ಈಗೊಮ್ಮೆ ಮೀಯಲು ಹೋದ ಮನುಷ್ಯರನ್ನೊ ನೀರುಕುಡಿಯಲು ಹೋದ ದನಗಳನ್ನೊ ಎಳೆದುಕೊಂಡು ಹೋಗುತ್ತಿದ್ದ ವಾರ್ತೆ ಕಿವಿಗೆ ಬೀಳುತ್ತಿತ್ತು. ಹಗಲು ಹೊತ್ತು ಹತ್ತು ಹದಿನೈದು ಅಡಿಗಳಿಗೂ ಉದ್ದವಾಘಿದ್ದ ಕರ್ಕಶಕಾಯದ ಹೆಮ್ಮೊಸಳೆಗಳು ಹೊಳೆಯಂಚಿನ ವಿಸ್ತಾರವಾದ ಮಳಲ ಹರಹಿನ ಮೇಲೆಯೂ ಅಲ್ಲಲ್ಲಿ ಎದ್ದಿರುತ್ತಿದ್ದ ಬಂಡೆಗಳ ಮೇಲೆಯೂ ಬಿಸಿಲು ಕಾಯಿಸುತ್ತಾ ಮಲಗಿರುತ್ತಿದ್ದ ಭೀಕರ ದೃಶ್ಯದ ವಿಚಾರವಾಗಿ ಪ್ರತ್ಯಕ್ಷದರ್ಶಿಗಳೆಂದು ಹೇಳಿಕೊಳ್ಳುತ್ತಿದ್ದ ಹುಡುಗರು ವರ್ಣಿಸಿಉತ್ತಿದ್ದರು. ಆದರೆ ಅದೆಲ್ಲಕ್ಕಿಂತಲೂ ಹೆಚ್ಚಾಗಿ, ನಾನು ಓದುವುದಕ್ಕೆ ಹೋದ ಮೊದಲನೆಯದೊ ಅಥವಾ ಎರಡನೆಯದೊ ವರ್ಷದಲ್ಲಿ ನಡೆದ ಒಂದು ದುರ್ಘಟನೆ ನಮ್ಮ ಶಾಲೆಯ ಗೆಳೆಯರ ಮನದಲ್ಲಿ ಹೃದಯ ವಿದ್ರಾವಕವಾದ ದಿಗಿಲನ್ನೆಬ್ಬಿಸಿತ್ತು.
ಕೃಷ್ಣಮೂರ್ತಿ ಮತ್ತು ಶ್ರೀನಿವಾಸಯ್ಯ -ಯಾವಾಗಲೂ ನನ್ನ ಆ ಪಕ್ಕ ಈ ಪಕ್ಕಗಳಲ್ಲಿಯೆ ಕುಳಿತು ತುಂಬ ಆತ್ಮೀಯತೆಯಿಂದ ಹರಟೆ ಹೊಡೆಯುತ್ತಿದ್ದರು, ಹಳ್ಳಿ ಮುಗ್ಧನಾದ ನನ್ನ ಕೂಡೆ. ಅವರು ಪೇಟೆಯಲ್ಲಿ ಹುಟ್ಟಿ ಬೆಳೆದ ಹಾರುವರ ಮಕ್ಕಳಾದುದರಿಂದ ಅವರಿಗೆ ಕೋವಿ, ಕಾಡು, ಬೇಟೆ ಇತ್ಯಾದಿಗಳೆಂದರೆ ಅಗೋಚರವಾದ ಬಹುದೂರದ ಅದ್ಭುತ ವಿಷಯಗಳಾಗಿದ್ದುವು. ಆ ವಿಚಾರವಾಗಿದ್ದ ಅವರ ಅಜ್ಞಾನವನ್ನು ಕುತೂಹಲವನ್ನು ನಾನು ಚೆನ್ನಾಗಿ ಉಪಯೋಗಿಸಿಕೊಂಡು, ನನ್ನ ಸ್ವಂತ ಅನುಭವವೊ ಎಂಬಂತೆ ಹುಲಿಯ, ಹಂದಿಯ, ಮಿಗದ, ಕಾಡಿನ, ಕೋವಿಯ ಕಥೆಗಳನ್ನು ಹುಟ್ಟಿಸಿಕೊಂಡು ಹೇಳುತ್ತಿದ್ದೆ, ಅವರು ಬಾಯಿಬಿಟ್ಟುಕೊಂಡು ಕಣ್ಣರಳಿಸಿ ಕಿವಿ ನಿಮಿರಿ ಪುಲಕಿತರಾಗಿ ಆಲಿಸುತ್ತಿದ್ದರು!
ಒಂದು ದಿನ ಸ್ಕೂಲಿಗೆ ಹೋದಾಗ ನಮ್ಮ ಕ್ಲಾಸಿನ ಹುಡುಗರು ಸ್ವಲ್ಪ ಭಯಭೀತರಾದಂತೆ ಕೆಳದನಿಯಲ್ಲಿ ಮಾತಾಡಿಕೊಳ್ಳುತ್ತಿದ್ದುದನ್ನು ಕಂಡು ವಿಚಾರಿಸಲಾಗಿ ಕೃಷ್ಣಮೂರ್ತಿ ಶ್ರೀನಿವಾಸಯ್ಯ ಇಬ್ಬರೂ ಹೊಳೆಯಲ್ಲಿ ಮುಳುಗಿಹೋದರಂತೆ ಎಂದರೆ! ಕಳೆದ ದಿನ ಸಾಯಂಕಾಲ ಸ್ಕೂಲು ಬಿಟ್ಟಾಗ ಒಟ್ಟಿಗೆ ಮಾತಾಡುತ್ತಾ ವಿನೋದವಾಡುತ್ತಾ ನ್ನನ್ನು ಬೀಳುಕೊಂಡಿದ್ದ ಅವರು ಮರುದಿನವೆ ಇಲ್ಲವಾಗಿದ್ದಾರೆ ಎಂಬುದನ್ನು ಕೇಳಿ ನನಗೆ ಆ ಸುದ್ದಿಯನ್ನು ನಂಬಲಾರದ ಮತ್ತು ನಂಬಲೊಲ್ಲದ ಒಂದು ತರಹದ ದಿಗಿಲಿನ ಮನಃಸ್ಥಿತಿಯುಂಟಾಯಿತು. ದುಃಖಕ್ಕಿಂತಲೂ ಹೆಚ್ಚಾಗಿ ಏನೋ ಒಂದು ಪ್ರಾಣದ ತಲ್ಲಣಿಕೆ! ಜನರು ಸಾಯುತ್ತಾರೆ ಎನ್ನುವುದು ಹೊಸ ವಿಷಯವಾಗಿಲ್ಲದಿದ್ದರೂ ಸಾವು ನಮ್ಮ ಹೃದಯಕ್ಕೆ ಸಮೀಪವೆ ಬಂದು ನಿಂತಾಗ ಅದರ ಪರಿಣಾಮವೇ ಬೇರೆ. ನಿನ್ನೆ ಇದ್ದ ನನ್ನ ಎಳೆಯ ಗೆಳೆಯರು ಇದ್ದಕ್ಕಿದ್ದಂತೆ ಇಲ್ಲವಾಗಿದ್ದಾರೆ! ಬುದ್ಧಿ ತುಸು ತತ್ತರಿಸಿಕೊಂಡಿತೆಂದೆ ಹೇಳಬೇಕು. ಮೃತ್ಯುವನ್ನು ಕುರಿತು ಯಾವ ಸ್ಪಷ್ಟ ಆಲೋಚನೆಯೂ ಸಾಧ್ಯವಲ್ಲದ ಆ ಬಾಲ ವಯಸ್ಸಿನಲ್ಲಿ ಮನಸ್ಸು ಏನೋ ಒಂದು ಮೂಕ ಭಿಷೆಯನ್ನುಭವಿಸಿತ್ತು.
ಬಹುಶಃ ನನಗಾದಂತೆಯೆ ನನ್ನ ಇತರ ಗೆಳೆಯರಿಗೂ ಆಗಿತ್ತೆಂದು ಊಹಿಸುತ್ತೇನೆ. ಆದರೆ ನನ್ನಂತೆಯೆ ಅವರೂ ಅದನ್ನು ಮರೆಯಿಕ್ಕಿ -ಏಕೆ? ಹೇಗೆ? ಎಲ್ಲಿ? ಎಂತು? ಎಂಬ ವಿಚಾರವಾಗಿ ಮಾತನಾಡುವ ಸೋಗಿನಲ್ಲಿ ಅದನ್ನು ಮುಚ್ಚಿಕೊಂಡರೆಂದು ಭಾವಿಸುತ್ತೇನೆ.

ಶಾಲೆ ಬಿಟ್ಟಮೇಲೆ ಅವರಿಬ್ಬರೂ ತಮ್ಮ ತಮ್ಮ ಮನೆಗಳಿಗೆ ಹೋಗಿ, ತಿಂಡಿ ತಿಂದು, ಹೊಳೆಯಾಚೆಯಲ್ಲಿದ್ದ ಬಂಧುಗಳನ್ನು ನೋಡಲು ಹೋಗುತ್ತಿದ್ದರಂತೆ. ಮಳೆಗಾಲ ಮುಗಿದು ರಾಮತೀರ್ಥದೆಡೆಯ ಕಲ್ಲುಸಾರ ಆಗತಾನೆ ಬಿಟ್ಟಿತ್ತು. ಸಾರಗಳ ಮೇಲೆ ದಾಟುವ ಸ್ವಾರಸ್ಯಕ್ಕೆ ಒಳಗಾಗಿ ಹೊರಟರು. ಯಾವುದೊ ಒಂದೆಟೆಯ ಸಾರದಲ್ಲಿ ಇನ್ನೂ ತುಸು ತೆಳ್ಳೆನೀರು ಹರಿಯುತ್ತಿತ್ತಂತೆ. ಒಬ್ಬನು ಜಾರಿ ಹೊಳೆಗೆ ಬೀಳಲು ಇನ್ನೊಬ್ಬನು ಅವನನ್ನು ಹಿಡಿಯಲು ಹೋಗಿ ಇಬ್ಬರೂ ರಭಸದ ಹೊನಲಿನಲ್ಲಿ ಕೊಚ್ಚಿ ಹೋದರಂತೆ, ಹೆಣಗಳೂ ಇನ್ನೂ ಸಿಕ್ಕಿರಲಿಲ್ಲವಂತೆ!
ಗೆಳೆಯರು ನಾನಾ ರೀತಿಯಾಗಿ ಅವರಿಬ್ಬರ ಧೈರ್ಯವನ್ನು ಸ್ನೇಹಿತನಿಗಾಗಿ ತನ್ನ ಪ್ರಾಣವನ್ನೇ ಲಕ್ಷಿಸದೆ ತೆತ್ತ ಮಿತ್ರನ ತ್ಯಾಗಮಹಿಮೆಯನ್ನು ತಮ್ಮದೇ ಆ ರೀತಿಯಲ್ಲಿ ವರ್ಣಿಸಿ ಮಾತನಾಡಿಕೊಂಡರು.
ಸೃಷ್ಟಿ, ಜೀವ, ಜಗತ್ತು, ದೇವರು, ಸಾವು, ಹುಟ್ಟು, ಪಾಪ, ಪುಣ್ಯ, ಸ್ವರ್ಗ, ನರಕ ಇತ್ಯಾದಿ ವಿಷಯಗಳಲ್ಲಿ ಆಗಲೇ ತಡಕಾಡತೊಡಗಿದ್ದ ನನ್ನ ಚೇತನದ ಮೇಲೆ ಇಬ್ಬರು ಬಾಲಮಿತ್ರರ ಅಕಾಲಮರಣ ನನ್ನ ಸುಪ್ತಚಿತ್ತದಲ್ಲಿ ತನ್ನ ಗಂಭೀರ ಗುಪ್ತ ಪ್ರಭಾವವನ್ನು ಬೀರಿತೆಂದು ಬೇರೆ ಹೇಳಬೇಕಾಗಿಲ್ಲ.
ಹೊಳೆಯ ವಿಚಾರವಾಗಿಯೂ ಹಿಂದಿದ್ದ ಲಘುಭಾವನೆ ತೊಲಗಿತು. ಅದರೊಡನೆ ತುಂಬ ಎಚ್ಚರಿಕೆಯಿಂದಲೆ ವರ್ತಿಸಬೇಕೆಂಬ ಬುದ್ಧಿ ಬೆಳೆಯಿತು.

No comments: